ಜೆ.ಪಿ. ನಡ್ಡಾ ಸಮ್ಮುಖದಲ್ಲಿ ವಿಜಯಶಾಂತಿ ಇಂದು ಬಿಜೆಪಿಗೆ ಸೇರ್ಪಡೆ..
ಖ್ಯಾತ ನಟಿ, ರಾಜಕಾರಣಿ ವಿಜಯಶಾಂತಿ ಮರಳಿ ಗೂಡಿಗೆ ಬರಲು ಸಿದ್ಧರಾಗಿದ್ದಾರೆ. ಅಂದ್ರೆ, ಮತ್ತೆ ಸಿನಿಮಾ ಮಾಡ್ತಾರೆ ಅಂತಲ್ಲ ಬದಲಿಗೆ ಬಿಜೆಪಿಗೆ ಮರು ಸೇರ್ಪಡೆಯಾಗಲು ವಿಜಯಶಾಂತಿ ಸಿದ್ಧರಾಗಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ವಿಜಯಶಾಂತಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಿದ್ದು, ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ವಿಜಯಶಾಂತಿ.. ಪ್ರಮುಖವಾಗಿ ತೆಲುಗು ಚಿತ್ರಗಳಲ್ಲಿ ನಟಿಸಿದ್ರೂ.. ನಂತರ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡ್ರು. ಅಲ್ದೆ, ಭಾರತೀಯ ಚಿತ್ರರಂಗದ ಲೇಡಿ ಸೂಪರ್ಸ್ಟಾರ್ ಆಗಿ ಮಿಂಚಿದ್ರು. ಇಂತಾ ವಿಜಯಶಾಂತಿ ಸಿನಿಮಾ ರಂಗದ ಜೊತೆಗೆ ರಾಜಕಾರಣದಲ್ಲೂ ಒಂದು ಕೈ ನೋಡಿದ್ದಾರೆ.
ಬಿಜೆಪಿ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ವಿಜಯಶಾಂತಿ ಕೊನೆಗೆ ತಮ್ಮದೇ ತಲ್ಲಿ ತೆಲಂಗಾಣ ಪಕ್ಷ ಸ್ಥಾಪಿಸಿದ್ರು. ತೆಲಂಗಾಣ ಹೋರಾಟದ ಕಾವು ಹೆಚ್ಚಾದ ಬಳಿಕ ತಮ್ಮ ಪಕ್ಷವನ್ನ ಟಿಆರ್ಎಸ್ ಜೊತೆ ವಿಲೀನಗೊಳಿಸಿದ್ರು. ಟಿಆರ್ಎಸ್ನಲ್ಲಿ ಹೆಚ್ಚು ದಿನ ಉಳಿಯದ ವಿಜಯಶಾಂತಿ ಬಳಿಕ ಕಾಂಗ್ರೆಸ್ ಸೇರಿದ್ರು. ಯಾವಾಗ ಹೈದರಾಬಾದ್ ಕಾರ್ಪೊರೇಷನ್ ಫಲಿತಾಂಶ ಹೊರಬಿತ್ತೋ ಆಗ ಮತ್ತೆ ಮಾತೃಪಕ್ಷಕ್ಕೆ ಮರಳಲು ಡಿಸೈಡ್ ಆಗಿದ್ದಾರೆ.
ತವರಿಗೆ ಮರಳಲು ಸಿದ್ಧರಾಗಿದ್ದಾರೆ ಲೇಡಿ ಸೂಪರ್ಸ್ಟಾರ್! ತೆಲಂಗಾಣದಲ್ಲಿ ತನಗೆ ಎದುರಾಳಿಯೇ ಇಲ್ಲ ಅನ್ನೋ ರೀತಿ ಕೆಸಿಆರ್ ಅವರ ಅಶ್ವಮೇಧ ಕುದುರೆ ಓಡುತ್ತಿತ್ತು. ಈ ಅಶ್ವಮೇಧ ಕುದುರೆಯನ್ನ ಕಟ್ಟಿಹಾಕಲು ಸಾಧ್ಯವಿಲ್ಲ ಅಂತಲೇ ಎಲ್ಲರೂ ಭಾವಿಸಿದ್ರು. ಆದ್ರೆ, ಕಳೆದ ತಿಂಗಳು ನಡೆದ ದುಬ್ಬಾಕ ಉಪಚುನಾವಣೆ, ನಂತರ ನಡೆದ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಸಿಆರ್ರ ವಿಜಯದ ಓಟಕ್ಕೆ ಬಿಜೆಪಿ ತಡೆಯೊಡ್ಡಿತ್ತು.
ಈ ಮೂಲಕ ತೆಲಂಗಾಣದಲ್ಲಿ ಟಿಆರ್ಎಸ್ಗೆ ಪರ್ಯಾಯ ಅನ್ನೋದಿದ್ರೆ ಅದು ಬಿಜೆಪಿ ಮಾತ್ರ ಅನ್ನೋ ಸಂದೇಶ ರವಾನಿಸಿತ್ತು. ಇದ್ರಿಂದಾಗಿ ತೆಲಂಗಾಣದ ಹಲವು ಪ್ರಮುಖ ರಾಜಕೀಯ ನಾಯಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇವರಲ್ಲಿ ಪ್ರಮುಖರು ಅಂದ್ರೆ ಲೇಡಿ ಸೂಪರ್ಸ್ಟಾರ್ ವಿಜಯಶಾಂತಿ. ಇವರು ಸಿನಿಮಾದಿಂದ ದೂರವಾಗಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದೇ ಬಿಜೆಪಿ ಮೂಲಕ, ಹೀಗಾಗಿ ತವರು ಪಕ್ಷಕ್ಕೆ ಮರಳಲು ಅವರು ಉತ್ಸುಕರಾಗಿದ್ದಾರೆ.
ಬಿಜೆಪಿ ಸೇರುವ ಉದ್ದೇಶದಿಂದ ನಿನ್ನೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಷನ್ ರೆಡ್ಡಿ ನೇತೃತ್ವದಲ್ಲಿ ವಿಜಯಶಾಂತಿ, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಿದ್ರು. ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಇದು ತೆಲಂಗಾಣದಲ್ಲಿ ಬಿಜೆಪಿ ಬಲವರ್ಧನೆಗೆ ಕಾರಣವಾಗುತ್ತೆ ಅಂತಾ ವಿಶ್ಲೇಷಕರು ಹೇಳ್ತಿದ್ದಾರೆ. ಈ ಮಾತು ನಿಜವಾಗುತ್ತಾ ಅನ್ನೋದಕ್ಕೆ ಕಾಲವೇ ಉತ್ತರ ನೀಡಲಿದೆ.
Published On - 7:21 am, Mon, 7 December 20