ಗೂಗಲ್ ಸರ್ಚ್​ನಲ್ಲಿ ಬಂತು ವಾಟ್ಸ್ಆ್ಯಪ್ ಖಾಸಗಿ ಗ್ರೂಪ್ ಚಾಟ್ ಆಹ್ವಾನದ ಲಿಂಕ್ !

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 11, 2021 | 9:05 PM

ವಾಟ್ಸ್ಆ್ಯಪ್ ಗ್ರೂಪ್ ಗೂಗಲ್ ಸರ್ಚ್​ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲೇನೂ ಅಲ್ಲ. 2019 ಮತ್ತು 2020ರಲ್ಲಿಯೂ ಇದೇ ರೀತಿ ಕಾಣಿಸಿಕೊಂಡಿತ್ತು. ಗೂಗಲ್ ಸರ್ಚ್ ಮಾಡಿದರೆ ಬಳಕೆದಾರರ ಪ್ರೊಫೈಲ್ ಕಾಣಿಸಿಕೊಳ್ಳುವ, ಅವರ ಫೋನ್ ನಂಬರ್ ಕಾಣಿಸಿಕೊಳ್ಳುವ ಸಮಸ್ಯೆ ಕಂಡುಬಂದಾಗ ಅದನ್ನು ಸರಿಪಡಿಸಲಾಗಿತ್ತು.

ಗೂಗಲ್ ಸರ್ಚ್​ನಲ್ಲಿ ಬಂತು ವಾಟ್ಸ್ಆ್ಯಪ್ ಖಾಸಗಿ ಗ್ರೂಪ್ ಚಾಟ್ ಆಹ್ವಾನದ ಲಿಂಕ್ !
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಗೂಗಲ್​ನಲ್ಲಿ ಸರ್ಚ್ ಮಾಡಿದರೆ ವಾಟ್ಸ್ಆ್ಯಪ್ ಗ್ರೂಪ್​ಗಳು ಕಾಣಿಸಿಕೊಳ್ಳುತ್ತಿದ್ದು, ಯಾರೂ ಬೇಕಾದರೂ ಗೂಗಲ್ ಸರ್ಚ್ ಮಾಡಿ ಖಾಸಗಿ ವಾಟ್ಸ್ಆ್ಯಪ್ ಗ್ರೂಪ್​ಗಳಿಗೆ ಸೇರಿಕೊಳ್ಳಬಹುದಾದ ರೀತಿಯಲ್ಲಿ ವಾಟ್ಸ್ಆ್ಯಪ್ ಡೇಟಾ ಬಹಿರಂಗವಾಗಿದೆ.

ವಾಟ್ಸ್ಆ್ಯಪ್ ಗ್ರೂಪ್ ಗೂಗಲ್ ಸರ್ಚ್​ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲೇನೂ ಅಲ್ಲ. 2019ಮತ್ತು 2020ರಲ್ಲಿಯೂ ಇದೇ ರೀತಿ ಕಾಣಿಸಿಕೊಂಡಿತ್ತು. ಗೂಗಲ್ ಸರ್ಚ್ ಮಾಡಿದರೆ ಬಳಕೆದಾರರ ಪ್ರೊಫೈಲ್ ಕಾಣಿಸಿಕೊಳ್ಳುವ, ಅವರ ಫೋನ್ ನಂಬರ್ ಕಾಣಿಸಿಕೊಳ್ಳುವ ಸಮಸ್ಯೆ ಕಂಡುಬಂದಾಗ ಅದನ್ನು ಸರಿಪಡಿಸಲಾಗಿತ್ತು

ಗ್ರೂಪ್ ಚಾಟ್ ಆಮಂತ್ರಣಗಳ ಅನುಕ್ರಮಣಿಕೆಗೆ ಅನುಮತಿ ನೀಡುವ ಮೂಲಕ ವಾಟ್ಸ್ಆ್ಯಪ್ ಹಲವಾರು ಖಾಸಗಿ ಗ್ರೂಪ್​​ಗಳು ಗೂಗಲ್ ವೆಬ್ ಸರ್ಚ್​ನಲ್ಲಿ ಸಿಗುವಂತೆ ಮಾಡಿದೆ. ವಾಟ್ಸ್ಆ್ಯಪ್ ಗ್ರೂಪ್ ಲಿಂಕ್ ಇಲ್ಲಿ ಲಭ್ಯವಾಗಿದ್ದು ಯಾರಿಗೆ ಬೇಕಾದರೂ ಈ ಲಿಂಕ್ ಬಳಸಿ ಗ್ರೂಪ್ ಸೇರಬಹುದಾಗಿದೆ. ಅಷ್ಟೇ ಅಲ್ಲದೆ ಗ್ರೂಪ್ ಸದಸ್ಯರ ಫೋನ್ ಸಂಖ್ಯೆ ಮತ್ತು ಗ್ರೂಪ್​ನಲ್ಲಿ ಅವರು ಮಾಡಿರುವ ಪೋಸ್ಟ್ ಕೂಡಾ ಅಪರಿಚಿತರ ಕೈಗೆ ಸಿಕ್ಕಿದಂತಾಗಿದೆ.

ಗ್ರೂಪ್ ಚಾಟ್ ಆಮಂತ್ರಣಗಳ ಅನುಕ್ರಮಣಿಕೆ ಬಗ್ಗೆ ವಾಟ್ಸ್ಆ್ಯಪ್ ಹೇಳುವುದೇನು?

ಮಾರ್ಚ್ 2020ರಿಂದ ವಾಟ್ಸ್ಆ್ಯಪ್ noindex ಟ್ಯಾಗ್ ಸೇರ್ಪಡೆ ಮಾಡಿತ್ತು. ಗೂಗಲ್ ಪ್ರಕಾರ ಇಂಡೆಕ್ಸಿಂಗ್ (ಅನುಕ್ರಮಣಿಕೆ)ಯನ್ನು ಅದು ತೆಗೆದು ಹಾಕಲಿದೆ. ಆದಾಗ್ಯೂ, ಈಗ ಗೂಗಲ್ ಸರ್ಚ್ ಮಾಡಿದರೆ ವಾಟ್ಸ್ಆ್ಯಪ್ ಗ್ರೂಪ್​​ಗಳೇನೂ ಸಿಗುವುದಿಲ್ಲ. ಆ ಸಮಸ್ಯೆಯನ್ನು ನಾವು ಸರಿಪಡಿಸಿದ್ದೇವೆ ಎಂದು ವಾಟ್ಸ್ಆ್ಯಪ್ ಯಾವುದೇ ಹೇಳಿಕೆ ನೀಡಿಲ್ಲ

ಸೈಬರ್ ಸುರಕ್ಷಾ ಅಧ್ಯಯನಕಾರ ರಾಜಶೇಖರ್ ರಾಜಹರಿಯ ಅವರು ಗೂಗಲ್ ಸಂಸ್ಥೆ ವಾಟ್ಸ್ಆ್ಯಪ್ ಗ್ರೂಪ್ ಚಾಟ್ ಆಮಂತ್ರಣಗಳ ಇಂಡೆಂಕ್ಸಿಗ್ ಮಾಡುತ್ತಿದೆ ಎಂಬುದನ್ನು ತಿಳಿಸಿದ್ದಾರೆ ಎಂದು ಗ್ಯಾಡ್ಜೆಟ್ 360 ವರದಿ ಮಾಡಿದೆ. ಗೂಗಲ್​ನಿಂದ ಇಂಡೆಕ್ಸ್ ಮಾಡಿದ ಲಿಂಕ್​​ಗಳಿಂದಾಗಿ ಕೆಲವು ವಾಟ್ಸ್ಆ್ಯಪ್ ಗ್ರೂಪ್​ಗಳಲ್ಲಿ ಪೋರ್ನ್ ಲಿಂಕ್ ಶೇರ್ ಆಗಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ನಿರ್ದಿಷ್ಟ ಸಮುದಾಯ ಅಥವಾ ಆಸಕ್ತಿಗೆ ಮೀಸಲಾಗಿರುವ ವಾಟ್ಸ್ಆ್ಯಪ್​ ಗ್ರೂಪ್​ಗಳ ಲಿಂಕ್​ಗಳು ಕಾಣಿಸಿಕೊಂಡಿವೆ.

ನವೆಂಬರ್ 2019ರಲ್ಲಿ ವಾಟ್ಸ್ಆ್ಯಪ್ ಗ್ರೂಪ್ ಚಾಟ್ ಆಮಂತ್ರಣವು ಗೂಗಲ್ ಹುಡುಕಾಟ ಮಾಡಿದರೆ ಸಿಗುವಂತಾಗಿತ್ತು. ಈ ಬಗ್ಗೆ ಸೈಬರ್ ಸುರಕ್ಷಾ ಅಧ್ಯಯನಕಾರರು ಫೇಸ್​ಬುಕ್ ಗಮನಕ್ಕೆ ತಂದಾಗ ಸಮಸ್ಯೆ ಬಗೆಹರಿದಿತ್ತು.

ಚಾಟ್ ಆಹ್ವಾನ ಲಿಂಕ್‌ಗಳಲ್ಲಿ ‘ನೋ ಇಂಡೆಕ್ಸ್ ’ ಮೆಟಾ ಟ್ಯಾಗ್ ಅನ್ನು ಸೇರಿಸುವ ಮೂಲಕ ವಾಟ್ಸಾಪ್ ಗ್ರೂಪ್ ಚಾಟ್ ಇಂಡೆಕ್ಸ್ ಸಮಸ್ಯೆ ಬಗೆಹರಿಸಿದೆ  ಎಂದು ರಿವರ್ಸ್ ಎಂಜಿನಿಯರ್ ಜೇನ್ ಮಂಚುನ್ ವಾಂಗ್ ವರದಿ ಮಾಡಿದ್ದಾರೆ. ಆದಾಗ್ಯೂ, ಹೊಸ ಲಿಂಕ್‌ಗಳು ‘ನೋ ಇಂಡೆಕ್ಸ್ ’ ಮೆಟಾ ಟ್ಯಾಗ್ ಅನ್ನು ಒಳಗೊಂಡಿವೆ.

ರಾಜಾಹರಿಯ ಅವರ ಪ್ರಕಾರ ವಾಟ್ಸ್ಆ್ಯಪ್ chat.whatsapp.com ಎಂಬ ಸಬ್ ಡೊಮೇನ್​ನಲ್ಲಿ robots.txt ಫೈಲ್ ಸೇರಿಸಿಲ್ಲ. ಈ ಕಾರಣದಿಂದಲೇ ಗ್ರೂಪ್ ಚಾಟ್ ಆಹ್ವಾನದ ಲಿಂಕ್ ಗೂಗಲ್ ಮತ್ತು ಇತರ ಸರ್ಚ್ ಇಂಜಿನ್​ಗಳಲ್ಲಿ ಕಾಣಿಸಿಕೊಂಡಿದೆ. ವೆಬ್ ಡೆವಲಪರ್ ಗಳು ಸಾಮಾನ್ಯವಾಗಿ ಸರ್ಚ್ ಇಂಜಿನ್​ಗಳು ಯಾವುದನ್ನು ಹುಡುಕಾಡಬೇಕು ಮತ್ತು ಯಾವುದು ಇಂಡೆಕ್ಸ ಮಾಡಬಾರದು ಎಂದು ತಿಳಿಸಲು robots.txt ಫೈಲ್ ಬಳಸುತ್ತಾರೆ.

ಗೂಗಲ್ ನಲ್ಲಿ ಕಾಣಿಸಿತು ವಾಟ್ಸ್ಆ್ಯಪ್ ಬಳಕೆದಾರರ ಪ್ರೊಫೈಲ್
ಫೇಸ್​ಬುಕ್​ ಗ್ರೂಪ್​ ಚಾಟ್​ಲಿಂಕ್​ಗಳ ಜತೆ ಗೂಗಲ್​ನಲ್ಲಿ ವಾಟ್ಸ್ಆ್ಯಪ್ ಬಳಕೆದಾರರ ಪ್ರೊಫೈಲ್ ಫೋಟೊ ಕೂಡಾ ಕಾಣಿಸಿಕೊಂಡಿದೆ. ವಾಟ್ಸ್ಆ್ಯಪ್ ಡೊಮೇನ್​ನಲ್ಲಿ ದೇಶದ ಕೋಡ್ (country codes) ಹುಡುಕಿದರೆ ವಾಟ್ಸ್ಆ್ಯಪ್ ಬಳಕೆದಾರರ ಪ್ರೊಫೈಲ್ ಯುಆರ್​ಎಲ್ ಸಿಗುತ್ತದೆ. ಅದರಲ್ಲಿ ಬಳಕೆದಾರರ ಫೋನ್ ಸಂಖ್ಯೆ ಮತ್ತು ಪ್ರೊಫೈಲ್ ಫೋಟೊಗಳೂ ಕಾಣಿಸಿಕೊಳ್ಳುತ್ತವೆ. ಕಳೆದೆ ವರ್ಷ ಜೂನ್ ತಿಂಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಮಸ್ಯೆ ಬಗೆಹರಿಸಿರುವ ಬಗ್ಗೆ ವಾಟ್ಸ್ಆ್ಯಪ್ ಹೇಳಿಕೆ ನೀಡದೇ ಇದ್ದರೂ ಸಮಸ್ಯೆ ಬಗೆ ಹರಿದಿರುವುದಾಗಿ ಹಲವಾರು ವರದಿಗಳು ದೃಢಪಡಿಸಿದ್ದವು.

ಏನಿದು ವಾಟ್ಸಾಪ್​ ಹೊಸ ಪಾಲಿಸಿ? ನಿಮ್ಮ ಖಾಸಗಿ ಮಾಹಿತಿ ಸೋರಿಕೆ ಆಗೋದು ಇನ್ನೂ ಸುಲಭ!