ಬಡವರ ಪಾಲಿನ ಬಾದಾಮಿ ಅಂತಾನೇ ಕರೆಯಲ್ಪಡುವ ಶೇಂಗಾ ತಿನ್ನಲು ರುಚಿಕರವಾದುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣಾಂಶದ ಉತ್ತಮ ಮೂಲವಾಗಿದ್ದು, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದರಲ್ಲೂ ಚಳಿಗಾಲದಲ್ಲಿ ಕಡಲೆಕಾಯಿಯನ್ನು ತಿನ್ನುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಚಳಿಗಾಲದಲ್ಲಿನ ಶೀತ ವಾತವರಣಕ್ಕೆ ನಮ್ಮ ರೋಗನಿರೋಧಕ ಶಕ್ತಿ ಕುಂಠಿತವಾಗುವುದು ಮಾತ್ರವಲ್ಲದೆ ಈ ಸಮಯದಲ್ಲಿ ಹಲವಾರು ಚರ್ಮ ಸಂಬಂಧಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಕಡಲೆಕಾಯಿಯನ್ನು ಸೇವನೆ ಮಾಡುವ ಮೂಲಕ ಆರೋಗ್ಯ ಹಾಗೂ ತ್ವಚೆಯ ಸಂಬಂಧಿ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ಹಾಗಾದರೆ ಚಳಿಗಾಲದಲ್ಲಿ ಶೇಂಗಾಬೀಜ ತಿನ್ನುವುದರಿಂದ ದೊರಕುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.
ಶೀತ ಮತ್ತು ಕೆಮ್ಮಿನ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು:
ಚಳಿಗಾಲದಲ್ಲಿನ ಶೀತ ವಾತವರಣದ ಕಾರಣದಿಂದ ಈ ಋತುವಿನಲ್ಲಿ ನೆಗಡಿ ಮತ್ತು ಶೀತದ ಸಮಸ್ಯೆ ಹೆಚ್ಚು ಬಾಧಿಸುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಕಡಲೆಕಾಯಿನ್ನು ಸೇವಿಸಬಹುದು. ಶೇಂಗಾ ತಿನ್ನುವುದರಿಂದ ದೇಹವು ಬೆಚ್ಚಗಿರುತ್ತದೆ, ಇದರಿಂದ ವ್ಯಕ್ತಿಯು ಕೆಮ್ಮು ಮತ್ತು ಶೀತದ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಕಡಿಮೆಯಿರುತ್ತದೆ. ಅಲ್ಲದೆ ಇದನ್ನು ದಿನನಿತ್ಯ ಸೇವಿಸುವುದರಿಂದ ಶ್ವಾಸಕೋಶವು ಬಲಗೊಳ್ಳುತ್ತದೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:
ಚಳಿಗಾಲದಲ್ಲಿನ ಶೀತ ವಾತಾವರಣದ ಕಾರಣದಿಂದಾಗಿ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಇದರಿಂದ ಈ ಋತುವಿನಲ್ಲಿ ಜನರು ಹೆಚ್ಚಾಗಿ ಶೀತ, ಜ್ವರ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ. ಹೀಗಿರುವಾಗ ನಿಯಮಿತವಾಗಿ ಸೀಮಿತ ಪ್ರಮಾಣದಲ್ಲಿ ಕಡಲೆಕಾಯಿಯನ್ನು ತಿನ್ನುವ ಮೂಲಕ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. ವಿಟಮಿನ್ ಸಿ ಕಡಲೆಕಾಯಿಯಲ್ಲಿ ಹೇರಳವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಮೂಳೆಗಳನ್ನು ಬಲಪಡಿಸಲು ಸಹಕಾರಿ:
ಕಡಲೆಕಾಯಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಮೆಗ್ನೇಸಿಯಮ್ ಸಮೃದ್ಧವಾಗಿದೆ. ಇದು ಮೂಳೆಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಶೀತ ವಾತವರಣದಲ್ಲಿ ಪ್ರತಿದಿನ ಕಡಲೆಕಾಯಿಯನ್ನು ತಿನ್ನುವುದರಿಂದ ನಮ್ಮ ಮೂಳೆಗಳು ಬಲಗೊಳ್ಳುತ್ತವೆ. ಮತ್ತು ಇದು ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ.
ಇದನ್ನೂ ಓದಿ: ಸಂಜೆಯ ಸ್ಯ್ನಾಕ್ಸ್ ಸಮಯಕ್ಕೆ ಮನೆಯಲ್ಲಿಯೇ ತಯಾರಿಸಿ ಗರಿಗರಿಯಾದ ಆಲೂ ಟಿಕ್ಕಿ
ಹೊಟ್ಟೆ ಸಂಬಂಧಿ ಕಾಯಿಲೆಗಳಿಂದ ಪರಿಹಾರವನ್ನು ಒದಗಿಸುತ್ತದೆ:
ಕಡಲೆಕಾಯಿಯ ಸೇವನೆಯು ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಇದರಲ್ಲಿ ನಾರಿನಂಶವಿದ್ದು, ಇದು ಜೀರ್ಣಕ್ರಿಯೆಗೆ ಉತ್ತಮ ಮತ್ತು ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿ. ಇದಲ್ಲದೆ ಕಡಲೆಕಾಯಿಯನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತಹೀನತೆಯ ಸಮಸ್ಯೆ ದೂರವಾಗುತ್ತದೆ. ಏಕೆಂದರೆ ಇದರಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶವಿದ್ದು, ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ:
ಚಳಿಗಾಲ ಬಂತೆಂದರೆ ಸಾಕು, ಸಾಕಷ್ಟು ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ಕಡಲೆಕಾಯಿಯನ್ನು ಸೇವನೆ ಮಾಡುವ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಇದರಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ಫೈಬರ್, ಖನಿಜಗಳು, ಜೀವಸ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಚರ್ಮದಲ್ಲಿ ಕಾಣಿಸಿಕೊಳ್ಳುವ ಸುಕ್ಕುಗಳನ್ನು ಕಡಿಮೆ ಮಾಡಿ ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ. ಮಾತ್ರವಲ್ಲದೆ ಕಡಲೆಕಾಯಿಯಲ್ಲಿರುವ ಕೊಬ್ಬಿನಾಮ್ಲಗಳು ಚರ್ಮದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನಾರಿನಾಂಶವೂ ಇದರಲ್ಲಿದ್ದು, ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ