
ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಮಕ್ಕಳಲ್ಲಿ ಬೊಜ್ಜಿನ (obesity) ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪಿಜ್ಜಾ, ಬರ್ಗರ್, ಗೋಬಿ ಮಂಚೂರಿಯಂತಹ ಹೊರಗಡೆಯ ಅನಾರೋಗ್ಯಕರ ಆಹಾರ, ಜಡ ಜೀವನಶೈಲಿ, ವ್ಯಾಯಾಮದ ಕೊರತೆ ಇವೆಲ್ಲದರಿಂದ ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ದೇಹದ ಅಂದವನ್ನು ಹಾಳುಗೆಡುವುದು ಮಾತ್ರವಲ್ಲದೆ ಹೃದಯ ಸಂಬಂಧಿ ಕಾಯಿಲೆ, ಉಸಿರಾಟದ ತೊಂದರೆ, ಪಿತ್ತಜನಕಾಂಗದ ಕಾಯಿಲೆ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಎಡೆಮಾಡಿಕೊಟ್ಟಂತೆ. ಹೀಗಿರುವಾಗ ಆರೋಗ್ಯಕರ ದೇಹ ತೂಕವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಇದಕ್ಕಾಗಿ ಜಿಮ್‌ಗೆ ಹೋಗಿ ವರ್ಕೌಟ್ ಮಾಡಬೇಕಿಲ್ಲ. ಬದಲಾಗಿ ಪ್ರತಿನಿತ್ಯ ಬೆಳಗ್ಗೆ 1 ಗಂಟೆಯ ಸಮಯ ನಿಮಗಾಗಿ ಮೀಸಲಿಟ್ಟು ಈ ಒಂದಷ್ಟು ಯೋಗಾಸನಗಳನ್ನು (yoga) ಅಭ್ಯಾಸ ಮಾಡುವುದರಿಂದ ಸುಲಭವಾಗಿ ಬೊಜ್ಜನ್ನು ಕರಗಿಸಬಹುದು ಮತ್ತು ತೂಕವನ್ನು ಕೂಡ ಇಳಿಸಬಹುದು ಎಂಬ ಮಾಹಿತಿಯನ್ನು ಬೆಂಗಳೂರಿನ ಎಸ್.ಡಿ.ಎಮ್ ಕ್ಷೇಮವನದ ಸೀನಿಯರ್ ಮೆಡಿಕಲ್ ಆಫಿಸರ್ ಡಾ. ವಂದನಾ ಅವರು ಟಿವಿ9 ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.
ಬೊಜ್ಜು ಒಂದು ದೊಡ್ಡ ರೋಗವಾಗಿ ಹರಡಿಕೊಳ್ಳುತ್ತಿದ್ದು, ಇದು ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಲುತ್ತಿದೆ. ಇದಕ್ಕೆ ಮುಖ್ಯ ಕಾರಣವೇ ಅನಾರೋಗ್ಯಕರ ಜೀವನಶೈಲಿ, ಒತ್ತಡ, ಹಾರ್ಮೋನು ಅಸಮತೋಲನ, ನಿದ್ರೆಯ ಕೊರತೆ ಮತ್ತು ದೈಹಿಕ ಚಟುವಟಿಕೆಯ ಕೊರತೆ ಎಂದು ಡಾ. ವಂದನಾ ಹೇಳಿದ್ದಾರೆ.
ಆಹಾರ ಪದ್ಧತಿಯ ಬದಲಾವಣೆ: ಇಂದಿನ ಯುವ ಜನರು ಹೆಚ್ಚು ಅನಾರೋಗ್ಯಕರ ಆಹಾರಗಳನ್ನೇ ಸೇವನೆ ಮಾಡುತ್ತಿದ್ದಾರೆ. ಈ ಜಂಕ್‌ಫುಡ್, ಸಂಸ್ಕರಿಸಿದ ಆಹಾರಗಳು ದೇಹದಲ್ಲಿ ಶುಗರ್ ಅಂದರೆ ಕಾರ್ಬೋಹೈಡ್ರೇಟ್ ಅಂಶದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಅಂಶವೇ ನಂತರ ಬೊಜ್ಜಾಗಿ ಪರಿವರ್ತನೆಗೊಳ್ಳುತ್ತದೆ. ಹಾಗಾಗಿ ಸಾಧ್ಯವಾದಷ್ಟು ಆರೋಗ್ಯಕರವಾದ ಆಹಾರಗಳನ್ನೇ ಸೇವನೆ ಮಾಡಬೇಕು.
ನಿದ್ರೆ: ನಿದ್ರೆ, ನಿದ್ರೆಯ ಲಯ ಸರಿಯಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಒಂದು ವೇಳೆ ಸ್ಲೀಪ್ ಸೈಕಲ್ ಸರಿಯಾಗಿರದಿದ್ದರೆ, ನಮಗೆ ಬೇಕಾದ ಹಾರ್ಮೋನು ದೇಹದಲ್ಲಿ ಬಿಡುಗಡೆಯಾಗುವುದಿಲ್ಲ.ಇದರಿಂದಲೂ ಬೊಜ್ಜು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಉತ್ತಮ ನಿದ್ರೆ ಪಡೆಯುವುದು ಕೂಡ ಬಹಳ ಮುಖ್ಯ.
ಹಾರ್ಮೋನು ಬ್ಯಾಲೆನ್ಸ್: ಲೆಪ್ಟಿನ್, ಗ್ರೆಲಿನ್, ಇನ್ಸುಲಿನ್ ರೆಸಿಸ್ಟೆಂಟ್ ಈ ಎಲ್ಲಾ ಹಾರ್ಮೋನುಗಳಲ್ಲಿ ಅಸಮತೋಲನ ಉಂಟಾದರೆ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಬ್ಯಾಲೆನ್ಸ್ ಮಾಡಲು ಆಹಾರ ಪದ್ಧತಿ ಸರಿಯಾಗಿರಬೇಕು, ದೈಹಿಕ ಚಟುವಟಿಕೆಗಳನ್ನು ಮಾಡಬೇಕು.
ಯಾವೆಲ್ಲಾ ಯೋಗಾಸನವನ್ನು ಮಾಡುವ ಮೂಲಕ ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು, ತೂಕ ಇಳಿಸಿಕೊಳ್ಳಬಹುದು ಎಂಬ ಮಾಹಿತಿಯನ್ನೂ ಡಾ. ವಂದನಾ ಹಂಚಿಕೊಂಡಿದ್ದಾರೆ. ಬೊಜ್ಜು ಕಾಣಿಸಿಕೊಂಡಾಗ ಮೆಟಬಾಲಿಸಂ ಅಂದರೆ ದೇಹದ ಚಯಾಪಚಯ ಕ್ರಿಯೆ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಿರುವಾಗ ಯೋಗ ಮಾಡುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಇದರಿಂದ ಬೊಜ್ಜಿನ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಅವರು ಹೇಳಿದ್ದಾರೆ. ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಯಾವೆಲ್ಲಾ ಆಸನಗಳನ್ನು ಮಾಡಬೇಕು ಎಂಬುದನ್ನು ನೋಡುವುದಾದರೆ,
ಸೂರ್ಯನಮಸ್ಕಾರ: ಈ ಸೂರ್ಯನಮಸ್ಕಾರ ಮಾಡುವುದರಿಂದ ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಇದರಿಂದ ನಮ್ಮ ದೇಹದ ತೂಕವೂ ಕಮ್ಮಿಯಾಗುತ್ತದೆ. ಈ ಸೂರ್ಯ ನಮಸ್ಕಾರದಲ್ಲಿ 12 ಆಸನಗಳಿದ್ದು, ಇವುಗಳನ್ನು ಅಭ್ಯಾಸ ಮಾಡುವುದರಿಂದ ಫ್ಲೆಕ್ಸಿಬಿಲಿಟಿ ಸಹ ಹೆಚ್ಚಾಗುತ್ತದೆ.
ಸೇತುಬಂಧಾಸನ, ತ್ರಿಕೋನಾಸನ, ಪಶ್ಚಿಮೋತ್ತಾಸನ: ಈ ಮೂರು ಆಸನಗಳು ನಮ್ಮ ದೇಹದ ಫ್ಲೆಕ್ಸಿಬಿಲಿಟಿಯನ್ನು ಹೆಚ್ಚು ಮಾಡುತ್ತದೆ. ಪ್ಯಾರಸಿಂಪಥೆಟಿಕ್ ನರಮಂಡಲದ ಕಾರ್ಯವನ್ನು ಹೆಚ್ಚು ಮಾಡುತ್ತದೆ. ಇದು ನಮ್ಮ ದೇಹದಲ್ಲಿ ಉತ್ತಮ ಹಾರ್ಮೋನುಗಳನ್ನು ಬ್ಯಾಲೆನ್ಸ್ ಮಾಡಲು ಸಹಾಯವಾಗುತ್ತದೆ.
ಪ್ರಾಣಾಯಾಮ: ಪ್ರಾಣಾಯಾಮವನ್ನು ಮಾಡುವುದರಿಂದ ತೂಕ ಹೇಗೆ ಕಮ್ಮಿಯಾಗುತ್ತದೆ ಎಂದು ನೋಡುವುದಾದರೆ, ನಮ್ಮಲ್ಲಿ ಸೂರ್ಯ ನಾಡಿ ಮತ್ತು ಚಂದ್ರ ನಾಡಿ ಎಂಬ ಎರಡು ನಾಡಿಗಳಿವೆ. ಪ್ರಾಣಾಯಾಮ ಮಾಡುವುದರಿಂದ ಈ ಸೂರ್ಯ ನಾಡಿಯಿಂದಾಗಿ ನಮ್ಮ ದೇಹಕ್ಕೆ ಹೀಟಿಂಗ್ ಎಫೆಕ್ಟ್ ಆಗುತ್ತದೆ. ಇದು ಚಯಾಪಚಯಕ್ರಿಯೆಯನ್ನು ಹೆಚ್ಚಿಸುತ್ತದೆ. ಸೂರ್ಯ ಅನುಲೋಮ ವಿಲೋಮ, ಸೂರ್ಯ ಭೇದನ, ಉಜ್ಜಯಿ ಪ್ರಾಣಯಾಮ, ಬಸ್ತ್ರೀಕಾ ಪ್ರಾಣಯಾಮ ಈ ಎಲ್ಲಾ ಪ್ರಾಣಾಯಾಮಗಳನ್ನು ಮಾಡುವುದರಿಂದ ನಮ್ಮ ನಮ್ಮ ಚಯಾಪಚಯ ಕ್ರಿಯೆಯ ದರ ಹೆಚ್ಚಾಗುತ್ತದೆ ಮತ್ತು ಬೊಜ್ಜುತನದಿಂದ ಮುಕ್ತಿ ಸಿಗುತ್ತದೆ.
ರಿಲ್ಯಾಕ್ಸೇಶನ್ ಮತ್ತು ಮೆಡಿಟೇಶನ್: ಈ ವಿಧಾನದ ಮೂಲಕವು ದೇಹದ ಬೊಜ್ಜನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಡಾ. ವಂದನಾ. ಸ್ಟ್ರೆಸ್ ಮ್ಯಾನೇಜ್‌ಮೆಂಟ್ ತುಂಬಾನೇ ಇಂಪಾರ್ಟೆಂಟ್. ನಾವು ದೈಹಿಕ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ ಅದೇ ರೀತಿ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ತುಂಬಾನೇ ಮುಖ್ಯ. ಮಾನಸಿಕ ಆರೋಗ್ಯ ಸರಿಯಾದ ರೀತಿಯಲ್ಲಿ ಇದ್ದರೆ, ನಮ್ಮ ನರಮಂಡಲ ಆರೋಗ್ಯವಾಗಿರುತ್ತದೆ. ಇದು ಹಾರ್ಮೋನು ಬಿಡುಗಡೆಗೂ ತುಂಬಾನೇ ಒಳ್ಳೆಯದು. ಧ್ಯಾನ ಮತ್ತು ರಿಲ್ಯಾಕ್ಸೇಶನ್ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ಡೀಪ್ ರಿಲ್ಯಾಕ್ಸೇಷನ್ ಟೆಕ್ನಿಕ್, ಇನ್‌ಸ್ಟೆಂಟ್ ರಿಲ್ಯಾಕ್ಸೇಷನ್ ಟೆಕ್ನಿಕ್, ಯೋಗ ನಿದ್ರಾ, ಆವರ್ತಕ ಧ್ಯಾನ ಇವೆಲ್ಲವೂ ಒತ್ತಡ ನಿವಾರಣೆಗೆ ತುಂಬಾನೇ ಸಹಕಾರಿ.
ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ ಈ 5 ಸುಲಭ ಯೋಗಾಸನಗಳನ್ನು ಮಾಡಿ, ಆರೋಗ್ಯಕರವಾಗಿರಿ
ಈ ಎಲ್ಲಾ ಯೋಗಾಭ್ಯಾಸ ಮಾಡುವುದರಿಂದ ಹಾರ್ಮೋನು ಸಮತೋಲನದಲ್ಲಿರುತ್ತದೆ, ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚಾಗುತ್ತದೆ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ, ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಈ ಎಲ್ಲಾ ಅಂಶಗಳು ಬೊಜ್ಜುತನವನ್ನು ನಿವಾರಿಸಲು ಸಹಕಾರಿ. ಪ್ರತಿದಿನ 45 ನಿಮಿಷಗಳ ಕಾಲ ಯೋಗಾಸನ, 15 ನಿಮಿಷಗಳ ಪ್ರಾಣಾಯಾಮ, 2 ರಿಂದ 3 ನಿಮಿಷ ರಿಲ್ಯಾಕ್ಸೇಷನ್ ಮಾಡುವುದರಿಂದ ನಿಮ್ಮ ಬೊಜ್ಜುತನವನ್ನು ಬಹಳ ಸುಲಭವಾಗಿ ಕಡಿಮೆ ಮಾಡಬಹುದು ಎನ್ನುತ್ತಾರೆ ಡಾ. ವಂದನಾ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ