ಗರ್ಭಿಣಿಯ ಜೀವ ಉಳಿಸಿದ್ದೇ.. ಆ ಒಂದು WhatsApp ವಿಡಿಯೋ ಕಾಲ್!
ಹಾವೇರಿ: ಕೊರೊನಾ ಮಹಾಮಾರಿ ತಂದೊಡ್ಡಿರುವ ಸಂಕಷ್ಟದಲ್ಲಿ ಅತಿ ಹೆಚ್ಚು ತೊಂದರೆ ಅನುಭವಿಸುತ್ತಿರುವವರಲ್ಲಿ ಗರ್ಭಿಣಿಯರು ಸಹ ಒಬ್ಬರು. ಸೋಂಕಿನ ಭೀತಿಯಿಂದ ಆಸ್ಪತ್ರೆಗೆ ಹೋಗಲು ಹಲವು ಗರ್ಭಿಣಿಯರು ಹಿಂಜರಿಯುತ್ತಿದ್ದಾರೆ. ಈ ನಡುವೆ, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ವಿಡಿಯೋ ಕಾಲ್ ಮೂಲಕ ವೈದ್ಯರು ನೆರೆಮನೆಯ ಮಹಿಳೆಯರ ಸಹಾಯದಿಂದ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಅಂದ ಹಾಗೆ, ಈ ಅದ್ಭುತ ಘಟನೆ ನಡೆದಿರೋದು ಜಿಲ್ಲೆಯ ಹಾನಗಲ್ ಪಟ್ಟಣದ ವೈದ್ಯರ ಓಣಿಯಲ್ಲಿ. ಅದು ಸಂಡೇ ಲಾಕ್ಡೌನ್ ಸಮಯ. ಮಧ್ಯಾಹ್ನ ಎರಡೂವರೆ ಗಂಟೆಯ ಸಮಯ. […]
ಹಾವೇರಿ: ಕೊರೊನಾ ಮಹಾಮಾರಿ ತಂದೊಡ್ಡಿರುವ ಸಂಕಷ್ಟದಲ್ಲಿ ಅತಿ ಹೆಚ್ಚು ತೊಂದರೆ ಅನುಭವಿಸುತ್ತಿರುವವರಲ್ಲಿ ಗರ್ಭಿಣಿಯರು ಸಹ ಒಬ್ಬರು. ಸೋಂಕಿನ ಭೀತಿಯಿಂದ ಆಸ್ಪತ್ರೆಗೆ ಹೋಗಲು ಹಲವು ಗರ್ಭಿಣಿಯರು ಹಿಂಜರಿಯುತ್ತಿದ್ದಾರೆ.
ಈ ನಡುವೆ, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ವಿಡಿಯೋ ಕಾಲ್ ಮೂಲಕ ವೈದ್ಯರು ನೆರೆಮನೆಯ ಮಹಿಳೆಯರ ಸಹಾಯದಿಂದ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಅಂದ ಹಾಗೆ, ಈ ಅದ್ಭುತ ಘಟನೆ ನಡೆದಿರೋದು ಜಿಲ್ಲೆಯ ಹಾನಗಲ್ ಪಟ್ಟಣದ ವೈದ್ಯರ ಓಣಿಯಲ್ಲಿ.
ಅದು ಸಂಡೇ ಲಾಕ್ಡೌನ್ ಸಮಯ. ಮಧ್ಯಾಹ್ನ ಎರಡೂವರೆ ಗಂಟೆಯ ಸಮಯ. ವೈದ್ಯರ ಓಣಿ ನಿವಾಸಿಯಾಗಿದ್ದ ತುಂಬು ಗರ್ಭಿಣಿ ವಾಸವಿ ಪತ್ತೇಪೂರಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗರ್ಭಿಣಿಯ ಚೀರಾಟ ಕೇಳಿ ನೆರೆಮನೆಯ ಮಹಿಳೆಯರು ಆಕೆಯ ಬಳಿ ಜಮಾಯಿಸಿದ್ದರು. ತಾಲೂಕು ಆಸ್ಪತ್ರೆ ಸೇರಿದಂತೆ ಹಲವಾರು ಖಾಸಗಿ ಆಸ್ಪತ್ರೆಯವರನ್ನು ಸಹ ಸಂಪರ್ಕಿಸಲು ಪ್ರಯತ್ನಪಟ್ಟರು. ಆದರೆ, ಸಂಡೇ ಲಾಕ್ಡೌನ್ ಆಗಿದ್ದರಿಂದ ಯಾರೂ ಸರಿಯಾಗಿ ಸ್ಪಂದಿಸಲಿಲ್ಲ.
ಗರ್ಭಿಣಿಯ ನೆರವಿಗೆ ಬಂದ ಡಾ. ಪ್ರಿಯಾಂಕಾ! ಕೊನೆಗೆ, ತಾವೇ ಹೆರಿಗೆ ಮಾಡಿಸುವ ತೀರ್ಮಾನ ಮಾಡಿದರು. ಆಗ ಅವರ ನೆರವಿಗೆ ಬಂದಿದ್ದು ಪಟ್ಟಣದ ನಿವಾಸಿ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿರೋ ವೈದ್ಯೆ ಡಾ. ಪ್ರಿಯಾಂಕಾ. WhatsApp ವಿಡಿಯೋ ಕಾಲ್ ಮೂಲಕ ಮಹಿಳೆಯರಿಗೆ ಸಲಹೆ ನೀಡಿದ ಡಾ. ಪ್ರಿಯಾಂಕಾರ ನೆರವಿನಿಂದ ಮಹಿಳೆಯರು ವಾಸವಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು. ನಂತರ ತಾಯಿ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ವಾಸವಿಗೆ ಗಂಡು ಮಗು ಜನಿಸಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಒಟ್ನಲ್ಲಿ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯ ನೆರವಿಗೆ ಧಾವಿಸಿದ ಮಾನಿನಿಯರು ಹಾಗೂ ವೈದ್ಯೆ ಡಾ. ಪ್ರಿಯಾಂಕಾರ ನಿಸ್ವಾರ್ಥ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. -ಪ್ರಭುಗೌಡ.ಎನ್.ಪಾಟೀಲ
Published On - 6:39 pm, Tue, 28 July 20