
ಹುಬ್ಬಳ್ಳಿ: ಧಾರವಾಡ ಜಿ.ಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು CBI ಅಧಿಕಾರಿಗಳು ಯೋಗೀಶ್ ಗೌಡ ಪತ್ನಿ ಮಲ್ಲಮ್ಮಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಲ್ಲಮ್ಮ ಇಂದು ವಿಚಾರಣೆಗೆ ಹಾಜರಾದರು. ನಗರದ ಸಿ.ಎ.ಆರ್ ಮೈದಾನದಲ್ಲಿ CBI ತಂಡದಿಂದ ವಿಚಾರಣೆ ನಡೆಸಲಾಗುತ್ತಿದ್ದು ಮಲ್ಲಮ್ಮರ ಕಾಂಗ್ರೆಸ್ ಪಕ್ಷ ಸೇರ್ಪಡೆಯ ರಹಸ್ಯವನ್ನು ಅಧಿಕಾರಿಗಳು ಕೆದಕುತ್ತಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಏನಿದು 2 ಕೋಟಿ ರೂ. ರಹಸ್ಯ?
ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆ ನಂತರ ಅವರ ಪತ್ನಿ ಮಲ್ಲಮ್ಮ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಈ ವೇಳೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಮಲ್ಲಮ್ಮರಿಗೆ 2 ಕೋಟಿ ರೂಪಾಯಿ ಹಣ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿಯ ಕಾಲೇಜು ಸಹಪಾಠಿ ಹಾಗೂ ಸದ್ಯ KAS ಅಧಿಕಾರಿಯಾಗಿರುವ ಸೋಮಲಿಂಗ ನ್ಯಾಮಗೌಡ ಮೂಲಕ 2 ಕೋಟಿ ಹಣ ಸಂದಾಯವಾಗಿದೆ ಎಂದು ಆರೋಪಿಸಲಾಗಿದೆ.
ಹಾಗಾಗಿ, ವಿನಯ್ ಕುಲಕರ್ಣಿ ಸಚಿವರಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿದ್ದ KAS ಅಧಿಕಾರಿ ಸೋಮಲಿಂಗ ನ್ಯಾಮಗೌಡರನ್ನು ತನಿಖಾಧಿಕಾರಿ ರಾಕೇಶ್ ರಂಜನ್ ನೇತೃತ್ವದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಇದಲ್ಲದೆ, ಮಲ್ಲಮ್ಮಳನ್ನ ಕಾಂಗ್ರೆಸ್‌ಗೆ ಕರೆತರಲು ಪಕ್ಷದ ಮುಖಂಡ ನಾಗರಾಜ್ ಗೌರಿ ಸಹಾಯ ಮಾಡಿದ್ದನು ಎಂದು ಹೇಳಲಾಗಿದೆ. ಹಾಗಾಗಿ, ನಾಗರಾಜ್ ಗೌರಿಯನ್ನು ಸಹ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.
Published On - 5:57 pm, Sun, 8 November 20