Jackfruits Seeds Holige : ಹಲಸಿನ ಬೀಜದ ಹೋಳಿಗೆ ಮಾಡುವುದು ಹೇಗೆ? ಇಲ್ಲಿದೆ ರೆಸಿಪಿ

ಯಾವುದೇ ಹಬ್ಬ ಹರಿದಿನಗಳು ಸಿಹಿ ತಿಂಡಿ ಹಾಗೂ ಹೋಳಿಗೆಯಿಲ್ಲದೇ ಪೂರ್ಣವಾಗುವುದೇ ಇಲ್ಲ. ಕೆಲವರಂತೂ ಬಗೆ ಬಗೆಯ ಹೋಳಿಗೆಯಲ್ಲಿ ಮಾಡಿ ರುಚಿ ಸವಿಯುತ್ತಾರೆ. ಆದರೆ ಆರೋಗ್ಯಕ್ಕೆ ಹಿತಕರವಾದ ಹಲಸಿನ ಬೀಜದಿಂದಲೂ ಹೋಳಿಗೆ ಮಾಡಿ ಸವಿಯಬಹುದು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹೌದು ಮನೆಯಲ್ಲಿ ಈ ಕೆಲವೇ ಕೆಲವು ಐಟಂಗಳಿದ್ದರೆ ಸಾಕು, ಸ್ವಾದಿಷ್ಟವಾದ ಹಲಸಿನ ಬೀಜದ ಹೋಳಿಗೆ ಸವಿಯಲು ಸಿದ್ಧ. ರೆಸಿಪಿ ಮಾಡುವ ವಿಧಾನದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Jackfruits Seeds Holige : ಹಲಸಿನ ಬೀಜದ ಹೋಳಿಗೆ ಮಾಡುವುದು ಹೇಗೆ? ಇಲ್ಲಿದೆ ರೆಸಿಪಿ
ಹಲಸಿನ ಬೀಜದ ಹೋಳಿಗೆ
Edited By:

Updated on: Jul 13, 2024 | 2:08 PM

ಹಸಿದು ಹಲಸು ತಿನ್ನು ಎನ್ನುವ ಮಾತಿದೆ. ಹಲಸಿನ ಹಣ್ಣು ಎಂದ ಕೂಡಲೇ ಬಾಯಲ್ಲಿ ನೀರೂರುತ್ತದೆ. ತನ್ನ ಪರಿಮಳದಿಂದಲೇ ಎಲ್ಲರನ್ನು ಆಕರ್ಷಿಸುವ ಈ ಹಣ್ಣು ಮಾತ್ರವಲ್ಲದೇ, ಇದರ ಬೀಜಗಳು ಆರೋಗ್ಯಕ್ಕೆ ಬಲು ಪ್ರಯೋಜನಕಾರಿ. ಈ ಹಣ್ಣಿನಿಂದ ಮಾತ್ರವಲ್ಲ ಇದರ ಬೀಜದಿಂದಲೂ ನಾನಾ ರೀತಿಯ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಈ ಹಲಸಿನ ಬೀಜವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿವಿಧ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಇದರ ನಿಯಮಿತ ಸೇವನೆಯು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿದ್ದು, ಮನೆಯಲ್ಲೇ ಹಲಸಿನ ಬೀಜದ ಹೋಳಿಗೆ ಮಾಡಿ ಸವಿಯಬಹುದು.

ಹಲಸಿನ ಬೀಜದ ಹೋಳಿಗೆ ಮಾಡಲು ಬೇಕಾಗುವ ಸಾಮಗ್ರಿಗಳು

* ಒಂದು ಕಪ್ ನಷ್ಟು ಸಿಪ್ಪೆ ತೆಗೆದ ಹಲಸಿನ ಹಣ್ಣಿನ ಬೀಜ, ಬೆಳ್ತಿಗೆ ಅಕ್ಕಿ, ಬೆಲ್ಲ, ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ, ಅರಿಶಿನ ಪುಡಿ, ತುಪ್ಪ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: ಮನೆಯ ಸ್ವಚ್ಛತೆಗೂ ಇರಲಿ ಟೈಮ್ ಟೇಬಲ್, ಸ್ವಚ್ಛತೆ ಹೇಗಿರಬೇಕು? ಇಲ್ಲಿದೆ ನೋಡಿ

ಹಲಸಿನ ಬೀಜದ ಹೋಳಿಗೆ ಮಾಡುವ ವಿಧಾನ

  • ಮೊದಲಿಗೆ ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ಮೂರು ಗಂಟೆ ನೆನೆಸಿಟ್ಟು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.
  • ಹಲಸಿನ ಬೀಜಕ್ಕೆ ಒಂದೂವರೆ ಲೋಟ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
  • ಬೆಂದ ಬೀಜವನ್ನು ಮಿಕ್ಸಿ ಜಾರಿಗೆ ಹಾಕಿ ಬೆಲ್ಲ, ಉಪ್ಪು, ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ, ಅರಿಶಿನ ಪುಡಿ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ,
  • ಆ ಬಳಿಕ ಕೈಗೆ ಎಣ್ಣೆ ಸವರಿಕೊಂಡು ಹಲಸಿನ ಬೀಜದ ಹೂರಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.
  • ಈಗಾಗಲೇ ಎಣ್ಣೆ ಸವರಿದ ಬಾಳೆ ಎಲೆಯಲ್ಲಿಟ್ಟು ಹಲಸಿನ ಬೀಜದ ಹೂರಣವನ್ನು ಕೈಯಲ್ಲೇ ತೆಳ್ಳಗೆ ತಟ್ಟಿಕೊಳ್ಳಿ.
  • ಇದನ್ನು ರುಬ್ಬಿಟ್ಟ ಅಕ್ಕಿ ಹಿಟ್ಟಿನಲ್ಲಿ ಅದ್ದಿಕೊಂಡು ಕಾದ ಕಾವಲಿನ ಮೇಲೆ ಸ್ವಲ್ಪ ತುಪ್ಪ ಹಾಕಿ ಬೇಯಿಸಿಕೊಂಡರೆ ರುಚಿ ರುಚಿಯಾದ ಹಲಸಿನ ಬೀಜದ ಹೋಳಿಗೆ ಸವಿಯಲು ಸಿದ್ಧವಾಗಿರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ