
ಮಧ್ಯಾಹ್ನ ಊಟದ ನಂತರ ನಿದ್ದೆ ಬರುವುದು ಸಹಜ. ಆರೋಗ್ಯ ತಜ್ಞರ ಪ್ರಕಾರ ನಾವು ಮಧ್ಯಾಹ್ನ ಆಹಾರ ಸೇವಿಸಿದಾಗ, ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಮೆದುಳಿಗೆ ರಕ್ತ ಪೂರೈಕೆಯು ಕಡಿಮೆಯಾಗಬಹುದು. ಈ ಕಾರಣದಿಂದಾಗಿ ನಿದ್ರೆ ಮತ್ತು ಆಯಾಸವಾದಂತೆ ಭಾಸವಾಗುತ್ತದೆ. ಆಹಾರವನ್ನು ತಿಂದ ನಂತರ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ಒಬ್ಬ ವ್ಯಕ್ತಿಯು ಹೆಚ್ಚು ನಿದ್ರೆ ಮಾಡುತ್ತಾನೆ. ಅಲ್ಲದೆ ಕೆಲವರು ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಪಡೆಯಲು ಸಾಧ್ಯವಾಗಿದ್ದಾಗ ಅಥವಾ ದಣಿದಿರುವಾಗ ಹಗಲು ಹೊತ್ತಿನಲ್ಲಿ ಕೆಲವು ನಿಮಿಷಗಳ ಕಾಲ ಕಿರು ನಿದ್ರೆ ಮಾಡುತ್ತಾರೆ. ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನ ಮಲಗುವುದು ಸರಿಯೇ? ಅದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ಅಮೇರಿಕಾರದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಯಸ್ಕರರು ಮಧ್ಯಾಹ್ನದ ವೇಳೆ ನಿದ್ರೆ ಮಾಡುತ್ತಾರೆ. ಮನಸ್ಥಿತಿಯನ್ನು ಸುಧಾರಿಸಲು, ದಿನವಿಡೀ ಕ್ರಿಯಾಶೀಲವಾಗಿರಲು, ಆಯಾಸವನ್ನು ಕಡಿಮೆ ಮಾಡಲು ಕಿರು ನಿದ್ರೆಯು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಆದರೆ ಹಗಲಿನಲ್ಲಿ ಹೆಚ್ಚು ಹೊತ್ತು ಮಲಗಿದರೆ ಅದು ಆರೋಗ್ಯದ ಮೇಲೆ ನರಕಾತ್ಮಕ ಪರಿಣಾಮವನ್ನು ಉಂಟುಮಾಡಬಹುದು.
ಹಾರ್ವರ್ಡ್ ಹೆಲ್ತ್ ವರದಿ ಹೇಳುವಂತೆ ಹಗಲಿನಲ್ಲಿ ಒಂದು ಸಣ್ಣ ನಿದ್ದೆ ಜ್ಞಾನಪಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇದು ದೇಹವನ್ನು ಸಕ್ರಿಯವಾಗಿರಿಸುತ್ತದೆ. ಹಾಗಿದ್ದರೂ ಹಗಲಿನಲ್ಲಿ ಹೆಚ್ಚು ಹೊತ್ತು ಮಲಗುವುದರಿಂದ ದೀರ್ಘಾವಧಿಯಲ್ಲಿ ಅನೇಕ ನಕರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಎನ್ನುತ್ತಾರೆ ಸಂಶೋಧಕರು. ಮಧ್ಯಾಹ್ನ ಹೆಚ್ಚು ಮಲಗುವುದರಿಂದ ನಿದ್ರೆಯ ಜಡತ್ವ ಉಂಟಾಗುತ್ತದೆ. ನಿದ್ರೆಯ ಜಡತ್ವದಿಂದ ಒಬ್ಬ ವ್ಯಕ್ತಿಯ ಆಲೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ.
ಹಗಲಿನಲ್ಲಿ ಹೆಚ್ಚು ಹೊತ್ತು ಮಲಗುವುದರಿಂದ ಹೃದ್ರೋಗ ಮತ್ತು ಖಿನ್ನತೆಯಂತಹ ಸಮಸ್ಯೆಗಳು ಬಾಧಿಸುವ ಅಪಾಯ ಹೆಚ್ಚಿದೆ ಎಂದು ತಜ್ಞರು ಹೇಳುತ್ತಾರೆ. ಹಗಲಿನಲ್ಲಿ ಹೆಚ್ಚು ಹೊತ್ತು ಮಲಗುತ್ತಿದ್ದೀರಿ ಎಂದರೆ ನೀವು ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಪಡೆಯುತ್ತಿಲ್ಲ ಎಂದರ್ಥ. ಇದು ಅನೇಕ ದೀರ್ಘಕಾಲದ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಪಡೆಯಿರಿ. ತಜ್ಞರ ಪ್ರಕಾರ ಮದ್ಯಾಹ್ನ ಅರ್ಧ ಗಂಟೆಗಿಂತ ಹೆಚ್ಚು ನಿದ್ದೆ ಮಾಡುವುದು ಒಳ್ಳೆಯದಲ್ಲ. ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರೆ ಮಾಡುವುದರಿಂದ ನಿದ್ರೆಯ ಚಕ್ರಕ್ಕೆ ತೊಂದರೆಯಾಗಬಹುದು.
ಇದನ್ನೂ ಓದಿ: ಹಗಲಿನಲ್ಲಿ ಮಾಡುವ ಸಣ್ಣ ನಿದ್ರೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?
ವಿದ್ಯಾರ್ಥಿಗಳಿಗೆ: ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನದಿಂದ ಸುಸ್ತಾಗುತ್ತದೆ. ಮಧ್ಯಾಹ್ನ ಒಂದು ಸಣ್ಣ ನಿದ್ರೆ ಅವರ ಮೆದುಳಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ.
ವಯಸ್ಸಾದವರಿಗೆ: ವಯಸ್ಸಾದವರು ತಮ್ಮ ದೇಹಕ್ಕೆ ವಿಶ್ರಾಂತಿಯನ್ನು ನೀಡಲು ಹಗಲಿನಲ್ಲಿ ಸ್ವಲ್ಪ ಸಮಯ ಮಲಗಬಹುದು.
ಕಾರ್ಮಿಕರು: ಕಠಿಣ ಮತ್ತು ಭಾರವಾದ ವಸ್ತುಗಳನ್ನು ಎತ್ತುವಂತ ಕೆಲಸ ಮಾಡುವವರು ಮಧ್ಯಾಹ್ನ ಕಿರು ನಿದ್ರೆ ಮಾಡಬಹುದು. ಇದರಿಂದ ಅವರ ಆಯಾಸ ಕಡಿಮೆಯಾಗುತ್ತದೆ ಮತ್ತು ದೇಹವು ಮತ್ತೆ ಹೆಚ್ಚು ಕ್ರಿಯಾಶೀಲವಾಗಲು ಸಾಧ್ಯವಾಗುತ್ತದೆ.