ಗಂಡ-ಹೆಂಡತಿ ನಡುವೆ ಜಗಳ ತಂದಿಡುವ 5 ಸಂಗತಿಗಳಿವು

|

Updated on: Nov 28, 2023 | 3:45 PM

ಗಂಡ-ಹೆಂಡತಿ ಜಗಳ ಉಂಡು ಮಲಗೋತನಕ ಎಂಬುದು ಹಳೆಯ ಕಾಲದ ಗಾದೆ. ಆದರೆ, ಈಗ ಗಂಡ-ಹೆಂಡತಿ ನಡುವೆ ಶುರುವಾಗುವ ಸಣ್ಣಪುಟ್ಟ ಜಗಳಗಳು ಕೂಡ ಡೈವೋರ್ಸ್​ ತೆಗೆದುಕೊಳ್ಳಲು ಕಾರಣವಾಗುತ್ತಿದೆ. ಸಾಮಾನ್ಯವಾಗಿ ದಂಪತಿಯ ನಡುವೆ ಜಗಳವಾಗಲು ಕಾರಣವಾಗುವ 5 ಸಂಗತಿಗಳು ಇಲ್ಲಿವೆ.

ಗಂಡ-ಹೆಂಡತಿ ನಡುವೆ ಜಗಳ ತಂದಿಡುವ 5 ಸಂಗತಿಗಳಿವು
ಸಾಂದರ್ಭಿಕ ಚಿತ್ರ
Image Credit source: iStock
Follow us on

ಸಂಬಂಧಗಳು ಬಹಳ ಸೂಕ್ಷ್ಮವಾದುದು. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆಯೋ ಅಥವಾ ಇಟ್ಟುಕೊಳ್ಳುತ್ತೇವೆಯೋ ಅದರಂತೆ ಆ ಸಂಬಂಧ ಉಳಿದುಕೊಳ್ಳುತ್ತದೆ. ಕೊಂಚ ನಿರ್ಲಕ್ಷ್ಯ ಮಾಡಿದರೂ ಆ ಸಂಬಂಧ ಮಾಸುತ್ತಾ ಹೋಗುತ್ತದೆ. ಇದಕ್ಕೆ ಗಂಡ-ಹೆಂಡತಿಯ ಸಂಬಂಧವೂ ಹೊರತಾಗಿಲ್ಲ. ಗಂಡ-ಹೆಂಡತಿ ನಡುವೆ ಉಂಟಾಗುವ ಸಣ್ಣಪುಟ್ಟ ಜಗಳಗಳು ಕೂಡ ಕೆಲವೊಮ್ಮೆ ಆ ಸಂಬಂಧ ಮುರಿದುಬೀಳಲು ಕಾರಣವಾಗುತ್ತದೆ. ಹೀಗಾಗಿ, ದಂಪತಿಯ ನಡುವೆ ಜಗಳಕ್ಕೆ ಕಾರಣವಾಗುವ 5 ಸಾಮಾನ್ಯ ಸಂಗತಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಆ ಸಾಮಾನ್ಯ ಸಮಸ್ಯೆಗಳಲ್ಲಿ ಹಣದ ಬಗ್ಗೆ ಭಿನ್ನಾಭಿಪ್ರಾಯಗಳು, ಮನೆಕೆಲಸ ಮಾಡದಿರುವುದು, ಪ್ರೈವಸಿ, ಅನ್ಯೋನ್ಯತೆಯ ಕೊರತೆ, ಮಕ್ಕಳ ಜವಾಬ್ದಾರಿ, ವೈಯಕ್ತಿಕ ಆದ್ಯತೆಗಳು ಮತ್ತು ರಜಾ ದಿನಗಳು ಹೀಗೆ ಕೆಲವು ಸಾಮಾನ್ಯ ಕಾರಣಗಳು ದಾಂಪತ್ಯ ಹಳಸಲು ಕಾರಣವಾಗಬಹುದು.

ಹಣ:

ಹಣದ ಕಾರಣದಿಂದ ದಂಪತಿಗಳ ನಡುವೆ ಅನೇಕ ಸಂದರ್ಭಗಳಲ್ಲಿ ಜಗಳಗಳು ನಡೆಯುತ್ತವೆ. ಒಬ್ಬರು ಐಷಾರಾಮಿಗಳನ್ನು ಖರೀದಿಸುವುದನ್ನು ಇಷ್ಟಪಟ್ಟರೆ ಇನ್ನು ಕೆಲವರು ಹಣ ಉಳಿಸಲು ಇಷ್ಟಪಡುತ್ತಾರೆ. ಅಥವಾ ಯಾವ ವಸ್ತುವಿಗೆ ಹಣ ಹೆಚ್ಚು ಖರ್ಚು ಮಾಡಬೇಕೆಂಬುದರ ಬಗ್ಗೆಯೂ ಜಗಳಗಳು ನಡೆಯುತ್ತವೆ. ಇದನ್ನು ತಪ್ಪಿಸಲು ಇಬ್ಬರೂ ಸ್ವಲ್ಪ ರಾಜಿ ಮಾಡಿಕೊಳ್ಳಬೇಕು. ಇಬ್ಬರೂ ಒಟ್ಟಾಗಿ ನಿಮ್ಮ ಮನೆಯ ಬಜೆಟ್ ರಚಿಸಿ. ನೀವು ದಿನಸಿ ವಸ್ತುಗಳು, ವಿದ್ಯುತ್ ಬಿಲ್‌ಗಳು ಇತ್ಯಾದಿಗಳಂತಹ ಎಲ್ಲಾ ಮೂಲಭೂತ ಅಂಶಗಳನ್ನು ಲೆಕ್ಕ ಹಾಕಿ. ಆಗ ನೀವು ಇನ್ನೂ ಐಷಾರಾಮಿಗಳಿಗೆ ಖರ್ಚು ಮಾಡಲು ಸ್ವಲ್ಪ ಹಣವನ್ನು ಉಳಿಸಬಹುದು. ಇಬ್ಬರಿಗೂ ಇಷ್ಟವಾಗುವಂತೆ ನಿಮ್ಮ ಹಣಕಾಸಿನ ವ್ಯವಹಾರಗಳನ್ನು ಇಟ್ಟುಕೊಳ್ಳಿ.

ಇದನ್ನೂ ಓದಿ: ನಿಮ್ಮ ಲೈಂಗಿಕ ಹಾರ್ಮೋನ್ ಹೆಚ್ಚಿಸಲು ಏನು ಮಾಡಬೇಕು?

ಮನೆಕೆಲಸಗಳು:

ಹೆಚ್ಚಿನ ಮನೆಕೆಲಸಗಳು ಹೆಂಡತಿಯ ಮೇಲೆ ಬೀಳುತ್ತವೆ. ಆಗ ಗಂಡ ಮನೆಕೆಲಸಕ್ಕೂ ತನಗೂ ಸಂಬಂಧವೇ ಇಲ್ಲದಂತೆ ಕುಳಿತುಕೊಂಡಾಗ ಜಗಳ ಉಂಟಾಗುವುದು ಸಾಮಾನ್ಯ. ಹೀಗಾಗಿ, ನಿಮ್ಮ ಹೆಂಡತಿ ಕೇಳದೆ ಇದ್ದರೂ ಮನೆಕೆಲಸದಲ್ಲಿ ಆಕೆಗೆ ಸಹಾಯ ಮಾಡಿ. ಆಗ ಇಬ್ಬರ ನಡುವೆ ಬಾಂಧವ್ಯ, ಪ್ರೀತಿ, ಹೊಂದಾಣಿಕೆ ಇನ್ನಷ್ಟು ಹೆಚ್ಚಾಗುತ್ತದೆ. ಇಬ್ಬರೂ ಮಾತನಾಡುತ್ತಾ, ಕೆಲಸವನ್ನು ಹಂಚಿಕೊಂಡು ಮಾಡಿದರೆ ಅದು ಹೊರೆ ಎನಿಸುವುದಿಲ್ಲ.

ಅತಿಯಾದ ಪೊಸೆಸಿವ್​ನೆಸ್:

ಪೊಸೆಸಿವ್​ನೆಸ್​ ಎಂಬುದು ಸಂಬಂಧವನ್ನು ಬಹುಬೇಗ ಕೆಡಿಸುವ ಅಂಶವಾಗಿದೆ. ಒಮ್ಮೊಮ್ಮೆ ನೀವು ನಿಮ್ಮ ಗಂಡ/ ಹೆಂಡತಿಯ ಬಗ್ಗೆ ಎಷ್ಟು ಭಾವುಕರಾಗಿದ್ದೀರಿ ಎಂಬುದನ್ನು ಅವರಿಗೆ ತೋರಿಸುವುದು ತಪ್ಪಲ್ಲ. ಆದರೆ, ನೀವು ಸತತವಾಗಿ ಅವರಿಗೆ ಇರಿಟೇಟ್ ಮಾಡುತ್ತಿದ್ದರೆ ಅಥವಾ ನಿಮ್ಮ ಸಂಗಾತಿಗೆ ಬೇರೆಯವರೊಂದಿಗೆ ಬೆರೆಯಲು ಬಿಡದೇ ಇದ್ದರೆ ಅದರಿಂದ ಜಗಳವಾಗುವುದು ಗ್ಯಾರಂಟಿ. ಹಾಗಾದಾಗ ನೀವು ನಿಮ್ಮ ಸಂಗಾತಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀರಿ ಎಂಬುದನ್ನು ಆಗಾಗ ಅವರಿಗೆ ಅರ್ಥಮಾಡಿಸುತ್ತಲೇ ಇರಬೇಕಾಗುತ್ತದೆ.

ಲೈಂಗಿಕ ಸಂಬಂಧ:

ಗಂಡ-ಹೆಂಡತಿಯ ನಡುವೆ ಇರುವ ಲೈಂಗಿಕ ಸಂಬಂಧವೂ ಕೆಲವೊಮ್ಮೆ ಜಗಳಕ್ಕೆ ಕಾರಣವಾಗುತ್ತದೆ. ಕೆಲವರಿಗೆ ಅದರಲ್ಲಿ ಆಸಕ್ತಿ ಕಡಿಮೆ ಇರಬಹುದು, ಇನ್ನು ಕೆಲವರಿಗೆ ಆಸಕ್ತಿ ಹೆಚ್ಚಾಗಿರಬಹುದು. ಇಂತಹ ಸಂದರ್ಭದಲ್ಲಿ ಕೋಪ, ಬೇಸರ, ಅಸಮಾಧಾನಗಳು ಉಂಟಾಗುವುದು ಸಾಮಾನ್ಯ. ಹೀಗಾಗಿ, ನಿಮ್ಮ ಸಂಗಾತಿಯ ಅಗತ್ಯತೆಗಳಿಗೂ ಕೆಲವೊಮ್ಮೆ ನೀವು ಹೊಂದಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಚೀಸ್​ನಿಂದ ಮಾಡಲಾಗುವ 100 ಬೆಸ್ಟ್​ ತಿಂಡಿಗಳಲ್ಲಿ ಭಾರತೀಯ ತಿಂಡಿಗೂ ಸ್ಥಾನ

ಮಕ್ಕಳು:

ಮನೆಯಲ್ಲಿರುವ ಹೆಂಡತಿ ಮಕ್ಕಳ ಜವಾಬ್ದಾರಿಯನ್ನು ನಾನೊಬ್ಬಳೇ ಹೊರಬೇಕೆಂದು ಗಂಡನ ಮೇಲೆ ದೂರು ಹಾಕುವುದು ಸಾಮಾನ್ಯ. ಹೀಗಾದಾಗ ನಿಮ್ಮ ಸಂಗಾತಿ ದಿನವಿಡೀ ಮನೆಕೆಲಸದಲ್ಲಿ ದಣಿದಿರುವ ಕಾರಣ ಅಥವಾ ಒತ್ತಡದಿಂದ ಈ ರೀತಿಯ ವಾದಗಳು ಸಂಭವಿಸುತ್ತವೆ ಎಂದು ಅರ್ಥ ಮಾಡಿಕೊಳ್ಳಿ. ಅವರು ತಮ್ಮ ಹತಾಶೆಯನ್ನು ಸ್ವಲ್ಪ ಸಮಯದವರೆಗೆ ಹೊರಹಾಕಲಿ. ಆಗ ನೀವು ಸುಮ್ಮನಿರಿ. ಮಕ್ಕಳ ಪೋಷಣೆಯಲ್ಲಿ ನಿಮಗೆ ಸಾಧ್ಯವಾದಷ್ಟು ನೀವು ನಿಮ್ಮ ಮಡದಿಗೆ ಸಹಾಯ ಮಾಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ