ಮೈಗ್ರೇನ್‌ನಿಂದ ಪರಿಹಾರ ಪಡೆಯಲು ಪ್ರತಿನಿತ್ಯ ಈ ಹಣ್ಣುಗಳನ್ನು ಸೇವನೆ ಮಾಡಬೇಕಂತೆ
ಕಳಪೆ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡದಿಂದಾಗಿ ಜನರು ಮೈಗ್ರೇನ್ ತಲೆನೋವಿಗೆ ಒಳಗಾಗುತ್ತಾರೆ. ಈ ತಲೆನೋವು ವಿಪರೀತ ನೋವಿನಿಂದ ಕೂಡಿದ್ದು, ಕೆಲವರಿಗೆ ವಾಂತಿ, ತಲೆತಿರುಗುವಿಕೆ, ಆಯಾಸ ಉಂಟಾಗುತ್ತದೆ. ಹಾಗಿರುವಾಗ ಈ ಸಂದರ್ಭದಲ್ಲಿ ಈ ಕೆಲವು ಹಣ್ಣುಗಳನ್ನು ತಿನ್ನುವುದರಿಂದ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಬಹುದಂತೆ. ಹಾಗಿದ್ದರೆ, ಮೈಗ್ರೇನ್‌ನಿಂದ ಬಳಲುತ್ತಿರುವವರು ಯಾವೆಲ್ಲಾ ಹಣ್ಣುಗಳನ್ನು ತಿನ್ನುವುದು ಉತ್ತಮ ಎಂಬುದನ್ನು ನೋಡಿ.

ಪ್ರತಿಯೊಬ್ಬರಿಗೂ ಕಾಡುವಂತಹ ಸಾಮಾನ್ಯ ಸಮಸ್ಯೆಗಳಲ್ಲಿ ತಲೆನೋವು ಸಹ ಒಂದು. ನಿರಂತರ ಒತ್ತಡ, ಕೆಲಸದ ಹೊರೆ, ನಿದ್ರೆಯ ಕೊರತೆ ಇತ್ಯಾದಿ ಕಾರಣಗಳಿಂದ ತಲೆನೋವು ಉಂಟಾಗುತ್ತದೆ. ಅದರಲ್ಲಿ ಕೆಲವರು ಮೈಗ್ರೇನ್ (migraine) ತಲೆನೋವಿನಿಂದ ಬಳಲುತ್ತಿರುತ್ತಾರೆ. ಇದು ವಿಪರೀತ ನೋವಿನಿಂದ ಕೂಡಿರುತ್ತದೆ. ಕಳಪೆ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ, ದೇಹದಲ್ಲಿ ನೀರಿನ ಕೊರತೆ ಮತ್ತು ಕೆಲಸದ ಒತ್ತಡ ಇವೆಲ್ಲಾ ಮೈಗ್ರೇನ್‌ಗೆ ಮುಖ್ಯ ಕಾರಣಗಳು. ಈ ತಲೆನೋವಿನಿಂದ ಪರಿಹಾರ ಪಡೆಯಲು ಈ ಒಂದಷ್ಟು ಹಣ್ಣುಗಳನ್ನು ಸೇವನೆ ಮಾಡಬೇಕಂತೆ. ಹಾಗಿದ್ದರೆ ಮೈಗ್ರೇನ್ ಸಮಸ್ಯೆಯಿಂದ ಪರಿಹಾರ ಪಡೆಯಲು ಯಾವ ಹಣ್ಣುಗಳನ್ನು ಸೇವನೆ ಮಾಡಿದರೆ ಉತ್ತಮ ಎಂಬುದನ್ನು ತಿಳಿಯಿರಿ.
ಮೈಗ್ರೇನ್‌ನಿಂದ ಬಳಲುತ್ತಿರುವವರು ಸೇವನೆ ಮಾಡಬೇಕಾದ ಹಣ್ಣುಗಳು:
ಕಲ್ಲಂಗಡಿ ಹಣ್ಣು: ಮೈಗ್ರೇನ್‌ನಿಂದ ಬಳಲುತ್ತಿರುವವರು ಕಲ್ಲಂಗಡಿ ತಿನ್ನುವುದು ತುಂಬಾ ಪ್ರಯೋಜನಕಾರಿ. ವೈದ್ಯರು ಮೈಗ್ರೇನ್ ರೋಗಿಗಳಿಗೆ ಕಲ್ಲಂಗಡಿಯನ್ನು ಶಿಫಾರಸು ಮಾಡುತ್ತಾರೆ. ಕಲ್ಲಂಗಡಿಯಲ್ಲಿ ಸಾಕಷ್ಟು ಪ್ರಮಾಣದ ನೀರಿನಾಂಶ ಇರುವುದರಿಂದ ಇದರ ಸೇವನೆಯು ತಲೆನೋವು ಕಡಿಮೆ ಮಾಡಲು ಮತ್ತು ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ನೀರಿನ ಜೊತೆಗೆ, ಕಲ್ಲಂಗಡಿಯಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಇರುತ್ತದೆ, ಇದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮೈಗ್ರೇನ್ ರೋಗಿಗಳು ಪ್ರತಿದಿನ ಕಲ್ಲಂಗಡಿ ಸೇವಿಸಬೇಕು.
ಬಾಳೆಹಣ್ಣು: ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅವುಗಳನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪೋಷಣೆ ದೊರೆಯುತ್ತದೆ ಮತ್ತು ಇದು ಅನಾರೋಗ್ಯದ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಬಾಳೆಹಣ್ಣು ಮೈಗ್ರೇನ್ ಕಮ್ಮಿ ಮಾಡಲು ಸಹಕಾರಿ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದ್ದು, ಇದು ತಲೆನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಸೇಬು ಹಣ್ಣು: ಸೇಬಿನಲ್ಲಿರುವ ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಪೆಕ್ಟಿನ್ ನಂತಹ ಪೋಷಕಾಂಶಗಳು ದೇಹಕ್ಕೆ ತುಂಬಾನೇ ಪ್ರಯೋಜನಕಾರಿ. ಜೊತೆಗೆ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಲು ಸಹಕಾರಿ ಈ ಹಣ್ಣು. ಸೇಬು ತ ತಲೆನೋವು, ವಾಕರಿಕೆ ಮತ್ತು ವಾಂತಿಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಈ ಸಿಂಪಲ್ ಅಭ್ಯಾಸಗಳನ್ನು ರೂಢಿಸಿಕೊಂಡರೆ ಎಷ್ಟೆಲ್ಲಾ ಲಾಭವಿದೆ ನೋಡಿ
ಅವಕಾಡೊ: ಮೈಗ್ರೇನ್‌ನಿಂದ ಬಳಲುತ್ತಿರುವವರು ಅವಕಾಡೊ ಹಣ್ಣನ್ನು ಸೇವನೆ ಮಾಡುವುದು ಸಹ ತುಂಬಾನೇ ಒಳ್ಳೆಯದು. ಇದು ತಲೆನೋವು ಮತ್ತು ಮೈಗ್ರೇನ್ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆವಕಾಡೊ ಸಾಕಷ್ಟು ಪ್ರಮಾಣದಲ್ಲಿ ರೈಬೋಫ್ಲಾವಿನ್, ನಿಯಾಸಿನ್, ಫೋಲೇಟ್, ಪೊಟ್ಯಾಸಿಯಮ್ ಮತ್ತು ವಿಟಮಿನ್,ಲುಟೀನ್ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಅಂಶಗಳನ್ನು ಒಳಗೊಂಡಿದ್ದು, ಇದು ತಲೆನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ಹಣ್ಣುಗಳ ಜೊತೆಗೆ ಮೈಗ್ರೇನ್‌ನಿಂದ ಬಳಲುತ್ತಿರುವವರು ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಕೂಡ ತುಂಬಾ ಮುಖ್ಯವಾಗಿದೆ. ಜೊತೆಗೆ ಯೋಗ, ಧ್ಯಾನ, ವ್ಯಾಯಾಮಗಳು ಸಹ ಮೈಗ್ರೇನ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




