ಅನೇಕ ಜನರನ್ನು ಈ ಡಾರ್ಕ್ ಅಂಡರ್ ಆರ್ಮ್ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ. ಇದು ಸಹಜವಾಗಿಯೇ ಅವರನ್ನು ಮುಜುಗರಕ್ಕೆ ಒಳಪಡಿಸುತ್ತದೆ. ಅಲ್ಲದೆ ಕಪ್ಪು ಕಂಕುಳ ಸಮಸ್ಯೆಯಿಂದಾಗಿ ಹೆಚ್ಚಿನವರು ಸ್ಲೀವ್ ಲೆಸ್ ಬಟ್ಟೆಗಳನ್ನು ಧರಿಸಲು ಹಿಂಜರಿಯುತ್ತಾರೆ. ಕಂಕುಳ ಕಪ್ಪು ಬಣ್ಣಕ್ಕೆ ತಿರುಗಲು ಕಾರಣವೇನು? ಈ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುವ ಮನೆಮದ್ದುಗಳು ಯಾವುವು ಎಂಬುದನ್ನು ನೋಡೋಣ.
ಸತ್ತ ಜೀವಕೋಶಗಳು ಕಂಕುಳಿನಲ್ಲಿ ಸಂಗ್ರಹಗೊಳ್ಳುತ್ತವೆ, ಇದು ಕಪ್ಪು ಕಲೆಗಳ ರೂಪವನ್ನು ಪಡೆದು ಅದು ಡಾರ್ಕ್ ಅಂಡರ್ ಆರ್ಮ್ಸ್ ಉಂಟಾಗಲು ಕಾರಣವಾಗುತ್ತದೆ. ಅಲ್ಲದೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದು, ಕಂಕುಳ ಕೂದಲು ತೆಗೆಯಲು ಕ್ರೀಮ್ ಮತ್ತು ರೇಜರ್ ಬ್ಲೇಡ್ಗಳ ಅತಿಯಾದ ಬಳಕೆ, ಹಾರ್ಮೋನು ಅಸಮತೋಲನ, ಡಿಯೋಡರೆಂಟ್ನ ಅತಿಯಾದ ಬಳಕೆ ಇವೆಲ್ಲವು ಕಪ್ಪು ಕಂಕುಳ ಸಮಸ್ಯೆ ಉಂಟಾಗಲು ಕಾರಣ. ಕಂಕುಳ ತ್ವಚೆ ತುಂಬಾ ಸೂಕ್ಷ್ಮವಾಗಿದ್ದು, ಅದರಲ್ಲಿ ಬೆವರು ಗ್ರಂಥಿಗಳು ಹೆಚ್ಚು ಇರುವುದರಿಂದ ಇದರ ಆರೈಕೆಯಲ್ಲಿ ಕೆಲವೊಂದು ವಿಶೇಷ ಅಂಶಗಳನ್ನು ಗಮನಿಸಬೇಕು. ಕಂಕುಳ ಆರೈಕೆಗೆ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು ನೀವು ಮನೆಮದ್ದುಗಳನ್ನು ಬಳಸಬಹುದು.
ತೆಂಗಿನೆಣ್ಣೆಯು ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಅಲ್ಲದೆ ಕಪ್ಪು ಕಂಕುಳ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ಕಂಕುಳವನ್ನು ಹೊಳೆಯುವಂತೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯಿಂದ ನಿಮ್ಮ ಕಂಕುಳ ಭಾಗವನ್ನು ಪ್ರತಿದಿನ ಮಸಾಜ್ ಮಾಡಿ. 15 ನಿಮಿಷಗಳ ಬಳಿಕ ಹತ್ತಿಯ ಬಟ್ಟೆಯ ಸಹಾಯದಿಂದ ಅದನ್ನು ಸ್ವಚ್ಛಗೊಳಿಸಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಅದ್ಭುತ ವ್ಯತ್ಯಾಸವನ್ನು ಕಾಣುತ್ತೀರಿ.
ಕಡಲೆ ಹಿಟ್ಟನ್ನು ಹಿಂದಿನಿಂದಲೂ ತ್ವಚೆಯ ಆರೈಕೆಗಾಗಿ ಬಳಸಲಾಗುತ್ತಿದೆ. ಕಡ್ಲೆ ಹಿಟ್ಟು ಚರ್ಮವನ್ನು ಅದರ ನೈಸರ್ಗಿಕ ಬಣ್ಣಕ್ಕೆ ಹಿಂತಿರುಗಲು ಸಹಾಯ ಮಾಡುತ್ತದೆ. ಮತ್ತು ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ಮೃದುಗೊಳಿಸುತ್ತದೆ. ಸ್ವಲ್ಪ ಕಡ್ಲೆ ಹಿಟ್ಟಿನೊಂದಿಗೆ ಮೊಸರು ಮತ್ತು ನಿಂಬೆ ರಸವನ್ನು ಬೆರೆಸಿ ಒಂದು ಪೇಸ್ಟ್ ತಯಾರಿಸಿಕೊಳ್ಳಿ. ಈಗ ಆ ಪೇಸ್ಟ್ನ್ನು ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ. 10 ರಿಂದ 15 ನಿಮಿಷಗಳ ನಂತರ ಸಂಪೂರ್ಣವಾಗಿ ಒಣಗಿದ ಬಳಿಕ ಅದನ್ನು ನೀರಿನಿಂದ ತೊಳೆಯಿರಿ.
ಸೌತೆಕಾಯಿ ಮತ್ತು ಆಲೂಗಡ್ಡೆ ರಸವು ಸಹ ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಆಲೂಗಡ್ಡೆ ವಿಟಮಿನ್ ಎ, ಬಿ ಮತ್ತು ಸಿ ಯಲ್ಲಿ ಸಮೃದ್ಧವಾಗಿದೆ. ಮತ್ತು ಇದು ನೈಸರ್ಗಿಕ ಬ್ಲೀಚ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿ ನೀವು ಆಲೂಗಡ್ಡೆಯನ್ನು ಕತ್ತರಿಸಿ ಅದರಿಂದ ಕಂಕುಳ ಭಾಗಕ್ಕೆ ಮಸಾಜ್ ಮಾಡಿ. ಇಲ್ಲವೆ ಅರ್ಧ ಆಲೂಗಡ್ಡೆ ಮತ್ತು ಅರ್ಧ ಸೌತೆಕಾಯಿಯ ರಸವನ್ನು ಒಟ್ಟಿಗೆ ಸೇರಿಸಿ ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ. ಇದರ ಫಲಿತಾಂಶವನ್ನು ನೀವು ಶೀಘ್ರದಲ್ಲೇ ನೋಡುತ್ತೀರಾ.
ಇದನ್ನೂ ಓದಿ: ನಿಮ್ಮ ಡಾರ್ಕ್ ಅಂಡರ್ಆರ್ಮ್ಸ್ ಹೋಗಲಾಡಿಸಲು ಇಲ್ಲಿವೆ ಮನೆಮದ್ದು
ಶ್ರೀಗಂಧದ ಪೇಸ್ಟ್ ನ್ನು ರೋಸ್ ವಾಟರ್ನೊಂದಿಗೆ ಮಿಶ್ರಣ ಮಾಡಿ ಅದನ್ನು ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಅದನ್ನು ತೊಳೆಯಿರಿ. ರೋಸ್ ವಾಟರ್ ಚರ್ಮವನ್ನು ತಂಪುಗೊಳಿಸುತ್ತದೆ ಮತ್ತು ಶ್ರೀಗಂಧ ಚರ್ಮದ ಕಳೆಯನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.
ಕಿತ್ತಳೆ ಹಣ್ಣಿನ ಸಿಪ್ಪೆಯು ಚರ್ಮವನ್ನು ಹಗುರಗೊಳಿಸುವ ಗುಣವನ್ನು ಹೊಂದಿದ್ದು, ಅದು ಕಪ್ಪು ಕಂಕುಳಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ಬೆವರಿನಿಂದ ಉಂಟಾಗುವ ತುರಿಕೆ ಮತ್ತು ಕಿರಿಕಿರಿಯಿಂದ ಪರಿಹಾರ ನೀಡುತ್ತದೆ.
ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Sat, 5 August 23