Clay Pots: ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರ ಸೇವನೆಯಿಂದ ಇವೆ ಹಲವು ಪ್ರಯೋಜನಗಳು
ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯಕರ ಜೀವನ ನಡೆಸಬೇಕೆಂಬ ಉದ್ದೇಶದಿಂದ ಭೂತಕಾಲದ ಕಡೆಗೆ ತಿರುಗಿ ನೋಡತೊಡಗಿದ್ದಾರೆ. ಹೌದು ದೈನಂದಿನ ವ್ಯಾಯಾಮಗಳನ್ನು ಮಾಡುವುದರ ಜೊತೆಗೆ ಆರೋಗ್ಯಕರ ಆಹಾರ ಸೇವನೆ ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಹಾರ ಬೇಯಿಸಲು ಸಾಂಪ್ರದಾಯಿಕ ಪಾತ್ರೆಗಳನ್ನು ಬಳಸಲು ಆರಂಭಿಸಿದ್ದಾರೆ. ಸಾಂಪ್ರದಾಯಿಕ ಪಾತ್ರೆಗಳಲ್ಲಿ ಒಂದಾದ ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಅಡುಗೆಗಳು ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಾಗಿದೆ. ಇದೇ ಕಾರಣಕ್ಕೆ ಇದೀಗ ಹೆಚ್ಚಿನವರು ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವತ್ತಾ ಮುಖ ಮಾಡಿದ್ದಾರೆ.
ಅಡುಗೆಯಿಂದ ಹಿಡಿದು ಕುಡಿಯುವ ನೀರನ್ನು ಸಂಗ್ರಹಿಸಿಡಲು ಮಣ್ಣಿನ ಪಾತ್ರೆಗಳನ್ನೇ ಬಳಸುತ್ತಿದ್ದ ಕಾಲವೊಂದಿತ್ತು. ಆದರೆ ಕಾಲ ಕಳೆದಂತೆ ಆಧುನೀಕರ, ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಣ್ಣಿನ ಪಾತ್ರೆಗಳು ಮೂಲೆಗುಂಪಾಗಿ ನಾನ್ ಸ್ಟಿಕ್, ಸ್ಟೀಲ್, ಅಲ್ಯುಮಿನಿಯಂ ಇತ್ಯಾದಿ ಉಕ್ಕಿನ ಪಾತ್ರೆಗಳು ಅಡುಗೆ ಮನೆಯಲ್ಲಿ ಸ್ಥಾನ ಪಡೆದವು. ಈ ಪಾತ್ರೆಗಳಲ್ಲಿ ಅಡುಗೆಗಳನ್ನು ಬಹಳ ಬೇಗನೇ ಬೇಯಿಸಬಹುದು, ಆದರೆ ಇದು ಆರೋಗ್ಯದ ದೃಷಿಯಿಂದ ಅಷ್ಟೇನೂ ಒಳ್ಳೆಯದಲ್ಲ. ಹೌದು ಇಂತಹ ಉಕ್ಕಿನ ಪಾತ್ರೆಗಳು ಆಹಾರದ ಪೋಷಕಾಂಶಗಳನ್ನು ಕಡಿಮೆ ಮಾಡುವುದರ ಜೊತೆಗೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಿದ್ದರೂ ಕೂಡಾ ಇಂದಿಗೂ ಬಹುತೇಕ ಎಲ್ಲಾ ಮನೆಗಳಲ್ಲೂ ಇಂತಹ ಪಾತ್ರೆಗಳಲ್ಲೇ ಅಡುಗೆಯನ್ನು ಮಾಡುತ್ತಿದ್ದಾರೆ.
ಬಹುಶಃ ಇದೇ ಕಾರಣಕ್ಕೆ ಇರಬಹುದು ನಮ್ಮ ಹಿರಿಯರಿಗೆ ಹೋಲಿಸಿದರೆ ಇಂದಿನ ಜನರು ಹೆಚ್ಚಾಗಿ ಆಗಾಗ್ಗೆ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಜ್ಞರು ಮಣ್ಣಿನ ಪಾತ್ರೆಗಳಲ್ಲಿ ಅಡುಗೆಯನ್ನು ಮಾಡಿ ಎಂದು ಟಿಪ್ಸ್ ನೀಡುತ್ತಿದ್ದಾರೆ. ಬನ್ನಿ ಹಾಗಾದರೆ ಮಣ್ಣಿನ ಪಾತ್ರೆಗಳಿಂದ ಅಡುಗೆ ಮಾಡುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು ಯಾವುವು ಎಂಬುದನ್ನು ತಿಳಿಯೋಣ.
ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:
-
ಪೋಷಕಾಂಶಗಳನ್ನು ಒದಗಿಸುತ್ತದೆ:
ನಾನ್ ಸ್ಟಿಕ್, ಅಲ್ಯೂಮಿನಿಯಂ ಪಾತ್ರೆಗಳಿಗಿಂತ ಮಣ್ಣಿನ ಪಾತ್ರೆಗಳು ಆರೋಗ್ಯಕ್ಕೆ ಹೆಚ್ಚು ಸುರಕ್ಷಿತ. ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಮತ್ತು ಮೆಗ್ನೇಸಿಯಂ ನಂತಹ ಖನಿಜಗಳು ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರದಲ್ಲಿ ಕಂಡುಬರುತ್ತವೆ. ಇಂತಹ ಪೋಷಕಾಂಶಭರಿತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗುವುದಿಲ್ಲ.
-
ಹೃದಯಕ್ಕೆ ಒಳ್ಳೆಯದು:
ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಈ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಲು ಕಡಿಮೆ ಎಣ್ಣೆಯನ್ನು ಬಳಸಲಾಗುತ್ತದೆ ಈ ಕಾರಣದಿಂದ ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದು ಹೃದಯದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
-
ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ:
ಮಧುಮೇಹಿಗಳು ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಆಹಾರವನ್ನು ತಿನ್ನಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಮಣ್ಣಿನ ಪಾತ್ರೆಯಲ್ಲಿ ಆಹಾರವನ್ನು ನಿಧಾನವಾಗಿ ಮತ್ತು ಸರಿಯಾದ ರೀತಿಯಲ್ಲಿ ಬೇಯಿಸಲಾಗುತ್ತದೆ. ಇಂತಹ ಆಹಾರವನ್ನು ಸೇವನೆ ಮಾಡುವುದರಿಂದ ಇನ್ಸುಲಿನ್ ಉತ್ಪಾದನೆಯು ಸಮತೋಲನದಲ್ಲಿರುತ್ತದೆ. ಇದಲ್ಲದೆ ಇದು ದೇಹದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
-
ಮಲಬದ್ಧತೆ ಮತ್ತು ಹೊಟ್ಟೆ ಸಂಬಂಧಿ ಸಮಸ್ಯೆಗಳಿಂದ ಪರಿಹಾರ ಒದಗಿಸುತ್ತದೆ:
ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವನ್ನು ತಿನ್ನುವುದರಿಂದ ಅಥವಾ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದರಿಂದ ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲದೆ ಜೀರ್ಣಕ್ರಿಯೆ ಪ್ರಕ್ರಿಯೆಯನ್ನೂ ಆರೋಗ್ಯಕರವಾಗಿರಿಸುತ್ತದೆ.
-
ಪಿ.ಹೆಚ್ ಮಟ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ:
ನೀವು ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಿದರೆ, ಅದು ಪಿ.ಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ ಮಣ್ಣೀನ ಕ್ಷಾರೀಯ ಸ್ವಭಾವವು ಆಹಾರದಲ್ಲಿರುವ ಆಮ್ಲದೊಂದಿಗೆ ಪ್ರತಿಕ್ರಿಯಿಸುತ್ತದೆ, ಇದರಿಂದಾಗಿ pH ಮಟ್ಟ ನಿರ್ವಹಿಸಲ್ಪಡುತ್ತದೆ.
-
ಆಹಾರದ ಪರಿಮಳ ಮತ್ತು ಸ್ವಾದವನ್ನು ಹೆಚ್ಚಿಸುತ್ತದೆ:
ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಅದರ ರುಚಿ ಸಂಪೂರ್ಣವಾಗಿ ಬದಲಾಗುತ್ತದೆ. ವಾಸ್ತವವಾಗಿ ಮಣ್ಣು ಕ್ಷಾರೀಯ ಗುಣವನ್ನು ಹೊಂದಿದೆ ಮತ್ತು ಮಣ್ಣಿನ ಮಡಕೆಗಳು ಆಹಾರದ ಪೋಷಕಾಂಶಗಳನ್ನು ಹಾಗೆಯೇ ಇರಿಸುತ್ತವೆ. ಆದ್ದರಿಂದ ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ