
ನಮ್ಮನ್ನು ಸರಿ ದಾರಿಯಲ್ಲಿ ನಡೆಯುವಂತೆ ದಾರಿ ದೀಪವಾಗಿ ನಿಲ್ಲುವವರು, ಕಷ್ಟದಲ್ಲಿ ಹೆಗಲಾಗಿ, ನಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿ ನಿಲ್ಲಿವವರು ಎಂದರೆ ಅದು ಪೋಷಕರು (Parents). ಪ್ರತಿಯೊಬ್ಬರ ಜೀವನದಲ್ಲೂ ಪೋಷಕರು ಬಹು ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಮಕ್ಕಳ ಪ್ರತಿ ಹೆಜ್ಜೆಯ ಹಿಂದೆಯೂ, ಯಶಸ್ಸಿನ ಹಿಂದೆಯೂ ಪೋಷಕರ, ನಂಬಿಕೆ, ಧೈರ್ಯ, ತ್ಯಾಗ ಇದ್ದೇ ಇರುತ್ತದೆ. ಹೀಗೆ ಮಕ್ಕಳ ಜೀವನವನ್ನು ಸುಂದರವಾಗಿ ರೂಪಿಸಲು ತಂದೆ-ತಾಯಿ ಬಹಳ ಶ್ರಮ ವಹಿಸುತ್ತಾರೆ. ಇಡೀ ಜೀವನವನ್ನು ಮಕ್ಕಳ ಭವಿಷ್ಯಕ್ಕಾಗಿ ಮುಡಿಪಾಗಿಡುವ, ಮಕ್ಕಳ ಖುಷಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಿರುವ ಪೋಷಕರನ್ನು ಗೌರವಿಸಲು ಹಾಗೂ ಪೋಷಕರ ನಿಸ್ವಾರ್ಥ ಪ್ರೀತಿಯನ್ನು ಸ್ಮರಿಸಲು ಪ್ರತಿವರ್ಷ ಜೂನ್ 1 ರಂದು ಜಾಗತಿಕ ಪೋಷಕರ (Global Parents’ Day) ದಿನವನ್ನು ಆಚರಿಸಲಾಗುತ್ತದೆ.
ಜಾಗತಿಕ ಪೋಷಕರ ದಿನ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲೂ ಮೊದಲ ಹೀರೋ ಮತ್ತು ಸರಿಯಾದ ಮಾರ್ಗದರ್ಶಕರು ಇದ್ದರೆ, ಅದು ಪೋಷಕರು ಮಾತ್ರ. ಪೋಷಕರ ತ್ಯಾಗ ಮತ್ತು ಸಮರ್ಪಣೆಯನ್ನು ಗೌರವಿಸಲು ಸಲುವಾಗಿ ಪ್ರತಿ ವರ್ಷ ಜೂನ್ 1 ರಂದು ಜಾಗತಿಕ ಪೋಷಕರ ದಿನವನ್ನು ಆಚರಿಸಲಾಗುತ್ತದೆ .
ಜಾಗತಿಕ ಪೋಷಕರ ದಿನದ ಇತಿಹಾಸವನ್ನು ನೋಡುವುದಾದರೆ, ಅದು 1994 ರಲ್ಲಿ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಪ್ರಾರಂಭವಾಯಿತು. ಪೋಷಕರನ್ನು ಗೌರವಿಸಲು ಸಾಧ್ಯವಾಗುವಂತೆ ಇದನ್ನು ಮಾಡಲಾಯಿತು. ನಂತರ 2012 ರಲ್ಲಿ , ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 1 ಅನ್ನು ‘ ಪೋಷಕರ ಜಾಗತಿಕ ದಿನ’ ಎಂದು ಗುರುತಿಸಿತು. ಜಾಗತಿಕ ಮಟ್ಟದಲ್ಲಿ ಪ್ರಪಂಚದಾದ್ಯಂತದ ಪೋಷಕರ ಕೊಡುಗೆಯನ್ನು ಶ್ಲಾಘಿಸುವುದು ಇದರ ಉದ್ದೇಶವಾಗಿತ್ತು. ಇದು ಕೇವಲ ಒಂದು ದಿನವಲ್ಲ, ಬದಲಾಗಿ ನಮ್ಮ ಹೆತ್ತವರ ಪ್ರೀತಿ, ತ್ಯಾಗ ಮತ್ತು ತಾಳ್ಮೆ ಯಾವುದೇ ಪ್ರಶಸ್ತಿಗಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದು ನೆನಪಿಸುವ ದಿನವಾಗಿದೆ.
ಪೋಷಕರು ಯಾವಾಗಲೂ ತಮ್ಮ ಮಕ್ಕಳಿಗಾಗಿ ತ್ಯಾಗಗಳನ್ನು ಮಾಡುತ್ತಲೇ ಬಂದಿದ್ದಾರೆ ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅವರು ತಮ್ಮ ಮಕ್ಕಳಿಗೆ ಮಾತ್ರ ಸಂತೋಷವನ್ನು ನೀಡುತ್ತಲೇ ಬಂದಿದ್ದಾರೆ. ಹಾಗಿರುವಾಗ ಈ ದಿನವು ಪೋಷಕರು ಜನ್ಮ ನೀಡುವವರು ಮಾತ್ರವಲ್ಲದೆ ಜೀವನದ ಶ್ರೇಷ್ಠ ಶಿಕ್ಷಕರು ಮತ್ತು ರಕ್ಷಕರು ಎಂಬುದನ್ನು ನೆನಪಿಸಿಕೊಳ್ಳಲು ಒಂದು ಅವಕಾಶವನ್ನು ನೀಡುತ್ತದೆ. ಜಾಗತಿಕ ಪೋಷಕರ ದಿನವು ನಮ್ಮ ಹೆತ್ತವರ ಬಗ್ಗೆ ನಮ್ಮ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ಮುಕ್ತ ಹೃದಯದಿಂದ ವ್ಯಕ್ತಪಡಿಸುವ ಒಂದು ಅವಕಾಶವಾಗಿದೆ.ಮಕ್ಕಳ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಪೋಷಕರು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಕಾರಣಕ್ಕಾಗಿ ಈ ದಿನದ ಆಚರಣೆಗೆ ಅಡಿಪಾಯ ಹಾಕಲಾಯಿತು.
ಇದನ್ನೂ ಓದಿ: ವಿಶ್ವ ಹಾಲು ದಿನವನ್ನು ಏಕೆ ಆಚರಿಸಲಾಗುತ್ತದೆ ಗೊತ್ತಾ? ಈ ವಿಶೇಷ ದಿನದ ಹಿನ್ನೆಲೆ ತಿಳಿಯಿರಿ
ಈ ವಿಶೇಷ ದಿನವನ್ನು ಆಚರಿಸಲು ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮ, ಪ್ರದರ್ಶನಗಳು ಸೇರಿದಂತೆ ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತೆ. ಅಲ್ಲದೆ ಈ ಸಂದರ್ಭದಲ್ಲಿ, ನೀವು ನಿಮ್ಮ ಹೆತ್ತವರೊಂದಿಗೆ ಸಮಯ ಕಳೆಯುವ ಮೂಲಕ ಅವರ ಪ್ರೀತಿ ತ್ಯಾಗಕ್ಕೆ ಗಿಫ್ಟ್‌ಗಳನ್ನು ನೀಡುವ ಮೂಲಕ ನೀವು ಪೋಷಕರ ದಿನವನ್ನು ವಿಶೇಷವಾಗಿ ಆಚರಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ