ಒಂದೊಂದು ಬಣ್ಣವು ಒಂದೊಂದು ಅರ್ಥವನ್ನು ನೀಡುತ್ತದೆ
ಬಣ್ಣಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಪ್ರತಿಯೊಬ್ಬರಿಗೂ ತಮ್ಮ ಇಷ್ಟದ ಬಣ್ಣವಿರುತ್ತದೆ. ಅದಲ್ಲದೇ ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಗಳ ಮೇಲೆ ಈ ಬಣ್ಣಗಳೂ ಪ್ರಭಾವವನ್ನು ಬೀರುತ್ತದೆ. ಯಾವುದಾದರೂ ವಸ್ತುಗಳನ್ನು ಖರೀದಿ ಮಾಡುವಾಗ ಮೊದಲು ಯಾವ ಬಣ್ಣವೆಂದು ನೋಡುತ್ತೇವೆ. ಅದರಲ್ಲಿಯೂ ಈ ಗಾಢವಾದ ಬಣ್ಣಗಳು ಬಹುಬೇಗ ಎಲ್ಲರನ್ನು ಆಕರ್ಷಿಸುತ್ತವೆ. ಆದರೆ ಮನೋವಿಜ್ಞಾನದ ಪ್ರಕಾರವು ಒಂದೊಂದು ಬಣ್ಣವು ಒಂದೊಂದು ಅರ್ಥವನ್ನು ನೀಡುತ್ತದೆ. ಹೀಗಾಗಿ ಗಾಢವಾದ ಬಣ್ಣದ ಉಡುಗೆ, ಉತ್ಪನ್ನಗಳನ್ನು ಆಯ್ಕೆ ಮಾಡುವ ಅದರ ಅರ್ಥವನ್ನು ತಿಳಿದುಕೊಂಡಿರುವುದು ಮುಖ್ಯ.
- ಕೆಂಪು : ಈ ಬಣ್ಣವು ಉತ್ಸಾಹ, ಶಕ್ತಿ, ಕುತೂಹಲದೊಂದಿಗೆ ಅಪಾಯವನ್ನೂ ಸೂಚಿಸುವ ಬಣ್ಣ ಇದಾಗಿದೆ. ಹೀಗಾಗಿ ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ನೀಡಲು ಈ ಬಣ್ಣಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
- ಬಿಳಿ : ಈ ಬಣ್ಣವು ಒಳ್ಳೆಯತನ, ಶುದ್ಧತೆ ಮತ್ತು ಪ್ರಾಮಾಣಿಕತೆಯನ್ನು ಸಾಂಕೇತಿಸುತ್ತದೆ. ಇದು ಪಾರದರ್ಶಕತೆಯನ್ನು ಪ್ರತಿಬಿಂಬಿಸುತ್ತದೆ. ಶುಚಿತ್ವವನ್ನು ಸೂಚಿಸುವ ಕಾರಣ ಆಸ್ಪತ್ರೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಈ ಬಣ್ಣವನ್ನೇ ಹೆಚ್ಚು ಬಳಕೆ ಮಾಡಲಾಗುತ್ತದೆ.
- ಕಿತ್ತಳೆ : ಸೃಜನಶೀಲತೆ, ಸಂತೋಷ, ಸ್ವಾತಂತ್ರ್ಯ, ಯಶಸ್ಸು ಮತ್ತು ಸಮತೋಲನವನ್ನು ಪ್ರತಿನಿಧಿಸುವ ಬಣ್ಣವಾಗಿದೆ. ಹೀಗಾಗಿ ವೆಬ್ಸೈಟ್ ಡಿಸೈನಿಂಗ್ನಲ್ಲಿ ಈ ಬಣ್ಣವನ್ನು ಹೆಚ್ಚು ಬಳಸಲಾಗುತ್ತದೆ.
- ಹಳದಿ : ಬಣ್ಣ ಸಂತೋಷ, ಸಕಾರಾತ್ಮಕತೆ ಹಾಗೂ ಸ್ವಾಭಾವಿಕತೆಯನ್ನು ಪ್ರತಿನಿಧಿಸುತ್ತದೆ. ಬೇಸಿಗೆಯಲ್ಲಿ ಸೂರ್ಯನು ಕಂಗೊಳಿಸುವುದೇ ಈ ಹಳದಿ ಬಣ್ಣದಲ್ಲಾಗಿದ್ದು, ಇದು ಉಷ್ಣತೆಯನ್ನು ಸೂಚಿಸುತ್ತದೆ.
- ಹಸಿರು : ಇದು ಸಮತೋಲನದ ಬಣ್ಣವಾಗಿದ್ದು, ಪ್ರಕೃತಿ, ಸಮೃದ್ಧಿ, ಫಲವತ್ತತೆ, ಅಭಿವೃದ್ಧಿ, ಆರೋಗ್ಯ, ಸಂಪತ್ತು, ಕ್ಷೇಮ, ಔದಾರ್ಯವನ್ನು ಪ್ರತಿನಿಧಿಸುತ್ತದೆ.
- ಗುಲಾಬಿ : ಮಹಿಳಾವಾದ, ಸಹಾನುಭೂತಿ, ಸ್ತ್ರೀತತ್ವ, ಲವಲವಿಕೆ ಮತ್ತು ಗಾಢಪ್ರೇಮವನ್ನು ಸಾಂಕೇತಿಸುತ್ತದೆ. ಈ ಬಣ್ಣವನ್ನು ಮಗುವಿನ ಆಟಿಕೆ, ಪ್ಯಾಕಿಂಗ್ ಗಳಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ. ಮುದ್ದಾದ, ವಿನೋದಪೂರ್ಣ ಎನ್ನುವ ಅರ್ಥ ನೀಡುವ ಕಾರಣ ಇದನ್ನು ಎಲ್ಲರೂ ಇಷ್ಟ ಪಡುತ್ತಾರೆ.
- ನೀಲಿ : ನೀಲಿ ಬಣ್ಣವು ಸ್ಥಿರ, ಸಾಮರಸ್ಯ, ಶಾಂತಿಯುತ ನಂಬಿಕೆ, ತರ್ಕ, ಕಲ್ಪನೆ ಹಾಗೂ ವಿಶ್ವಾಸಾರ್ಹವನ್ನು ಸಾಂಕೇತಿಸುತ್ತದೆ. ಹೀಗಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳ ಬಗ್ಗೆ ನಂಬಿಕೆ ಹುಟ್ಟಲು ಉತ್ಪನ್ನಗಳ ಲೋಗೋಗಳಲ್ಲಿ ನೀಲಿ ಬಣ್ಣವನ್ನೇ ಬಳಸುತ್ತಾರೆ.
- ನೇರಳೆ : ಸಂಪತ್ತು, ಬುದ್ಧಿವಂತಿಕೆ, ಅಧಿಕಾರ, ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುವ ಬಣ್ಣವಿದಾಗಿದೆ. ಅದಲ್ಲದೇ, ಹತಾಶೆ ಮತ್ತು ಅಹಂಕಾರವನ್ನು ಸೂಚಿಸುತ್ತದೆ.
- ಕಪ್ಪು : ಕಪ್ಪು ಬಣ್ಣವು ಧೈರ್ಯ, ರಹಸ್ಯ, ಒಳಸಂಚು, ಶಕ್ತಿ, ಅತೃಪ್ತಿ, ಕತ್ತಲೆ, ದುಃಖ, ನೋವನ್ನು ಪ್ರತಿನಿಧಿಸುತ್ತದೆ. ಈ ಬಣ್ಣವು ಶೋಕ ಹಾಗೂ ನೋವಿನ ಸಂಕೇತ ಎನ್ನುವ ಕಾರಣಕ್ಕೆ ಶುಭಕಾರ್ಯಗಳಲ್ಲಿ ಈ ಬಣ್ಣದ ಉಡುಪನ್ನು ಧರಿಸುವುದಿಲ್ಲ.
- ಕಂದು :ಈ ಬಣ್ಣವು ಶಕ್ತಿ, ವಿಶ್ವಾಸಾರ್ಹತೆ ಹಾಗೂ ಭೂಮಿತ್ವವನ್ನು ಪ್ರತಿನಿಧಿಸುತ್ತದೆ. ಭೂಮಿಯ ಅಂಶದೊಂದಿಗೆ ನೆಲದ ಭಾವನೆಯನ್ನು ಸೃಷ್ಟಿಸುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ