ಮಕ್ಕಳು ಓದಿದ್ದೆಲ್ಲವೂ ಬೇಗನೇ ಮರೆತು ಬಿಡುತ್ತಾರಾ? ಈ ಆಹಾರಗಳನ್ನು ನೀಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 14, 2024 | 4:06 PM

ಪರೀಕ್ಷೆ ಎಂದ ಕೂಡಲೇ ಮಕ್ಕಳಿಗಿಂತ ಹೆಚ್ಚು ಟೆನ್ಶನ್ ಹೆತ್ತವರಿಗೆ ಇರುತ್ತದೆ. ಮಕ್ಕಳ ಹಿಂದೆ ಬೀಳುತ್ತಾ ಓದು ಓದು ಎಂದು ಸದಾ ಒಂದೇ ಮಂತ್ರವನ್ನು ಜಪಿಸುತ್ತಾರೆ. ಆದರೆ ಪರೀಕ್ಷೆಯ ವೇಳೆಯಲ್ಲಿ ಓದಿದ್ದೆಲ್ಲವು ನೆನಪಿಗೆ ಬಾರದೆ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಮಕ್ಕಳಲ್ಲಿ ನೆನಪಿನ ಶಕ್ತಿಯ ಕೊರತೆ ಕಂಡು ಬಂದಲ್ಲಿ ನೆನಪಿನ ಶಕ್ತಿ ಹೆಚ್ಚಿಸುವ ಆಹಾರವನ್ನು ನೀಡುವುದು ಮುಖ್ಯ.

ಮಕ್ಕಳು ಓದಿದ್ದೆಲ್ಲವೂ ಬೇಗನೇ ಮರೆತು ಬಿಡುತ್ತಾರಾ? ಈ ಆಹಾರಗಳನ್ನು ನೀಡಿ
Follow us on

ಪರೀಕ್ಷೆಯೆಂದರೆ ಮಕ್ಕಳಿಗೆ ಭಯ, ಯಾರಪ್ಪ ಈ ಪರೀಕ್ಷೆಯನ್ನು ಕಂಡು ಹಿಡಿದದ್ದು ಎಂದು ಗೊಣಗುವುದನ್ನು ಕಾಣುತ್ತೇವೆ. ಇಇತ್ತ ಪರೀಕ್ಷೆಯ ಸಮಯ ಹತ್ತಿರ ಬಂದರೆ ಮಕ್ಕಳಷ್ಟೇ ಅಲ್ಲ, ಹೆತ್ತವರು ಕೂಡ ಊಟ ತಿಂಡಿ ನಿದ್ದೆ ಬಿಡುತ್ತಾರೆ. ಕೆಲವು ಮಕ್ಕಳು ಎಷ್ಟು ಓದಿದರೂ ಕ್ಷಣಾರ್ಧದಲ್ಲಿ ಮರೆತು ಬಿಡುವುದಿದೆ. ಕೆಲ ಹೆತ್ತವರು ನನ್ನ ಮಕ್ಕಳಿಗೆ ತಲೆಗೆ ಹೋಗುವುದೇ ಇಲ್ಲ ಎನ್ನುವ ಅಳಲು ತೋಡಿಕೊಳ್ಳುವುದಿದೆ. ನಿಮ್ಮ ಮಕ್ಕಳು ಕೂಡ ನೆನಪಿನ ಶಕ್ತಿಯ ಕೊರತೆಯಿಂದ ಬಳಲುತ್ತಿದ್ದರೆ, ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದಂತೆ ಈ ಆಹಾರಗಳನ್ನು ನೀಡುವುದನ್ನು ಮರೆಯಬೇಡಿ. ಇದರಿಂದ ಮೆದುಳು ಚುರುಕಾಗಿ ಕೆಲಸ ಮಾಡುವುದಲ್ಲದೆ ಓದಿದ್ದೆಲ್ಲವೂ ನೆನಪಿನಲ್ಲಿರುತ್ತದೆ.

ನೆನಪಿನ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು

* ನೀರನ್ನು ಕುಡಿಯುವುದು : ಮೆದುಳು ಮತ್ತು ದೇಹವು ಚೆನ್ನಾಗಿ ಕಾರ್ಯನಿರ್ವಹಿಸಬೇಕಾದರೆ ನೀರು ಅಗತ್ಯವಾಗಿಯೇ ಬೇಕು. ಹೀಗಾಗಿ ದಿನನಿತ್ಯ ಮೂರರಿಂದ ನಾಲ್ಕು ಲೀಟರ್ ನಷ್ಟು ನೀರು ಸೇವಿಸುವ ಅಭ್ಯಾಸ ರೂಢಿಸಿಕೊಂಡರೆ ಮೆದುಳು ಚೆನ್ನಾಗಿ ಕೆಲಸ ಮಾಡುತ್ತದೆ.

* ಬಾದಾಮಿ: ಮೆದುಳಿನ ಕಾರ್ಯವನ್ನು ಚುರುಕುಗೊಳಿಸುವಲ್ಲಿ ಬಾದಾಮಿಯ ಪಾತ್ರ ಅಗಾಧವಾಗಿದೆ. ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ಮುಖ ತೊಳೆದ ಕೂಡಲೇ ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯವು ಸುಧಾರಿಸುತ್ತದೆ. ಹೀಗಾಗಿ ಆಲೋಚನಾ ಶಕ್ತಿ ಹೆಚ್ಚುತ್ತದೆ.

* ಹಾಲು, ಮೊಸರು : ಮಕ್ಕಳಿಗೆ ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ನೀಡುವುದು ಒಳ್ಳೆಯದು. ಇದರಲ್ಲಿ ಪ್ರೋಟೀನ್ ಮತ್ತು ಬಿ ಜೀವಸತ್ವ ಸಮೃದ್ಧವಾಗಿದ್ದು, ದಿನನಿತ್ಯ ಸೇವಿಸುವುದರಿಂದ ಮೆದುಳಿನ ಅಂಗಾಂಶ ಮತ್ತು ಕಿಣ್ವಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

* ಅರಿಶಿನ : ಆಹಾರ ಪದಾರ್ಥಗಳಲ್ಲಿ ಅರಶಿನ ಬಳಕೆಯನ್ನು ಹೆಚ್ಚಿಸುವುದರಿಂದ ಮೆದುಳು ಚುರುಕಾಗಿಸುತ್ತದೆ. ಅರಶಿನ ಬಳಕೆ ಮಾಡುವುದರಿಂದ ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ಮರೆವಿನ ಸಮಸ್ಯೆಯನ್ನು ದೂರವಾಗುತ್ತದೆ. ಮಕ್ಕಳಿಗೆ ನೀಡುವ ಆಹಾರದಲ್ಲಿ ಅರಶಿನವನ್ನು ನಿಯಮಿತವಾಗಿ ಬಳಸುವುದು ನೆನಪಿನ ಶಕ್ತಿ ಹೆಚ್ಚಾಗಲು ಸಹಾಯ ಮಾಡುತ್ತದೆ.

* ಮೀನು : ಒಂದು ವೇಳೆ ಮಾಂಸಹಾರವನ್ನು ಸೇವಿಸುವವರಾಗಿದ್ದರೆ ಮಕ್ಕಳಿಗೆ ಮೀನು ನೀಡುವುದು ಉತ್ತಮ. ಈ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿದ್ದು ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. ವಾರದಲ್ಲಿ ಒಂದು ಸಲವಾದರೂ ಮಕ್ಕಳಿಗೆ ಮೀನನು ಅಥವಾ ಮೀನಿನ ತಲೆ ತಿನ್ನಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.

ಇದನ್ನೂ ಓದಿ: ಮನೆ ಮದ್ದು: ಬೆಳಗ್ಗೆ ಎದ್ದೇಳುತ್ತಲೇ ಮೈ ಕೈ ನೋವು ಕಾಣಿಸಿಕೊಳ್ಳುತ್ತಾ, ಈ ಸಮಸ್ಯೆಗೆ ಮನೆಯಲ್ಲೇ ಕಂಡುಕೊಳ್ಳಿ ಮುಕ್ತಿ

* ಬೆರಿಹಣ್ಣುಗಳು : ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವ ಸ್ಟ್ರಾಬೆರಿ, ಬ್ಲೂಬೆರ್ರಿ, ಬೆರ್ರಿ, ಮಲ್ಬರಿ ಹಣ್ಣುಗಳನ್ನು ನೀಡುವುದು ಒಳ್ಳೆಯದು. ಈ ಹಣ್ಣುಗಳು ಮೆದುಳಿನ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ಹೀಗಾಗಿ ನೆನಪಿನ ಶಕ್ತಿ ಸುಧಾರಿಸಿ ಓದಿದ್ದೆಲ್ಲವು ನೆನಪಿನಲ್ಲಿಡಲು ಸಾಧ್ಯವಾಗುತ್ತದೆ.

* ಡಾರ್ಕ್ ಚಾಕೊಲೇಟ್ ಇದು ಮೆದುಳನ್ನ ತುಂಬಾ ಚುರುಕುಗೊಳಿಸುವ ಮತ್ತೊಂದು ಆಹಾರವೆಂದರೆ ಡಾರ್ಕ್ ಚಾಕೊಲೇಟ್. ಇದರಲ್ಲಿ ಕೆಫೀನ್ ಮತ್ತು ಫ್ಲೇವನಾಯ್ಡ್ ಗಳು ಹೇರಳವಾಗಿದ್ದು, ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ