ಒಡೆದ ಹಿಮ್ಮಡಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ, ಇಲ್ಲಿದೆ ಮನೆ ಮದ್ದು
ಬಹುತೇಕರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಲ್ಲಿ ಹಿಮ್ಮಡಿ ಒಡೆಯುವುದು ಕೂಡ ಒಂದು. ಈ ಸಮಯದಲ್ಲಿ ಪಾದವನ್ನು ನೆಲಕ್ಕೆ ಉರಲು ಕೂಡ ಕಷ್ಟವಾಗುತ್ತದೆ. ಇದರಿಂದಾಗುವ ನೋವು ಅಷ್ಟಿಷ್ಟಲ್ಲ. ಪಾದಗಳ ಚರ್ಮವು ಗಟ್ಟಿಯಾಗಿ ಒಣಗಿದಂತಾಗುತ್ತದೆ. ಹೀಗಾದಾಗ ಸಹಜವಾಗಿ ಹಿಮ್ಮಡಿಯೂ ಬಿರುಕು ಬಿಟ್ಟು ಒಡೆಯಲು ಶುರುವಾಗುತ್ತದೆ. ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳಿಂದ ಹಿಮ್ಮಡಿ ಒಡೆಯುವ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದು.
ಸೌಂದರ್ಯ ಎನ್ನುವುದು ಮುಖಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಖದೊಂದಿಗೆ, ಕೈಕಾಲುಗಳು, ಉಗುರು ಹಾಗೂ ಪಾದಗಳು ಕೂಡ ನಿಮ್ಮ ಸೌಂದರ್ಯವನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ಆದರೆ ಹೆಚ್ಚಿನವರು ಮುಖದ ಅಂದಕ್ಕೆ ಗಮನಕೊಡುವಷ್ಟು ಪಾದಗಳ ಆರೈಕೆಗೆ ಗಮನ ಕೊಡುವುದಿಲ್ಲ. ಹೀಗಾಗಿಯೇ ಹೆಚ್ಚಿನವರಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದು ಕಾಲಿನ ಅಂದವನ್ನು ಹಾಳು ಮಾಡುವುದರ ಜೊತೆಗೆ ಮುಜುಗರವನ್ನು ಉಂಟು ಮಾಡಬಹುದು. ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಒಡೆದ ಹಿಮ್ಮಡಿಯಿಂದ ವಿಪರೀತ ನೋವು ಅನುಭವಿಸುತ್ತಿದ್ದರೆ ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಬಳಸಿಕೊಳ್ಳಬಹುದು.
*ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನೇ ಮನೆ ಮದ್ದಾಗಿ ಬಳಸಿ*
* ಬಾಳೆಹಣ್ಣುಗಳು ಒಣ ತ್ವಚೆಗೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತವೆ. ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ6 ಮತ್ತು ಸಿಗಳು ಹೇರಳವಾಗಿದೆ. ಬಾಳೆಹಣ್ಣನ್ನು ಕಿವುಚಿ ಒಡೆದ ಚರ್ಮದ ಮೇಲೆ ಲೇಪಿಸುವುದರಿಂದ ಚರ್ಮವನ್ನು ತೇವಾಂಶಭರಿತವಾಗಿರಿಸುತ್ತದೆ.
* ಜೇನುತುಪ್ಪವು ನೈಸರ್ಗಿಕ ನಂಜುನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಜೇನುತುಪ್ಪವು ಒಡೆದ ಪಾದಗಳಿಗೆ ಹಚ್ಚುವುದರಿಂದ ಮಾಯಿಶ್ಚರೈಸರ್ ಆಗಿಯೂ ಕಾರ್ಯನಿರ್ವಹಿಸುವುದಲ್ಲದೆ, ಪಾದಗಳ ಚರ್ಮದಲ್ಲಿನ ಶುಷ್ಕತೆಯನ್ನು ನಿವಾರಿಸುತ್ತದೆ.
* ಸಸ್ಯಜನ್ಯ ಎಣ್ಣೆಯಲ್ಲಿ ಅಗತ್ಯವಾದ ವಿಟಮಿನ್ ಎ, ಡಿ ಮತ್ತು ಇಗಳಲ್ಲಿ ಸಮೃದ್ಧವಾಗಿದ್ದು, ಇದನ್ನು ಒಡೆದ ಪಾದಗಳಿಗೆ ಹಚ್ಚುವುದರಿಂದ ಚರ್ಮದ ಮೃದುವಾಗುತ್ತದೆ.
* ನಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಹದ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ನಿಂಬೆರಸ ಸೇರಿಸಿ, ಈ ನೀರಿನಲ್ಲಿ ಹತ್ತು ನಿಮಿಷಗಳ ಕಾಲ ಪಾದಗಳನ್ನು ಇಟ್ಟುಕೊಳ್ಳುವುದರಿಂದ ಒಡೆದ ಚರ್ಮವು ಮೃದುವಾಗುವುದಲ್ಲದೆ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಒಗ್ಗರಣೆಗೆ ಬಳಸುವ ಈ ಬೆಳ್ಳುಳ್ಳಿ ಆರೋಗ್ಯಕ್ಕೂ ಬಹುಪಯೋಗಿ, ಇಲ್ಲಿದೆ ಸರಳ ಮನೆ ಮದ್ದು
* ಒಡೆದ ಪಾದಗಳ ಆರೈಕೆಗೆ ಒಂದು ಚಮಚ ಅಡಿಗೆ ಸೋಡಾವನ್ನು ನೀರಿನೊಂದಿಗೆ ಮಿಶ್ರಣ ಮಾಡಿ 15 ನಿಮಿಷಗಳ ಕಾಲ ಪಾದಗಳನ್ನು ನೀರಿನಲ್ಲಿ ಇಡುವುದರಿಂದ ಮೃದುವಾಗುತ್ತದೆ.
* ಪೆಟ್ರೋಲಿಯಂ ಜೆಲ್ಲಿಗೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು. ಸ್ವಚ್ಛಗೊಳಿಸಿದ ಪಾದಗಳಿಗೆ ಈ ಮಿಶ್ರಣವನ್ನು ಹಚ್ಚುವುದರಿಂದ ಒಡೆದ ಪಾದಗಳ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ