
ಪ್ರತಿಯೊಬ್ಬರಿಗೂ ಸಹ ಜೀವನದಲ್ಲಿ ಯಶಸ್ಸನ್ನು (success) ಸಾಧಿಸುವ ಬಯಕೆ ಇದ್ದೇ ಇರುತ್ತದೆ. ಇದಕ್ಕಾಗಿ ಸಾಕಷ್ಟು ಪರಿಶ್ರಮವನ್ನು ಸಹ ಪಡುತ್ತಾರೆ. ಕೆಲವರು ಸ್ವಲ್ಪ ಕಠಿಣ ಪರಿಶ್ರಮದಿಂದ ಬೇಗನೆ ಯಶಸ್ಸನ್ನು ಸಾಧಿಸುತ್ತಾರೆ, ಆದರೆ ಇನ್ನೂ ಕೆಲವರು ಎಷ್ಟೇ ಪ್ರಯತ್ನಪಟ್ಟರೂ ವಿಫಲರಾಗುತ್ತಾರೆ. ಇದೇ ರೀತಿ ನಿಮಗೂ ಸಹ ಎಷ್ಟೇ ಪ್ರಯತ್ನಪಟ್ಟರೂ ಯಶಸ್ಸು ಲಭಿಸುತ್ತಿಲ್ವಾ, ಹಾಗಿದ್ರೆ ಅಂತಹ ಸಂದರ್ಭಗಳಲ್ಲಿ, ನಿಮ್ಮ ಗುರಿಗಳನ್ನು ಸಾಧಿಸಲು ವಿದ್ವಾಂಸ ಆಚಾರ್ಯ ಚಾಣಕ್ಯರ ಚಾಣಕ್ಯರ ಸಲಹೆಗಳನ್ನು ಪಾಲಿಸಿ. ಅದರಲ್ಲೂ ಚಾಣಕ್ಯರು ತಿಳಿಸಿಕೊಟ್ಟಿರುವ ಈ ಮೂರು ಸಲಹೆಗಳನ್ನು ಪಾಲಿಸಿದರೆ ಖಂಡಿತವಾಗಿಯೂ ಯಶಸ್ಸು ನಿಮ್ಮದಾಗುತ್ತದೆ.
ನಿಮ್ಮನ್ನು ನಿಯಂತ್ರಿಸಲು ಕಲಿಯಿರಿ: ಚಾಣಕ್ಯರು ಸ್ವಯಂ ಶಿಸ್ತು ವೈಯಕ್ತಿಕ ಬೆಳವಣಿಗೆಯ ಅಡಿಪಾಯ ಎಂದು ಒತ್ತಿ ಹೇಳಿದ್ದಾರೆ. ಯಾವುದೇ ವಿಷಯದಲ್ಲಿ ಆತುರ ಪಡದೆ ಸ್ವಯಂ ನಿಯಂತ್ರಣ ಮತ್ತು ದೀರ್ಘಕಾಲೀನ ಗುರಿಗಳ ಮೇಲೆ ಕೇಂದ್ರೀಕರಿಸುವ ಸಾಮರ್ಥ್ಯವು ಯಶಸ್ಸಿಗೆ ಕಾರಣವಾಗುತ್ತದೆ. ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬಲ್ಲ ಯಾವುದೇ ವ್ಯಕ್ತಿಯು ಏನನ್ನಾದರೂ ಸಾಧಿಸಬಹುದು ಮತ್ತು ಆತ ಯಾವುದೇ ಕೆಲಸವನ್ನು ಕೈಗೊಂಡಿದ್ದರೂ, ಅದನ್ನು ಆತ ಪೂರ್ಣಗೊಳಿಸುತ್ತಾನೆ. ಈ ಸ್ವಭಾವವೇ ಯಶಸ್ಸು ಹಾಗೂ ಶ್ರೀಮಂತಿಕೆಯ ಮೆಟ್ಟಿಲು.
ಅದೃಷ್ಟವನ್ನು ಅವಲಂಬಿಸುವುದನ್ನು ತಪ್ಪಿಸಿ: ಯಾವುದೇ ವ್ಯಕ್ತಿ ಯಶಸ್ವಿಯಾಗಲು ಸಂಪೂರ್ಣವಾಗಿ ಅದೃಷ್ಟವನ್ನು ಅವಲಂಬಿಸಬಾರದು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಅದೃಷ್ಟವನ್ನು ಅವಲಂಬಿಸುವ ಬದಲು ಪ್ರತಿಯೊಂದು ಸಂದರ್ಭದಲ್ಲೂ ಕಷ್ಟಪಟ್ಟು, ಯುಕ್ತಿಯಿಂದ ಕೆಲಸ ಮಾಡುವತ್ತ ಗಮನ ಹರಿಸಬೇಕು. ಯಶಸ್ಸಿಗಾಗಿ ನಿರಂತರ ಪ್ರಯತ್ನ ಮಾಡಬೇಕು. ಈ ರೀತಿ ಇದ್ದರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ.
ಇದನ್ನೂ ಓದಿ: ಚಾಣಕ್ಯರ ಪ್ರಕಾರ ಮಹಿಳೆಯರಿಗೆ ಇಷ್ಟವಾಗುವುದೇ ಈ ಗುಣಗಳಿರುವ ಪುರುಷರಂತೆ
ನಿಮ್ಮ ದೌರ್ಬಲ್ಯಗಳನ್ನು ಹೇಳಬೇಡಿ: ಯಾವುದೇ ಸಂದರ್ಭದಲ್ಲೂ ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯ ಅಥವಾ ದೌರ್ಬಲ್ಯಗಳನ್ನು ಇನ್ನೊಬ್ಬರಿಗೆ ಬಹಿರಂಗಪಡಿಸಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹೀಗೆ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸುವುದರಿಂದ ವಿರೋಧಿಗಳು ಹೆಚ್ಚಾಗುತ್ತಾರೆ ಜೊತೆಗೆ ಕೆಲವರು ಇದರ ಲಾಭವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಇದು ಖಂಡಿತವಾಗಿಯೂ ನಿಮ್ಮ ಯಶಸ್ಸಿಗೆ ಮುಳ್ಳಾಗುತ್ತದೆ.
ಇದಲ್ಲದೆ, ಆಚಾರ್ಯ ಚಾಣಕ್ಯರು ಹಣಕಾಸಿನ ನಷ್ಟಗಳನ್ನು ಬಹಿರಂಗಪಡಿಸಬಾರದು, ವೈಯಕ್ತಿಕ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸಹ ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ