International Students’ Day 2025: ಸದೃಢ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ
ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ಜಯಂತಿಯ ಸ್ಮರಣಾರ್ಥವಾಗಿ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿ ದಿನವನ್ನು ಆಚರಿಸುವಂತೆ, ಶಿಕ್ಷಣದ ಮಹತ್ವವನ್ನು ಸಾರಲು, ವಿದ್ಯಾರ್ಥಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು, ಅವರು ಸಾಧನೆ, ಕೊಡುಗೆಗಳನ್ನು ಗೌರವಿಸಲು ನವೆಂಬರ್ 17 ರಂದು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆಯೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಶಿಕ್ಷಣವು ಕೇವಲ ಜ್ಞಾನವನ್ನು ಗಳಿಸುವ ಸಾಧನವಲ್ಲ, ಸಮಾಜ ಮತ್ತು ರಾಷ್ಟ್ರವನ್ನು ಬಲಿಷ್ಠವಾಗಿ ನಿರ್ಮಿಸುವ ಅಸ್ತ್ರವೂ ಹೌದು. ಶಿಕ್ಷಣವು ವಿದ್ಯಾರ್ಥಿಯ (Student) ಜ್ಞಾನ, ಕೌಶಲ್ಯ, ವ್ಯಕ್ತಿತ್ವವನ್ನು ಸಕಾರಾತ್ಮಕ ರೀತಿಯಲ್ಲಿ ಅಭಿವೃದ್ಧಿಪಡಿಸುವುದಲ್ಲದೆ, ಶಿಕ್ಷಣವು ವಿದ್ಯಾರ್ಥಿಗಳಿಗೆ ಸಮಾಜವನ್ನು ಬದಲಾಯಿಸುವ, ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಅವಕಾಶವನ್ನು ಸಹ ಒದಗಿಸಿಕೊಡುತ್ತದೆ. ಶಿಕ್ಷಣದ ಈ ಮಹತ್ವವನ್ನು ಸಾರಲು, ವಿದ್ಯಾರ್ಥಿಗಳ ಹಕ್ಕುಗಳು, ಅವರ ಸಾಧನೆಗಳು ಮತ್ತು ಕೊಡುಗೆಗಳನ್ನು ಗೌರವಿಸಲು ಪ್ರತಿವರ್ಷ ನವೆಂಬರ್ 17 ರಂದು ಅಂತಾರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಹಿನ್ನೆಲೆಯ ಬಗ್ಗೆ ತಿಳಿಯಿರಿ.
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನದ ಇತಿಹಾಸವೇನು?
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನ ಕೇವಲ ಆಚರಣೆಯಲ್ಲ, ಈ ದಿನವು ತಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವಿದ್ಯಾರ್ಥಿಗಳ ಶೌರ್ಯ ಮತ್ತು ಹೋರಾಟವನ್ನು ಸ್ಮರಿಸುತ್ತದೆ. 1939 ರಲ್ಲಿ ಪ್ರೇಗ್ ವಿಶ್ವವಿದ್ಯಾನಿಲಯದ ಮೇಲೆ ನಾಜಿ ದಾಳಿಯ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳು ನಾಜಿಗಳ ವಿರುದ್ಧ ತೋರಿದ ಧೈರ್ಯ ಮತ್ತು ಶೌರ್ಯವನ್ನು ನೆನಪಿಟ್ಟುಕೊಳ್ಳಲು ನವೆಂಬರ್ 17 ರಂದು ಅಂತಾರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಗುತ್ತದೆ. ಮೊದಲು ಈ ವಿಶೇಷ ದಿನವನ್ನು 1941 ರಲ್ಲಿ ಲಂಡನ್‌ನ ಅಂತಾರಾಷ್ಟ್ರೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಆಚರಿಸಲಾಯಿತು. ಇಲ್ಲಿ ವಿದ್ಯಾರ್ಥಿಗಳೇ ಈ ದಿನವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಪ್ರಪಂಚದಾದ್ಯಂತ ಆಚರಿಸುತ್ತಾ ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನವು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳ ನಡುವಿನ ಬಹುಸಂಸ್ಕೃತಿ, ವೈವಿಧ್ಯತೆ ಮತ್ತು ಬೆಂಬಲದ ಆಚರಣೆಯಾಗಿದೆ. ಈ ದಿನದ ಇತಿಹಾಸವು ಜೆಕೊಸ್ಲೊವಾಕಿಯಾದ ರಾಜಧಾನಿ ಪ್ರೇಗ್‌ಗೆ ಸಂಬಂಧಿಸಿದೆ. 1939 ರಲ್ಲಿ, ಜೆಕೊಸ್ಲೊವಾಕಿಯಾದ ಕೆಲವು ಭಾಗಗಳನ್ನು ನಾಜಿಗಳು ಆಳುತ್ತಿದ್ದರು. ಆ ಸಮಯದಲ್ಲಿ ಇವರು ಪ್ರೇಗ್ ವಿಶ್ವವಿದ್ಯಾನಿಲಯದ ಮೇಲೂ ದಾಳಿಯನ್ನು ಮಾಡಿದ್ದರು. ಈ ಕಾರಣದಿಂದ ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಾಜಿಗಳ ವಿರುದ್ಧ ಪ್ರತಿಭಟನೆಯನ್ನು ಪ್ರದರ್ಶಿಸಿದರು. ಈ ಪ್ರತಿಭಟನೆಯ ಸಮಯದಲ್ಲಿ, ನಾಜಿಗಳು ಗುಂಡಿನ ದಾಳಿಯನ್ನು ನಡೆಸಿದ್ದು, ಈ ದಾಳಿಯಲ್ಲಿ ಒಬ್ಬ ವಿದ್ಯಾರ್ಥಿ ಮೃತಪಟ್ಟನು. ಇದಾದ ನಂತರವೂ ಪ್ರತಿಭಟನೆ ಮುಂದುವರೆಯಿತು. ಪ್ರತಿಭಟನೆಯನ್ನು ಹತ್ತಿಕ್ಕಲು ನವೆಂಬರ್ 17, 1939 ರಂದು, ನಾಜಿ ಸೈನಿಕರು ಸುಮಾರು 1 ಸಾವಿರಷ್ಟು ವಿದ್ಯಾರ್ಥಿಗಳನ್ನು ಬಂಧಿಸಿದರು. ಈ ಪೈಕಿ ಒಂಬತ್ತು ವಿದ್ಯಾರ್ಥಿಗಳು ನೇಣಿಗೆ ಶರಣಾದರು. ಈ ಘಟನೆಯ ನಂತರ ಅಲ್ಲಿದ್ದ ಎಲ್ಲಾ ಶಿಕ್ಷಣ ಸಂಸ್ಥೆಗಳೂ ಬಂದ್ ಆಗಿದ್ದವು. ಹೀಗೆ 1939 ರಲ್ಲಿ ನಾಜಿಗಳ ದಾಳಿಯ ಸಂದರ್ಭದಲ್ಲಿ ಪ್ರೇಗ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತೋರಿದ ಶೌರ್ಯವನ್ನು ಸ್ಮರಿಸಲು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪತ್ರಿಕೋದ್ಯಮದ ಪಾತ್ರ ಮಹತ್ತರವಾದದ್ದು
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನದ ಮಹತ್ವವೇನು?
- ಈ ದಿನದ ಮುಖ್ಯ ಉದ್ದೇಶವೆಂದರೆ ಶಿಕ್ಷಣವು ಕೇವಲ ಜ್ಞಾನವನ್ನು ಗಳಿಸುವ ಸಾಧನವಲ್ಲ, ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವ ಸಾಧನ ಎಂಬುದನ್ನು ನೆನೆಪಿಸುತ್ತದೆ.
- ಕಠಿಣ ಸಂದರ್ಭಗಳಲ್ಲಿಯೂ ಸಹ ವಿದ್ಯಾರ್ಥಿಗಳ ಧೈರ್ಯ ಮತ್ತು ಸಮರ್ಪಣೆಯಿಂದ ಸಮಾಜದಲ್ಲಿ ಬದಲಾವಣೆಯನ್ನು ತರಬಹುದು ಎಂಬುದನ್ನು ಇದು ಕಲಿಸುತ್ತದೆ.
- ಅಂತಾರಾಷ್ಟ್ರೀಯ ವಿದ್ಯಾರ್ಥಿ ದಿನವು ಯುವಜನರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಲು ಮತ್ತು ಶಿಕ್ಷಣದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಶ್ರಮಿಸಲು ಪ್ರೇರೇಪಿಸುತ್ತದೆ.
- ಅಂತಾರಾಷ್ಟ್ರೀಯ ವಿದ್ಯಾರ್ಥಿ ದಿನವು ವಿದ್ಯಾರ್ಥಿಗಳ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವ ದಿನ ಮಾತ್ರವಲ್ಲ, ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳ ಮಹತ್ವವನ್ನು ಎತ್ತಿ ತೋರಿಸುವ ಜಾಗತಿಕ ವೇದಿಕೆಯಾಗಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:43 am, Mon, 17 November 25




