ಕೇಂದ್ರದ ಮಹತ್ತರ Wi Fi Choupal ಯೋಜನೆಗೆ ಗ್ರಹಣ..! BSNL ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳ ಹಿಡಿಯಿತಾ?
ಚೌಪಾಲ್ ಅಳವಡಿಕೆಯಾದ ಯಾವುದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಕೂಡ ಈಗ ಸೇವೆ ದೊರಕುತ್ತಿಲ್ಲ. ಈ ಬಗ್ಗೆ ಟಿವಿ9 ಕೆಲ ಪಂಚಾಯಿತಿ ವ್ಯಾಪ್ತಿಯಲ್ಲಿ ರಿಯಾಲಿಟಿ ಚೆಕ್ ನಡೆಸಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ನಮ್ಮಲ್ಲೀಗ ಚೌಪಾಲ್ ಸೇವೆ ಬಂದ್ ಆಗಿದೆ ಅಂತಾ ಒಪ್ಪಿಕೊಳ್ಳುತ್ತಿದ್ದಾರೆ.
ಉತ್ತರ ಕನ್ನಡ: ಪ್ರತೀ ಗ್ರಾಮಗಳಲ್ಲೂ ಇಂಟರ್‌ನೆಟ್ ಸೇವೆ ದೊರೆಯಬೇಕೆಂಬ ಉದ್ದೇಶದಿಂದೇ ಕೇಂದ್ರ ಸರ್ಕಾರ ವೈ ಫೈ ಚೌಪಾಲ್ Wi Fi Choupal ಯೋಜನೆಯನ್ನು ಪ್ರಾರಂಭಿಸಿತ್ತು. ಆದರೆ, ಹಳ್ಳಿ ಹಳ್ಳಿಯಲ್ಲಿ ಜನ ಸಾಮಾನ್ಯರಿಗೆ ಉಚಿತ ಇಂಟರ್‌ನೆಟ್ ಸೇವೆ ಒದಗಿಸುವ ಈ ಯೋಜನೆ ಈಗ BSNL ಅಧಿಕಾರಿಗಳ ನಿರ್ಲಕ್ಷದಿಂದ ಹಳ್ಳ ಹಿಡಿದಿದೆ. ಗ್ರಾಮ ಮಟ್ಟದಲ್ಲಿ ವೈ ಫೈ ನೀಡೋದು ಹಾಗಿರ್ಲಿ, ಅಂತದ್ದೊಂದು ಯೋಜನೆ ಇತ್ತಾ ಅನ್ನೋದೇ ನೆನಪಿಲ್ಲದಂತಾಗಿದೆ. ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ..
‘ವೈ ಫೈ ಚೌಪಾಲ್’ ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದ ಮಹತ್ತರ ಯೋಜನೆ. ಗ್ರಾಮಗಳಲ್ಲಿ ವೈ ಫೈ ಹಾಟ್‌ಸ್ಪಾಟ್‌ಗಳನ್ನು Wi Fi Choupal Hotspot ಅಳವಡಿಸುವ ಸಲುವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಈ ಯೋಜನೆ ಜಾರಿಗೊಳಿಸಲಾಗಿತ್ತು. ಜಿಲ್ಲೆಯ 231 ಗ್ರಾಮ ಪಂಚಾಯತ್‌ಗಳ ಪೈಕಿ 146 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಟಾನಗೊಳಿಸಲಾಗಿತ್ತು.
ಆದ್ರೆ ಚೌಪಾಲ್ ಅಳವಡಿಕೆಯಾದ ಯಾವುದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಕೂಡ ಈಗ ಸೇವೆ ದೊರಕುತ್ತಿಲ್ಲ. ಈ ಬಗ್ಗೆ ಟಿವಿ9 ಕೆಲ ಪಂಚಾಯಿತಿ ವ್ಯಾಪ್ತಿಯಲ್ಲಿ ರಿಯಾಲಿಟಿ ಚೆಕ್ ನಡೆಸಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ನಮ್ಮಲ್ಲೀಗ ಚೌಪಾಲ್ ಸೇವೆ ಬಂದ್ ಆಗಿದೆ ಅಂತಾ ಒಪ್ಪಿಕೊಳ್ಳುತ್ತಿದ್ದಾರೆ.
42 ಕಡೆ ಕಡಿತಗೊಂಡಿದ್ದ ಸಂಪರ್ಕವನ್ನು ಮತ್ತೆ ಆರಂಭಿಸಲಾಯ್ತು.. ಅಂದಹಾಗೆ, ಈ ವೈ ಫೈ ಚೌಪಾಲನ್ನು ಬಿಎಸ್‌ಎನ್‌ಎಲ್, ಬಿಬಿಎನ್‌ಎಲ್ ಹಾಗೂ ಸಿಎಸ್‌ಸಿ ಮುಖಾಂತರ ಒಡಂಬಡಿಕೆ ಮಾಡಿಕೊಂಡು ಅಳವಡಿಕೆ ಮಾಡಲಾಗಿದೆ. ಇದರ ನಿರ್ವಹಣೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದ ಬಳಿಕ ಉತ್ತರಕನ್ನಡ ಸಂಸದ ಅನಂತ ಕುಮಾರ್ ಹೆಗಡೆಯವರು ಜಿಲ್ಲಾಧಿಕಾರಿ, ಸಿಇಒ ಹಾಗೂ ಬಿಬಿಎನ್‌ಎಲ್ ಡಿಜಿಯ ಜತೆ ಸಭೆ ನಡೆಸಿದ್ರು. ಬಳಿಕ 42 ಕಡೆ ಕಡಿತಗೊಂಡಿದ್ದ ಸಂಪರ್ಕವನ್ನು ಮತ್ತೆ ಆರಂಭಿಸಲಾಯ್ತು. ಆದ್ರೆ ಬಿಎಸ್ಎನ್‌ಎಲ್, ಬಿಬಿಎನ್‌ಎಲ್ ಹಾಗೂ ಸಿಎಸ್‌ಸಿ ಕಂಪನಿ ನಿರ್ಲಕ್ಷ್ಯದಿಂದ ಜನ ಸಾಮಾನ್ಯರಿಗೆ ತಲುಪಬೇಕಾಗಿದ್ದ ಸೇವೆ ಮರೀಚಿಕೆಯಾದಾಗಿದೆ.
ವೈ ಫೈ ಚೌಪಾಲ್ ಯೋಜನೆಗೆ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೇಂದ್ರ ಸರಕಾರದ ಮಹತ್ತರ ಯೋಜನೆ ಸುಮ್ಮನೆ ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗುತ್ತಿದೆ. ಅಲ್ಲದೇ, ಕೋಟಿಗಟ್ಟಲೆ ಹಣ ನೀರಲ್ಲಿ ಹೋಮ ಮಾಡಿದಂತಾಗುತ್ತಿದ್ದು, ಇನ್ನಾದ್ರೂ ಎಚ್ಚೆತ್ತು ಚೌಪಾಲ್ ಯೋಜನೆ ಮೂಲಕ ಮತ್ತೆ ಗ್ರಾಮೀಣ ಜನತೆಗೆ ವೈ ಫೈ ಸೌಲಭ್ಯ ಕಲ್ಪಿಸುತ್ತಾರಾ ಎನ್ನುವುದನ್ನ ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ದೆಹಲಿಗೆ ಹೋದರೂ BSNL ನೆಟ್ವರ್ಕ್ ಸಿಗುವುದಿಲ್ಲ: ಸಂಸದ ಅನಂತ್ ಕುಮಾರ್ ಹೆಗಡೆ
Published On - 12:20 pm, Mon, 30 November 20