ಬಳ್ಳಾರಿ-ವಿಜಯನಗರ ಪ್ರತ್ಯೇಕ ಜಿಲ್ಲೆ: ಪ್ರಚೋದನೆಗಳಿಗೆ ಜನ ಕಿವಿಗೊಡಬಾರದು- ಆನಂದ್ ಸಿಂಗ್

ಬಳ್ಳಾರಿ-ವಿಜಯನಗರ ಪ್ರತ್ಯೇಕ ಜಿಲ್ಲೆ: ಪ್ರಚೋದನೆಗಳಿಗೆ ಜನ ಕಿವಿಗೊಡಬಾರದು- ಆನಂದ್ ಸಿಂಗ್
ಹೊಸಪೇಟೆಯನ್ನು ಕೇಂದ್ರವಾಗಿಸಿಕೊಂಡು ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ.

ಬಳ್ಳಾರಿ:ಕಲ್ಯಾಣ ಕರ್ನಾಟಕದ ಭಾಗವಾಗಿರುವ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡುವ ನಿರ್ಧಾರಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ದೊರಕಿದೆ. ಈ ಮೂಲಕ ಒಂದು ದಶಕಕ್ಕೂ ಅಧಿಕ ಕಾಲ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಇನ್ನೊಂದೆಡೆ, ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಬಳ್ಳಾರಿಯನ್ನು ಕನ್ನಡ ನಾಡಿಗೆ ಸೇರಿಸುವಂತೆ ನಡೆಸಿದ ಒಗ್ಗಟ್ಟಿನ ಹೋರಾಟಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದು ಜಿಲ್ಲೆಯ ಅಖಂಡತೆಯ ಪರ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

ವಿಜಯನಗರ ಹೊಸ ಜಿಲ್ಲಾ ರಚನೆಗೆ ಜಿಲ್ಲೆಯ ಪಶ್ಚಿಮ ಭಾಗದ ತಾಲೂಕುಗಳ (ಹೊಸ ಜಿಲ್ಲೆಗೆ ಒಳಪಡಲಿರುವ ತಾಲೂಕುಗಳು) ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಜಿಲ್ಲೆಗೆ ಒಳಪಡಲಿರುವ ಭಾಗಗಳಲ್ಲಿ ಈ ಬಗ್ಗೆ ವಿರೋಧ ವ್ಯಕ್ತವಾಗಿದೆ. ಅರಣ್ಯ ಸಚಿವ ಆನಂದ್ ಸಿಂಗ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕಾಗಿ ಪಕ್ಷ ಈ ಉಡುಗೊರೆ ಕೊಟ್ಟಿದೆ. ರಾಜಕೀಯ ಪ್ರೇರಿತವಾಗಿ ಜಿಲ್ಲಾ ವಿಂಗಡಣೆ ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ಜಿಲ್ಲೆ ಹೋಳಾದರೆ ಬಿಜೆಪಿಯೂ ಹೋಳಾಗುತ್ತದೆ ಎಂದು ವಿಭಜನೆಯ ಬಗ್ಗೆ ಅಸಮಧಾನ ಸೂಚಿಸಿರುವ ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಜಿಲ್ಲೆ ರಚನೆಗೆ ಅನುಮೋದನೆ ಸಿಕ್ಕಿರುವುದು ಸಂತಸ ತಂದಿದೆ. ನೂತನ ಜಿಲ್ಲೆಯ ಕುರಿತು ಹರಿದಾಡುವ ಪ್ರಚೋದನೆಗಳಿಗೆ ಜನರು ಕಿವಿಗೊಡಬಾರದು ಎಂದು ಹೇಳಿರುವ ಆನಂದ್ ಸಿಂಗ್, ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬಳ್ಳಾರಿ-ವಿಜಯನಗರ ಜಿಲ್ಲಾ ವಿಂಗಡಣೆ ಯಾಕೆ?!
ಬಳ್ಳಾರಿ ಜಿಲ್ಲಾ ಕೇಂದ್ರವು ಜಿಲ್ಲೆಯ ಪೂರ್ವ ಭಾಗದಲ್ಲಿದ್ದು, ಪಶ್ಚಿಮದ ತಾಲೂಕುಗಳಿಂದ ಸುಮಾರು 150 ಕಿ.ಮೀ.ನಷ್ಟು ದೂರದಲ್ಲಿವೆ. ಇದರಿಂದ ಪಶ್ಚಿಮದ ತಾಲೂಕುಗಳಿಗೆ ಜಿಲ್ಲಾ ಕೇಂದ್ರದೊಂದಿಗೆ ಸಂಪರ್ಕ ಕಷ್ಟಸಾಧ್ಯವಾಗಿತ್ತು. ಆಡಳಿತಾತ್ಮಕ ಸಮಸ್ಯೆಗಳು ತಲೆದೋರಿದ್ದವು. ಆಡಳಿತ ಸುಗಮಗೊಳಿಸುವ ಮತ್ತು ಅಭಿವೃದ್ಧಿ ಹೆಚ್ಚಿಸುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಪಶ್ಚಿಮ ಭಾಗದ ಜನರು ಬಯಸಿದ್ದರು.