India vs England: ಭಾರತ vs ಇಂಗ್ಲೆಂಡ್ ನಾಲ್ಕನೇ ಟೆಸ್ಟ್ಗೆ ಪಿಚ್ ಭಿನ್ನವಾಗೇನೂ ಇರದು: ಅಜಿಂಕ್ಯಾ ರಹಾನೆ
India vs England Test Series: ಸಾಮಾನ್ಯವಾಗಿ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತಾಡಲು ಇಚ್ಛಿಸದ ರಹಾನೆ ಮೊದಲ ಬಾರಿಗೆ ಭಾರತದ ಪಿಚ್ಗಳನ್ನು ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಅಹಮದಾಬಾದಿನಲ್ಲಿ ಮಂಗಳವಾರದಂದು ನಡೆದ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಅಹಮದಾಬಾದ್: ಭಾರತದಲ್ಲಿನ ಸ್ಪಿನ್ನರ್-ಸ್ನೇಹಿ ಪಿಚ್ಗಳನ್ನು ಕುರಿತು ಎದ್ದಿರುವ ಟೀಕೆ ಮತ್ತು ವಿವಾದಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲವೆಂದು ಹೇಳಿರುವ ಟೀಮ್ ಇಂಡಿಯಾದ ಉಪ-ನಾಯಕ ಅಜಿಂಕ್ಯಾ ರಹಾನೆ, ಅಹಮದಾಬಾದಿನ ಮೊಟೆರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸರಣಿಯ 4 ಮತ್ತು ಕೊನೆಯ ಟೆಸ್ಟ್ ಪಂದ್ಯಕ್ಕೆ ಪಿಚ್ ಭಿನ್ನವಾಗೇನೂ ಇರದು ಎಂದಿದ್ದಾರೆ. ಚೆನೈನ ಚೆಪಾಕ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಮತ್ತು ಮೊಟೆರಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯಗಳಿಗೆ ತಯಾರು ಮಾಡಿದ್ದ ಪಿಚ್ಗಳ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
‘ನಾಲ್ಕನೇ ಟೆಸ್ಟ್ ನಡೆಯುವ ಪಿಚ್ ಚೆಪಾಕ್ನಲ್ಲಿ ಎರಡನೇ ಟೆಸ್ಟ್ಗೆ ಉಪಯೋಗಿಸಿದ ಪಿಚ್ನಂತಿರಲಿದೆ ಎಂದು ನಾನು ಭಾವಿಸುತ್ತೇನೆ. ಹೌದು, ಮೂರನೇ ಟೆಸ್ಟ್ನಲ್ಲಿ ಪಿಂಕ್ ಬಣ್ಣದ ಬಾಲ್ ಪಿಚ್ ಆದ ಮೇಲೆ ಕೆಂಪು ಚೆಂಡಿಗಿಂತ ವೇಗವಾಗಿ ನುಗ್ಗುತ್ತಿದ್ದುದ್ದರಿಂದ ಬ್ಯಾಟ್ಸ್ಮನ್ಗಳಿಗೆ ಆಡುವುದು ಕಷ್ಟವಾಯಿತು. ನಾಲ್ಕನೇ ಟೆಸ್ಟ್ ನಡೆಯುವ ಪಿಚ್ ಸಹ ಕೊನೆಯೆರಡು ಟೆಸ್ಟ್ ಪಂದ್ಯಗಳಿಗೆ ಉಪಯೋಗಿಸಿದ ಪಿಚ್ಗಳಂತೆಯೇ ಇರಲಿದೆ’ ಎಂದು ರಹಾನೆ ಹೇಳಿದರು.
ಸಾಮಾನ್ಯವಾಗಿ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತಾಡಲು ಇಚ್ಛಿಸದ ರಹಾನೆ ಮೊದಲ ಬಾರಿಗೆ ಭಾರತದ ಪಿಚ್ಗಳನ್ನು ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಅಹಮದಾಬಾದಿನಲ್ಲಿ ಮಂಗಳವಾರದಂದು ನಡೆದ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು. ಪಿಚ್ಗಳನ್ನು ತೀವ್ರವಾಗಿ ಖಂಡಿಸಿರುವ ಇಂಗ್ಲೆಂಡಿನ ಹಾಲಿ ಮತ್ತು ಮಾಜಿ ಆಟಗಾರರು, ಬಿಸಿಸಿಐ ವಿರುದ್ಧ ಕ್ರಮ ಜರುಗಿಸುವಂತೆ ಐಸಿಸಿಗೆ ಆಗ್ರಹಿಸಿದ್ದಾರೆ.
‘ಅವರೆಲ್ಲ ಏನು ಬೇಕಾದರೂ ಮಾತಾಡಿಕೊಳ್ಳಲಿ. ನಾವು ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ಸೀಮಿಂಗ್ ವಿಕೆಟ್ಗಳ ಕುರಿತು ಯಾರೂ ಚಕಾರವೆತ್ತಲ್ಲ. ಆಗೆಲ್ಲ ಅವರು, ಭಾರತೀಯ ಬ್ಯಾಟ್ಸ್ಮನ್ಗಳ ಟೆಕ್ನಿಕ್ ಬಗ್ಗೆ ಮಾತಾಡುತ್ತಾರೆ. ಹಾಗಾಗಿ ಅವರು ಮಾಡುತ್ತಿರುವ ಟೀಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ’ ಎಂದು ರಹಾನೆ ಖಾರವಾಗಿ ಹೇಳಿದರು.
ಇದನ್ನೂ ಓದಿ: ಪಿಚ್ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರ ತಕರಾರಿಗೆ ವಿವಿಯನ್ ರಿಚರ್ಡ್ಸ್ ಉತ್ತರ
‘ನಾವು ವಿದೇಶಗಳಲ್ಲಿ ಆಡುವಾಗ ಟೆಸ್ಟ್ ಪಂದ್ಯವೊಂದರ ಮೊದಲ ದಿನ ಪಿಚ್ನಲ್ಲಿ ತೇವಾಂಶವಿರುತ್ತದೆ. ನಂತರ ಹುಲ್ಲು ಕಾಣಿಸಲಾರಂಭಿಸಿ ಪಿಚ್ನಲ್ಲಿ ಚೆಂಡಿನ ನೆಗೆತ ಒಂದೇ ತೆರನಾಗಿರುವುದಿಲ್ಲ. ಆಗ ಬ್ಯಾಟ್ಸ್ಮನ್ಗಳಿಗೆ ಪಿಚ್ ಅಪಾಯಕಾರಿ ಪರಿಣಮಿಸುತ್ತದೆ. ಹಾಗಂತ ನಾವು ಯಾವತ್ತೂ ಪಿಚ್ಗಳ ಬಗ್ಗೆ ದೂರಿಲ್ಲ’ ಎಂದು ರಹಾನೆ ಹೇಳಿದರು.
ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅಟಗಾರರು ಅವಮಾನಕರ ರೀತಿಯಲ್ಲಿ ಸೋಲು ಅನುಭವಿಸಿದರೂ ಎದುರಾಳಿ ಅಟಗಾರರು ಪುಟಿದೇಳುವ ಸಾಧ್ಯತೆ ಬಗ್ಗೆ ರಹಾನೆ ಗೌರವದಿಂದ ಮಾತಾಡಿದರು.
‘ನಾಲ್ಕನೇ ಟೆಸ್ಟ್ ನಡೆಯುವ ಪಿಚ್ ಭಿನ್ನವಾಗೇನೂ ಇರುವುದಿಲ್ಲ, ಆದರೆ ಅದು ಹೇಗೆ ವರ್ತಿಸಲಿದೆ ಅನ್ನೋದು ನನಗೆ ಗೊತ್ತಿಲ್ಲ. ನಾವು ಕಾದು ನೋಡಬೇಕಿದೆ. ಇಂಗ್ಲೆಂಡ್ ತಂಡದ ಬಗ್ಗೆ ನಮಗೆ ಬಹಳ ಗೌರವವಿದೆ. ಅವರದ್ದು ಒಂದು ಉತ್ತಮ ತಂಡ. ಹಿಂದಿನೆರಡು ಪಂದ್ಯಗಳಲ್ಲಿ ನಾವು ಚೆನ್ನಾಗಿ ಆಡಿದ್ದೇವೆ, ಅದರೆ ಮೊದಲ ಟೆಸ್ಟ್ನಲ್ಲಿ ಅವರು ಅದ್ಭುತವಾದ ಪ್ರದರ್ಶನ ನೀಡಿದರು. ಅವರನ್ನು ನಾವು ಹಗುರವಾಗಿ ಪರಿಗಣಿಸುತ್ತಿಲ್ಲ. ಎರಡು ತಂಡಗಳೂ ಮೈದಾನದಲ್ಲಿ ತಮ್ಮ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನಗಳನ್ನು ನೀಡುವುದು ಮಾತ್ರ ನಿಶ್ಚಿತ’ ಎಂದು ಅವರು ಹೇಳಿದರು.
ನಾಲ್ಕನೇ ಟೆಸ್ಟ್ನಲ್ಲಿ ಹಿರಿಯ ವೇಗದ ಬೌಲರ್ ಉಮೇಶ್ ಯಾದವ್ ಆಡುವ ಸಾಧ್ಯತೆ ಬಗ್ಗೆ ರಹಾನೆ ಸುಳಿವು ನೀಡಿದರು. ‘ಅವರು (ಉಮೇಶ್ ಯಾದವ್) ಆಡಲು ಕಾತುರರಾಗಿದ್ದಾರೆ. ನೆಟ್ಸ್ನಲ್ಲಿ ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಉತ್ತಮ ರಿದಮ್ನಲ್ಲಿ ಕಂಡುಬರುತ್ತಿದ್ದಾರೆ. ಅವರು ತಂಡಕ್ಕೆ ವಾಪಸ್ಸಾಗಿರುವುದು ನಮಗೆಲ್ಲ ಸಂತೋಷವಾಗಿದೆ,’ ಎಂದು ರಹಾನೆ ಕೊನೆಯಲ್ಲಿ ಹೇಳಿದರು.
ಇದನ್ನೂ ಓದಿ: ಪಿಚ್ ಬಗ್ಗೆ ICC ನಿರ್ಧಾರ ಮಾಡಬೇಕಿದೆ: ರೂಟ್
Ground Staff gearing up for the fourth and final test against England. pic.twitter.com/yb3L9p2XHt
— Matt Maynard (@mattGmaynard) February 28, 2021
Published On - 10:16 pm, Tue, 2 March 21