ಬೆಳಗ್ಗೆ ವಾಕಿಂಗ್ ಹೋಗುವಾಗ ಈ ತಪ್ಪುಗಳನ್ನು ಮಾಡಿದರೆ ಪ್ರಯೋಜನಕ್ಕಿಂತ ನಷ್ಟವೇ ಹೆಚ್ಚು
ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಲು ಪ್ರತಿದಿನ ಬೆಳಗ್ಗೆ ವಾಕಿಂಗ್ ಮಾಡುವುದು ತುಂಬಾನೇ ಒಳ್ಳೆಯದು. ಹೀಗೆ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಕ್ಯಾಲೋರಿಗಳು ಸುಡುವುದಲ್ಲದೆ ಸ್ನಾಯುಗಳು ಕೂಡ ಬಲಗೊಳ್ಳುತ್ತವೆ. ಇದೇ ಕಾರಣಕ್ಕೆ ಹೆಚ್ಚಿನವರು ವಾಕಿಂಗ್ ಹೋಗ್ತಾರೆ. ಆದರೆ ಬೆಳಗ್ಗೆ ವಾಕಿಂಗ್ ಮಾಡುವಾಗ ಈ ಒಂದಷ್ಟು ತಪ್ಪುಗಳನ್ನು ಮಾಡಿದರೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಹಾಗಿದ್ರೆ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ.

ವಾಕಿಂಗ್ (Walking) ಒಂದು ಸರಳ ವ್ಯಾಯಾಮವಾಗಿದ್ದು, ಇದು ಮನಸ್ಥಿತಿಯನ್ನು ಸುಧಾರಿಸುವುದಲ್ಲದೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ತೂಕ ಇಳಿಕೆ, ಮನಸ್ಥಿತಿ ಸುಧಾರಣೆ, ಹೃದಯದ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದರಲ್ಲೂ ಪ್ರಶಾಂತವಾದ ವಾತಾವರಣ, ತಾಜಾ ಗಾಳಿ ಸಿಗುವ ಬೆಳಗಿನ ಸಮಯದಲ್ಲಿ ವಾಕಿಂಗ್ ಮಾಡುವುದು ಇನ್ನೂ ಉತ್ತಮ. ಹೀಗೆ ಬೆಳಗ್ಗೆ ವಾಕಿಂಗ್ ಮಾಡುವ ಅಭ್ಯಾಸ ನಿಮಗೂ ಇದ್ಯಾ? ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ನಿಜ. ಆದರೆ ಬೆಳಗಿನ ವಾಕಿಂಗ್ ವೇಳೆ ಈ ಕೆಲವೊಂದಿಷ್ಟು ತಪ್ಪುಗಳನ್ನು (morning walk mistakes) ಮಾಡಿದರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆ ತಪ್ಪುಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಬೆಳಗಿನ ವಾಕಿಂಗ್ ವೇಳೆ ಈ ತಪ್ಪುಗಳನ್ನು ಮಾಡದಿರಿ:
ನೀರು ಕುಡಿಯದೇ ಇರುವುದು: ನೀರು ಕುಡಿಯದೆ ವಾಕಿಂಗ್ ಹೋಗುವಂತಹ ತಪ್ಪನ್ನು ಮಾಡಬೇಡಿ. ಈ ತಪ್ಪು ದೇಹವನ್ನು ಬೇಗನೆ ದಣಿದಂತೆ ಮಾಡುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹಾಗಾಗಿ ವಾಕಿಂಗ್ ಹೋಗುವ 15 ರಿಂದ 20 ನಿಮಿಷಗಳ ಮೊದಲು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.
ಖಾಲಿ ಹೊಟ್ಟೆಯಲ್ಲಿ ದೀರ್ಘ ಹೊತ್ತು ವಾಕಿಂಗ್: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸುದೀರ್ಘ ಕಾಲ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಬಹುದು, ಇದು ತಲೆತಿರುಗುವಿಕೆ, ಆಯಾಸ ಅಥವಾ ತಲೆನೋವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಬೆಳಗ್ಗೆ 20 ನಿಮಿಷಗಳಿಗಿಂತ ಹೆಚ್ಚು ವಾಕಿಂಗ್ ಮಾಡುತ್ತೀರಿ ಎಂದಾದರೆ, ವಾಕಿಂಗ್ ಮಾಡುವ ಮುನ್ನ ಬಾಳೆ ಹಣ್ಣು, ನೆನೆಸಿದ ಕಡಲೆಕಾಯೊ ಅಥವಾ ಒಂದು ಹಿಡಿ ಒಣ ಹಣ್ಣಿನಂತಹ ಆರೋಗ್ಯಕರ ಆಹಾರವನ್ನು ಸೇವಿಸಿ.
ವಾರ್ಮ್‌ಅಪ್ ಮಾಡದೆ ನಡೆಯುವುದು: ಬೆಳಗ್ಗೆ ದೇಹವನ್ನು ವಾರ್ಮ್ ಅಪ್ ಮಾಡದೆ ವಾಕಿಂಗ್ ಮಾಡಿದರೆ ಇದರಿಂದ ಸ್ನಾಯುಗಳು ಮತ್ತು ಕೀಲುಗಳ ಮೇಲೆ ಒತ್ತಡ ಬೀಳುತ್ತದೆ. ಆದ್ದರಿಂದ, ವಾಕಿಂಗ್ ಮಾಡುವ ಮುನ್ನ ಎರಡರಿಂದ ಐದು ನಿಮಿಷಗಳ ಕಾಲ ದೇಹವನ್ನು ವಾರ್ಮ್ ಅಪ್ ಮಾಡಿಕೊಳ್ಳಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು: ಕೆಲವರು ವಾಕಿಂಗ್ ಹೋಗುವ ಮೊದಲು ದೇಹಕ್ಕೆ ಶಕ್ತಿ ಲಭಿಸಲೆಂದು ಒಂದು ಕಪ್ ಕಾಫಿ ಕುಡಿಯುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆ ಮಾಡುವುದರಿಂದ ಆಮ್ಲೀಯತೆ, ಎದೆಯುರಿ ಕಾಣಿಸಿಕೊಳ್ಳುವುದಲ್ಲದೆ ನರಗಳ ಮೇಲೆ ಒತ್ತಡ ಕೂಡ ಉಂಟಾಗುತ್ತದೆ. ಆದ್ದರಿಂದ ವಾಕಿಂಗ್ ವಾಕಿಂಗ್ ಬಳಿಕ ಲಘು ಉಪಹಾರವನ್ನು ಸೇವಿಸಿ, ಕಾಫಿ ಕುಡಿಯಿರಿ.
ಇದನ್ನೂ ಓದಿ: ಬೆಳಗ್ಗಿನ ಹೊತ್ತು 30 ನಿಮಿಷಗಳ ಕಾಲ ವಾಕಿಂಗ್ ಮಾಡಿದರೆ ಏನಾಗುತ್ತದೆ ಗೊತ್ತಾ?
ಶೌಚಾಲಯಕ್ಕೆ ಹೋಗದಿರುವುದು: ಹೊರಗೆ ವಾಕಿಂಗ್ ಹೋಗುವ ಮೊದಲು ವಾಶ್‌ರೂಮ್‌ಗೆ ಹೋಗುವುದನ್ನು ತಪ್ಪಿಸುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ. ಇದು ಹೊಟ್ಟೆ ಸಂಬಂಧಿ ಸಮಸ್ಯೆಗಳು ಮತ್ತು ಯುಟಿಐ (ಮೂತ್ರನಾಳದ ಸೋಂಕು) ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ವಾಕಿಂಗ್‌ಗೆ ಹೋಗುವ ಮೊದಲು, ಖಂಡಿತವಾಗಿಯೂ ವಾಶ್‌ರೂಮ್‌ಗೆ ಹೋಗಿ, ಇದರಿಂದ ನೀವು ಪೂರ್ಣ ಮನಸ್ಸಿನಿಂದ ಮತ್ತು ಶಾಂತಿಯುತವಾಗಿ ವಾಕಿಂಗ್ ಮಾಡಲು ಸಾಧ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








