ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಜಿಲೇಬಿ
ಜಿಲೇಬಿ ಎಂದಾಕ್ಷಣ ಹೆಚ್ಚಿನ ಜನರ ಬಾಯಲ್ಲಿ ನೀರೂರುತ್ತದೆ. ಚಿಕ್ಕ ಮಕ್ಕಳಿಂದ ಹಿಡುದು ವಯಸ್ಕರರವರೆಗೆ ಈ ಸಿಹಿ ತಿನಿಸು ಎಲ್ಲರಿಗೂ ಇಷ್ಟ. ಇನ್ನೇನೂ ಸ್ವಾತಂತ್ರ್ಯ ದಿನ ಹತ್ತಿರದಲ್ಲಿದೆ. ಈ ದಿವಸ ಏನಾದರೂ ಸಿಹಿ ತಯಾರಿಸಿ ಮನೆಯವರಿಗೆಲ್ಲಾ ಸಿಹಿಯೂಟ ಬಡಿಸಬೇಕೆಂಬ ಹಂಬಲವಿದೆಯೇ? ಹಾಗಿದ್ದರೆ ನೀವು ಮನೆಯಲ್ಲಿಯೇ ಸುಲಭವಾಗಿ ಗರಿಗರಿಯಾದ ಜಿಲೇಬಿ ತಯಾರಿಸಿ.

ಜಿಲೇಬಿ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಭಾರತದ ರಾಷ್ಟ್ರೀಯ ಸಿಹಿ ತಿನಿಸಾಗಿರುವ ಜಿಲೇಬಿಯನ್ನು ಇಷ್ಟಪಡದವರು ಯಾರು ಇಲ್ಲ. ಮಾರುಕಟ್ಟೆಯಲ್ಲಿ ಸಿಗುವ ಜಿಲೇಬಿ ಅಷ್ಟೇನೂ ಆರೋಗ್ಯಕರವಾಗಿರುವುದಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಹಾಗಾಗಿ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಜಿಲೇಬಿಯನ್ನು ಖರೀದಿಸಲು ಹೆಚ್ಚಿವರು ಹಿಂಜರಿಯುತ್ತಾರೆ. ಹೀಗಿರುವಾಗ ನೀವು ಮನೆಯಲ್ಲಿಯೇ ಗರಿಗರಿಯಾದ ಜಿಲೇಬಿ ಮಾಡಿ ಸವಿಯಬಹುದು. ಇನ್ನೇನು ಸ್ವಾತಂತ್ರ್ಯ ದಿನ ಹತ್ತಿರದಲ್ಲಿದೆ. ಈ ದಿನ ಏನದರೂ ಸಿಹಿ ತಿನಿಸು ತಯಾರಿಸಬೇಕೆಂಬ ಯೋಚನೆಯಲ್ಲಿದ್ದರೆ, ಮನೆಯಲ್ಲಿಯೇ ಸುಲಭವಾಗಿ ಜಿಲೇಬಿ ತಯಾರಿಸಿ. ಖಂಡಿತವಾಗಿಯೂ ಈ ಒಂದು ರೆಸಿಪಿ ನಿಮ್ಮ ಮನೆಮಂದಿಗೆಲ್ಲಾ ಇಷ್ಟವಾಗುತ್ತದೆ.
ಗರಿಗರಿಯಾದ ಜಿಲೇಬಿ ಮಾಡಲು ಬೇಕಾಗು ಸಾಮಾಗ್ರಿಗಳು
ಮೈದಾ ಹಿಟ್ಟು
ಎಣ್ಣೆ ಅಥವಾ ತುಪ್ಪ
ಕಾರ್ನ್ ಫ್ಲೋರ್ (ಜೋಳದ ಹಿಟ್ಟು)
ಬೇಕಿಂಗ್ ಪೌಡರ್
ಮೊಸರು
ಕೇಸರಿ ದಳ
ಸಕ್ಕರೆ
ಏಲಕ್ಕಿ ಪುಡಿ
ಜಿಲೇಬಿ ಮಾಡುವ ವಿಧಾನ:
ಜಿಲೇಬಿ ತಯಾರಿಸಲು ನೀವು ಮೊದಲು ಅದರ ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ನೀವು ಮೊದಲಿಗೆ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಅಡುಗೆ ಸೋಡಾ, ಕಾರ್ನ್ ಫ್ಲೋರ್ ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಅದಕ್ಕೆ ಸ್ವಲ್ಪ ಮೊಸರು ಸೇರಿಸಿ, ಹಿಟ್ಟು ಗಂಟುಕಟ್ಟಿಕೊಳ್ಳದಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಯವಾದ ಹಿಟ್ಟು ತಯಾರಾದ ಬಳಿಕ ಅದನ್ನು ಸುಮಾರು 1 ರಿಂದ 2 ಗಂಟೆಗಳ ಕಾಲ ಹಾಗೆಯೇ ಬಿಟ್ಟುಬಿಡಿ.
ಈಗ ನೀವು ಒಂದು ಪಾತ್ರೆ ತಗೆದುಕೊಂಡು ಅದಕ್ಕೆ ಒಂದು ಕಪ್ ಸಕ್ಕರೆ ಮತ್ತು ಎರಡು ಕಪ್ ನೀರು ಸೇರಿಸಿ ಹದವಾದ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ. ನಂತರ ಅದಕ್ಕೆ ಕೇಸರಿ ದಳವನ್ನು ಅಥವಾ ಕೇಸರಿ ದಳವಿಲ್ಲದಿದ್ದರೆ ಹಳದಿ ಬಣ್ಣ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಸಕ್ಕರೆ ಪಾಕವನ್ನು ಕುದಿಸಿ.
ಇದನ್ನೂ ಓದಿ: ನೀವು ಊಹಿಸಿದಷ್ಟು ಆರೋಗ್ಯಕರವಲ್ಲದ 5 ಆಹಾರ ಪದ್ಧತಿಗಳು
ಇದಾದ ಬಳಿಕ ಜಿಲೇಬಿ ಮಾಡಲು ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಎಣ್ಣೆ ಅಥವಾ ತುಪ್ಪ ಸೇರಿಸಿ. ಅದು ಕಾದ ಬಳಿಕ ನೀವು ಸಾಸ್ ಬಾಟಲ್ ಅಥವಾ ಒಂದು ಪ್ಲಾಸ್ಲಿಕ್ ಕವರ್ ಗೆ ಹಿಟ್ಟನ್ನು ಹಾಕಿ, ಅದರಲ್ಲಿ ಸಣ್ಣ ರಂಧ್ರ ಮಾಡಿ, ಹಿಟ್ಟನ್ನು ಸುರುಳಿಯಾಕಾರದಲ್ಲಿ ಕಾದ ಎಣ್ಣೆಯಲ್ಲಿ ಬಿಡಿ. ಅದನ್ನು ಎರಡು ಬದಿ ಬೇಯುವಂತೆ ಚೆನ್ನಾಗಿ ಹುರಿಯಿರಿ. ಜಿಲೇಬಿ ಎರಡೂ ಕಡೆ ಬೆಂದ ನಂತರ ಅದನ್ನು ಸಕ್ಕರೆ ಪಾಕದಲ್ಲಿ ಅದ್ದಿ. ಬಳಿಕ ಮನೆಯವರಿಗೆ ಬಡಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: