International Potato Day 2025: ಆಲೂಗಡ್ಡೆ ಪ್ರಿಯರೇ… ಅಂತಾರಾಷ್ಟ್ರೀಯ ಆಲೂಗಡ್ಡೆ ದಿನವನ್ನು ಏಕೆ ಆಚರಿಸಲಾಗುತ್ತದೆ ಗೊತ್ತಾ?
ಬಹುತೇಕ ಹೆಚ್ಚಿನವರಿಗೆ ಆಲೂಗಡ್ಡೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಪಲ್ಯ, ಸಾಂಬರ್‌ಗಳಿಂದ ಹಿಡಿದು ಫ್ರೆಂಚ್ ಫ್ರೈಸ್ ವರೆಗೆ ಪ್ರಪಂಚದಾದ್ಯಂತ ಈ ಆಲೂಗಡ್ಡೆಯಿಂದ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ತರಕಾರಿ ನಾಲಿಗೆ ರುಚಿ ನೀಡುವುದು ಮಾತ್ರವಲ್ಲದೆ ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಈ ನಿಟ್ಟಿನಲ್ಲಿ ಇವುಗಳ ಆರೋಗ್ಯ ಪ್ರಯೋಜನ ಆರ್ಥಿಕತೆಯಲ್ಲಿ ಆಲೂಗಡ್ಡೆ ಕೃಷಿ ವಹಿಸುವ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 30 ರಂದು ಅಂತಾರಾಷ್ಟ್ರೀಯ ಆಲೂಗಡ್ಡೆ ದಿನವನ್ನು ಆಚರಿಸಲಾಗುತ್ತದೆ.

ತರಕಾರಿಗಳ ರಾಜ ಅಂತಾನೇ ಕರೆಯುವ ಆಲೂಗಡ್ಡೆಗೆ (Potato) ಭಾರತ ಸೇರಿದಂತೆ ಹಲವು ದೇಶಗಳ ಆಹಾರ ಪದ್ಧತಿಗಳಲ್ಲಿ ವಿಶೇಷ ಪ್ರಾಧಾನ್ಯವಿದೆ. ಪರೋಟ, ಸಾಂಬರ್, ಕಟ್ಲೆಟ್ ಅಂತೆಲ್ಲಾ ಆಲೂಗಡ್ಡೆಯಿಂದ ತಯಾರಿಸುವಂತಹ ಪ್ರತಿಯೊಂದು ಖಾದ್ಯವನ್ನು ಅನೇಕರು ಇಷ್ಟಪಡುತ್ತಾರೆ. ಬಹುತೇಕರ ನೆಚ್ಚಿನ ತರಕಾರಿಯಾಗಿರುವ ಆಲೂಗಡ್ಡೆಯನ್ನು ಮೊದಲು ದಕ್ಷಿಣ ಪೆರು ಮತ್ತು ಬೊಲಿವಿಯಾದ ವಾಯುವ್ಯ ಪ್ರದೇಶಗಳಲ್ಲಿ ಸಾವಿರಾರು ವರ್ಷಗಳ ಹಿಂದೆ ಬೆಳೆಸಲಾಯಿತು ಎಂದು ನಂಬಲಾಗಿದೆ. ಇಂದು ಈ ತರಕಾರಿಯನ್ನು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಹಾಗಾಗಿ ಆರ್ಥಿಕತೆಯಲ್ಲಿ ಆಲೂಗಡ್ಡೆ ಕೃಷಿ ವಹಿಸುವ ಪಾತ್ರ, ಇದರ ಪೌಷ್ಟಿಕಾಂಶ ಮೌಲ್ಯಗಳ ಬಗ್ಗೆ ಜನರಿಗೆ ತಿಳಿಸಲು ಪ್ರತಿವರ್ಷ ಮೇ 30 ರಂದು ಅಂತಾರಾಷ್ಟ್ರೀಯ ಆಲೂಗಡ್ಡೆ (International Potato Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.
ಅಂತಾರಾಷ್ಟ್ರೀ ಆಲೂಗಡ್ಡೆ ದಿನದ ಇತಿಹಾಸ:
ಡಿಸೆಂಬರ್ 2023 ರಲ್ಲಿ, ಸಾಮಾನ್ಯ ಸಭೆಯು ಆಲೂಗಡ್ಡೆಯ ಬಹು ಪೌಷ್ಟಿಕಾಂಶ, ಆರ್ಥಿಕ, ಪರಿಸರ ಮತ್ತು ಸಾಂಸ್ಕೃತಿಕ ಮೌಲ್ಯಗಳು ಹಾಗೂ ಗ್ರಾಮೀಣ ಕುಟುಂಬಗಳು ಮತ್ತು ಉತ್ಪಾದಕರಿಗೆ ಅಮೂಲ್ಯವಾದ ಆಹಾರ ಸಂಪನ್ಮೂಲವಾಗಿ ಮತ್ತು ಆದಾಯದ ಮೂಲವಾಗಿ ಆಲೂಗಡ್ಡೆಯ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲು, ಮೇ 30 ಅನ್ನು ಅಂತಾರಾರಾಷ್ಟ್ರೀಯ ಆಲೂಗಡ್ಡೆ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿತು.
ಇದನ್ನೂ ಓದಿ: ಪರಿಸರ ವ್ಯವಸ್ಥೆಯನ್ನು ಸ್ಥಿರವಾಗಿಡುವಲ್ಲಿ ಆಮೆಗಳ ಪಾತ್ರ ಅಪಾರ; ವಿಶ್ವ ಆಮೆ ದಿನದ ಮಹತ್ವ
ಅಂತಾರಾಷ್ಟ್ರೀಯ ಆಲೂಗಡ್ಡೆ ದಿನದ ಮಹತ್ವ:
ಆಲೂಗಡ್ಡೆಯ ಆರ್ಥಿಕ, ಸಾಮಾಜಿಕ ಪ್ರಾಮುಖ್ಯತೆ ಮತ್ತು ಆಹಾರ ಭದ್ರತೆ, ಪೋಷಣೆಯಲ್ಲಿ ಅದರ ಕೊಡುಗೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಂತಾರಾಷ್ಟ್ರೀಯ ಆಲೂಗಡ್ಡೆ ದಿನವನ್ನು ಆಚರಿಸಲಾಗುತ್ತದೆ.
ಈ ದಿನವು ಆಹಾರ ಅಭದ್ರತೆಯನ್ನು ನಿಭಾಯಿಸುವಲ್ಲಿ, ಪೌಷ್ಟಿಕಾಂಶವನ್ನು ಸುಧಾರಿಸುವಲ್ಲಿ ಮತ್ತು ಜಗತ್ತಿನಾದ್ಯಂತ ಜೀವನೋಪಾಯವನ್ನು ಬೆಂಬಲಿಸುವಲ್ಲಿ ಆಲೂಗಡ್ಡೆಯ ಅಗತ್ಯ ಪಾತ್ರವನ್ನು ಎತ್ತಿ ತೋರಿಸುತ್ತದೆ. ಆಲೂಗಡ್ಡೆಯ ಪೌಷ್ಟಿಕಾಂಶದ ಮೌಲ್ಯದಿಂದ ಹಿಡಿದು ಅದರ ಆರ್ಥಿಕ, ಪರಿಸರ ಮತ್ತು ಸಾಂಸ್ಕೃತಿಕ ಮಹತ್ವದವರೆಗೆ ಅದರ ಪ್ರಯೋಜನಗಳ ಬಗ್ಗೆ ಜನರಿಗೆ ಈ ದಿನ ತಿಳಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








