
ಈಗಾಗಲೇ ಮಾನ್ಸೂನ್ ಸೀಸನ್ ಆರಂಭವಾಗಿಬಿಟ್ಟಿದೆ. ಜಿಟಿ ಜಿಟಿ ಸುರಿಯುವ ಈ ಮಳೆಯ ನಡುವೆ ಟ್ರಿಪ್ ಹೋಗುವ ಮಜಾನೇ ಬೇರೆ. ಹೌದು ಮಳೆಗಾಲದ ಪ್ರವಾಸವು ಚಿರಸ್ಮರಣೀಯವಾದ ಸುಂದರ ಅನುಭೂತಿಯನ್ನು ನೀಡುತ್ತದೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರವಾಸ ಪ್ರಿಯರು ಜಲಪಾತಗಳಿಗೆ, ಹಚ್ಚ ಹಸಿರಿನ ತಾಣಗಳಿಗೆ ಟ್ರಿಪ್ ಪ್ಲಾನ್ ಮಾಡ್ತಾರೆ. ಮಳೆಗಾಲದಲ್ಲಿ ಟ್ರಿಪ್ ಹೋಗುವುದೆಂದರೆ ನಿಮಗೂ ಇಷ್ಟನಾ? ಹಾಗಿದ್ರೆ ಈ ಬಾರಿ ದಕ್ಷಿಣದ ಚಿರಾಂಪುಜಿ ಅಂತಾನೇ ಪ್ರಸಿದ್ಧಿ ಪಡೆದಿರುವ ಆಗುಂಬೆಗೆ (Agumbe) ಭೇಟಿ ನೀಡಿ. ಆಗುಂಬೆಯಲ್ಲಿ ಮಳೆಗಾಲದಲ್ಲಿ (Monsoon Trip) ಭೇಟಿ ನೀಡಲೇಬೇಕಾದ ಹಲವು ಸುಂದರ ಆಫ್ ಬೀಟ್ ತಾಣಗಳಿದ್ದು, ಅಲ್ಲಿಗೆ ನೀವು ತಪ್ಪದೆ ವಿಸಿಟ್ ಮಾಡ್ಲೇಬೇಕು.
ಸಹ್ಯಾದ್ರಿ ಬೆಟ್ಟಗಳ ಶ್ರೇಣಿಯಲ್ಲಿ ಕಂಗೊಳಿಸುವ ಸುಂದರ ಗಿರಿಧಾಮ ಆಗುಂಬೆ. ಭಾರೀ ಮಳೆ, ಹಚ್ಚ ಹಸಿರಿನ ವಾತಾವರಣ, ಮೋಡಿ ಮಾಡುವ ಸೂರ್ಯಾಸ್ತಕ್ಕೆ ಹೆಸರುವಾಸಿಯಾದ ಈ ಸುಂದರ ತಾಣ ದಕ್ಷಿಣದ ಭಾರತದ ಚಿರಾಪುಂಜಿ ಪ್ರಸಿದ್ಧಿ ಪಡೆದಿದೆ. ಪ್ರಕೃತಿ ಪ್ರೇಮಿಗಳಂತೂ ಈ ಸ್ಥಳಕ್ಕೆ ಭೇಟಿ ನೀಡುವುದೆಂದರೆ ಬಹಳ ಇಷ್ಟ. ಅದರಲ್ಲೂ ಮಳೆಗಾಲದಲ್ಲಿ ಆಗುಂಬೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ. ನೀವೇನಾದರೂ ಮಾನ್ಸೂನ್‌ನಲ್ಲಿ ಪ್ರವಾಸ ಹೋಗಲು ಪ್ಲಾನ್ ಮಾಡಿದ್ದರೆ, ಆಗುಂಬೆಯ ಈ ಕೆಲವು ತಾಣಗಳಿಗೆ ತಪ್ಪದೆ ಭೇಟಿ ನೀಡಿ.
ಗೋಪಾಲಕೃಷ್ಣ ದೇವಸ್ಥಾನ: ಆಗುಂಬೆಯಿಂದ 25 ಕಿ.ಮೀ ದೂರದಲ್ಲಿರುವ 14 ನೇ ಶತಮಾನದಲ್ಲಿ ನಿರ್ಮಾಣಗೊಂಡ ಗೋಪಾಲಕೃಷ್ಣ ದೇವಾಲಯವು ಕೃಷ್ಣನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಈ ದೇವಾಲಯ ಸಾಕಷ್ಟು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇವಾಲಯ ಅದರ ಅದ್ಭುತವಾದ ವಾಸ್ತುಶಿಲ್ಪ ಕಲೆಗೆ ಹೆಸರುವಾಸಿಯಾಗಿದೆ.
ಪ್ರವೇಶ : ಉಚಿತ
ಸಮಯ : ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ
ಸನ್ಸೆಟ್ ಪಾಯಿಂಟ್: ಆಗುಂಬೆಯಲ್ಲಿ ಸನ್ಸೆಟ್ ಪಾಯಿಂಟ್ ಸ್ಥಳವನ್ನು ನೀವು ತಪ್ಪದೇ ನೋಡಲೇಬೇಕು. ಈ ಸುಂದರ ಸ್ಥಳವು ಮುಖ್ಯ ಪಟ್ಟಣದಿಂದ 10 ನಿಮಿಷಗಳ ನಡಿಗೆಯ ದೂರದಲ್ಲಿದೆ. ಇದೊಂದು ಪಶ್ಚಿಮ ಘಟ್ಟದ ಸಾಲುಗಳಲ್ಲಿರುವ ಅತ್ಯಂತ ಎತ್ತರದಲ್ಲಿರುವ ತಾಣ. ಇಲ್ಲಿ ನೀವು ಹಸಿರ ತಾಣದ ನಡುವೆ ಸೂರ್ಯ ಹುಟ್ಟುವ ಮತ್ತು ಸಂಜೆ ಸೂರ್ಯ ಮುಳುಗುವ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
ಪ್ರವೇಶ : ಉಚಿತ
ಸಮಯ : ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ
ಬರ್ಕಣ ಜಲಪಾತ: ಸೀತಾ ನದಿಯಿಂದ 260 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಹಾಲಿನ ನೊರೆಯಂತಿರುವ ಬರ್ಕಣ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಚೆಂದ. ಭಾರತದ 10 ನೇ ಅತಿ ಎತ್ತರದ ಜಲಪಾತ ಎನ್ನುವ ಹಿರಿಮೆಯನ್ನು ಹೊಂದಿರುವ ಈ ಜಲಪಾತ ಪಶ್ಚಿಮ ಘಟ್ಟದ ಗುಪ್ತ ರತ್ನ ಅಂತಾನೇ ಹೆಸರುವಾಸಿಯಾಗಿದೆ. ಈ ಮಳೆಗಾಲದಲ್ಲಿ ಈ ತಾಣಕ್ಕೆ ನೀವು ತಪ್ಪದೆ ಭೇಟಿ ಮಾಡಲೇಬೇಕು.
ಪ್ರವೇಶ ಶುಲ್ಕ : ಪ್ರತಿ ವ್ಯಕ್ತಿಗೆ 200 ರೂ.
ಸಮಯ : ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ
ಜೋಗಿ ಗುಂಡಿ ಜಲಪಾತ: ಆಗುಂಬೆಯ ಸಣ್ಣ ಹಳ್ಳಿಯಲ್ಲಿ ಈ ಸುಂದರ ಜಲಪಾತವಿದೆ. ಈ ಜಲಪಾತದಲ್ಲಿ ವರ್ಷವಿಡಿ ನೀರಿದ್ದರೂ, ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವ ಮಜಾನೇ ಬೇರೆ. ಮಾನ್ಸೂನ್ ಸೀಸನ್‌ನಲ್ಲಿ ಅಷ್ಟು ಸುಂದರವಾಗಿರುತ್ತೆ ಈ ತಾಣ. ಜೋಗಿ ಗುಂಡಿ ಜಲಪಾತವು ಆಗುಂಬೆ ಬಸ್ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿರುವ ಒಂದು ಭವ್ಯವಾದ ಜಲಪಾತವಾಗಿದ್ದು, ಈ ಬಾರಿ ಮಳೆಯ ನಡುವೆ ನೀವು ಇಲ್ಲಿಗೆ ಟ್ರೆಕ್ಕಿಂಗ್ ಹೋಗಬಹುದು.
ಪ್ರವೇಶ ಶುಲ್ಕ : 100 ರೂ.
ಸಮಯ : ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ
ಒನಕೆ ಅಬ್ಬಿ ಜಲಪಾತ: ಆಗುಂಬೆ ಬಸ್ ನಿಲ್ದಾಣದಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿರುವ ಒನಕೆ ಅಬ್ಬಿ ಜಲಪಾತವು ಆಗುಂಬೆಯ ಆದ್ಭುತ ತಾಣಗಳಲ್ಲಿ ಒಂದಾಗಿದೆ. 400 ಅಡಿ ಎತ್ತರದಿಂದ ಧುಮುಕುವ ಈ ಜಲಪಾತವು ಪಶ್ಚಿಮ ಘಟ್ಟಗಳ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದ್ದು, ಇದರ ಸೌಂದರ್ಯವನ್ನು ನೋಡುವುದೇ ಒಂದು ಚೆಂದ.
ಪ್ರವೇಶ : ಉಚಿತ
ಸಮಯ : ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ
ಇಷ್ಟು ಮಾತ್ರವಲ್ಲದೆ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ, ಆಗುಂಬೆ ಘಾಟ್, ಕುಂದಾದ್ರಿ ಬೆಟ್ಟ, ಮಾಲ್ಗುಡಿ ಡೇಸ್ ಹೌಸ್, ಕವಲೇದುರ್ಗ ಕೋಟೆ, ಮಣಿ ಜಲಾಶಯಗಳಿಗೂ ಭೇಟಿ ನೀಡಬಹುದು.
ಇದನ್ನೂ ಓದಿ: ಕೊಕ್ಕರೆಗಳ ನೆಲೆವೀಡು ʼಕೊಕ್ಕರೆ ಬೆಳ್ಳೂರುʼ ಪಕ್ಷಿ ಧಾಮಕ್ಕೆ ನೀವು ಒಂದ್ಸಲನಾದ್ರೂ ಭೇಟಿ ನೀಡ್ಲೇಬೇಕು
ಬೆಂಗಳೂರಿನಿಂದ ಸುಮಾರು 8 ಗಂಟೆ, ಮಂಗಳೂರಿನಿಂದ ಸುಮಾರು 3 ಗಂಟೆ, ಉಡುಪಿಯಿಂದ ಸುಮಾರು 1.5 ಗಂಟೆ ಹಾಗೂ ಚಿಕ್ಕಮಗಳೂರಿನಿಂದ 4.5 ಗಂಟೆ ದೂರದಲ್ಲಿರುವ ಆಗುಂಬೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನೆಲೆಗೊಂಡಿದೆ. ಈ ತಾಣ ಸೂರ್ಯಾಸ್ತ, ಟ್ರೆಕ್ಕಿಂಗ್, ಫೋಟೋಗ್ರಫಿ, ಸೂರ್ಯಾಸ್ತದ ಅನುಭವವನ್ನು ಪಡೆಯಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಟೆನ್ಷನ್ ಫ್ರೀಯಾಗಿ ಸುತ್ತಾಡಬೇಕು ಎಂದರೆ ಅಲ್ಲಲ್ಲಿ ಝುಳು ಝುಳು ನೀರಿನ ಸದ್ದು, ಪಕ್ಷಿಗಳ ಚಿಲಿಪಿಲಿ, ತಣ್ಣನೆಯ ಗಾಳಿ, ಹಚ್ಚ ಹಸಿರಿನ ವಾತಾವರಣದಿಂದ ಕೂಡಿದ ಅದ್ಭುತ ತಾಣವಾದ ಆಗುಂಬೆಗೆ ಭೇಟಿ ನೀಡಿ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ