ಸಾಂದರ್ಭಿಕ ಚಿತ್ರ
ಪ್ರತಿನಿತ್ಯ ಬೆಳಗಾದರೆ ಎಲ್ಲರ ಮನೆಯಲ್ಲಿಯೂ ಇರುವ ಚಿಂತೆ ಎಂದರೆ ಬೆಳಿಗ್ಗೆ ತಿಂಡಿ ಏನು ಮಾಡಬೇಕು ಎಂಬುದು. ಉಪಾಹಾರ ರುಚಿಯಾಗಿಯೂ ಆರೋಗ್ಯಕರವಾಗಿಯೂ ಇರಬೇಕು ಎನ್ನುವವರು ಆಹಾರಗಳಲ್ಲಿ ಹಣ್ಣು- ತರಕಾರಿಗಳನ್ನು ಸೇವನೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಆಹಾರಶೈಲಿ ಬದಲಾಗುತ್ತಿರುವುದರಿಂದ ಆರೋಗ್ಯವೂ ಹದಗೆಡುತ್ತಿದೆ. ಹಾಗಾಗಿ ಯಾವಾಗಲೂ ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ಜೊತೆಗೆ ಆ ಆಹಾರ ಪೌಷ್ಠಿಕಾಂಶದಿಂದ ಕೂಡಿರಬೇಕು. ಈ ರೀತಿ ಮಾಡಬೇಕಾದರೆ ನಿಮ್ಮ ತಿಂಡಿಯಲ್ಲಿ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು. ಇದು ಆರೋಗ್ಯ ಕಾಪಾಡುವುದು ಮಾತ್ರವಲ್ಲ ರುಚಿಯನ್ನು ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ಹಾಗಾದರೆ ಹಣ್ಣುಗಳನ್ನು ಉಪಾಹಾರದಲ್ಲಿ ಸೇವನೆ ಮಾಡುವುದು ಹೇಗೆ? ಯಾವ ರೀತಿಯಲ್ಲಿ ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳಿ.
- ಒಂದು ಪಾತ್ರೆಗೆ ನಿಮಗಿಷ್ಟವಾಗುವ ಕಿತ್ತಳೆ, ಸೇಬು, ಬಾಳೆಹಣ್ಣು ಹೀಗೆ ವಿಧವಿಧವಾದ ಹಣ್ಣುಗಳನ್ನು ಕತ್ತರಿಸಿ ಅದಕ್ಕೆ ನಿಂಬೆ ರಸ, ಚಾಟ್ ಮಸಾಲಾ, ಚಿಟಿಕೆ ಖಾರದ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ಸೇವನೆ ಮಾಡಿ. ಈ ರಿಫ್ರೆಶ್ ಖಾದ್ಯವು ನಿಮ್ಮ ಕಣ್ಣಿಗೆ ಮುದ ನೀಡುವುದಲ್ಲದೆ ಜೀವಸತ್ವಗಳಿಂದ ಸಮೃದ್ಧವಾಗಿರುತ್ತದೆ.
- ಬಾಳೆಹಣ್ಣು, ಸೇಬು, ಕ್ಯಾರೆಟ್ ಅನ್ನು ಕಲಸಿಕೊಂಡು ಅದಕ್ಕೆ ಸ್ವಲ್ಪ ದಾಲ್ಚಿನ್ನಿ ಹಾಕಿ ಬಳಿಕ ಗೋಧಿ ಹಿಟ್ಟಿನಿಂದ ಆ ಮಿಶ್ರಣವನ್ನು ಕಲಸಿಕೊಂಡು ಹಣ್ಣಿನ ಗೋಧಿ ಪರಾಟ ಮಾಡಬಹುದು. ಇದನ್ನು ಬೆಂಕಿಯ ಉರಿಯಲ್ಲಿ ಚಿನ್ನದ ಬಣ್ಣ ಬರುವ ವರೆಗೆ ಬೇಯಿಸಿಕೊಂಡು ಅದನ್ನು ಮೊಸರಿನೊಂದಿಗೆ ಸವಿಯಬಹುದು.
- ಸೇಬು, ದಾಳಿಂಬೆ ಹೀಗೆ ನಿಮಗಿಷ್ಟವಾಗುವ ಹಣ್ಣುಗಳನ್ನು ಕತ್ತರಿಸಿಕೊಂಡು ಅದಕ್ಕೆ ಗಟ್ಟಿ ಮೊಸರನ್ನು ಸೇರಿಸಿಬೇಕು. ಬಳಿಕ ಅದಕ್ಕೆ ನಿಮಗೆ ಸಿಹಿ ಬೇಕಾದಷ್ಟು ಜೇನುತುಪ್ಪವನ್ನು ಬೆರೆಸಿ, ಪೌಷ್ಠಿಕಾಂಶಯುಕ್ತವಾದ ಸೀಡ್ಸ್ ಗಳನ್ನು ಸೇರಿಸಿಕೊಂಡು ಸವಿಯಬಹುದು. ಈ ಖಾದ್ಯವು ಪ್ರೊಬಯಾಟಿಕ್ ಗಳಿಂದ ಸಮೃದ್ಧವಾಗಿರುತ್ತದೆ. ಅಲ್ಲದೆ ತ್ವರಿತ ಉಪಹಾರ ಆಯ್ಕೆಗೆ ಸೂಕ್ತವಾಗಿದೆ.
- ದೋಸೆ ಹಿಟ್ಟನ್ನು ತಯಾರಿಸಿ ಇಟ್ಟುಕೊಳ್ಳಿ. ಬಳಿಕ ಅದಕ್ಕೆ ಸೇಬು ಮತ್ತು ಬಾಳೆಹಣ್ಣುಗಳನ್ನು ನುಣ್ಣಗೆ ತುರಿದುಕೊಂಡು ದೋಸೆ ಮಿಶ್ರಣಕ್ಕೆ ಅದನ್ನು ಸೇರಿಸಿಕೊಳ್ಳಿ. ಈ ವಿನೂತನ ಶೈಲಿಯ ದೋಸೆ ಬ್ಯಾಟರ್ ರುಚಿ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ. ಅದಲ್ಲದೆ ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ಮಕ್ಕಳಿಗೂ ಹೊಸ ರುಚಿ ನೀಡದ ಹಾಗಾಗುತ್ತದೆ.
- ಅನಾನಸ್ ಹಣ್ಣುಗಳನ್ನು ಸಣ್ಣಗೆ ಕೊಚ್ಚಿಕೊಂಡು ಅದಕ್ಕೆ ರವೆ, ಸಕ್ಕರೆ ಮತ್ತು ತುಪ್ಪ ಬೆರಸಿ ಬೇಯಿಸಿಕೊಂಡು ಸೇವನೆ ಮಾಡುವುದು ರುಚಿಯ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಇದನ್ನು ಸೇವನೆ ಮಾಡುವುದು ಒಳ್ಳೆಯದು. ಅಲ್ಲದೆ ಈ ರೀತಿ ಮಾಡಿ ಸೇವನೆ ಮಾಡಿದರೆ ಹಣ್ಣುಗಳ ರುಚಿಯ ಜೊತೆಗೆ ವಿಧವಿಧವಾದ ಉಪಾಹಾರಗಳ ಸೇವನೆ ಮಾಡಬಹುದು.
- ತುಪ್ಪದಲ್ಲಿ ರವೆಯನ್ನು ಹುರಿದುಕೊಂಡು ಬಳಿಕ ಈ ಮಿಶ್ರಣಕ್ಕೆ ಬಾಳೆಹಣ್ಣುಗಳನ್ನು ಹಿಚುಕಿ ನುಣ್ಣಗೆ ಪೇಸ್ಟ್ ಮಾಡಿ ಸೇರಿಕೊಳ್ಳಿ. ಬಳಿಕ ಅದಕ್ಕೆ ಸಕ್ಕರೆಯನ್ನು ಸೇರಿಸಿ ಪುಡಿಂಗ್ ರೀತಿಯ ಸಿಹಿಯಾದ ಖಾದ್ಯವನ್ನು ತಯಾರಿಸಿಕೊಳ್ಳಿ
- ಸೇಬು, ಕಿತ್ತಳೆ, ದ್ರಾಕ್ಷಿಯಂತಹ ಹಣ್ಣುಗಳನ್ನು ಸೇರಿಸಿಕೊಂಡು ಅದಕ್ಕೆ ಮೊಳಕೆ ಕಟ್ಟಿದ ಹೆಸರುಕಾಳುಗಳನ್ನು ಸೇರಿಸಿಕೊಂಡು ಅದಕ್ಕೆ ಬೇಕಾದಲ್ಲಿ ನಿಂಬೆ ರಸ, ಚಾಟ್ ಮಸಾಲಾ ಸೇರಿಕೊಂಡು ಸಲಾಡ್ ರೀತಿಯಲ್ಲಿ ಮಾಡಿಕೊಳ್ಳಿ. ಇದು ಪ್ರೊಟೀನ್ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದ್ದು ಉಪಾಹಾರಕ್ಕೆ ಉತ್ತಮ ಆಯ್ಕೆಯಾಗಿದೆ.
- ನೀವು ಎಂದಾದರೂ ಬಾಳೆಹಣ್ಣಿನ ಪಲ್ಯವನ್ನು ಸವಿದಿದ್ದೀರಾ? ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಸೇರಿಸಿ ಬಳಿಕ ಅದಕ್ಕೆ ಅರಿಶಿನ, ಒಗ್ಗರಣೆ ಸೊಪ್ಪನ್ನು ಸೇರಿಸಿ ನಿಮಗೆ ಬೇಕಾದ ಮಸಾಲೆಗಳನ್ನು ಹಾಕಿ ಗಟ್ಟಿಯಿರುವ ಬಾಳೆಹಣ್ಣುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಖಾರ ಖಾರವಾದ ಖಾದ್ಯ ರೋಟಿ ಅಥವಾ ಪರಾಟ ಗಳನ್ನು ಸೇವನೆ ಮಾಡುವುದಕ್ಕೆ ಉತ್ತಮ ಆಯ್ಕೆಯಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ