Cooking Tips : ಚಪಾತಿ ಹಿಟ್ಟು ನಾದುವಾಗ ಕೈಗೆ ಅಂಟಿಕೊಳ್ಳುತ್ತಿದ್ದರೆ ಈ ಕೆಲಸ ಮೊದ್ಲು ಮಾಡಿ
ಕೆಲವರಿಗೆ ಚಪಾತಿಯೆಂದರೆ ತುಂಬಾನೇ ಫೇವರಿಟ್. ಅದರಲ್ಲಿ ಫಿಟ್ ನೆಸ್ ಕಡೆಗೆ ಗಮನ ಕೊಡುವವರು ಹೆಚ್ಚಾಗಿ ಇದನ್ನೇ ಸೇವಿಸುತ್ತಾರೆ. ಆದರೆ ಈ ಚಪಾತಿ ಮಾಡುವುದೆಂದರೆ ಮಹಿಳೆಯರಿಗೆ ಕಿರಿಕಿರಿಯ ಕೆಲಸ. ಅದಲ್ಲದೇ ಹಿಟ್ಟು ನಾದುವಾಗ ಕೈಗೆ ಹಿಟ್ಟು ಅಂಟಿಕೊಂಡು ತೆಗೆಯುವುದೇ ದೊಡ್ಡ ಕೆಲಸ. ಆದರೆ ಹಿಟ್ಟನ್ನು ಕೈಗಳಿಗೆ ಅಂಟಿಕೊಳ್ಳದಂತೆ ನಾದಲು ಹಾಗೂ ಅಂಟಿಕೊಂಡಿರುವ ಜಿಗುಟಾದ ಹಿಟ್ಟನ್ನು ತೆಗೆದುಹಾಕಲು ಸುಲಭವಾದ ಮಾರ್ಗವಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಬೆಳಗ್ಗೆ ತಿಂಡಿಗೆ ಚಪಾತಿ, ಪೂರಿ ಮಾಡಿದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಚಪಾತಿ ಮೃದುವಾಗಿ ಬರಬೇಕೆಂದರೆ ಹಿಟ್ಟನ್ನು ನಾದಿಕೊಳ್ಳುವ ವಿಧಾನವು ಬಹಳ ಮುಖ್ಯವಾಗುತ್ತದೆ. ಹಿಟ್ಟನ್ನು ಹೇಗೆ ನಾದಿಕೊಳ್ಳುತ್ತೀರಿ ಎನ್ನುವುದರ ಮೇಲೆ ಚಪಾತಿ ಮೃದುತ್ವವು ಅಡಗಿರುತ್ತದೆ. ಆದರೆ ಕೆಲವೊಮ್ಮೆ ನೀರು ಹೆಚ್ಚಾಗಿ ಹಿಟ್ಟನ್ನು ಕೈಗೆ ಅಂಟಿಕೊಳ್ಳುತ್ತದೆ. ಏನೇ ಮಾಡಿದ್ರು ಕೈಗೆ ಅಂಟಿಕೊಂಡ ಜಿಗುಟಾದ ಹಿಟ್ಟು ಮಾತ್ರ ಹೋಗುವುದಿಲ್ಲ. ಹಿಟ್ಟು ನಾದಿಕೊಳ್ಳುವಾಗ ಈ ರೀತಿಯಾದರೆ ಈ ಕೆಲವು ವಿಧಾನಗಳಿಂದ ಕೈಗೆ ಅಂಟಿಕೊಂಡ ಹಿಟ್ಟನ್ನು ತೆಗೆಯಬಹುದು.
- ನೀರಿನ ಪ್ರಮಾಣ ಸರಿಯಾಗಿರಲಿ : ಚಪಾತಿ ಅಥವಾ ಪೂರಿ ಮಾಡಲೆಂದು ಗೋಧಿ ಅಥವಾ ಮೈದಾ ಹಿಟ್ಟನ್ನು ಕಲಸುವಾಗ ಆರಂಭದಲ್ಲಿ ಹೆಚ್ಚುವರಿ ನೀರು ಸೇರಿಸುವುದರಿಂದ ಹಿಟ್ಟು ನಿಮ್ಮ ಕೈಗಳಿಗೆ ಅಂಟಿಕೊಳ್ಳುತ್ತದೆ. ಆದರಿಂದ ಹಿಟ್ಟು ನಾದುವಾಗ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ ಬೆರೆಸಿಕೊಳ್ಳಿ. ಹೀಗೆ ಮಾಡಿದರೆ ಹಿಟ್ಟು ಕೈಗಳಿಗೆ ಅಂಟಿಕೊಳ್ಳುವುದಿಲ್ಲ. ಕೊನೆಯಲ್ಲಿ ಒಂದು ಚಮಚ ಎಣ್ಣೆ ಸೇರಿಸಿ ಹಿಟ್ಟನ್ನು ಚೆನ್ನಾಗಿ ನಾದಿಕೊಂಡರೆ ಅದು ಕೈಯಲ್ಲಿರುವ ಜಿಗುಟಾದ ಹಿಟ್ಟನ್ನು ಬೇರ್ಪಡಿಸುತ್ತದೆ.
- ಒಣ ಹಿಟ್ಟನ್ನು ಬಳಸಿ : ಹಿಟ್ಟು ನಿಮ್ಮ ಕೈಗಳಿಗೆ ಅಂಟಿಕೊಳ್ಳದಂತೆ ತಡೆಯಲು ಒಂದು ಮಾರ್ಗವೆಂದರೆ ಒಣ ಹಿಟ್ಟನ್ನು ಬಳಸುವುದು . ಹಿಟ್ಟು ನಿಮ್ಮ ಬೆರಳುಗಳಿಗೆ ಅಂಟಿಕೊಂಡರೆ, ಅವುಗಳ ಮೇಲೆ ಸ್ವಲ್ಪ ಒಣ ಹಿಟ್ಟನ್ನು ಸಿಂಪಡಿಸಿ. ನಂತರ ನಿಧಾನವಾಗಿ ನಿಮ್ಮ ಕೈಗಳನ್ನು ಒಟ್ಟಿಗೆ ಉಜ್ಜಿದಾಗ ಜಿಗುಟಾದ ಹಿಟ್ಟು ಸಡಿಲಗೊಳ್ಳಲು ಪ್ರಾರಂಭಿಸುವುದನ್ನು ನೀವು ನೋಡುತ್ತೀರಿ. ಒಣ ಹಿಟ್ಟು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ, ಇದು ನಂತರ ಹಿಟ್ಟನ್ನು ಬೆರೆಸಲು ಸುಲಭವಾಗುತ್ತದೆ. ಆದರೆ ಅದನ್ನು ಅತಿಯಾಗಿ ಬಳಸದಂತೆ ಎಚ್ಚರವಹಿಸಿ.
- ಕೈಗೆ ಎಣ್ಣೆ ಹಚ್ಚಿಕೊಳ್ಳಿ : ನಿಮ್ಮ ಕೈಗಳ ಮೇಲಿನ ಹಿಟ್ಟನ್ನು ಸಂಪೂರ್ಣವಾಗಿ ತೆಗೆಯಲು ಎಣ್ಣೆ ಸಹಕಾರಿಯಾಗಿದೆ. ಗೋಧಿ ಅಥವಾ ಮೈದಾ ಹಿಟ್ಟನ್ನು ನಾದುವಾಗ ಕೈಗಳಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಿ, ಹೀಗೆ ಮಾಡಿದ್ರೆ ಹಿಟ್ಟು ಕೈಗಳಿಗೆ ಅಂಟಿಕೊಳ್ಳುವುದಿಲ್ಲ. ನಾದಿದ ಬಳಿಕ ಕೂಡ ಎಣ್ಣೆ ಹಚ್ಚಿಕೊಂಡರೆ ಕೈಗೆ ಅಂಟಿರುವ ಹಿಟ್ಟನ್ನು ಸುಲಭವಾಗಿ ತೆಗೆದು ಹಾಕಲು ಸಹಾಯ ಮಾಡುತ್ತದೆ.
- ತಣ್ಣೀರಿನಿಂದ ಕೈ ತೊಳೆಯಿರಿ : ಬಿಸಿ ನೀರಿನಿಂದ ಕೈ ತೊಳೆಯುವುದರಿಂದ ಕೈಗೆ ಅಂಟಿಕೊಂಡ ಹಿಟ್ಟು ಇನ್ನಷ್ಟು ಜಿಗುಟಾಗುತ್ತದೆ. ಹೀಗಾಗಿ ಐಸ್ ಕ್ಯೂಬ್‌ಗಳು ಅಥವಾ ತಣ್ಣೀರಿನಿಂದ ಕೈ ತೊಳೆದರೆ ಕೈಗಳಿಗೆ ಅಂಟಿಕೊಂಡಿರುವ ಹಿಟ್ಟನ್ನು ಸುಲಭವಾಗಿ ತೆಗೆದುಹಾಕಬಹುದು.
- ಉಪ್ಪು ಅಥವಾ ಸಕ್ಕರೆ ಬಳಸಿ : ಈ ಮೇಲಿನ ಎಲ್ಲಾ ವಿಧಾನಗಳನ್ನು ಬಳಸಿದ ನಂತರವೂ ಹಿಟ್ಟು ನಿಮ್ಮ ಕೈಗಳಿಗೆ ಅಂಟಿಕೊಂಡಿದ್ದರೆ, ಸ್ವಲ್ಪ ಸಕ್ಕರೆ ಅಥವಾ ಉಪ್ಪನ್ನು ತೆಗೆದುಕೊಂಡು ನಿಮ್ಮ ಬೆರಳುಗಳ ನಡುವೆ ಲಘುವಾಗಿ ಉಜ್ಜಿಕೊಳ್ಳಿ. ಹೀಗೆ ಮಾಡಿದ್ರೆ ಅಂಟಿಕೊಂಡಿರುವ ಹಿಟ್ಟು ಹೋಗುವುದಲ್ಲದೆ, ಇದು ಆರೋಗ್ಯಕರ ಮಾರ್ಗವಾಗಿದೆ.
- ಒಣಗಲು ಬಿಡಿ : ನೀವು ಬೇಗನೆ ಕೈಗಳನ್ನು ಸ್ವಚ್ಛಗೊಳಿಸಬೇಕೆಂದು ಕೊಂಡರೆ ಹಿಟ್ಟನ್ನು ಕೆಲವು ಸೆಕೆಂಡುಗಳ ಕಾಲ ಒಣಗಲು ಬಿಡಿ. ಕೈಗೆ ಅಂಟಿಕೊಂಡ ಹಿಟ್ಟು ಗಟ್ಟಿಯಾಗುತ್ತಿದ್ದಂತೆ ಒಣಗಿದ ಭಾಗಗಳನ್ನು ತೆಗೆಯಿರಿ. ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ತಾಳ್ಮೆವಿರುವುದು ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




