
ಇಂದಿನ ಈ ಒತ್ತಡದ ಜೀವನದಲ್ಲಿ, ವೈಯಕ್ತಿಕ ಹಾಗೂ ವೃತ್ತಿ ಜೀವನದ ಜಂಜಾಟದ ಕಾರಣದಿಂದಾಗಿ ಹಲವರಿಗೆ ಸಂತೋಷವಾಗಿರುವುದು ತುಂಬಾನೇ ಕಷ್ಟಕರವಾಗಿದೆ. ಈ ಸಂತೋಷ ಇಲ್ಲದಿದ್ದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಜೊತೆಗೆ ಜೀವನವನ್ನು ಪೂರ್ಣವಾಗಿ ಆನಂದಿಸಲು ಸಹ ಆಗುವುದಿಲ್ಲ. ಹೀಗಿರುವಾಗ ಪ್ರತಿದಿನ ಸಂತೋಷದಿಂದ ಮತ್ತು ಶಾಂತಿಯುತವಾಗಿ ಜೀವನ (Happy Life) ನಡೆಸಲು ಜೀವನಶೈಲಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸಬೇಕು. ಈ ಸರಳ ಅಭ್ಯಾಸಗಳನ್ನು ಪಾಲಿಸುವುದರಿಂದ ಒತ್ತಡ ನಿವಾರಣೆಯಾಗುವುದು ಮಾತ್ರವಲ್ಲದೆ ಸಕಾರಾತ್ಮಕತೆಯೊಂದಿಗೆ ನೀವು ಸಂತೋಷದಾಯಕ ಜೀವನವನ್ನು ನಡೆಸಬಹುದು. ಹಾಗಿದ್ರೆ ಹ್ಯಾಪಿಯಾಗಿರಲು ಯಾವೆಲ್ಲಾ ರೂಲ್ಸ್‌ಗಳನ್ನು ಪಾಲಿಸಬೇಕು ಎಂಬುದನ್ನು ತಿಳಿಯಿರಿ.
ಸಕಾರಾತ್ಮಕ ಆಲೋಚನೆ: ನಿಮ್ಮ ದಿನವನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಪ್ರಾರಂಭಿಸಿ. ಇದು ಮನಸ್ಥಿತಿಯನ್ನು ಸುಧಾರಿಸಲು ಮತ್ತು ನಕಾರಾತ್ಮಕತೆಯನ್ನು ನಿಮ್ಮಿಂದ ದೂರವಿಡಲು ಸಹಾಯ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳ ಬದಲು ಉತ್ತಮ ಗುರಿಗಳನ್ನು ಯೋಜಿಸುವ ಮೂಲಕ ದಿನವನ್ನು ಪ್ರಾರಂಭಿಸಿ. ಈ ಸಣ್ಣ ಅಭ್ಯಾಸ ನಿಮ್ಮ ಆಲೋಚನೆಗಳನ್ನು ಬದಲಾಯಿಸುತ್ತದೆ, ಜೀವನದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ನಿಮಗಾಗಿ ಸಮಯ ಮೀಸಲಿಡಿ: ದೈನಂದಿನ ಜೀವನದ ಗಡಿಬಿಡಿಯಲ್ಲಿ, ಹೆಚ್ಚಿನವರು ತಮಗಾಗಿ ಸಮಯವನ್ನು ಮೀಸಲಿಡಲು ಮರೆತುಬಿಡುತ್ತಾರೆ. ಹಾಗಾಗಿ ನಿಮ್ಮ ಸ್ವಾ ಆರೈಕೆಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ, ಖಂಡಿತವಾಗಿಯೂ ಇದು ನಿಮ್ಮ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.
ಕೃತಜ್ಞತೆಯನ್ನು ವ್ಯಕ್ತಪಡಿಸಲು ಕಲಿಯಿರಿ: ಸಣ್ಣಪುಟ್ಟ ವಿಷಯಗಳಿಗೂ ಕೃತಜ್ಞತೆ ವ್ಯಕ್ತಪಡಿಸುವುದರಿಂದ ನಿಮ್ಮ ಸಂತೋಷ ಹೆಚ್ಚಾಗುತ್ತದೆ. ಹೌದು ಪ್ರತಿ ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ನಿಮ್ಮಲ್ಲಿರುವ ಒಳ್ಳೆಯ ವಿಷಯಗಳಿಗೆ ಕೃತಜ್ಞತೆ ಸಲ್ಲಿಸಿ ಇದು ನಿಮ್ಮ ಮಾನಸಿಕ ಸಂತೋಷವನ್ನು ಹೆಚ್ಚಿಸುತ್ತದೆ. ಜೀವನವೂ ಸಕಾರಾತ್ಮಕವಾಗಿರುತ್ತದೆ.
ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳಿ: ನಿರಂತರವಾಗಿ ಮೊಬೈಲ್ ಪರದೆಗೆ ಅಂಟಿಕೊಂಡಿರುವುದರಿಂದ ಮನಸ್ಸು ಆಯಾಸಗೊಳ್ಳುತ್ತದೆ. ಮತ್ತು ಇದು ಅನಗತ್ಯ ಒತ್ತಡವನ್ನು ಹೆಚ್ಚಿಸುತ್ತದೆ. ನಿಮ್ಮ ಫೋನ್, ಲ್ಯಾಪ್‌ಟಾಪ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ದೂರವಿಟ್ಟು ನಿಮ್ಮವರೊಂದಿಗೆ ಸಮಯವನ್ನು ಕಳೆಯಿರಿ ಇದು ಸಂತೋಷವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಈ ವಿರಾಮವು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ, ನಿಮಗೆ ನಿರಾಳತೆಯನ್ನು ನೀಡುತ್ತದೆ.
ವ್ಯಾಯಾಮ ಮಾಡಿ: ಪ್ರತಿನಿತ್ಯ ವ್ಯಾಯಾಮ, ಧ್ಯಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇದು ಆರೋಗ್ಯವನ್ನು ಉತ್ತಮವಾಗಿಡುವುದರ ಜೊತೆಗೆ ಇದು ನೀವು ದಿನವಿಡೀ ಸಂತೋಷದಿಂದಿರಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಎಂಡಾರ್ಫಿನ್ ಎಂಬ ಸಂತೋಷದ ಹಾರ್ಮೋನು ಬಿಡುಗಡೆಯಾಗುತ್ತದೆ, ಇದು ನಿಮಗೆ ಸಂತೋಷವಾಗಿರಲು ಸಹಾಯ ಮಾಡುತ್ತದೆ.
ನಿಮ್ಮನ್ನು ಹೋಲಿಕೆ ಮಾಡುವುದನ್ನು ಬಿಡಿ: ಜೀವನದಲ್ಲಿ ನೀವು ಖುಷಿಯಾಗಿರಬೇಕೆಂದರೆ, ಮೊದಲು ನೀವು ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡುವುದನ್ನು ಬಿಡಬೇಕು. ಹೀಗೆ ಹೋಲಿಕೆ ಮಾಡುವ ಅಭ್ಯಾಸ ಜೀವನದ ದುಃಖವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರ ಬದಲು ನಿಮ್ಮ ಜೀವನವನ್ನು ಆನಂದಿಸಲು ಕಲಿಯಿರಿ ಖಂಡಿತವಾಗಿಯೂ ಇದು ಸಂತೋಷವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಮನಸ್ಥಿತಿಯನ್ನು ಸುಧಾರಿಸಲು, ಸಕಾರಾತ್ಮಕತೆಯನ್ನು ಹೆಚ್ಚಿಸಲು ಮನೆಯಲ್ಲಿ ಈ ಗಿಡಗಳನ್ನು ನೆಡಿ
ಸಣ್ಣ ಸಂತೋಷಗಳನ್ನು ಆಚರಿಸಿ: ಹೆಚ್ಚಿನವರು ದೊಡ್ಡ ಸಾಧನೆಗಳನ್ನು ಬೆನ್ನಟ್ಟುವ ಭರದಲ್ಲಿ ಜೀವನದ ಸಣ್ಣ ಸಣ್ಣ ಖುಷಿಯ ವಿಚಾರಗಳನ್ನು ಕಡೆಗಣಿಸುತ್ತಾರೆ. ಇದರ ಬದಲು ಪ್ರತಿಯೊಂದು ಸಣ್ಣಪುಟ್ಟ ವಿಷಯಗಳನ್ನು ಆನಂದಿಸಲು ಕಲಿಯಿರಿ, ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ನೀವು ಸಂತೋಷದಿಂದಿರಲು ಸಹಾಯ ಮಾಡುತ್ತದೆ.
ಸಹಾಯ ಮತ್ತು ಕ್ಷಮಾ ಗುಣ: ಜೀವನದಲ್ಲಿ ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ, ಆದರೆ ಅವುಗಳನ್ನೇ ಇಟ್ಟುಕೊಂಡು ದ್ವೇಷ ಮಾಡುವುದು ಸರಿಯಲ್ಲ. ಆದ್ದರಿಂದ ಆಗುವುದೆಲ್ಲಾ ಒಳ್ಳೆಯದ್ದಕ್ಕೆ ಎಂದಿಗೂ ಕ್ಷಮಿಸಿ ಮುಂದೆ ನಡೆಯುವುದನ್ನು ಕಲಿಯಿರಿ ಜೊತೆಗೆ ನಿಮ್ಮಿಂದ ಸಾಧ್ಯವಾದಷ್ಟು ಇತರರರಿಗೆ ಸಹಾಯ ಮಾಡಿ. ಇದು ಮನಸ್ಸಿಗೆ ತೃಪ್ತಿಯನ್ನು ನೀಡುತ್ತದೆ, ಮತ್ತು ನಿಮ್ಮ ಸಂತೋಷದ ಮಟ್ಟವನ್ನು ಹೆಚ್ಚಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ