
ಮುಂಬೈ: ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ನಟ ಯೋಗ್ರಾಜ್ ಸಿಂಗ್ ಮಾಡಿದ ಪ್ರಚೋದನಾಕಾರಿ ಭಾಷಣವನ್ನು ಆಕ್ಷೇಪಿಸಿ, ಅವರನ್ನು ಮುಂದಿನ ಚಲನಚಿತ್ರದಿಂದ ಕೈಬಿಡಲಾಗಿದೆ. ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಮತ್ತು ನಟರೂ ಆಗಿರುವ ಯೋಗ್ರಾಜ್ ಸಿಂಗ್ರನ್ನು ತಮ್ಮ ಚಲನಚಿತ್ರದಿಂದ ಕೈಬಿಟ್ಟಿರುವ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿಕೆ ನೀಡಿದ್ದಾರೆ.
ದೆಹಲಿ ಗಡಿಪ್ರದೇಶದಲ್ಲಿ ರೈತರು ನಡೆಸುತ್ತಿದ್ದ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಯೋಗ್ರಾಜ್ ಸಿಂಗ್ ಭಾಗವಹಿಸಿದ್ದರು. ಅಲ್ಲಿ ಮಾಡಿದ ಭಾಷಣವನ್ನು ವಿರೋಧಿಸಿ, ವಿವೇಕ್ ಅಗ್ನಿಹೋತ್ರಿ ತಮ್ಮ ಮುಂದಿನ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ನಿಂದ ಯೋಗ್ರಾಜ್ ಸಿಂಗ್ರನ್ನು ಕೈಬಿಟ್ಟಿದ್ದಾರೆ. ಚಿತ್ರದ ಪ್ರಧಾನ ಪಾತ್ರದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಯೋಗ್ರಾಜ್ ಸಿಂಗ್ ಕೂಡ ಡಿಜಿಪಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಈಗ ಆ ಪಾತ್ರವನ್ನು ಪುನೀತ್ ಇಸ್ಸಾರ್ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಏನು ಹೇಳಿದ್ದಾರೆ?
ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಾನು ಸಾಮಾನ್ಯವಾಗಿ ಕಲೆ ಮತ್ತು ಕಲಾವಿದನನ್ನು ಅಂದರೆ ವ್ಯಕ್ತಿ ಹಾಗೂ ಆತನ ರಾಜಕೀಯ ಸಿದ್ಧಾಂತವನ್ನು ಬದಿಗಿರಿಸಿ ನೋಡುತ್ತೇನೆ. ಕಲೆಯೊಂದಿಗೆ ಬದುಕು ಬೆರೆಸುವುದಿಲ್ಲ. ಆದರೆ, ಯೋಗ್ರಾಜ್ ಸಿಂಗ್ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅದು ಹಿಂದೂ ಮಹಿಳೆಯರ ಬಗ್ಗೆ ಎಂಬ ಕಾರಣಕ್ಕಲ್ಲ. ಬದಲಾಗಿ ಯಾವ ಧರ್ಮದ ಮಹಿಳೆಯರ ಬಗ್ಗೆ ಹಾಗೆ ಮಾತನಾಡಿದರೂ ನಾನು ಸಹಿಸಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.
ನನ್ನ ಸಿನಿಮಾವು ಕಾಶ್ಮೀರದಲ್ಲಿ ನಡೆದ ಜನಾಂಗೀ ಹತ್ಯೆಯ ಕುರಿತದ್ದಾಗಿದೆ. ದ್ವೇಷದ, ಧರ್ಮ ವಿಭಜಿಸುವ ಮಾತುಗಳನ್ನಾಡಿದ ಯೋಗ್ರಾಜ್ ಸಿಂಗ್ ಅಂಥವರನ್ನು ಈ ಸಿನಮಾದಲ್ಲಿ ಉಳಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಪೋಸ್ಟರ್
ಯೋಗ್ರಾಜ್ ಸಿಂಗ್ ಬಗ್ಗೆ ಆಕ್ಷೇಪ ಯಾಕೆ?
ಯೋಗ್ರಾಜ್ ಸಿಂಗ್ ಹಿಂದೂ ಸ್ತ್ರೀಯರ ಬಗ್ಗೆ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ವೀಡಿಯೋದಲ್ಲಿ, ಅಹ್ಮದ್ ಶಾ ದುರಾನಿಯಂಥವರು ಹಿಂದೂ ಮಹಿಳೆಯರನ್ನು ಅಪಹರಿಸಿ ಮಾರಾಟ ಮಾಡಿದಾಗ, ನಾವು ಸಿಖ್ಖರು ಅವರನ್ನು ರಕ್ಷಿಸಿದ್ದು ಎಂದು ಇತಿಹಾಸವನ್ನು ಉಲ್ಲೇಖಿಸಿ ಹೇಳಿದ್ದರು. ಇದೇ ಸಂದರ್ಭದಲ್ಲಿ #ArrestYograjSingh ಎಂಬ ಹ್ಯಾಷ್ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದು ಯೋಗ್ರಾಜ್ ಸಿಂಗ್ ಹೇಳಿಕೆ ವಿರುದ್ಧ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ನಾವು ನಮ್ಮ ನಾಯಕರಿಗೆ ಮತ ನೀಡಿ ಗೆಲ್ಲಿಸಿದ್ದೇವೆ. ಅವರು ನಮ್ಮ ರೈತರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಯೋಗ್ರಾಜ್ ಸಿಂಗ್ ಹೇಳಿದ್ದರು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಯೋಗ್ರಾಜ್ ಸಿಂಗ್, ತಮ್ಮ ತಾಯಿ, ಮಗಳು, ಸಹೋದರಿಯರ ಮೇಲೆ ಪ್ರಮಾಣ ಮಾಡಿದ್ದರೂ ತಿರುಗಿ ಬೀಳಲು ಹಿಂಜರಿಕೆ ತೋರುವುದಿಲ್ಲ ಎಂದಿದ್ದರು. ಇಲ್ಲಿರುವವರೆಲ್ಲರೂ ಪಂಜಾಬ್ ರಕ್ಷಣೆಗಾಗಿ ನಿಂತಿರುವ ನಾಯಕರು. ನೀವೇ ಮುಂದಾಳುಗಳು ಎಂದು ರೈತರ ಪ್ರತಿಭಟನೆಯನ್ನು ಹುರಿದುಂಬಿಸಿದ್ದರು.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಹಿಂದೆ ‘ದಿ ತಾಷ್ಕೆಂಟ್ ಫೈಲ್ಸ್’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ರೈತ ಹೋರಾಟದಲ್ಲಿ ಮೋದಿ ಪರವಹಿಸಿರುವ ಅವರು ಸರ್ಕಾರದ ಪರವಾಗಿ ಹಲವು ಟ್ವೀಟ್ಗಳನ್ನೂ ಮಾಡಿದ್ದಾರೆ.
Delhi Chalo ಸಿಂಘು ಗಡಿ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ಸೋಂಕು
Published On - 3:29 pm, Fri, 11 December 20