Gardening Tips: ಅನಿವಾರ್ಯವಾಗಿ ಮನೆ ಬಿಟ್ಟು ತೆರಳಬೇಕಾದಾಗ ಗಿಡಗಳಿಗೆ ನೀರುಣಿಸುವುದು ಹೇಗೆ?; ಸುಲಭದ ವಿಧಾನಗಳು ಇಲ್ಲಿವೆ

| Updated By: shivaprasad.hs

Updated on: Dec 26, 2021 | 9:08 AM

How To: ಗಾರ್ಡನಿಂಗ್ ಎನ್ನುವುದು ಹಲವರ ಪ್ರಿಯವಾದ ಹವ್ಯಾಸ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಗಿಡಗಳನ್ನು ಬಿಟ್ಟು ದೂರ ತೆರಳಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ಆಗ ಅವುಗಳಿಗೆ ನೀರುಣಿಸಿ, ಆರೈಕೆ ಮಾಡುವುದು ಹೇಗೆ? ಸುಲಭದ ವಿಧಾನಗಳು ಇಲ್ಲಿವೆ.

Gardening Tips: ಅನಿವಾರ್ಯವಾಗಿ ಮನೆ ಬಿಟ್ಟು ತೆರಳಬೇಕಾದಾಗ ಗಿಡಗಳಿಗೆ ನೀರುಣಿಸುವುದು ಹೇಗೆ?; ಸುಲಭದ ವಿಧಾನಗಳು ಇಲ್ಲಿವೆ
ಪ್ರಾತಿನಿಧಿಕ ಚಿತ್ರ
Follow us on

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ದೇವರ ಪೂಜೆಗೆಂದೋ, ಮನೆಯನ್ನು ಅಂದಗಾಣಿಸಲೆಂದೋ ಒಂದಷ್ಟು ಗಿಡಗಳನ್ನು ಬೆಳೆಸಿಯೇ ಬೆಳೆಸುತ್ತಾರೆ. ಕಾಂಕ್ರೀಟ್ ಕಾಡಿನಲ್ಲಿ ಸಿಗುವ ಸ್ವಲ್ಪವೇ ಜಾಗವನ್ನೂ ಸದುಪಯೋಗಪಡಿಸಿಕೊಂಡು ಗಿಡಗಳನ್ನು ಬೆಳೆಸುವುದು ಹಲವರ ಉತ್ತಮ ಹವ್ಯಾಸ. ನಗರಗಳಲ್ಲಿ ಗಿಡಗಳನ್ನು ಬೆಳೆಸುವುದು ಸುಲಭದ ಕೆಲಸವೇನೂ ಅಲ್ಲ. ಅವುಗಳಿಗೆ ನೀರು, ಬೆಳಕು ಹೆಚ್ಚೂ ಆಗದೆ, ಕಡಿಮೆಯೂ ಆಗದಂತೆ ಪ್ರತೀ ಗಿಡದ ಹದವರಿತು ಆರೈಕೆ ಮಾಡಬೇಕು. ಅಂತಹ ಗಿಡಗಳು ಹೂವು ಬಿಡುವಾಗ ಅಥವಾ ಫಲ ನೀಡುವಾಗ ಆಗುವ ಆನಂದವಂತೂ ವರ್ಣಿಸಲು ಅಸಾಧ್ಯ. ಆದರೆ ಈ ಹಂತಕ್ಕೆ ತಲುಪುವುದು ಒಂದು ರೀತಿಯ ತಪಸ್ಸೇ ಸರಿ. ಒಂದು ದಿನವೂ ಗಿಡದ ಒಡನಾಟ ತಪ್ಪಿಸುವಂತಿಲ್ಲ. ಇದೇ ಕಾರಣದಿಂದ ಹಲವರಿಗೆ ದೂರದೂರಿಗೆ ಅಥವಾ ಒಂದಷ್ಟು ದಿನ ಮನೆ ಬಿಟ್ಟು ಅನಿವಾರ್ಯವಾಗಿ ತೆರಳಬೇಕೆಂದರೂ ಸಾಧ್ಯವಾಗುವುದಿಲ್ಲ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? ಖಂಡಿತಾ ಇದೆ. ನೀವು ಗಿಡಗಳಿಂದ ದೂರವಿದ್ದರೂ ಅವುಗಳಿಗೆ ನೀರುಣಿಸುವುದು ಹೇಗೆ? ಈ ಕುರಿತ ಮಾಹಿತಿ ಇಲ್ಲಿದೆ.

1. ಡಿಐವೈ ವಿಧಾನ: ಇದೇನು ಹೆಸರು ಹೀಗಿದೆಯಲ್ಲಾ ಎಂದು ಯೋಚಿಸಬೇಡಿ. ಡಿಐವೈ ವಿಧಾನವೆಂದರೆ- ‘ಡು ಇಟ್ ಯುವರ್​ಸೆಲ್ಫ್’ ಎಂದು. ಇದರ್ಥ ಇಷ್ಟೇ. ಗಿಡಗಳಿಗೆ ಆಗಾಗ ನೀರು ತಾನಾಗಿಯೇ ಒದಗುವ ವ್ಯವಸ್ಥೆ ಮಾಡುವುದು. ಇದನ್ನು ಹೇಗೆ ಮಾಡಬಹುದು ಎಂಬ ಕುತೂಹಲವೇ? ಸಾಮಾನ್ಯವಾದ ಒಂದು ಪ್ಲಾಸ್ಟಿಕ್ ಬಾಟಲಿ ತೆಗೆದುಕೊಳ್ಳಿ. ಅದಕ್ಕೆ ಅತೀ ಚಿಕ್ಕ ತೂತನ್ನು ಮಾಡಿ. ಇದರಿಂದ ಬಾಟಲಿಯಲ್ಲಿ ನೀರು ತುಂಬಿಸಿಟ್ಟರೆ ನಿಧಾನವಾಗಿ ಜಿನುಗುತ್ತಾ ಗಿಡಗಳಿಗೆ ನೀರುಣಿಸುತ್ತದೆ.

ನೀವು ಎಲ್ಲಿಗಾದರೂ ಹೊರಡುವ ಮುನ್ನ ಗಿಡಗಳಿಗೆ ಸಾಕಷ್ಟು ನೀರುಣಿಸಿ. ನಂತರ ಅವುಗಳನ್ನು ತಂಪಾದ ಜಾಗಗಳಲ್ಲಿ ಇಡಿ. ನೀವು ಹೊರಡುವ ಮುನ್ನ ಮೇಲಿನ ವಿಧಾನ ಅನುಸರಿಸಿ, ಗಿಡದ ಪಕ್ಕ ಬಾಟಲಿ ಇಡಿ. ಇದು ಗಿಡದ ತೇವ ಆರದಂತೆ ಹದವಾಗಿ ನೀರುಣಿಸುತ್ತದೆ.

2. ನೀರನ್ನು ಹೀರಿಟ್ಟುಕೊಳ್ಳುವ ಪಾಟ್ ಬಳಸುವುದು: ತೆಂಗಿನ ಕಾಯಿಯ ಸಿಪ್ಪೆಯಿಂದ ತಯಾರಾದ ‘ಕೊಕೊಪೀಟ್’ ಪಾಟ್​​ಗಳು ಮಾರುಕಟ್ಟೆಯಲ್ಲಿದೆ. ಅವುಗಳು ನೀರನ್ನು ಹೀರಿಟ್ಟುಕೊಳ್ಳುತ್ತವೆ. ಇದರಿಂದ ಗಿಡಗಳು ತಂಪಾಗಿರಲು ಸಾಧ್ಯವಾಗುತ್ತದೆ.

3. ಇದಲ್ಲದೇ ಒದ್ದೆಯಾದ ಬಟ್ಟೆ ಅಥವಾ ಒಣಗಿದ ಎಲೆಯನ್ನು ಗಿಡದ ಸುತ್ತ ಹಾಕಿ, ನೀರೆರೆದರೆ ಅದೂ ಕೂಡ ಗಿಡದ ಬುಡ ತಂಪಾಗಿಡಲು ಸಹಾಯ ಮಾಡುತ್ತದೆ.

4. ದೊಡ್ಡ ಟಬ್​ಗಳಿದ್ದರೆ ಅವುಗಳಿಗೆ ತಳ ಮುಚ್ಚುವಷ್ಟು ನೀರು ಹಾಕಿ. ಅದರ ಮೇಲೆ ಪಾಟ್​ಗಳನ್ನಿಟ್ಟರೆ ಮಣ್ಣಿನ ತೇವಾಂಶ ಆರುವುದಿಲ್ಲ. ಈ ವಿಧಾನ ಅನುಸರಿಸುವಾಗ ನೀರು ಹೆಚ್ಚಾಗದಂತೆ, ಗಿಡಕ್ಕೆ ಸಮಸ್ಯೆಯಾಗದಂತೆ ಜಾಗ್ರತೆಯಿಂದ ನೋಡಿಕೊಳ್ಳುವುದು ಮುಖ್ಯ.

ಸಂಗ್ರಹ ಚಿತ್ರ

5. ಮಣ್ಣಿನ ತೇವಾಂಶ ಆರದಿರುವಂತೆ ಮಾಡಲು ತಜ್ಞರು ಇನ್ನೊಂದು ವಿಧಾನವನ್ನು ಸೂಚಿಸುತ್ತಾರೆ. ನೀರಿರುವ ಪಾತ್ರೆಯಿಂದ ಕಾಟನ್ ಬಟ್ಟೆಯನ್ನು ತಂದು, ಗಿಡದ ಸುತ್ತ ಇಡುವುದು. ಈ ವಿಧಾನ ಕೂಡ ಮಣ್ಣಿಗೆ ತೇವಾಂಶ ಕಳೆದುಕೊಳ್ಳದೇ ಇರಲು ಸಹಾಯ ಮಾಡುತ್ತದೆ.

6. ಈ ಎಲ್ಲಾ ವಿಧಾನಗಳಿದ್ದರೂ ಗಿಡಗಳಿಗೆ ವೈಯಕ್ತಿಕವಾಗಿ ಜನರು ಆರೈಕೆ ಮಾಡುವುದಕ್ಕಿಂತ ಉತ್ತಮವಾಗಿ ಆರೈಕೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಆದ್ದರಿಂದಲೇ ಸ್ನೇಹಿತರು, ಕುಟುಂಬದವರು, ಪರಿಚಯಸ್ಥರು ಯಾರೇ ಇದ್ದರೂ ಅವರಲ್ಲಿ ಮಾತನಾಡಿ. ನೀವು ದೂರವಿದ್ದಾಗ ಗಿಡದ ಆರೈಕೆ ನೋಡಿಕೊಳ್ಳುವಂತೆ ವಿನಂತಿಸಿಕೊಳ್ಳಿ. ಇದು ಹೆಚ್ಚು ಪರಿಣಾಮಕಾರಿ. ಅದಾಗ್ಯೂ ಅನಿವಾರ್ಯವಾದರೆ ಮೇಲೆ ತಿಳಿಸಿದ ವಿಧಾನಗಳು ಇದ್ದೇ ಇವೆ. ಅವುಗಳ ಮೂಲಕ ಗಿಡಗಳ ಆರೈಕೆ ನೋಡಿಕೊಳ್ಳಬಹುದು.

ಇದನ್ನೂ ಓದಿ:

PF Transfer: 6 ಹಂತಗಳಲ್ಲಿ ಆನ್​ಲೈನ್​ನಲ್ಲಿ ಪಿಎಫ್ ವರ್ಗಾವಣೆ ಮಾಡುವುದರ ಮಾಹಿತಿ ಇಲ್ಲಿದೆ

Business Idea: ಮನೆಯಿಂದಲೇ ಶುರು ಮಾಡಿ ತಿಂಗಳಿಗೆ 35ರಿಂದ 40 ಸಾವಿರ ರೂಪಾಯಿ ಲಾಭ ಬರುವ ಬಿಜಿನೆಸ್ ಐಡಿಯಾ ಇದು

Published On - 7:30 am, Sun, 26 December 21