
ಪ್ರತಿಯೊಬ್ಬರಿಗೂ ನೆಮ್ಮದಿಯ ತಾಣ ಮನೆಯೇ ಆಗಿರುತ್ತದೆ. ಆದರೆ ಮನೆಯಲ್ಲಿ ನಡೆಯುವ ಮನಸ್ತಾಪ, ಜಗಳಗಳಿಂದ ಮನೆಯ ನೆಮ್ಮದಿಯೇ ಹಾಳಾಗುತ್ತದೆ. ತಪ್ಪು ಗ್ರಹಿಕೆ, ಮಾತಿಗೆ ಮಾತು ಬೆಳೆಯುವುದು ಇತ್ಯಾದಿ ಸಣ್ಣಪುಟ್ಟ ಕಾರಣಗಳಿಗೆ ವಾಗ್ವಾದ, ಜಗಳಗಳು (conflicts) ಏರ್ಪಡುತ್ತವೆ. ಇದು ಸಂಬಂಧದ ಸಾಮರಸ್ಯವನ್ನೇ ಹಾಳು ಮಾಡುತ್ತವೆ. ಈ ರೀತಿ ಘರ್ಷಣೆಗಳು ಉಂಟಾಗಲು, ಮನೆಯವರ ಮಧ್ಯೆಯೇ ಮನಸ್ತಾಪ ತಲೆದೋರಲು ನಾವು ಮಾಡುವಂತಹ ಕೆಲವೊಂದು ತಪ್ಪುಗಳೇ ಮುಖ್ಯ ಕಾರಣ. ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಬಹುದು, ಕುಟುಂಬ ಸದಸ್ಯರ ಸಾಮರಸ್ಯವನ್ನು ಮತ್ತಷ್ಟು ಬಲಪಡಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಿದ್ರೆ ಕೌಟುಂಬಿಕ ಕಲಹಗಳಿಗೆ ಕಾರಣವಾಗುವ ತಪ್ಪುಗಳು ಯಾವುವು ಎಂಬುದನ್ನು ನೋಡೋಣ.
ಸ್ವಾರ್ಥ ಭಾವನೆ: ನನಗೆ ಮಾತ್ರ ಬೇಕು, ನನ್ನಿಂದಲೇ ಎಲ್ಲಾ, ನನ್ನಿಂದಲೇ ಮನೆ ನಡೆಯುತ್ತಿದೆ ಎಂಬ ಸ್ವಾರ್ಥ ಮತ್ತು ಅಹಂ ಭಾವನೆಯಿಂದ ಮನಸ್ತಾಪಗಳು ತಲೆದೋರುತ್ತವೆ. ಸ್ವಂತ ಲಾಭಕ್ಕಾಗಿ ಮಾತ್ರ ಯೋಚಿಸುವುದರಿಂದ ಕುಟುಂಬದ ಐಕ್ಯತೆ ಹಾಳಾಗುತ್ತದೆ. ಹೀಗಿರುವಾಗ ನಾನು ಎಂಬ ಅಹಂಕಾರವನ್ನು ತ್ಯಜಿಸಿ ನಾವು, ನಮಗಾಗಿ ಎಂದು ಒಟ್ಟಾಗಿ ಯೋಚಿಸಿದಾಗ ಮಾತ್ರ ಮನೆಯಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಚಾಣಕ್ಯ ಹೇಳಿದ್ದಾರೆ.
ಅಗೌರವ ಮತ್ತು ನಿರ್ಲಕ್ಷ್ಯ: ಅಗೌರವ ತೋರುವುದು, ಮನೆಯವರ ಭಾವನೆಗಳನ್ನು ನಿರ್ಲಕ್ಷಿಸುವುದು, ಅವರ ಭಾವನೆಗಳಿಗೆ ಬೆಲೆ ಕೊಡದಿರುವುದು ಇವೆಲ್ಲವು ಹತಾಶೆ ಮತ್ತು ಕೋಪದ ಭಾವನೆ ಮೂಡಲು ಕಾರಣವಾಗುತ್ತದೆ. ಈ ಕಾರಣದಿಂದಾಗಿ ಸಂಬಂಧದಲ್ಲಿ ಬಿರುಕು ಮೂಡಿ ಮನಸ್ತಾಪಗಳು ಏರ್ಪಡುತ್ತವೆ ಎನ್ನುತ್ತಾರೆ ಚಾಣಕ್ಯ. ಹೀರುವಾಗ ಮನೆಯವರ ಮಾತನ್ನು ಆಲಿಸುವ ಮತ್ತು ಗೌರವಿಸುವ ಮೂಲಕ ಸಂಬಂಧಗಳನ್ನು ಬಲಪಡಿಸಬಹುದು.
ಸುಳ್ಳು ಮತ್ತು ವಂಚನೆ: ನಂಬಿಕೆಯು ಯಾವುದೇ ಸಂಬಂಧದ ಅಡಿಪಾಯವಾಗಿದೆ. ಹೀಗಿರುವಾಗ ನೀವು ಹೇಳುವ ಸಣ್ಣ ಸುಳ್ಳು, ವಂಚನೆಗಳು ಸಹ ಸಂಬಂಧದಲ್ಲಿ ಬಹುದೊಡ್ಡ ಬಿರುಕನ್ನು ಮೂಡಿಸಬಹುದು. ಚಾಣಕ್ಯನ ಪ್ರಕಾರ, ಸುಳ್ಳು ಮತ್ತು ವಂಚನೆಯು ಕುಟುಂಬಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಪ್ರಾಮಾಣಿಕತೆ ತುಂಬಿದ ಮನೆಯಲ್ಲಿ ಮಾತ್ರ ಶಾಂತಿ ನೆಲೆಸುತ್ತದೆ.
ಮೂರನೇ ವ್ಯಕ್ತಿಯ ಹಸ್ತಕ್ಷೇಪ: ಮನೆಯ ವಿಷಯಗಳಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಲು ಅವಕಾಶ ನೀಡುವುದು ಅತ್ಯಂತ ಅಪಾಯಕಾರಿ ಎಂದು ಚಾಣಕ್ಯ ಎಚ್ಚರಿಸಿದ್ದಾರೆ. ಮೂರನೇ ವ್ಯಕ್ತಿ ನಿಮ್ಮ ಮನೆಯ ವಿಷಯಗಳಿಗೆ ಮಧ್ಯಪ್ರವೇಶಿಸಿದಾಗ ಖಂಡಿತವಾಗಿ ಸಮಸ್ಯೆಗಳು ಉದ್ಭವಿಸುತ್ತವೆ, ಮನೆಯವರ ಸಂಬಂಧ ಹಾಳಾಗುತ್ತದೆ. ಈ ರೀತಿಯ ತಪ್ಪುಗಳಾಗದಂತೆ ನೋಡಿಕೊಳ್ಳಿ.
ಅಹಂಕಾರ ಮತ್ತು ಕೋಪ: ನಾನೇ ಸರಿ, ನಾನು ಬೇರೆಯವರ ಮಾತನ್ನು ಕೇಳುವುದಿಲ್ಲ ಎಂಬ ದುರಹಂಕಾರ ಮತ್ತು ಕ್ಷಣಿಕ ಕೋಪ ಕುಟುಂಬದ ನೆಮ್ಮದಿಯನ್ನೇ ನಾಶ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ. ಹಾಗಾಗಿ ಅಹಂಕಾರವನ್ನು ಪಕ್ಕಕ್ಕಿಟ್ಟು ಮನೆಯವರ ಜೊತೆ ತಾಳ್ಮೆಯಿಂದ ಮತ್ತು ಪ್ರೀತಿಯಿಂದ ನಡೆದುಕೊಂಡಾಗ ಮಾತ್ರ ಇಡೀ ಕುಟುಂಬ ಸಂತೋಷದಿಂದಿರಲು ಸಾಧ್ಯ.
ಇದನ್ನೂ ಓದಿ: ಸಾಲ ತೆಗೆದುಕೊಳ್ಳುವ, ನೀಡುವ ಮೊದಲು ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪಾಲಿಸಿ
ಅತಿಯಾದ ನಿರೀಕ್ಷೆಗಳು: ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹ ಮನೆಯಲ್ಲಿ ಮನಸ್ತಾಪಗಳು ಉಂಟಾಗಲು ಕಾರಣವಾಗಬಹುದು. ಹೌದು ಮನೆಯವರು ನಾನು ಹೇಳಿದಂತೆಯೇ ನಡೆದುಕೊಳ್ಳಬೇಕು, ನನಗೆ ಅದು ಕೊಡ್ಬೇಕು, ಇದು ಕೊಡ್ಬೇಕು ಅಂತೆಲ್ಲಾ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡಾಗ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇದು ನಂತರ ಜಗಳಗಳಿಗೆ ಕಾರಣವಾಗುತ್ತದೆ.
ಹಣದ ಹಿಂದೆ ಓಡುವುದು: ಸಂಬಂಧಕ್ಕೆ ಬೆಲೆ ಕೊಡುವ ಬದಲು ಹಣ, ಆಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಕುಟುಂಬದ ನೆಮ್ಮದಿಯೇ ಹಾಳಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸಬೇಕೆಂದರೆ ಕುಟುಂಬ ಮತ್ತು ಸಂಬಂಧಗಳಿಗೆ ಮೊದಲ ಆದ್ಯತೆ ನೀಡಬೇಕು ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ