India vs England Test Series: ನ್ಯೂಜಿಲೆಂಡ್ನಲ್ಲಿ ನಾವು ಮೂರೇ ದಿನಗಳಲ್ಲಿ ಟೆಸ್ಟ್ ಸೋತಾಗ ಪಿಚ್ಗಳ ಬಗ್ಗೆ ಯಾರೂ ಮಾತಾಡಲಿಲ್ಲ: ವಿರಾಟ್ ಕೊಹ್ಲಿ
2020ರ ಆರಂಭದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿ ಆಡಿದ ಎರಡೂ ಟೆಸ್ಟ್ ಪಂದ್ಯಗಳು ಕೇವಲ ಮೂರು ದಿನಗಳಲ್ಲಿ ಕೊನೆಗೊಂಡು ಭಾರತ ಸರಣಿಯನ್ನು 0-2 ಅಂತರದಿಂದ ಸೋತಾಗ ಪಿಚ್ಗಳ ಬಗ್ಗೆ ಯಾರೂ ದೂರಲಿಲ್ಲ ಎಂದು ಕೊಹ್ಲಿ ಹೇಳಿದರು.
ಅಹಮದಾಬಾದ್: ಮೊಟೆರಾ ಪಿಚ್ ಕುರಿತ ಚರ್ಚೆಯನ್ನು ವಿನಾಕಾರಣ ಬೆಳೆಸಲಾಗುತ್ತಿದೆ, ಪಿಚ್ ಟೀಕಿಸುತ್ತಿರುವವರು ಒಂದು ಅಂಶವನ್ನು ಅರ್ಥಮಾಡಿಕೊಳ್ಳಬೇಕಿದೆ; ಉಪಖಂಡದಲ್ಲಿ ಆಡುವಾಗ ಸ್ಪಿನ್ ಬೌಲಿಂಗ್ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬುಧವಾರ ಅಹಮದಾಬಾದಿನಲ್ಲಿ ಹೇಳಿದರು. 2020ರ ಆರಂಭದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿ ಆಡಿದ ಎರಡೂ ಟೆಸ್ಟ್ ಪಂದ್ಯಗಳು ಕೇವಲ ಮೂರು ದಿನಗಳಲ್ಲಿ ಕೊನೆಗೊಂಡು ಭಾರತ ಸರಣಿಯನ್ನು 0-2 ಅಂತರದಿಂದ ಸೋತಾಗ ಪಿಚ್ಗಳ ಬಗ್ಗೆ ಯಾರೂ ದೂರಲಿಲ್ಲ. ಭಾರತೀಯ ಬ್ಯಾಟ್ಸ್ಮನ್ಗಳ ವೈಫಲ್ಯವನ್ನು ಜನ ಮಾತಾಡಿದರೇ ಹೊರತು ಪಿಚ್ಗಳ ಬಗ್ಗೆ ಚಕಾರವೆತ್ತಲಿಲ್ಲ. ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಆಡಲಾಗುತ್ತದೆಯೇ ಹೊರತು ಅವು 5 ದಿನಗಳ ಕಾಲ ನಡೆಯಲಿ ಅಂತಲ್ಲ ಎಂದು ಕೊಹ್ಲಿ ಕಟುವಾಗಿ ಹೇಳಿದರು.
‘ನಾವು ನ್ಯೂಜಿಲೆಂಡ್ನಲ್ಲಿ 3 ದಿನಗಳೊಳಗಾಗಿ ಟೆಸ್ಟ್ಗಳನ್ನು ಸೋತೆವು. ಆಗ ಪಿಚ್ಗಳ ಬಗ್ಗೆ ಯಾರಾದರೂ ಕಾಮೆಂಟ್ ಮಾಡಿದರೇ? ನಾವು ನಮ್ಮ ಬಲದ ಮೇಲೆ ಆತುಕೊಳ್ಳುತ್ತೇವೆಯೇ ಹೊರತು ಪಿಚ್ ಮೇಲೆ ಅಲ್ಲ. ಪಿಚ್ಗಳು ಸ್ಪಿನ್ನರ್ ಸ್ನೇಹಿ ಅಂತ ವ್ಯಾಖ್ಯಾನಿಸುವ ಮುನ್ನ ತಾವು ನೀಡುತ್ತಿರುವ ವಿವರಣೆ ಪ್ರಾಮಾಣಿಕವಾಗಿದೆಯೇ ಅಂತ ಯೋಚಿಸಬೇಕು’ ಎಂದು ಭಾರತ ಮತ್ತು ಇಂಗ್ಲೆಂಡ್ ನಡುವೆ 4ನೇ ಮತ್ತು ಕೊನೆಯ ಟೆಸ್ಟ್ ಆರಂಭವಾಗುವ ಮುನ್ನಾ ದಿನವಾದ ಇಂದು ಅಹಮದಾಬಾದಿನಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡುವಾಗ ವಿರಾಟ್ ಕೊಹ್ಲಿ ಹೇಳಿದರು.
ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊಟೆರಾದ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಕೇವಲ 2 ದಿನಗಳಲ್ಲೇ ಮುಕ್ತಾಯಗೊಂಡಿತು. ಕಳೆದ 50 ವರ್ಷಗಳಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದು ಇಷ್ಟು ಕಡಿಮೆ ಅವಧಿಯಲ್ಲಿ ಅಂತ್ಯ ಕಂಡಿತು. ಪ್ರವಾಸಿ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 100ರ ಗಡಿ ದಾಟಲು ವಿಫಲವಾಯಿತು.
ಈ ಟೆಸ್ಟ್ ಪಂದ್ಯ ಇತಿಹಾಸದ ಪುಟಗಳನ್ನು ಸೇರಿ ಮತ್ತೊಂದು ಟೆಸ್ಟ್ ಶುರುವಾಗುವ ಸಮಯ ಹತ್ತಿರವಾಗಿದ್ದರೂ ಜನ ಇನ್ನೂ ಪಿಚ್ ಬಗ್ಗೆಯೇ ಮಾತಾಡುತ್ತಿರುವುದು ಸರಿಯೆನಿಸುತ್ತಿಲ್ಲ ಎಂದು ಟೀಮ್ ಇಂಡಿಯಾದ ಉಪ-ನಾಯಕ ಅಜಿಂಕ್ಯಾ ರಹಾನೆ ಮಂಗಳವಾರ ಹೇಳಿದ್ದರು. ತಮ್ಮ ಡೆಪ್ಯುಟಿಯ ಅಭಿಪ್ರಾಯವನ್ನೇ ಪುನರುಚ್ಛರಿಸಿರುವ ಕೊಹ್ಲಿ ಭಾರತದ ಉತ್ತಮ ಪ್ರದರ್ಶನವನ್ನು ಪಿಚ್ನ ಸ್ವರೂಪಕ್ಕೆ ಹೋಲಿಸಿ ಮಾತಾಡುವುದು ಅಸಂಬದ್ಧವೆನಿಸುತ್ತಿದೆ ಎಂದು ಹೇಳಿದರು.
‘ಸ್ಪಿನ್ಗೆ ನೆರವಾಗುವ ಪಿಚ್ಗಳ ಬಗ್ಗೆ ಎಲ್ಲೆಯಿಲ್ಲದೆ ಮಾತಾಡಲಾಗುತ್ತಿದೆ. ಉಪಖಂಡದಲ್ಲಿ ಸ್ಪಿನ್ಗೆ ನೆರವಾಗಿವ ಪಿಚ್ಗಳೇ ಸಿಗುತ್ತವೆ ಅಂತ ಮಾಧ್ಯಮದವರು ಒಂದು ಸ್ಪಷ್ಟ ಚಿತ್ರಣವನ್ನು ನೀಡಬೇಕು. ನಾವಾಡುವ ಯಾವುದೇ ಪಿಚ್ ಕುರಿತು ಇಲ್ಲಸಲ್ಲದ ಕಾಮೆಂಟ್ಗಳನ್ನು ಮಾಡದಿರುವುದೇ ನಮ್ಮ ಯಶಸ್ಸಿನ ಮಂತ್ರವಾಗಿದೆ. ಪ್ರತಿಬಾರಿ ಮೈದಾನಕ್ಕಿಳಿದಾಗ ನಮ್ಮ ಪ್ರದರ್ಶನವನ್ನು ಉತ್ತಮಪಡಿಸುವ ಸಂಕಲ್ಪವನ್ನು ನಾವು ಮಾಡಿಕೊಂಡಿರುತ್ತೇವೆ’ ಎಂದು ಕೊಹ್ಲಿ ಹೇಳಿದರು.
‘ಮೂರನೇ ಟೆಸ್ಟ್ನಲ್ಲಿ ಎರಡೂ ತಂಡದ ಬ್ಯಾಟ್ಸ್ಮನ್ಗಳು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಎಲ್ಲರ ಗಮನ ಯಾಕೆ ಪಿಚ್ ಮತ್ತು ಬಾಲ್ ಮೇಲೆ ಕೇಂದ್ರೀಕೃತಗೊಂಡಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಮೂರನೇ ಟೆಸ್ಟ್ನಲ್ಲಿ ಎರಡೂ ತಂಡದ ಆಟಗಾರರು ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಆಡಲು ವಿಫಲರಾದರು. ನಾನು ಮತ್ತೊಮ್ಮೆ ಹೇಳುತ್ತೇನೆ, ಪಿಚ್ ಕೆಟ್ಟದ್ದಾಗೇನೂ ಇರಲಿಲ್ಲ, ಆದರೆ ಬ್ಯಾಟ್ಸ್ಮನ್ಗಳು ಆಡಿದ ವೈಖರಿ ಕೆಟ್ಟದ್ದಾಗಿತ್ತು’ ಎಂದು ಕೊಹ್ಲಿ ಮಾತು ಮುಗಿಸಿದರು.
ಇದನ್ನೂ ಓದಿ: India vs England: ಭಾರತ vs ಇಂಗ್ಲೆಂಡ್ ನಾಲ್ಕನೇ ಟೆಸ್ಟ್ಗೆ ಪಿಚ್ ಭಿನ್ನವಾಗೇನೂ ಇರದು: ಅಜಿಂಕ್ಯಾ ರಹಾನೆ
Published On - 4:59 pm, Wed, 3 March 21