breakfast skipping side effects: ನೀವು ಬೆಳಗ್ಗಿನ ಬ್ರೇಕ್ ಫಾಸ್ಟ್  ಮಿಸ್ ಮಾಡ್ತಿರಾ? ಈ ಅಪಾಯ ಗ್ಯಾರಂಟಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 10, 2024 | 6:01 PM

ಕೆಲವೊಬ್ಬರು ಕೆಲಸಕ್ಕೆ ತಡ ಆಗುತ್ತದೆ ಎಂಬ ಕಾರಣಕ್ಕೆ ಬೆಳಗ್ಗಿನ ಉಪಹಾರವನ್ನು ತಿನ್ನದೆ ಕೆಲಸಕ್ಕೆ ಹೊರಟು ಬಿಡುತ್ತಾರೆ. ಮತ್ತು ಈಗ ಉಪಹಾರ ಮಾಡದಿದ್ದರೆ ಏನಂತೆ ಅದನ್ನು ಮಧ್ಯಾಹ್ನ ಊಟದಲ್ಲಿ ಬ್ಯಾಲೆನ್ಸ್ ಮಾಡಿದರೆ ಆಯಿತು ಎಂದು ಅಂದುಕೊಳ್ಳುತ್ತಾರೆ.  ಆದರೆ ನಿಮಗೆ ಗೊತ್ತಾ ಉಪಹಾರವನ್ನು ಸೇವಿಸದಿದ್ದರೆ  ಆರೋಗ್ಯದ ಮೇಲೆ ಹಲವಾರು ಅಡ್ಡ ಪರಿಣಾಮಗಳು ಬೀರುತ್ತವೆ.

breakfast skipping side effects: ನೀವು ಬೆಳಗ್ಗಿನ ಬ್ರೇಕ್ ಫಾಸ್ಟ್  ಮಿಸ್ ಮಾಡ್ತಿರಾ? ಈ ಅಪಾಯ ಗ್ಯಾರಂಟಿ
ಸಾಂದರ್ಭಿಕ ಚಿತ್ರ
Follow us on

ಕೆಲವೊಬ್ಬರು ಹೆಂಗದ್ರೆ ಬಿಸಿ ಬಿಸಿ ತಿಂಡಿ ಟೇಬಲ್ ಮೇಲೆ ರೆಡಿಯಿದ್ದರೂ ಅದನ್ನು ತಿಂದು ಕೆಲಸಕ್ಕೆ ಹೋಗುವಷ್ಟು ವ್ಯವಧಾನ ಕೂಡಾ ಇರುವುದಿಲ್ಲ. ಹರಿಬರಿಯಲ್ಲಿ ಕಾಫಿ ಕುಡಿದು, ತಿಂಡಿಯನ್ನು ತಿನ್ನದೆ ಬ್ಯಾಗ್ ಅನ್ನು ಭುಜದ ಮೇಲೆ ನೇತು ಹಾಕಿಕೊಂಡು ಆಫೀಸಿಗೆ ಹೊರಟು ಹೋಗಿಬಿಡುತ್ತಾರೆ.  ಇನ್ನೂ ಕೆಲವರಿಗಂತೂ ಬೆಳಗ್ಗೆ ಉಪಹಾರವನ್ನು ತಿನ್ನುವುದೆಂದರೆನೇ ಅಲರ್ಜಿ.  ನಿಮಗೂ ಕೂಡಾ ಬೆಳಗ್ಗಿನ ಉಪಹಾರವನ್ನು ತ್ಯಜಿಸುವ ಅಭ್ಯಾಸ ಇದೆಯೇ? ಹಾಗಿದ್ರೆ ಈ ಅಭ್ಯಾಸದಿಂದ ಆರೋಗ್ಯದ ಮೇಲೆ ಉಂಟಾಗುವ ಅಡ್ಡ ಪರಿಣಾಮದ ಬಗ್ಗೆ ತಿಳಿಯಿರಿ.

ಬೆಳಗಿನ ಉಪಹಾರವನ್ನು ತ್ಯಜಿಸುವುದರಿಂದ ಉಂಟಾಗುವ ಅಪಾಯಗಳು:

ಶಕ್ತಿಯ ಕೊರತೆ ಎದುರಾಗುತ್ತದೆ: ಬೆಳಗಿನ ಉಪಹಾರವನ್ನು  ಸೇವನೆ ಮಾಡಿದ್ದರೆ ದೇಹವು ಸರಿಯಾಗಿ ಶಕ್ತಿಯನ್ನು ಪಡೆಯುವುದಿಲ್ಲ ಮತ್ತು ಇದರಿಂದ  ದೇಹವು ದುರ್ಬಲವಾಗಬಹುದು. ಶಕ್ತಿಯ ಕೊರತೆಯಿಂದಾಗಿ, ನಿಮಗೆ  ದಿನವಿಡೀ ದಣಿದ ಭಾವನೆ ಉಂಟಾಗಬಹುದು.

ಮಧುಮೇಹದ ಅಪಾಯ ಹೆಚ್ಚಾಗುತ್ತದೆ:  ನೀವು ಬೆಳಗಿನ ಉಪಹಾರವನ್ನು ತ್ಯಜಿಸುವುದು ದಿನನಿತ್ಯದ ಅಭ್ಯಾಸ ಮಾಡಿಕೊಂಡರೆ, ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮವನ್ನು ಬೀರಬಹುದು. ಬೆಳಗಿನ ಉಪಹಾರವು ಗ್ಲೈಕೋಜನ್ ಅನ್ನು ಪುನಃಸ್ಥಾಪಿಸಲು ಮತ್ತು ಇನ್ಸುಲಿನ್ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಅನೇಕ ಸಂಶೋಧನೆಗಳು ಮತ್ತು ಅಧ್ಯಯನಗಳು ಬೆಳಗಿನ ಉಪಹಾರವನ್ನು ತ್ಯಜಿಸುವುದರಿಂದ ಟೈಪ್-2 ಮಧುಮೇಹ ಭಾದಿಸುವ ಸಾಧ್ಯತೆ ಇದೆ ಎಂಬುದನ್ನು ಹೇಳಿವೆ.

ಪೋಷಕಾಂಶಗಳ ಕೊರತೆ: ಬೆಳಗಿನ ಉಪಹಾರ ಸೇವಿಸದೇ ಇದ್ದರೆ ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆ ಕಾಣಿಸಿಕೊಳ್ಳುತ್ತದೆ. ರಾತ್ರಿ ಸುಮಾರು 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಿದ ನಂತರ, ಬೆಳಗ್ಗೆ ಎದ್ದಾಗ ನಿಮ್ಮ ಹೊಟ್ಟೆ ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ  ಬೆಳಗ್ಗೆ ಆರೋಗ್ಯಕರ ಮತ್ತು ಪೌಷ್ಟಿಕ ಉಪಹಾರವನ್ನು ಸೇವನೆ ಮಾಡಬೇಕು . ಏನಾದರೂ ಬೆಳಗಿನ ಉಪಹಾರವನ್ನು ತ್ಯಜಿಸಿದರೆ ದೇಹದಲ್ಲಿ ಜೀವಸತ್ವಗಳು, ಖನಿಜಗಳು ಮುಂತಾದ ಅಗತ್ಯ ಪೋಷಕಾಂಶಗಳ ಕೊರತೆಯು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ:  ಬೆಳಗಿನ ಉಪಹಾರವನ್ನು ತ್ಯಜಿಸುವುದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ, ನೀವು ಅನೇಕ ಸೋಂಕುಗಳು ಮತ್ತು ಕಾಯಿಲೆಗಳಿಗೆ ಬಲಿಯಾಗಬಹುದು.

ಚಯಾಪಚಯವು ನಿಧಾನಗೊಳ್ಳುತ್ತದೆ:  ಬೆಳಗಿನ ಉಪಹಾರವನ್ನು ಬಿಟ್ಟು ಬಿಡುವುದರಿಂದ ನಿಮ್ಮ ದೇಹದ ಚಯಾಪಚಯ ಕ್ರಿಯೆಯು ನಿಧಾನಗೊಳ್ಳುತ್ತದೆ. ಮತ್ತು ಈ ಕಾರಣದಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂಟರ್ ನ್ಯಾಷನಲ್ ಜರ್ನಲ್ ಆಫ್ ಒಬೆಸಿಟಿ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ, ಬೆಳಿಗ್ಗೆ ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ಚಯಾಪಚಯವು ಹೆಚ್ಚುತ್ತದೆ ಮತ್ತು ಇದು ದಿನವಿಡೀ ಕ್ಯಾಲೋರಿಗಳನ್ನು ಸುಡಲು ನಿಮ್ಮ ದೇಹವನ್ನು ಪ್ರೇರೇಪಿಸುತ್ತದೆ ಎಂಬುದನ್ನು ಹೇಳಿದೆ.

ಇದನ್ನೂ ಓದಿ: ರಾತ್ರಿ ಈ ಆಹಾರ ಸೇವಿಸಿದರೆ ಉತ್ತಮ ನಿದ್ರೆ ಬರುವುದು ಗ್ಯಾರಂಟಿ

ಬೆಳಗ್ಗೆ ಆರೋಗ್ಯಕರ  ಉಪಹಾರವನ್ನು ಸೇವನೆ ಮಾಡುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:

• ಬೆಳಗ್ಗಿನ ಉಪಹಾರವು ದಿನವಿಡೀ ಕ್ರಿಯಾಶೀಲರಾಗಿರಲು ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

• ಬೆಳಗಿನ ಉಪಹಾರವು ಮೆದುಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ತಲೆನೋವಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

• ಬೆಳಗಿನ ಉಪಹಾರವು ದಿನವಿಡೀ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮನ್ನು ಕಡಿಮೆ ತಿನ್ನುವಂತೆ ಮಾಡುತ್ತದೆ ಹಾಗೂ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

• ಬೆಳಗ್ಗಿನ ಉಪಹಾರವು ವ್ಯಕ್ತಿಯ ಮನಸ್ಸನ್ನು ತಾಜಾವಾಗಿರಿಸುತ್ತದೆ. ಇದರಿಂದ  ಆ ವ್ಯಕ್ತಿ ಸಂಪೂರ್ಣವಾಗಿ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

• ಕೆಲವು ಜನರು ಕೆಲಸ ಮಾಡುವಾಗ ಉದಾಸಿನತೆ ಅಥವಾ ಸೋಮಾರಿತನವನ್ನು ಅನುಭವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಸೋಮಾರಿತನವನ್ನು ಹೋಗಲಾಡಿಸಲು ಬೆಳಗ್ಗೆ ಉಪಹಾರ ಸೇವನೆ ಮಾಡುವುದು ಬಹಳ ಮುಖ್ಯ.

• ಬೆಳಗ್ಗಿನ ಉಪಹಾರವು ಏಕಾಗ್ರತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ವ್ಯಕ್ತಿಯ ಆರೋಗ್ಯವನ್ನು ಉತ್ತಮವಾಗಿಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ