ಚಿಕಿತ್ಸೆ ಹಾಗಿರಲಿ, ಆಸ್ಪತ್ರೆ ಬಾಗಿಲನ್ನೂ ತೆರೆಯದೆ ಸಿಬ್ಬಂದಿ ಅಸಡ್ಡೆ: ಆಸ್ಪತ್ರೆ ಹೊರಗಡೆಯೇ ಮಗುವಿಗೆ ಜನ್ಮ ನೀಡಿದ ತಾಯಿ
ಹೆರಿಕೆ ನೋವು ಕಾಣಿಸಿಕೊಂಡಿದ್ದಕ್ಕೆ ಆಸ್ಪತ್ರೆಗೆ ದಾಖಲಾಗಲು ಬಂದ ಮಹಿಳೆಗೆ ಆಸ್ಪತ್ರೆ ಬಾಗಿಲು ತೆರೆಯದೆ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ.
ಕೊಪ್ಪಳ: ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆ ಮುಂದೆಯೇ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ ಮನ ಕಲಕುವ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಡೆದಿದೆ. ಹೆರಿಗೆ ನೋವು ಕಾಣಿಸಿಕೊಂಡಿದ್ದಕ್ಕೆ ಆಸ್ಪತ್ರೆಗೆ ದಾಖಲಾಗಲು ಬಂದ ಮಹಿಳೆಗೆ ಚಿಕಿತ್ಸೆ ಹಾಗಿರಲಿ, ಆಸ್ಪತ್ರೆಯ ಬಾಗಿಲು ಸಹ ತೆರೆಯದೆ ಸಿಬ್ಬಂದಿ ಅಸಡ್ಡೆ ತೋರಿದ್ದಾರೆ ಎಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ.
ಕನಕಗಿರಿ ತಾಲೂಕಿನ ಗೌರಿಪುರದ ಬೃಂದಾ ಎಂಬ ಮಹಿಳೆ ಹೆರಿಗೆ ನೋವಿನಿಂದ ಬೆಳಗಿನ ಜಾವ 6 ಗಂಟೆಗೆ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ ಸಿಬ್ಬಂದಿ ಆಸ್ಪತ್ರೆ ಬಾಗಿಲು ತೆರೆಯದೆ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಯಾವೊಬ್ಬ ವೈದ್ಯ ಸಹ ಮಹಿಳೆಗೆ ಚಿಕಿತ್ಸೆ ನೀಡಲು ಮುಂದಾಗಿಲ್ಲ.
ಅದಾದ ಬಳಿಕ ಆಸ್ಪತ್ರೆಯ ಮುಂಭಾಗದಲ್ಲೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿ ಜೊತೆ ಬಂದಿದ್ದ ಹಿರಿಯ ಮಹಿಳೆಯರೇ ಹೆರಿಗೆ ಮಾಡಿಸಿದ್ದು ಸದ್ಯ ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಆಸ್ಪತ್ರೆಯ ಬೇಜವಾಬ್ದಾರಿತನಕ್ಕೆ ಕುಟುಂಬಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಇಷ್ಟೆಲ್ಲ ಆದ ಬಳಿಕ ಆಸ್ಪತ್ರೆ ಸಿಬ್ಬಂದಿ ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ. ಆದರೆ, ನೈಟ್ ಶಿಫ್ಟ್ನಲ್ಲಿರುವ ವೈದ್ಯರನ್ನು ಅಮಾನತು ಮಾಡಿ, ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ DHO ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಬಲಿಯಾದ ಅಮಾಯಕ: ವೈದ್ಯರ ನಿರ್ಲಕ್ಷ್ಯಕ್ಕೆ ಸಂಬಂಧಿಕರ ಆಕ್ರೋಶ
Published On - 1:00 pm, Tue, 2 March 21