ತಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಹಲವು ರೀತಿಯ ಸಮಸ್ಯೆಗಳು ಆರಂಭವಾಗುತ್ತದೆ. ತಲೆಯ ಹೊಟ್ಟು, ಸೀಳು ಕೂದಲು, ನೆತ್ತಿಯ ಉರಿ, ನೆತ್ತಿಯ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಹೀಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳಲ್ಲಿ ಹೆಚ್ಚು ಅಪಾಯ ತರುವುದು ನೆತ್ತಿಯ ಮೇಲಿನ ಮೊಡವೆಗಳು (scalp pimples). ಒತ್ತಡ, ಕೂದಲಿನ ಸರಿಯಾದ ಆರೈಕೆ (Hair Care) ಮಾಡಿಕೊಳ್ಳದಿರುವುದು, ಅತಿಯಾದ ಶಾಂಪೂ (Shampoo) ಬಳಕೆ, ಕೂದಲನ್ನು ಬಿಗಿಯಾಗಿ ಕಟ್ಟುವುದು ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿರುವುದು ಈ ನೆತ್ತಿಯ ಮೊಡವೆಗಳಿಗೆ ಕಾರಣವಾಗುತ್ತದೆ. ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್, ಪಸ್ಟಲ್ಗಳು ಕೂಡ ಕಾಣಿಸಿಕೊಳ್ಳುತ್ತವೆ. ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಈ ನೆತ್ತಿಯ ಮೊಡವೆಯ ಸಮಸ್ಯೆ ಕ್ರಮೇಣ ಅಪಾಯವನ್ನು ತಂದೊಟ್ಟಬಹುದು. ಇದನ್ನು ಪೊಲಿಕ್ಯುಲೈಟೀಸ್ ಎನ್ನಲಾಗುತ್ತದೆ. ಚರ್ಮವು ಮಾಶ್ಚರೈಸಿಂಗ್ ಅನ್ನು ಕಳೆದುಕೊಂಡಾಗ ಒಣ ಚರ್ಮವು ಉಂಟಾಗಿ ಚರ್ಮದ ರಂಧ್ರಗಳು ಮುಚ್ಚಿ ಮೊಡವೆಗಳು ಉಂಟಾಗುತ್ತದೆ.
ಈ ರೀತಿ ಉಂಟಾದ ಮೊಡವೆಗಳನ್ನು ವೈದ್ಯರನ್ನು ಸಂಪರ್ಕಿಸಿ ಗುಣಪಡಿಸಿಕೊಳ್ಳದಿದ್ದರೆ ಮೊಡವೆಗಳಲ್ಲಿ ಯೀಸ್ಟ್, ಬ್ಯಾಕ್ಟೀರಿಯಾಗಳ ಶೇಖರಣೆಯಾಗಿ ಮೊಡವೆಗಳು ದೊಡ್ಡ ಗುಳ್ಳೆಗಳಾಗಬಹುದು. ಆಗ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಹೀಗಾಗಿ ಕೂದಲು ಮತ್ತು ತಲೆಯನ್ನು ಸ್ವಚ್ಛವಾಗಿ ಕಾಲ ಕಾಲಕ್ಕೆ ಹೇರ್ ಪ್ಯಾಕ್ಗಳನ್ನು ಹಾಕಿ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ನೀಡಬೇಕು. ಬೇವಿನ ಸೊಪ್ಪಿನ ಅಥವಾ ಮೆಂತೆಯ ಹೇರ್ ಪ್ಯಾಕ್ಗಳ ಬಳಕೆಯಿಂದ ನೆತ್ತಿಯ ಮೇಲಿದ್ದ ಬ್ಯಾಕ್ಟೀರಿಯಾಗಳಿಂದ ಮುಕ್ತಿ ಪಡೆಯಬಹುದಾಗಿದೆ. ಜತೆಗೆ ನೀವು ಈ ಕ್ರಮಗಳನ್ನು ನಿಯಮಿತವಾಗಿ ಅನುಸರಿಸಿದರೆ ನೆತ್ತಿಯ ಮೊಡವೆಗಳ ನೋವಿನಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ನಿಮ್ಮ ನೆತ್ತಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ನಿಯಮಿತವಾಗಿ ತಲೆಗೆ ಸ್ನಾನ ಮಾಡಿ. ಯಾವುದೇ ಜೆಲ್ ಅಥವಾ ಹೇರ್ ಸ್ಪ್ರೇಗಳನ್ನು ಹಾಕಿಕೊಂಡು ರಾತ್ರಿ ಮಲಗಬೇಡಿ.
ನಿಮ್ಮ ತಲೆದಿಂಬಿನ ಕವರ್ ಅನ್ನು ಆಗಾಗ ಸ್ವಚ್ಛಗೊಳಿಸಿ. ಜತೆಗೆ ನಿಮ್ಮ ಬಾಚಣಿಗೆ ಕೊಳೆಯಾಗದಂತೆ ನೋಡಿಕೊಳ್ಳಿ. ಪ್ಲಾಸ್ಟಿಕ್ ಬಾಚಣಿಗೆಯನ್ನು ಕನಿಷ್ಠ 6 ತಿಂಗಳಿಗೊಮ್ಮೆಯಾದರೂ ಬದಲಿಸಿ.
ನೆತ್ತಿಯ ಮೇಲೆ ಮೊಡವೆಗಳು ಕಾಣಿಸಿಕೊಂಡರೆ ತಪ್ಪದೆ ವೈದ್ಯರನ್ನು ಸಂಪರ್ಕಿಸಿ. ಟಾಪಿಕಲ್ ರೆಟಿನಾಯ್ಡ್ಗಳು ಮತ್ತು ಬೆನ್ಝಾಯ್ಲ್ ಪೆರಾಕ್ಸೈಡ್ ಗಳ ಚಿಕಿತ್ಸೆ ಪಡೆಯಿರಿ. ವೈದ್ಯರು ನೀಡುವ ಕ್ರೀಮ್ಗಳನ್ನು ಸರಿಯಾಗಿ ಬಳಕೆ ಮಾಡಿ.
ನೆತ್ತಿಯ ಮೇಲಿನ ಚರ್ಮವನ್ನು ಮುಚ್ಚುವ ಎಣ್ಣೆಯುಕ್ತ ಪದಾರ್ಥಗಳನ್ನು ಬಳಸಬೇಡಿ. ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುವ ಶ್ಯಾಂಪೂಗಳನ್ನು ಬಳಸಿ.
ಶ್ಯಾಂಪೂಗಳು ನೆತ್ತಿಯ ಮೇಲಿನ ಹೊಟ್ಟು ಅಥವಾ ಮೊಡವೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಅದೇ ಶ್ಯಾಂಪುಗಳ ಅತಿಯಾದ ಬಳಕೆಯಿಂದ ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ. ಆ ರೀತಿಯ ಸಮಸ್ಯೆಗಳು ಕಾಣಿಸಿಕೊಂಡರೆ ಚರ್ಮವೈದ್ಯರನ್ನು ಸಂಪರ್ಕಿಸಿ.
ಈಗಾಗಲೇ ಎಣ್ಣೆಯುಕ್ತ ಚರ್ಮವನ್ನು ನೀವು ಹೊಂದಿದ್ದರೆ ಬೇರೆ ಬೇರೆ ವಿಧದ ಎಣ್ಣೆಯ ಬಳಕೆಯನ್ನು ತಪ್ಪಿಸಿ. ಜತೆಗೆ ಕೂದಲಿಗೆ ಸ್ಟೈಲ್ ಮಾಡಲು ಬಳಸುವ ಹೆರ್ ಸ್ಟ್ರೈಟನರ್, ಹೇರ್ ಡ್ರೈಯರ್ಗಳ ಬಳಕೆಯನ್ನು ಕಡಿಮೆ ಮಾಡಿ.
ಎರಡು ದಿನಕ್ಕೊಮ್ಮೆಯಾದರು ತಲೆಸ್ನಾನ ಮಾಡಿ. ಸಲ್ಫರ್ ಮತ್ತು ಸ್ಯಾಲಿಸಿಲಿಕ್ ಪದಾರ್ಥಗಳನ್ನು ಒಳಗೊಂಡ ಶ್ಯಾಂಪೂವನ್ನು ಬಳಸಿ ನೆತ್ತಿಯನ್ನು ಸ್ವಚ್ಛಗೊಳಿಸಿ. ನೆನಪಿಡಿ ಶ್ಯಾಂಪೂವನ್ನು ಐದು ನಿಮಿಷಗಳ ಕಾಲ ತಲೆಯ ಮೇಲೆ ಉಳಿಸಿಕೊಂಡರೆ ತಲೆ ಹೊಟ್ಟು, ಪೊಲಿಕ್ಯುಲೈಟೀಸ್ ಎಲ್ಲವೂ ಹತೋಟಿಗೆ ಬಂದು ಕಾಲಕ್ರಮೇಣ ಗುಣಮುಖವಾಗುತ್ತದೆ.
ಇದನ್ನೂ ಓದಿ:
Hot Water: ಪ್ರತಿದಿನ ಬಿಸಿ ನೀರಿನ ಸೇವನೆಯಿಂದ ಯಾವೆಲ್ಲಾ ಲಾಭಗಳಿವೆ ಗೊತ್ತಾ? ಇಲ್ಲಿದೆ ಬಿಸಿ ನೀರಿನ ಮಹತ್ವ