ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕಿಂಗ್​ ಲೈಸೆನ್ಸ್​: ಆರ್​ಬಿಐ ಕ್ರಮ ಸಮರ್ಥಿಸಿಕೊಂಡ ತಜ್ಞರ ಸಮಿತಿ ಸದಸ್ಯ

ದೊಡ್ಡ ಮಟ್ಟದ ಕಾರ್ಪೊರೇಟ್ ಕಂಪನಿಗಳಿಗೆ, ಉದ್ಯಮಗಳಿಗೆ ಬ್ಯಾಂಕಿಂಗ್​ ಲೈಸೆನ್ಸ್​ (ತಮ್ಮದೇ ಬ್ಯಾಂಕ್​ ವ್ಯವಸ್ಥೆ ಮಾಡಿಕೊಳ್ಳಲು ಪರವಾನಗಿ) ನೀಡುವ ಪ್ರಸ್ತಾವನೆಯನ್ನು ಆರ್​ಬಿಐ ರಚಿಸಿರುವ ತಜ್ಞರ ಸಮಿತಿ ಸದಸ್ಯರಲ್ಲಿ ಓರ್ವರಾದ ಸಚಿನ್​ ಚತುರ್ವೇದಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕಿಂಗ್​ ಲೈಸೆನ್ಸ್​: ಆರ್​ಬಿಐ ಕ್ರಮ ಸಮರ್ಥಿಸಿಕೊಂಡ ತಜ್ಞರ ಸಮಿತಿ ಸದಸ್ಯ
ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ (ಸಾಂದರ್ಭಿಕ ಚಿತ್ರ)
Follow us
Lakshmi Hegde
|

Updated on: Nov 30, 2020 | 12:36 PM

ಮುಂಬೈ: ದೊಡ್ಡ ಮಟ್ಟದ ಕಾರ್ಪೊರೇಟ್ ಕಂಪನಿಗಳಿಗೆ, ಉದ್ಯಮಗಳಿಗೆ ಬ್ಯಾಂಕಿಂಗ್​ ಲೈಸೆನ್ಸ್​ (ತಮ್ಮದೇ ಬ್ಯಾಂಕ್​ ವ್ಯವಸ್ಥೆ ಮಾಡಿಕೊಳ್ಳಲು ಪರವಾನಗಿ) ನೀಡುವ ಪ್ರಸ್ತಾವನೆಯನ್ನು ಆರ್​ಬಿಐ ರಚಿಸಿರುವ ತಜ್ಞರ ಸಮಿತಿ ಸದಸ್ಯರಲ್ಲಿ ಓರ್ವರಾದ ಸಚಿನ್​ ಚತುರ್ವೇದಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ನಾವು ದೊಡ್ಡ ಖಾಸಗಿ ಸಂಸ್ಥೆಗಳಿಗೆ ಪರವಾನಗಿ ಕೊಡುವ ಮೂಲಕ ಹೊಸ ಬ್ಯಾಂಕ್​ಗಳನ್ನು ಆರಂಭಿಸುವ ಅಧಿಕಾರ ನೀಡಲು ಪ್ರಸ್ತಾವನೆ ಮುಂದಿಟ್ಟಿದ್ದೇವೆ. ಅದಕ್ಕೆ ಯಾಕಿಷ್ಟು ವಿರೋಧ ಎಂಬ ಬಗ್ಗೆ ಅಚ್ಚರಿ ಆಗುತ್ತಿದೆ ಎಂದು ಚತುರ್ವೇದಿ ಹೇಳಿದ್ದಾರೆ. ಕಾರ್ಪೋರೇಟ್​ ಸಂಸ್ಥೆಗಳಿಗೆ ಬ್ಯಾಂಕಿಂಗ್ ಲೈಸೆನ್ಸ್​ ನೀಡುವ ಬಗ್ಗೆ ಸಲಹೆ, ಪರಿಶೀಲನೆಗಾಗಿ ರಚಿಸಲಾದ ಆಂತರಿಕ ಸಮಿತಿಯಲ್ಲಿ ಚತುರ್ವೇದಿ ಸಹ ಇದ್ದಾರೆ.

​1993ರಲ್ಲಿ ಆರು ಖಾಸಗಿ ಬ್ಯಾಂಕ್​ಗಳಿಗೆ ಪರವಾನಗಿ ನೀಡಿದ್ದನ್ನು ದಾಖಲೆ ಸಮೇತ ನಮ್ಮ ವರದಿಯ ಎರಡನೇ ಚಾಪ್ಟರ್​ನಲ್ಲಿ ಉಲ್ಲೇಖಿಸಿದ್ದೇವೆ. ಅದನ್ನೇ ಈಗ ವಿಸ್ತರಿಸಲು ಆರ್​ಬಿಐ ಸಮಿತಿ ಮುಂದಾಗಿದೆ. ಇದೀಗ ದೊಡ್ಡ ಖಾಸಗಿ ಸಂಸ್ಥೆಗಳಿಗೆ ಬ್ಯಾಂಕಿಂಗ್ ಪರವಾನಗಿ ನೀಡುತ್ತಿದ್ದೇವೆ. ನಾವೀಗ ಯಾವುದೇ ಹೊಸ ಕ್ರಮದ ಬಗ್ಗೆ ಮಾತನಾಡುತ್ತಿಲ್ಲ ಅಥವಾ ಮಾಡುತ್ತಿಲ್ಲ. ಮೊದಲಿನಿಂದಲೂ ಇದ್ದ ಅವಕಾಶವನ್ನು ವಿಸ್ತರಣೆ ಮಾಡುತ್ತಿದ್ದೇವೆ ಅಷ್ಟೇ ಎಂದು ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಡೈರೆಕ್ಟರ್​ ಜನರಲ್ ಸಹ ಆಗಿರುವ ಸಚಿನ್​ ಚತುರ್ವೇದಿ ಆರ್​ಬಿಐ ಕ್ರಮವನ್ನು ಸ್ಪಷ್ಟಪಡಿಸಿದ್ದಾರೆ.

ದೊಡ್ಡ ಉದ್ಯಮಗಳಿಗೆ ಪರವಾನಗಿ ನೀಡಲು ಮುಂದಾಗಿರುವ ನಿರ್ಧಾರದ ಹಿಂದೆ ಬ್ಯಾಂಕಿಂಗ್ ವ್ಯವಸ್ಥೆಗೆ ಉತ್ತೇಜನ ನೀಡುವ ಹೊರತು ಮತ್ಯಾವುದೇ ಹೊಸ ಉದ್ದೇಶಗಳು ಇಲ್ಲ ಎಂದು ಹೇಳಿದ್ದಾರೆ.

ಚತುರ್ವೇದಿ ಅವರು ಆರ್ಥಿಕ ಅಭಿವೃದ್ಧಿ, ಫೈನಾನ್ಸ್​ ಡೆವಲಪ್​ಮೆಂಟ್​ಗಳ ಬಗ್ಗೆ ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುವಾಗ ಅದರ ಪರಿಶೀಲನಾ ಸಮಿತಿಯಲ್ಲೂ ಇದ್ದವರು.

ಆರ್​ಬಿಐ ನಡೆಗೆ ವಿರೋಧ

ಆರ್​ಬಿಐ ಆಂತರಿಕ ಸಮಿತಿ ಹೊಸ ಬ್ಯಾಂಕ್​ಗಳಿಗೆ ಲೈಸೆನ್ಸ್​ ಕೊಡುವ ಪ್ರಸ್ತಾವ ಮುಂದಿಟ್ಟಾಗಿನಿಂದ ಅನೇಕರ ವಿರೋಧ ವ್ಯಕ್ತವಾಗುತ್ತಿದೆ. ಎಡಪಂಥೀಯರು ಆರ್​ಬಿಐ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಲ್ಲದೆ, ಇದು ಹಣಕಾಸು ವ್ಯವಸ್ಥೆಯನ್ನು ಅವನತಿಯತ್ತ ಕೊಂಡೊಯ್ಯುವ ಯೋಜನೆ ಎಂದು ಟೀಕಿಸಿದ್ದಾರೆ.

ಆರ್​ಬಿಐ ಮಾಜಿ ಗವರ್ನರ್​ ರಘುರಾಮ್ ರಾಜನ್​, ಮಾಜಿ ಡೆಪ್ಯೂಟಿ ಗವರ್ನರ್ ವಿರಳ್ ಆಚಾರ್ಯ ಕೂಡ ಇದು ಸಮಂಜಸ ಹೆಜ್ಜೆಯಲ್ಲ. ಅತ್ಯಂತ ಕೆಟ್ಟ ಪರಿಕಲ್ಪನೆ ಎಂದು ಎಚ್ಚರಿಸಿದ್ದಾರೆ. ಆರ್​ಬಿಐ ಸಮಿತಿಯಲ್ಲಿರುವ ಅನೇಕ ಸದಸ್ಯರೇ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ. ಹೀಗೆ ಬಹುತೇಕ ತಜ್ಞರ, ಗಣ್ಯರ ವಿರೋಧದ ನಡುವೆಯೂ ಆರ್​ಬಿಐನ ಆಂತರಿಕ ಕಾರ್ಯ ಸಮಿತಿ ತನ್ನ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ಆರ್​ಬಿಐಗೆ ಸುಪ್ರೀಂಕೋರ್ಟ್​ ಖಡಕ್ ಸೂಚನೆ