ಬಹುಭಾಷೆಗಳಲ್ಲಿ ತೆರೆ ಕಾಣಲಿವೆ ಕನ್ನಡ ಸಿನಿಮಾ.. ತೆಲುಗು, ತಮಿಳಿನಲ್ಲಿ ಅಬ್ಬರಿಸಲಿರುವ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

ಕನ್ನಡ ಸಿನಿಮಾಗಳು ಪರಭಾಷೆಯಲ್ಲಿ ಡಿಮ್ಯಾಂಡ್ ಹುಟ್ಟು ಹಾಕ್ತಿವೆ. ಸ್ಯಾಂಡಲ್ ವುಡ್ ಸ್ಟಾರ್ ನಟರ ಸಿನಿಮಾಗಳು ಕನ್ನಡದೊಂದಿಗೆ ಇತರೆ ಭಾಷೆಯಲ್ಲೂ ಅಬ್ಬರಿಸುತ್ತಿವೆ. ಪವರ್ ಸ್ಟಾರ್, ರೋರಿಂಗ್ ಸ್ಟಾರ್, ಆ್ಯಕ್ಷನ್ ಪ್ರಿನ್ಸ್ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಬಹುಭಾಷೆಗಳಲ್ಲಿ ತೆರೆ ಕಾಣಲಿವೆ ಕನ್ನಡ ಸಿನಿಮಾ.. ತೆಲುಗು, ತಮಿಳಿನಲ್ಲಿ ಅಬ್ಬರಿಸಲಿರುವ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

Updated on: Dec 28, 2020 | 7:22 AM

ಕೊರೊನಾ ಬಂದ್ರೂ, ಲಾಕ್ ಡೌನ್ ಆದ್ರೂ ಬಣ್ಣದ ಜಗತ್ತಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಲಾಕ್ ಡೌನ್ ಬಳಿಕ ಕನ್ನಡ ಸಿನಿಮಾಗಳು ಭರ್ಜರಿ ಸದ್ದು ಮಾಡೋಕೆ ಶುರು ಮಾಡಿವೆ. ಅದ್ರಲ್ಲೂ ಪ್ರತಿ ಸಿನಿಮಾಗಳು ಪ್ಯಾನ್ ಇಂಡಿಯಾ ಪ್ಲ್ಯಾನ್ ನಲ್ಲಿವೆ. ಅಂದ್ರೆ ಅಷ್ಟರ ಮಟ್ಟಿಗೆ ಕನ್ನಡ ಸಿನಿಮಾಗಳಿಗೆ ಬೇಡಿಕೆ ಉಂಟಾಗಿದೆ.

ಪರಭಾಷೆಗಳಲ್ಲೂ ಕನ್ನಡದ ಹವಾ
ಹೌದು ಇತ್ತೀಚೆಗೆ ತಯಾರಾಗ್ತಿರೋ ಬಹುತೇಕ ಸ್ಟಾರ್ ಸಿನಿಮಾಗಳು ಬಹುಭಾಷೆಗಳಲ್ಲಿ ಸದ್ದು ಮಾಡ್ತಿವೆ. ಈ ಪೈಕಿ ಧ್ರುವ ಸರ್ಜಾ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಧ್ರುವ ಅಭಿನಯದ ಪೊಗರು, ಕನ್ನಡದ ಜೊತೆಗೆ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗುತ್ತೆ ಅಂತ ಹೇಳಲಾಗಿತ್ತು. ಕರಾಬು ಬಾಸು ಕರಾಬು ಅಂತ ಧ್ರುವ ಹಾಡಿ, ಕುಣಿದಿದ್ದ ಹಾಡು ಟಾಲಿವುಡ್‌ ಹುಬ್ಬೇರುವಂತೆ ಮಾಡಿತ್ತು. ಈಗ ಪೊಗರು ಸ್ವಾಗತಕ್ಕೆ ತಮಿಳು ಸಿನಿಮಾರಂಗ ಕೂಡ ಸಜ್ಜಾಗಿದೆ. ತಮಿಳಿನಲ್ಲಿ “ರೊಂಬ ತಿಮಿರು” ಅನ್ನೋ ಟೈಟಲ್​ನಲ್ಲಿ ಸಿನಿಮಾ ರೆಡಿಯಾಗ್ತಿದೆ. ಈ ವಿಚಾರವನ್ನ ಸ್ವತಃ ಧ್ರುವ ಸರ್ಜಾ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಕನ್ನಡದ ಪವರ್​ ಸ್ಟಾರ್​ ಪುನೀತ್​ರಾಜ್​ಕುಮಾರ್ ಅಭಿನಯದ ಯುವರತ್ನ ಸಿನಿಮಾ ಕೂಡ ಬಹುಭಾಷೆಗಳಲ್ಲಿ ತಯಾರಾಗ್ತಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಪವರ್​ ಸ್ಟಾರ್​ ಪವರ್​ ರಿವೀಲ್​ ಆಗಲಿದೆ. ಅಪ್ಪು ಸಿನಿಮಾಗಳಿಗೆ ತೆಲುಗಿನಲ್ಲಿ ಭಾರಿ ಡಿಮ್ಯಾಂಡ್​ ಹುಟ್ಟಿಕೊಂಡಿದೆ. ಹಾಗಾಗಿ ತೆಲುಗಿನಲ್ಲಿ ರಿಲೀಸ್​ ಆದ ಯುವರತ್ನ ಹಾಡು ದಾಖಲೆ ನಿರ್ಮಿಸಿದೆ.

ಇನ್ನೂ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಕೂಡ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಒಟ್ಟಿಗೆ ತೆರೆಗೆ ಬರಲಿದೆ. ಕನ್ನಡದ ಜೊತೆಗೆ ಟಾಲಿವುಡ್​ ಅಂಗಳದಲ್ಲೂ ದಚ್ಚು ಕಿಚ್ಚು ಹೊತ್ತಿಸೋಕೆ ಸಜ್ಜಾಗಿದ್ದಾನೆ. ಇನ್ನೂ ರೋರಿಂಗ್​ ಸ್ಟಾರ್​ ಶ್ರೀಮುರಳಿ ಮದಗಜ ಸಿನಿಮಾದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ತಿದ್ದಾರೆ. ಮದಗಜ ತೆಲುಗು ಟೀಸರನ್ನ ಹೊಸ ವರ್ಷಕ್ಕೆ ರಿಲೀಸ್​ ಮಾಡಲು ಚಿತ್ರತಂಡ ಸಜ್ಜಾಗಿದೆ.

ಒಟ್ಟಾರೆ ಇಷ್ಟು ದಿನ ಒಂದು ಲೆಕ್ಕಾ ಇನ್ನು ಮುಂದೆ ಒಂದು ಲೆಕ್ಕಾ ಅಂತಿದ್ದಾರೆ ಸ್ಯಾಂಡಲ್​ವುಡ್​ ಸ್ಟಾರ್ಸ್. ಅಂದ್ರೆ ಬಹುತೇಕ ಸ್ಟಾರ್​ ನಟರ ಸಿನಿಮಾಗಳೆಲ್ಲಾ ಕನ್ನಡದ ಜೊತೆಜೊತೆಗೆ ಪರಭಾಷೆಯಲ್ಲೂ ಡಿಮ್ಯಾಂಡ್​ ಹುಟ್ಟು ಹಾಕಿವೆ. ಪರಭಾಷಿಕರು ಕನ್ನಡಿಗರಿಗೆ ರೆಡ್​ ಕಾರ್ಪೆಟ್​​ ಹಾಕಿ ಸ್ವಾಗತ ಕೋರುತ್ತಿದ್ದಾರೆ. ಹಾಗಾಗಿ ಸೆಟ್ಟೇರುತ್ತಿರೋ ಸ್ಟಾರ್​ ನಟರ ಸಿನಿಮಾಗಳು ಏನಿಲ್ಲ ಅಂದ್ರೂ ಎರಡು ಭಾಷೆಗಳಲ್ಲಾದ್ರೂ ರೆಡಿ ಆಗ್ತಿವೆ. ಈ ಮೂಲಕ ಕನ್ನಡ ಸಿನಿಮಾಗಳು ಮತ್ತೊಂದು ಹೊಸ ಭರವಸೆ ಮೂಡಿಸಿವೆ.

Published On - 7:22 am, Mon, 28 December 20