Peanut Butter Recipe Ideas: ಪೀನಟ್ ಬಟರ್ನಿಂದ ಈ ಸುಲಭ ರೆಸಿಪಿ ತಯಾರಿಸಿ
ಸಾಮಾನ್ಯವಾಗಿ ಸ್ಯಾಂಡ್ವಿಚ್ಗೆ ಪೀನಟ್ ಬಟರ್ (ಕಡಲೇಕಾಯಿ ಬೆಣ್ಣೆ) ನ್ನು ಹರಡಿ ತಿನ್ನಲಾಗುತ್ತದೆ. ಆದರೆ ಯಾವಾಗಲು ಈ ಪೀನಟ್ ಬಟರ್ ಸ್ಯಾಂಡ್ವಿಚ್ ತಿಂದು ಬೇಸರವಾಗಿದೆಯೇ? ಇಲ್ಲಿದೆ ನೋಡಿ ಪೀನಟ್ ಬಟರ್ನಿಂದ ತಯಾರಿಸಬಹುದಾದ ವಿವಿಧ ಪಾಕವಿಧಾನದ ಐಡಿಯಾಗಳು.
ಪೀನಟ್ ಬಟರ್ (peanut butter) ಪೋಷಕಾಂಶಗಳ ಬಹುಮುಖ ಘಟಕವಾಗಿದೆ. ಇದು ಆರೋಗ್ಯಕರ ಕೊಬ್ಬು, ಪ್ರೋಟೀನ್, ಫೈಬರ್, ಖನಿಜಗಳು ಮತ್ತು ವಿವಿಧ ಅಗತ್ಯ ಜೀವಸತ್ವಗಳಿಂದ ತುಂಬಿದೆ. ಇದನ್ನು ಪ್ರಪಂಚದಾದ್ಯಂತ ಹೆಚ್ಚಿನ ಜನರು ಸೇವಿಸುತ್ತಾರೆ. ಅದರಲ್ಲೂ ಜಿಮ್ ಗೆ ಹೋಗುವವರು ಈ ಪೀನಟ್ ಬಟರ್ನ್ನು ಪ್ರತಿನಿತ್ಯ ಸೇವನೆ ಮಾಡುತ್ತಾರೆ. ಜನರು ಹೆಚ್ಚಾಗಿ ಇದನ್ನು ಬ್ರೆಡ್ ಟೋಸ್ಟ್ ಮತ್ತು ಸ್ಯಾಂಡ್ ವಿಚ್ಗೆ ಹಚ್ಚಿ ತಿನ್ನುತ್ತಾರೆ. ಈ ಕಡಲೆಕಾಯಿ ಬೆಣ್ಣೆಯು ಆರೋಗ್ಯಕರವಾಗಿರುವುದು ಮಾತ್ರವಲ್ಲದೆ, ತುಂಬಾ ರುಚಿಕರವಾಗಿರುತ್ತದೆ. ಕಡಲೆಕಾಯಿ ಬೆಣ್ಣೆಯನ್ನು ಸ್ಯಾಂಡ್ ವಿಚ್ ಮಾತ್ರವಲ್ಲದೆ ವಿವಿಧ ಬಗೆಯ ಭಕ್ಷ್ಯಗಳಲ್ಲೂ ಬಳಸಬಹುದು. ನೀವು ಆರೋಗ್ಯಕರ ಉಪಹಾರ, ಸಿಹಿತಿಂಡಿಗಳಿಗಾಗಿ ಹುಡುಕುತ್ತಿದ್ದರೆ, ಪೀನಟ್ ಬಟರ್ ಬಳಸಿಕೊಂಡು ಮಾಡಬಹುದಾದ ರೆಸಿಪಿ ಐಡಿಯಾಗಳನ್ನು ನಾವಿಂದು ತಿಳಿಸಿಕೊಡುತ್ತೇವೆ.
ಪೀನಟ್ ಬಟರ್ ಪಾಕ ವಿಧಾನ:
ಪೀನಟ್ ಬಟರ್ ಸ್ಮೂಥಿ: ಈ ಸ್ಮೂಥಿ ಸುಲಭವಾಗಿ ಮಾಡಬಹುದಾದ ರುಚಿಕರವಾದ ಪಾನೀಯ ಪಾಕವಿಧಾನವಾಗಿದೆ. ಪೀನಟ್ ಬಟರ್ ಸ್ಮೂಥಿ ಟೇಸ್ಟಿ ಮತ್ತು ಪೌಷ್ಟಿಕ ಪಾನೀಯವಾಗಿದ್ದು, ಇದನ್ನು ದಿನದ ಯಾವುದೇ ಸಮಯದಲ್ಲಿಯೂ ಸೇವಿಸಬಹುದು. ಈ ಪಾಕವಿಧಾನವನ್ನು ತಯಾರಿಸಲು ನಿಮಗೆ ಹೆಚ್ಚಿನ ಪದಾರ್ಥಗಳ ಅವಶ್ಯಕತೆ ಇಲ್ಲ. ಇದಕ್ಕಾಗಿ ಕೇವಲ 3 ರಿಂದ 4 ಪದಾರ್ಥಗಳು ಸಾಕಾಗುತ್ತದೆ. ಒಂದು ಬಾಳೆ ಹಣ್ಣು, ಪೀನಟ್ ಬಟರ್, ಜೇನುತುಪ್ಪ ಮತ್ತು ಹಾಲು. ಇವೆಲ್ಲವನ್ನು ಒಟ್ಟಿಗೆ ಮಿಕ್ಸಿಯಲ್ಲಿ ರುಬ್ಬಿ ಸ್ಮೂಥಿ ಮಾಡಿ ಕುಡಿಯಬಹುದು.
ಬನಾನಾ ಪೀನಟ್ ಬಟರ್ ಫ್ರೋಜನ್ ಬೈಟ್ಸ್: ನೀವು ಐಸ್ ಕ್ರೀಮ್ಗೆ ಪರ್ಯಾಯವಾಗಿ ತಣ್ಣನೆಯ ಸಿಹಿತಿಂಡಿಗಳನ್ನು ತಿನ್ನಲು ಬಯಸಿದರೆ, ಈ ಬನಾನಾ ಪೀನಟ್ ಬಟರ್ ಫ್ರೋಜನ್ ಬೈಟ್ಸ್ನ್ನು ಪಾಕ ವಿಧಾನವನ್ನು ಪ್ರಯತ್ನಿಸಿ. ಇವುಗಳು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಬೈಟ್ಸ್ ಗಳಾಗಿವೆ. ಬಾಳೆಹಣ್ಣನ್ನು ತುಂಡು ಮಾಡಿ, ಬಾಳೆ ಹಣ್ಣಿನ ಒಂದು ಸ್ಲೈಸ್ ಗೆ ಪೀನಟ್ ಬಟರ್ ಅನ್ವಯಿಸಿ ಮತ್ತು ಅದರ ಮೇಲೆ ಇನ್ನೊಂದು ಬಾಳೆಹಣ್ಣಿನ ಸ್ಲೈಸ್ ಹಾಕಿ. ಮತ್ತು ಒಂದು ಬೌಲ್ನಲ್ಲಿ ಚಾಕೋಲೆಟ್ನ್ನು ಕರಗಿಸಿ, ಪೇಸ್ಟ್ ತರ ಮಾಡಿಕೊಳ್ಳಿ, ಈ ಚಾಕೊಲೇಟ್ ಪೇಸ್ಟ್ನಲ್ಲಿ ಬಾಳೆಹಣ್ಣಿನ ಸ್ಲೈಸ್ ನ್ನು ಅದ್ದಿ ನಂತರ ಅದನ್ನು 15 ರಿಂದ 20 ನಿಮಿಷಗಳ ಕಾಲ ಫ್ರೀಜರ್ ನಲ್ಲಿ ಇಟ್ಟು ಬಳಿಕ ತಿನ್ನಬಹುದು.
ಪೀನಟ್ ಬಟರ್ ಕಪ್ ಕೇಕ್: ನೀವು ತಯಾರಿಸುವ ಚಾಕೊಲೇಟ್ ಕಪ್ ಕೇಕ್ಗಳಿಗೆ ಬೆಣ್ಣೆಯಂತಹ ಟ್ವಿಸ್ಟ್ ನೀಡಲು ಬಯಸುತ್ತೀರಾ? ಹಾಗಾದರೆ ನೀವು ತಯಾರಿಸುವ ಕೇಕ್ ಹಿಟ್ಟಿಗೆ ಒಂದರಿಂದ ಎರಡು ಚಮಚ ಪೀನಟ್ ಬಟರ್ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕಪ್ ಕೇಕ್ ತಯಾರಿಸಿ. ಈ ಪೀನಟ್ ಬಟರ್ ಕಪ್ ಕೇಕ್ ನಿಮ್ಮ ನಾಲಿಗೆಗೆ ಅದ್ಭುತ ರುಚಿಯನ್ನು ನೀಡುತ್ತದೆ.
ಇದನ್ನೂ ಓದಿ:Peanut Butter: ಕಡಲೆಕಾಯಿಯಲ್ಲೂ ಬೆಣ್ಣೆ ತಯಾರಿಸಬಹುದು; ಇದು ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ
ಪೀನಟ್ ಬಟರ್ ಫ್ರೆಂಚ್ ಟೋಸ್ಟ್: ಇದು ತ್ವರಿತ ಮತ್ತು ಸುಲಭವಾದ ಪಾಕವಿಧಾನವಾಗಿದೆ. ಪೀನಟ್ ಬಟರ್ ಫ್ರೆಂಚ್ ಟೋಸ್ಟ್ ಪ್ರೋಟಿನ್ ನಿಂದ ಸಮೃದ್ಧವಾಗಿರುತ್ತದೆ. ಈ ರುಚಿಕರವಾದ ಟೋಸ್ಟ್ ನ್ನು ಬೆಳಗ್ಗಿನ ಉಪಹಾರಕ್ಕಾಗಿ ಬಾಳೆಹಣ್ಣು ಮತ್ತು ವಿವಿಧ ಹಣ್ಣುಗಳ ಜೊತೆಗೆ ತಿನ್ನಲು ನೀಡಬಹುದು.
ಸ್ವೀಟ್ ಆಂಡ್ ಸಾಲ್ಟ್ ಪೀನಟ್ ಬಟರ್ ಕುಕೀಸ್: ಒಂದು ಕಪ್ ಬಿಸಿ ಕಾಫಿಯೊಂದಿಗೆ ಈ ಸ್ವೀಟ್ ಆಂಡ್ ಸಾಲ್ಟ್ ಪೀನಟ್ ಬಟರ್ ಕುಕೀಸ್ ಸವಿಯಲು ಅದ್ಭುತವಾಗಿರುತ್ತದೆ. ಇವುಗಳು ರುಚಿಯಲ್ಲಿ ಸಿಹಿ ಮತ್ತು ಸ್ವಲ್ಪ ಉಪ್ಪಾಗಿರುತ್ತವೆ. ಚಹಾ ಮತ್ತು ಕಾಫಿಯ ಜೊತೆಗೆ ಇದು ಉತ್ತಮ ಕಾಂಬಿನೇಷನ್ ಆಗಿದೆ.
ಏಷ್ಯನ್ ಶೈಲಿಯ ಪೀನಟ್ ಬಟರ್ ನೂಡಲ್ಸ್: ಈ ಟೇಸ್ಟಿ ಮತ್ತು ಖಾರವಾದ ನೂಡಲ್ಸ್ ತಯಾರಿಸಲು ಕಡಲೆಕಾಯಿ ಬೆಣ್ಣೆ, ಬೆಳ್ಳುಳ್ಳಿ, ಮೆಣಸಿನಕಾಯಿ, ಎಣ್ಣೆ ಮತ್ತು ಉಪ್ಪು ಬೇಕಾಗುತ್ತದೆ. ನೂಡಲ್ಸ್, ಪೀನಟ್ ಬಟರ್ ಮತ್ತು ಮಸಾಲೆಯುಕ್ತ ಸಾಸ್ ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷಗಳ ಕಾಲ ಬೇಯಿಸಿದರೆ, ರುಚಿಕರವಾದ ಏಷ್ಯನ್ ಸ್ಟೆಲ್ ಪೀನಟ್ ಬಟರ್ ನೂಡಲ್ಸ್ ಸವಿಯಲು ಸಿದ್ಧ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:12 pm, Wed, 26 April 23