ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ ಸ್ನೇಹವನ್ನು ಬೆಳೆಸಿಕೊಳ್ಳುವಾಗ, ಒಬ್ಬ ವ್ಯಕ್ತಿಯಲ್ಲಿ ಸಹಾಯವನ್ನು ಕೇಳುವಾಗ ಆ ವ್ಯಕ್ತಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಮುಖ್ಯ. ಅದಲ್ಲದೇ, ನಮ್ಮ ಸುತ್ತ ಸದಾ ಶತ್ರುವಿಗಿಂತಲೂ ಅಪಾಯಕಾರಿಯಾದ ವ್ಯಕ್ತಿಗಳು ಇರುತ್ತಾರೆ. ಅಪ್ಪಿತಪ್ಪಿಯೂ ಅಂತಹವರಿಂದ ಸಹಾಯ ಕೇಳಬೇಡಿ. ಸಾಧ್ಯವಾದರೆ ಈ ಗುಣಗಳಿಗಿರುವ ಜನರಿಂದ ಸಂಪೂರ್ಣವಾಗಿ ದೂರವಿದ್ದರೆ ಒಳಿತು ಎನ್ನುತ್ತಾರೆ ಚಾಣಕ್ಯ.
* ನೀಚ ಜನರಿಂದ ದೂರವಿರಿ : ಚಾಣಕ್ಯನು ಹೇಳುವಂತೆ ಜೀವನದಲ್ಲಿ ನೀಚ ಅಥವಾ ಕೆಟ್ಟ ಬುದ್ಧಿಯನ್ನು ಹೊಂದಿದ ವ್ಯಕ್ತಿಯನ್ನು ಎಂದಿಗೂ ನಂಬಬಾರದಂತೆ. ಈ ವ್ಯಕ್ತಿಗಳು ಒಳ್ಳೆಯದನ್ನು ಮಾಡುವ ಬದಲು ನಿಮ್ಮನ್ನು ತೊಂದರೆಗೆ ಸಿಲುಕಿಸುವುದೇ ಹೆಚ್ಚು. ಇಂತಹ ವ್ಯಕ್ತಿಗಳು ತಮ್ಮ ಸ್ವಂತ ಲಾಭಕ್ಕಾಗಿ ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಶತ್ರುಗಳು ಎದುರಿನಿಂದ ಮೋಸ ಮಾಡಿದರೆ ಈ ಜನರು ನಿಮಗೆ ಗೊತ್ತಿಲ್ಲದೇನೇ ಒಳ್ಳೆಯವರಂತೆ ನಟಿಸಿ ಸ್ವಾರ್ಥಕ್ಕಾಗಿ ಬೆನ್ನ ಹಿಂದಿನಿಂದಲೂ ಚೂರಿ ಹಾಕುವ ಗುಣವನ್ನು ಹೊಂದಿರುತ್ತಾರೆ.
* ಕೋಪಿಸಿಕೊಳ್ಳುವ ಜನರಿಂದ ಅಂತರ ಕಾಯ್ದುಕೊಳ್ಳಿ : ಕೋಪ ಗೊಳ್ಳುವವರಿಂದ ಯಾವಾಗಲೂ ದೂರವಿರುವುದು ಉತ್ತಮ. ಸಿಟ್ಟನ್ನು ಹೊರಹಾಕುವ ವ್ಯಕ್ತಿಯು ಯಾವುದೇ ಸಮಯದಲ್ಲಿ ತನಗೆ ಅಥವಾ ಇತರರಿಗೆ ಹಾನಿ ಮಾಡಬಹುದು. ಕೋಪಗೊಂಡ ವ್ಯಕ್ತಿಯು ಸರಿ ಮತ್ತು ತಪ್ಪುಗಳ ಬಗ್ಗೆ ಯೋಚನೆ ಮಾಡುವುದನ್ನು ಮರೆತು ಬಿಡುತ್ತಾನೆ. ಕೋಪದ ಕೈಗೆ ಬುದ್ಧಿಕೊಟ್ಟು ಹಾನಿ ಮಾಡುತ್ತಾರೆ. ಇಂತಹವರ ಸಹವಾಸ ಮಾಡುವುದರಿಂದ ನಿಮಗೂ ಕೂಡ ತೊಂದರೆಯಾಗುವುದು ಖಚಿತ ಎನ್ನುತ್ತಾನೆ ಚಾಣಕ್ಯ.
* ದುರಾಸೆ ಮತ್ತು ಅಸೂಯೆ ಪಡುವ ವ್ಯಕ್ತಿಗಳ ಸಹವಾಸ ಬೇಡ : ಕೆಲವರಿಗೆ ಅತಿಯಾದ ದುರಾಸೆ ಮತ್ತು ಅಸೂಯೆಯಿರುತ್ತದೆ. ಈ ವ್ಯಕ್ತಿಗಳಿಂದ ಯಾವಾಗಲೂ ಅಂತರವನ್ನು ಕಾಯ್ದುಕೊಳ್ಳಬೇಕು. ಅಪ್ಪಿತಪ್ಪಿಯೂ ಅಂಥವರಿಂದ ಸಹಾಯ ಪಡೆಯಬಾರದು. ಹೊಟ್ಟೆಕಿಚ್ಚಿನಿಂದ ಈ ವ್ಯಕ್ತಿಗಳು ಕೆಟ್ಟದನ್ನು ಮಾಡುವುದೇ ಹೆಚ್ಚು. ಈ ಗುಣಸ್ವಭಾವ ಹೊಂದಿರುವ ವ್ಯಕ್ತಿಯೂ ಸರಿ ಮತ್ತು ತಪ್ಪುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ತನ್ನ ಸುತ್ತಮುತ್ತಲಿನವರ ಪ್ರಗತಿಯಲ್ಲಿ ಸಂತೋಷವನ್ನು ಕಾಣುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ