ಟಿವಿ9 ಕನ್ನಡ ಡಿಜಿಟಲ್​ ಲೈವ್​ | ಈ ಗೆಲುವಲ್ಲಿ ರಾಹುಲ್​ ದ್ರಾವಿಡ್​ ಅವರನ್ನೂ ಸ್ಮರಿಸಿಕೊಳ್ಳೋಣ

ಆಸ್ಟ್ರೇಲಿಯಾದವರು ಮೊದಲಿನಿಂದಲೂ ಎದುರಾಳಿಗಳನ್ನು ಗಾಯಗೊಳಿಸೋಕೆ ನೋಡುವವರು. ಆದರೆ, ಈ ಬಾರಿ ಅವರಿಂದ ಎಷ್ಟೇ ಏಟು ತಿಂದರೂ ನಮ್ಮವರು ಹೆದರಲಿಲ್ಲ. ಅದರಲ್ಲೂ ಪೂಜಾರಾ ಧೃಡವಾಗಿ ನಿಂತು ಬಿಟ್ಟರು.

ಟಿವಿ9 ಕನ್ನಡ ಡಿಜಿಟಲ್​ ಲೈವ್​ | ಈ ಗೆಲುವಲ್ಲಿ ರಾಹುಲ್​ ದ್ರಾವಿಡ್​ ಅವರನ್ನೂ ಸ್ಮರಿಸಿಕೊಳ್ಳೋಣ
ಎನ್​.ಸಿ.ಅಯ್ಯಪ್ಪ, ಮಾಲ್ತೇಶ್, ಗೋಪಾಲಕೃಷ್ಣ ಹೆಗಡೆ
Follow us
Skanda
|

Updated on:Jan 21, 2021 | 1:38 PM

ಆಸ್ಟ್ರೇಲಿಯಾ ವಿರುದ್ಧ ಅವರದೇ ನೆಲದಲ್ಲಿ ಭಾರತ ಗೆದ್ದು ಬೀಗಿರುವುದು ಭಾರತೀಯ ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಹೊಸ ವರ್ಷಕ್ಕೆ ಅತ್ಯುತ್ತಮ ಉಡುಗೊರೆ ಸಿಕ್ಕಂತಾಗಿದೆ. ಕಳೆದ ಎರಡು ದಿನಗಳಿಂದ ಸಾಕಷ್ಟು ಕಡೆಗಳಲ್ಲಿ ಭಾರತ ಕ್ರಿಕೆಟ್​ ತಂಡ ನೀಡಿದ ರೋಚಕ ಪ್ರದರ್ಶನದ ಕುರಿತು ಮಾತುಕತೆ ಸಾಗುತ್ತಿದೆ.

ಈ ಗೆಲುವು ಭಾರತೀಯ ಕ್ರಿಕೆಟ್​ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಬರೆದ ಮುನ್ನುಡಿಯೇ? ಅನನುಭವಿ ಹುಡುಗರು ತಮ್ಮ ಅದ್ಭುತ ಆಟದಿಂದ ವಿಶ್ವ ಕ್ರಿಕೆಟ್​ಗೆ ನೀಡಿದ ಸಂದೇಶವೇನು? ಇಂತಹ ಅಮೋಘ ಆಟದ ಹಿಂದೆ ರಾಹುಲ್​ ದ್ರಾವಿಡ್​ ಪಾತ್ರವೇನು? ಎಂಬ ಒಳಗುಟ್ಟುಗಳನ್ನಿಟ್ಟುಕೊಂಡು ಟಿವಿ9 ಕನ್ನಡ ಡಿಜಿಟಲ್​ ಚರ್ಚೆ ಏರ್ಪಡಿಸಿತ್ತು. ಆ್ಯಂಕರ್ ಮಾಲ್ತೇಶ್ ನಡೆಸಿಕೊಟ್ಟ ಚರ್ಚೆಯಲ್ಲಿ ಪ್ರಜಾವಾಣಿಯ ನಿವೃತ್ತ ಸಹ ಸಂಪಾದಕ ಮತ್ತು KLE ಆಕಾಶವಾಣಿ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ, ಹಿರಿಯ ಕ್ರೀಡಾ ಪತ್ರಕರ್ತ ಜೋಸೆಫ್​ ಹೂವರ್​ ಮತ್ತು ಮಾಜಿ ಕ್ರಿಕೆಟಿಗ ಎನ್​.ಸಿ.ಅಯ್ಯಪ್ಪ ಭಾಗವಹಿಸಿದ್ದು, ಚರ್ಚೆಯಲ್ಲಿ ಸಿಕ್ಕ ಒಳನೋಟಗಳ ವಿಚಾರ ಇಲ್ಲಿದೆ.

ಎರಡು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಭಾರತೀಯ ಕ್ರಿಕೆಟ್​ ತಂಡ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗಾವಸ್ಕರ್ ಟ್ರೋಫಿ ಗಳಿಸಿತ್ತು. ಆದರೂ, ಅಂದಿನ ಗೆಲುವಿಗಿಂತ ಈ ಬಾರಿ ಬ್ರಿಸ್ಬೇನ್​ನಲ್ಲಿ ಗಳಿಸಿದ ಗೆಲುವು ರೋಚಕವಾದದ್ದು. ಈ ಸರಣಿಯ ಆರಂಭದಲ್ಲೇ ಅಡಿಲೇಡ್‌ ಮೈದಾನದಲ್ಲಿ ಭಾರತ ನೀರಸ ಪ್ರದರ್ಶನ ನೀಡಿ ಕೇವಲ 36 ರನ್​ಗಳಿಗೆ ಕೈ ಚೆಲ್ಲಿತ್ತು. ಮೊದಲ ಪಂದ್ಯದಲ್ಲೇ ಕ್ರಿಕೆಟ್​ ಪ್ರೇಮಿಗಳು ನಿರೀಕ್ಷೆ ಕಳೆದುಕೊಂಡಿದ್ದರು. ಅದಾದ ನಂತರ ಮೆಲ್ಬೋರ್ನ್‌ನಲ್ಲಿ ಸೆಟೆದು ನಿಂತು ಗೆದ್ದ ತಂಡ, ಸಿಡ್ನಿಯಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಂಡು ಒಂದಷ್ಟು ಆಸೆ ಚಿಗುರುವಂತೆ ಮಾಡಿದ್ದರು. ಆದರೆ, ಬ್ರಿಸ್ಬೇನ್‌ನಲ್ಲಿ ಮಾತ್ರ ನಿರೀಕ್ಷೆಗೂ ಮೀರಿ ಆಡಿದ್ದಲ್ಲದೇ ಗೆಲುವನ್ನು ಬಾಚಿಕೊಂಡರು.

ಒಂದೆಡೆ ಸರಣಿಯುದ್ದಕ್ಕೂ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡಲಾರಂಭಿಸಿತ್ತು. ಚೇತೇಶ್ವರ ಪೂಜಾರಾ, ಅಜಿಂಕ್ಯಾ ರಹಾನೆಯನ್ನು ಹೊರತುಪಡಿಸಿದರೆ ಮಿಕ್ಕವರಾರಿಗೂ ಎಲ್ಲಾ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಪ್ರತಿ ಪಂದ್ಯಕ್ಕೂ ಬದಲಾಗುತ್ತಿದ್ದ ಮುಖಗಳು. ಬೂಮ್ರಾ, ಜಡೇಜಾ, ರಾಹುಲ್, ಮಹಮದ್ ಶಮಿ, ಆರ್.ಅಶ್ವಿನ್..‌ ಹೀಗೆ ಸಾಲು ಸಾಲು ಗಾಯಾಳುಗಳು. ಕೊಹ್ಲಿಯ ಪಿತೃತ್ವ ರಜೆ.. ಹೇಳುತ್ತಾ ಹೋದರೆ ಭಾರತಕ್ಕೆ ಬೆಟ್ಟದಷ್ಟು ತೊಡಕುಗಳು ಎದುರಾಗಿದ್ದವು. ಅಷ್ಟಾದರೂ ಅದನ್ನೆಲ್ಲಾ ಮೀರಿ ಗೆಲುವು ದಾಖಲಿಸಿದ್ದು ಶ್ಲಾಘನೀಯ ವಿಚಾರ.

ಈ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ, ತಮಗೆ ಭಾರತ ಸರಣಿ ಗೆಲ್ಲುವ ನಿರೀಕ್ಷೆಯೇ ಇರಲಿಲ್ಲ. ಈ ಗೆಲುವು ಅಮೋಘವಾಗಿದ್ದು, 1988 ರಲ್ಲಿ ವೆಸ್ಟ್ ಇಂಡೀಸ್ ನಂತರ ಬ್ರಿಸ್ಬೇನ್‌ನಲ್ಲಿ ಕಾಂಗರೂಪಡೆಯನ್ನು ಮಣಿಸಿದ ಭಾರತ ತಂಡದ ಪ್ರದರ್ಶನ ಆಸ್ಟ್ರೇಲಿಯಾದವರ ಸೊಕ್ಕಡಗಿಸಿ, ಕಪಾಳಕ್ಕೆ ಹೊಡೆದು ಗೆದ್ದಂತಿತ್ತು ಎಂದು ಹೇಳಿದರು.

ಶುಭಮನ್ ಗಿಲ್, ರಿಷಬ್ ಪಂತ್, ಚೇತೇಶ್ವರ ಪೂಜಾರ ಆಟ ಅದ್ಭುತವಾದದ್ದು, 36 ರಿಂದ 300ರ ಗಡಿ ದಾಟಿ ಸಾಗಿದ ಪಯಣವೇ ಅಮೋಘ. ವೇದಂ ಅವರ ಪುಸ್ತಕ ಹೇಳುವಂತೆ ಈ ಟೆಸ್ಟ್​ನಲ್ಲಿ ಕರೇಜ್, ಕನ್ವಿಕ್ಷನ್, ಕಾಂಟ್ರವರ್ಸಿ ಮತ್ತು ಕ್ರಿಕೆಟ್ ಎಲ್ಲವೂ ಇತ್ತು. ಅಗ್ರೆಸಿವ್​ ನಾಯಕ ಕೊಹ್ಲಿಯ ಅನುಪಸ್ಥಿತಿಯಲ್ಲಿ ಶಾಂತರೂಪಿ ರಹಾನೆ ತಂಡವನ್ನು ಮುನ್ನಡೆಸಿದ ಪರಿ, ಸಾಲು ಸಾಲು ನೋವುಗಳ ನಡುವೆ ಸಿಗುತ್ತಿದ್ದ ಅವಕಾಶಗಳನ್ನು ಆಟಗಾರರು ಬಳಸಿಕೊಂಡ ರೀತಿ, ಆಸೀಸ್​ ಅವರ ವ್ಯಂಗ್ಯ, ಅವರು ಮಾಡುತ್ತಿದ್ದ ನಿಂದನೆಗಳಿಗೆ ಉತ್ತರ ನೀಡಿದ ಬಗೆ ಎಲ್ಲವೂ ಮಾದರಿ ಎಂದು ಬಣ್ಣಿಸಿದರು.

ಪಂತ್​ ತನ್ನ ನಿಜವಾದ ಶೈಲಿಯಲ್ಲಿ ಆಡಿ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಇತ್ತ ಪೂಜಾರಾ ಗೋಡೆ ರೀತಿ ನಿಂತು ಆಡುವ ಮೂಲಕ ಶಕ್ತಿ ತುಂಬಿದರು. ಟೆಸ್ಟ್ ಮ್ಯಾಚ್ ಎಂದರೆ ಇದು ಅನ್ನೋದನ್ನು ತೋರಿಸಿಕೊಟ್ಟ ಆಟವಿದು ಎಂದರೆ ಅತಿಶಯೋಕ್ತಿ ಅಲ್ಲ. ಈ ನಡುವೆ, ರವಿಶಾಸ್ತ್ರಿ ತಲೆ ಮೇಲೆ ಕತ್ತಿ ತೂಗುತ್ತಿತ್ತು ಎನ್ನುವುದನ್ನೂ ನೆನಪು ಮಾಡಿಕೊಳ್ಳಬೇಕು. ಅದರ ನಡುವೆಯೂ ಆಟಗಾರರಿಗೆ ಆರಾಮಾಗಿ ಆಡಲಿಕ್ಕೆ ಬಿಟ್ಟು ಯಶಸ್ವಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರಾಹುಲ್​ ದ್ರಾವಿಡ್​ನಂತಹ ಆಟಗಾರ ಕೋಚ್​ ಆದಾಗ ತನ್ನ ಶಿಸ್ತು, ಸಂಯಮ ಎಲ್ಲವನ್ನೂ ಕಿರಿಯರಿಗೆ ಕಲಿಸುತ್ತಾರೆ. ಯಾವಾಗ ಹೇಗೆ ಆಡಬೇಕು ಎನ್ನುವ ಸೂಕ್ಷ್ಮವನ್ನು ಹೇಳಿ ಕೊಟ್ಟಿರುತ್ತಾರೆ. ಆ ವಿಷಯವೂ ಇಲ್ಲಿ ವರದಾನವಾಗಿದೆ ಎಂದು ಹೇಳಬಹುದು. ಆದರೆ, ಅದಕ್ಕೂ ಮಿಗಿಲಾಗಿ ಒಬ್ಬರು ಗಾಯಗೊಂಡಾಗ ಇನ್ನೊಬ್ಬರಿಗೆ ಅನಿರೀಕ್ಷಿತ ಅವಕಾಶ ಸಿಗುತ್ತದಲ್ಲಾ.. ಅದನ್ನು ಉಪಯೋಗಿಸಿಕೊಂಡಿರುವುದೇ ಪ್ಲಸ್​ ಪಾಯಿಂಟ್​. ಭಾರತದ ಬಹುಪಾಲು ಕ್ರಿಕೆಟಿಗರಲ್ಲಿ ಮಧ್ಯಮ ವರ್ಗದವರೇ ಹೆಚ್ಚಿರುವುದೂ ಅದಕ್ಕೆ ಕಾರಣವಿರಬಹುದು. ಅವರಿಗೊಂದು ಛಲವಿರುತ್ತೆ. ಉದಾಹರಣೆಗೆ, 1996ರ ವಿಶ್ವಕಪ್​ ತಂಡಕ್ಕೆ ದ್ರಾವಿಡ್​ ಅವರನ್ನೇ ತೆಗೆದುಕೊಂಡಿರಲಿಲ್ಲ. ಯಾರಾದರೂ ಸೆಲೆಕ್ಟ್​ ಆಗಬೇಕಿದ್ದರೆ ಅದು ನಾನೇ ಎಂದು ಸ್ವತಃ ದ್ರಾವಿಡ್​ ಹೇಳಿಕೊಂಡಿದ್ದರು. ಆದರೆ, ಆಗ ಸೆಲೆಕ್ಟ್​ ಆಗದೇ ಉಳಿದ ದ್ರಾವಿಡ್​ ನಂತರದಲ್ಲಿ ತಾನೇನು ಎಂದು ಸಾಬೀತು ಮಾಡಿದರು ಎಂದು ಹಳೆಯ ಘಟನೆಗಳನ್ನು ಸ್ಮರಿಸಿಕೊಂಡರು.

ಟೆಸ್ಟ್​ ಬಗ್ಗೆ ಆಸಕ್ತಿ ಹೋಗುತ್ತಿರುವಾಗಲೇ ಒನ್​ ಡೇ ಮಾದರಿ ಬಂದಿದ್ದು. ಅದು ಬಂದ ನಂತರದಲ್ಲಿ ಟೆಸ್ಟ್​ ಆಟದ ಸೌಂದರ್ಯ ಕಳೆದು ಹೋಗಿದೆ ಎನ್ನುವ ಅಭಿಪ್ರಾಯ ಬಲವಾಗಿತ್ತು. ಆದರೆ, ಈ ಬಾರಿ ನಮ್ಮ ಹುಡುಗರು ಅದನ್ನು ಸುಳ್ಳಾಗಿಸಿದ್ದಾರೆ. ಟೆಸ್ಟ್​ ಆಟದ ಗಮ್ಮತ್ತು ಕಳೆದು ಹೋಗಿಲ್ಲ ಎನ್ನುವುದು ಸಾಬೀತಾಗಿದೆ. ಮುಂದೆ ಕೂಡಾ ಟೆಸ್ಟ್​ಗೆ ಬೆಲೆ ಇರಲಿದೆ. ಜೊತೆಗೆ, ಈಗ ಅಗ್ರಸ್ಥಾನಕ್ಕೆ ಬಂದಿರುವ ಭಾರತ ತಂಡ ಮುಂದೆ ಇಂಗ್ಲೆಂಡ್​ ಜೊತೆ ಆಡುವ ಮೂಲಕ ತನ್ನ ಸ್ಥಾನವನ್ನು ಇನ್ನೂ ಭದ್ರಪಡಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟರು.

ಈ ವಿಚಾರದ ಮುಂದುವರಿದ ಭಾಗವಾಗಿ ಮಾತನಾಡಿದ ಹಿರಿಯ ಕ್ರೀಡಾ ಪತ್ರಕರ್ತ ಜೋಸೆಫ್​ ಹೂವರ್, ಆಸ್ಟ್ರೇಲಿಯಾ ತಂಡವನ್ನು ಅಲ್ಲೇ ಸೋಲಿಸುವುದು ಸುಲಭದ ಮಾತಲ್ಲ. ಈ ಬಾರಿ ನಮ್ಮ ತಂಡದವರು ಆಡುವಾಗ ಸೋಲೊಪ್ಪಿಕೊಳ್ಳಲು ತಯಾರಿದ್ದೇವೆ. ಆದರೆ ಹೋರಾಡಿ ಸೋಲುತ್ತೇವೆ ಅನ್ನೋ ಥರ ಪಾಸಿಟಿವ್ ಆಗಿ ಆಡಿದರು. ಅದರ ಪರಿಣಾಮ ಗೆಲುವೇ ಅವರನ್ನು ಅರಸಿಕೊಂಡು ಬಂದಿದೆ ಎಂದು ಹೇಳಿದರು.

ಕೊಹ್ಲಿ ಮತ್ತು ರಹಾನೆ ಇಬ್ಬರನ್ನೂ ಹೋಲಿಸಿ ನೋಡುವುದಾದರೆ ಸಹಜವಾಗಿಯೇ ಹಲವು ವ್ಯತ್ಯಾಸಗಳು ಕಾಣಸಿಗುತ್ತವೆ. ಕ್ಯಾಪ್ಟನ್​ ಕೂಲ್​ ರೀತಿಯಲ್ಲಿ ನಿಂತ ರಹಾನೆ, ತನ್ನ ತಂಡದವರಿಗೆ ಧೈರ್ಯ ತುಂಬುವ ಜೊತೆಗೆ ಅತ್ಯುತ್ತಮವಾಗಿ ಮುನ್ನಡೆಸಿದರು. ಇಷ್ಟು ವರ್ಷ ರಹಾನೆಗೆ ಸಾಮರ್ಥ್ಯ ಇದೆ ಎನ್ನುವುದು ತಿಳಿದಿದ್ದರೂ ಬೇರೆ ಬೇರೆ ಕಾರಣಗಳಿಗೆ ಅವರನ್ನು ತಂಡದಿಂದ ಹೊರಗಿಟ್ಟಿದ್ದರು.

ಆದರೆ, ರಹಾನೆ ಈ ಬಾರಿ ತನಗೆ ಸಿಕ್ಕ ಅವಕಾಶವನ್ನು ಅತ್ಯುತ್ತಮವಾಗಿ ನಿರ್ವಹಿಸಿ ತಾವೇನೆಂದು ತೋರಿಸಿಕೊಟ್ಟರು. ಈ ಹಿಂದೆ ಎಷ್ಟೋ ಬಾರಿ ಸ್ಟಾರ್ ಆಟಗಾರರಿದ್ದೂ ಹೀನಾಯವಾಗಿ ಸೋಲುಂಡ ಉದಾಹರಣೆ ಇದೆ. ಆದರೆ, ಈ ಬಾರಿ ಅಷ್ಟೂ ಹೊಸಬರನ್ನಿಟ್ಟುಕೊಂಡು ಗೆದ್ದಿದ್ದು ದಾಖಲೆ ಎಂದು ತಿಳಿಸಿದರು.

ಇಲ್ಲಿ ನಮ್ಮ ಆಟಗಾರರ ಮೇಲೆ ಐಪಿಎಲ್​ ಪ್ರಭಾವ ಬೀರಿದೆ ಎನ್ನುವುದಾಗಿದ್ದರೆ ಇವರೆಲ್ಲಾ ಬೇಗ ಔಟ್​ ಆಗಬೇಕಿತ್ತು. ಆದ್ರೆ, ಐಪಿಎಲ್​ ಭರಾಟೆಯ ನಡುವೆಯೂ ನಮ್ಮವರು ಟೆಸ್ಟ್​ ಶೈಲಿಯನ್ನು ಉಳಿಸಿಕೊಂಡಿದ್ದಾರೆ ಎನ್ನುವುದೇ ಗಮನಾರ್ಹ ಸಂಗತಿ ಎಂದು ಅಭಿಪ್ರಾಯಪಟ್ಟರು. ಜೊತೆಗೆ, ರಿಷಬ್ ಪಂತ್​ ಮುಂದೆ ಒಳ್ಳೆಯ ರೀತಿ ಆಡಲಿದ್ದಾರೆ ಎಂದು ಗುರುತಿಸಿ ಮುಂದೆ ತಂದಿದ್ದು ದ್ರಾವಿಡ್​ ಎನ್ನುವುದರಲ್ಲಿ ಅನುಮಾನವಿಲ್ಲ. ಯಾರನ್ನೇ ಆಗಲಿ ಮುಂದೆ ತರುವುದು ಮುಖ್ಯ. ಅದೇ ರೀತಿ ಪಂತ್​ ಸಹ ದ್ರಾವಿಡ್​ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಎನ್ನುವುದು ಸಂತಸದ ಸಂಗತಿ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಎನ್​.ಸಿ.ಅಯ್ಯಪ್ಪ, ಯಾರಿಗೇ ಆಗಲಿ ಛಲ ಬರುವುದು ಹಣಕಾಸಿನ ಸಮಸ್ಯೆ ಇದ್ದಾಗ. ಕ್ರಿಕೆಟ್​ನಲ್ಲೂ ಇಂತಹ ಕಷ್ಟ ಹಲವರು ಅನುಭವಿಸಿದ್ದಾರೆ. ಅವರಿಗೆಲ್ಲಾ ಒಂದು ಅವಕಾಶ ಸಿಕ್ಕಾಗ ಅದನ್ನು ಉಪಯೋಗಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇರುತ್ತೆ. ಈ ಸಲ ಅದನ್ನು ಎಲ್ಲರೂ ಉಪಯೋಗಿಸಿಕೊಂಡಿದ್ದಾರೆ ಎನ್ನುವುದೇ ಖುಷಿಯ ವಿಚಾರ. ಪ್ರಸ್ತುತ ತಂಡವನ್ನು ಆಯ್ಕೆ ಮಾಡಿದವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಯುವ ತಂಡವನ್ನು ಆಯ್ಕೆ ಮಾಡಿ ಮುಂದೆ ಬರುವವರಿಗೂ ಉತ್ಸಾಹ ತುಂಬಿದ್ದಾರೆ. ಮುಂದೆ ಇದು ಒಳ್ಳೆಯ ಪ್ರದರ್ಶನಕ್ಕೆ ಕಾರಣವಾಗಲಿದೆ ಎಂದು ಆಟಗಾರರ ಪ್ರದರ್ಶನದ ಕುರಿತಾಗಿ ಮಾತನಾಡಿದರು.

ಈ ಸರಣಿ ಆ್ಯಶಸ್ ಸೀರಿಸ್‌ಗಿಂತ ಚೆನ್ನಾಗಿತ್ತು ಎನ್ನುವುದು ನನ್ನ ಅಭಿಪ್ರಾಯ. ತಂಡದಲ್ಲಿದ್ದ ಎಲ್ಲಾ ಸಮಸ್ಯೆಗಳನ್ನೂ ಕಡೆಗಣಿಸಿ ಗೆದ್ದಿದ್ದಾರೆ. ಇದೊಂದು ವೈಯಕ್ತಿಕ ಆಟ ಅಲ್ಲ ಸಾಂಘಿಕ ಆಟ ಎಂದು ತೋರಿಸಿಕೊಟ್ಟಿದ್ದಾರೆ. ಜ್ಯೂನಿಯರ್ಸ್ ಅದ್ಭುತವಾಗಿ ಆಡಿರುವುದನ್ನು ಗಮನಿಸಿದರೆ ಮುಂದಿನ ಭಾರತ ತಂಡ ಎಷ್ಟು ಚೆನ್ನಾಗಿದೆ ಎಂದು ಖುಷಿಯಾಗುತ್ತದೆ. ಇದರೊಮದಿಗೆ ಅನನುಭವಿಗಳನ್ನು ಮೌಲ್ಡ್ ಮಾಡಿರುವ ರೀತಿ ಅದ್ಭುತ. ರಹಾನೆ ತಮ್ಮ ಅನುಭವವನ್ನು ತುಂಬಾ ಚೆನ್ನಾಗಿ ಪ್ರಯೋಗಿಸಿದ್ದಾರೆ ಎಂದು ವರ್ಣಿಸಿದರು.

ಆಸ್ಟ್ರೇಲಿಯಾದವರು ಮೊದಲಿನಿಂದಲೂ ಎದುರಾಳಿಗಳನ್ನು ಗಾಯಗೊಳಿಸೋಕೆ ನೋಡುವವರು. ಆದರೆ, ಈ ಬಾರಿ ಅವರಿಂದ ಎಷ್ಟೇ ಏಟು ತಿಂದರೂ ನಮ್ಮವರು ಹೆದರಲಿಲ್ಲ. ಅದರಲ್ಲೂ ಪೂಜಾರಾ ಧೃಡವಾಗಿ ನಿಂತು ಬಿಟ್ಟರು. ಈ ಸರಣಿ ಗೆಲುವಿಗೆ ಒಬ್ಬರ ಹೆಸರು ಹೇಳಿ ಕ್ರೆಡಿಟ್ ಕೊಡೋಕೆ ಆಗಲ್ಲ ಅಷ್ಟು ಚೆನ್ನಾಗಿ ಎಲ್ಲರೂ ಸೇರಿ ಆಡಿದ್ದಾರೆ. ಇದು ಭಾರತದ ಬಿ ಟೀಂ ಅಂತ ಗುರುತಿಸಲಾಗಿತ್ತು. ಆದರೆ ಬಿ ಟೀಂ ಎಷ್ಟು ಬಲಶಾಲಿಯಾಗಿದೆ ಎಂದು ಇವರು ತೋರಿಸಿಕೊಟ್ಟಿದ್ದಾರೆ. ಭಾರತ ಇನ್ನಷ್ಟು ಬಲವಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.

ಇಷ್ಟಾದರೂ ಆಟಗಾರರು ಈಗ ಗೆದ್ದಿರೋದನ್ನು ಮರೆತು ಮುಂದಿನ ಆಟಕ್ಕೆ ಹೊಸದಾಗಿ ಸಿದ್ದರಾಗಬೇಕು. ಸೀನಿಯರ್ಸ್​ಗಳನ್ನು ಹಿಂದೆ ಹಾಕಬೇಕು ಅಂದ್ರೆ ಜ್ಯೂನಿಯರ್ಸ್​ ಎರಡು ಪಟ್ಟು ಶ್ರಮ ಹಾಕಿ ಆಡಬೇಕು. ಆಸ್ಟ್ರೇಲಿಯಾ ನಂಬರ್​ 1 ಅನ್ನೋದು ಎಲ್ಲರ ತಲೆಯಲ್ಲಿ ಕೂತು ಬಿಟ್ಟಿತ್ತು. ಆದರೆ ಈಗ ಭಾರತ ತಂಡ ನಂಬರ್​ 1 ಆಗೋ ತಾಕತ್ತು ಇದೆ ಅನ್ನೋದನ್ನು ಸಾಬೀತುಪಡಿಸಿಯಾಗಿದೆ. ಆ ಮೂಲಕ ಬೇರೆ ದೇಶಗಳಿಗೂ ಸಂದೇಶ ರವಾನಿಸಲಾಗಿದೆ. ಇನ್ನು ಮುಂದೆ ಭಾರತ ಬಲಾಢ್ಯ ತಂಡವಾಗಿ ಉಳಿಯುವ ಎಲ್ಲಾ ಸಾಧ್ಯತೆ ಇದೆ. ಅದನ್ನು ಆಟಗಾರರು ಬಿಟ್ಟುಕೊಡಬಾರದು ಎಂದು ಹೇಳಿದರು.

Published On - 1:32 pm, Thu, 21 January 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ