
ಸಿಹಿ ಗೆಣಸು ಎಂದ ಕೂಡಲೇ ಮುಖವನ್ನು ಸಿಂಡರಿಸಿಕೊಂಡು ಬಿಡುವವರೇ ಹೆಚ್ಚು. ಆದರೆ ನಮ್ಮ ಪೂರ್ವಜರ ಆಹಾರವಾಗಿದ್ದ ಇದರಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಪೋಷಕಾಂಶಗಳು ಹೇರಳವಾಗಿದೆ. ಈ ಸಿಹಿ ಗೆಣಸನ್ನು ಬೇಯಿಸಿ ತಿನ್ನಲು ಇಷ್ಟವಿಲ್ಲ ಎಂದರೆ ಇದರಿಂದ ಸ್ವಾದಿಷ್ಟವಾದ ಪಾಯಸವನ್ನು ಮಾಡಿ ಸೇವಿಸಿದರೆ ಮನಸ್ಸಿಗೂ ತೃಪ್ತಿ ಆರೋಗ್ಯಕ್ಕೂ ಉತ್ತಮ. ಮನೆಯಲ್ಲಿ ಸಿಹಿ ಗೆಣಸಿದ್ದರೆ ಈ ಕೆಲವು ಪದಾರ್ಥಗಳನ್ನು ಸೇರಿಸಿ ಪಾಯಸ ಮಾಡಿ ಸವಿಯಿರಿ.
* ಒಂದು ಕಪ್ ಸಿಹಿ ಗೆಣಸು
* ಒಂದು ಕಪ್ ತೆಂಗಿನ ಹಾಲು
* ಬೆಲ್ಲ
* ಏಲಕ್ಕಿ
* ತುಪ್ಪ
* ರುಚಿಗೆ ತಕ್ಕಷ್ಟು ಉಪ್ಪು
* ದ್ರಾಕ್ಷಿ, ಗೋಡಂಬಿ
ಇದನ್ನೂ ಓದಿ: ಹಿಂದೂ ವಿವಾಹ ಪದ್ದತಿಯಲ್ಲಿ ವಧುವಿಗೆ ಕಾಲುಂಗುರ ಏಕೆ ತೊಡಿಸುತ್ತಾರೆ? ಇದರ ಹಿಂದಿದೆ ಆರೋಗ್ಯ ಪ್ರಯೋಜನ
* ಮೊದಲಿಗೆ ಕುಕ್ಕರ್ ಗೆ ಕತ್ತರಿಸಿಟ್ಟ ಗೆಣಸು, ಸ್ವಲ್ಪ ನೀರು, ಹಾಗೂ ಚಿಟಿಕೆಯಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ. ಬೆಂದ ಬಳಿಕ ನೀರು ಹಾಗೂ ಗೆಣಸನ್ನು ಪ್ರತ್ಯೇಕ ಮಾಡಿಕೊಳ್ಳಿ.
* ಬಾಣಲೆಯನ್ನು ಸ್ಟವ್ ಮೇಲೆ ಇಟ್ಟು ಸ್ವಲ್ಪ ತುಪ್ಪ ಹಾಕಿ, ದ್ರಾಕ್ಷಿ ಮತ್ತು ಗೋಡಂಬಿಯನ್ನು ಕೆಂಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ಗ್ಯಾಸ್ ಸ್ಟವ್ ಮೇಲೆ ಮತ್ತೊಂದು ಬಾಣಲೆ ಇಟ್ಟು ತೆಂಗಿನ ಹಾಲು ಹಾಕಿ, ನಂತರದಲ್ಲಿ ಬೆಲ್ಲವನ್ನು ಹಾಕಿ ಕರಗಿಸಿಕೊಳ್ಳಿ .
* ಬೆಲ್ಲ ಕರಗಿದ ಬಳಿಕ ಬೆಂದ ಗೆಣಸನ್ನು ಸೇರಿಸಿ, ಐದರಿಂದ ಹತ್ತು ನಿಮಿಷಗಳ ಚೆನ್ನಾಗಿ ಕುದಿಯಲು ಬಿಡಿ. ಇದಕ್ಕೆ ಏಲಕ್ಕಿ ಪುಡಿ, ಹುರಿದುಕೊಂಡ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹಾಕಿದರೆ ರುಚಿಕರವಾದ ಸಿಹಿಗೆಣಸಿನ ಪಾಯಸ ಸವಿಯಲು ಸಿದ್ಧ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Fri, 2 August 24