ಕ್ರಿಸ್ಮಸ್ ರಜೆಯಲ್ಲಿ ಈ ದೇಶಗಳಿಗೆ ವೀಸಾ ಇಲ್ಲದೆ ಹೋಗಿ ಬರಬಹುದು
ಭಾರತ ಮತ್ತು ಚೀನಾದಿಂದ ಪ್ರವಾಸಿಗರು ವೀಸಾ ಇಲ್ಲದೆ ಮಲೇಷ್ಯಾವನ್ನು ಪ್ರವೇಶಿಸಬಹುದು ಮತ್ತು ಭದ್ರತಾ ತಪಾಸಣೆಗೆ ಒಳಪಟ್ಟು 30 ದಿನಗಳವರೆಗೆ ಅಲ್ಲಿಯೇ ಇರಬಹುದು. ಈ ಸುದ್ದಿ ಅಚ್ಚರಿ ಮೂಡಿಸುತ್ತಿದೆಯಾ? ಇದು ನಿಜ. ನೀವು ರಜಾದಿನಗಳಲ್ಲಿ ಪ್ರಯಾಣದ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದರೇ ಈ ದೇಶಗಳಿಗೆ ಯಾವುದೇ ವೀಸಾ ಇಲ್ಲದೆ ಹೋಗಿರಬಹುದು. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ನೀವು ರಜಾದಿನಗಳಲ್ಲಿ ದೂರ ದೂರ ಪ್ರಯಾಣದ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಕ್ರಿಸ್ಮಸ್ ರಜೆಗೆ ಮುಂಚಿತವಾಗಿ, ಏಷ್ಯಾದ ಹಲವಾರು ದೇಶಗಳು ಇತ್ತೀಚೆಗೆ ಭಾರತ ಮತ್ತು ಇತರ ದೇಶಗಳ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ಜಾರಿಗೆ ತರುವುದಾಗಿ ಘೋಷಿಸಿವೆ. ಆದ್ದರಿಂದ, ನೀವು ಇನ್ನೂ ಮುಂಬರುವ ರಜಾದಿನಗಳಲ್ಲಿ ಬೇರೆ ಬೇರೆ ದೇಶಗಳಿಗೆ ಹೋಗಲು ಬಯಸುತ್ತಿದ್ದರೇ ಅಥವಾ ಆ ಪ್ರಕ್ರಿಯೆಯಲ್ಲಿದ್ದರೆ, ನೀವು ಸುಲಭವಾಗಿ ಭೇಟಿ ನೀಡಬಹುದಾದ ಮೂರು ತಾಣಗಳ ಬಗ್ಗೆ ಮಾಹಿತಿ ಇಲ್ಲಿವೆ.
ಮಲೇಷ್ಯಾ
ಡಿಸೆಂಬರ್ 1 ರಿಂದ ಭಾರತ ಮತ್ತು ಚೀನಾದ ಪ್ರವಾಸಿಗರು ವೀಸಾ ಇಲ್ಲದೆ ಮಲೇಷ್ಯಾವನ್ನು ಪ್ರವೇಶಿಸಬಹುದು ಮತ್ತು ಅಲ್ಲಿ 30 ದಿನಗಳವರೆಗೆ ಉಳಿಯಬಹುದು. ಗಲ್ಫ್ ರಾಷ್ಟ್ರಗಳು ಮತ್ತು ಇತರ ಪಶ್ಚಿಮ ಏಷ್ಯಾದ ದೇಶಗಳು ಪ್ರಸ್ತುತ ನೀಡುತ್ತಿರುವ ವೀಸಾ ವಿನಾಯಿತಿಗಳಿಗೆ ಈ ಮನ್ನಾ ಹೆಚ್ಚುವರಿ ಸೌಲಭ್ಯವಾಗಿದೆ ಎಂದು ಪ್ರಧಾನಿ ಅನ್ವರ್ ಇಬ್ರಾಹಿಂ ಹೇಳಿದ್ದಾರೆ. ಆದರೆ, ವಿನಾಯಿತಿಯು ಉನ್ನತ ಭದ್ರತಾ ತಪಾಸಣೆಗೆ ಒಳಪಟ್ಟಿದೆ. “ಮಲೇಷ್ಯಾಕ್ಕೆ ಭೇಟಿ ನೀಡುವ ಎಲ್ಲಾ ಪ್ರವಾಸಿಗರು ಮತ್ತು ಸಂದರ್ಶಕರಿಗೆ ಆರಂಭಿಕ ಸ್ಕ್ರೀನಿಂಗ್ ನಡೆಸಲಾಗುವುದು. ಕ್ರಿಮಿನಲ್ ದಾಖಲೆಗಳು ಅಥವಾ ಭಯೋತ್ಪಾದನೆಯ ಅಪಾಯವಿದ್ದಲ್ಲಿ, ಅವರನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ” ಎಂದು ಪ್ರಧಾನಿ ಹೇಳಿದ್ದಾರೆ. ಸಾಮಾಜಿಕ ಭೇಟಿ, ಪ್ರವಾಸೋದ್ಯಮ ಮತ್ತು ವ್ಯವಹಾರದ ಉದ್ದೇಶಕ್ಕಾಗಿ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ಪ್ರಸ್ತುತ ಎಂಟು ಆಸಿಯಾನ್ ದೇಶಗಳು ಆನಂದಿಸುತ್ತಿವೆ. ಮಲೇಷ್ಯಾ ಜಾರಿಗೆ ತಂದ ಈ ವೀಸಾ ಮನ್ನಾವನ್ನು ಶ್ರೀಲಂಕಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಕೂಡ ಇದೇ ರೀತಿಯ ಉಪಕ್ರಮವನ್ನು ತೆಗೆದುಕೊಂಡಿದೆ.
ಶ್ರೀಲಂಕಾ
ಭಾರತ ಮತ್ತು ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಸೇರಿದಂತೆ ಇತರ ಆರು ದೇಶಗಳ ಪ್ರವಾಸಿಗರಿಗೆ ಶ್ರೀಲಂಕಾ ವೀಸಾ ಮುಕ್ತ ಪ್ರವೇಶವನ್ನು ಪರಿಚಯಿಸಿದೆ. ಈ ಉಪಕ್ರಮವು ಮಾರ್ಚ್ 31, 2024 ರವರೆಗೆ ಇರುತ್ತದೆ. ಈ ಸಮಯದ ಒಳಗೆ ನೀವು ಶ್ರೀಲಂಕಾದ ಪ್ರವಾಸ ವೀಸಾ ಮುಕ್ತವಾಗಿ ಯೋಜಿಸಬಹುದು. ಈ ಕ್ರಮವು ದ್ವೀಪ ರಾಷ್ಟ್ರಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. “ಮುಂಬರುವ ವರ್ಷಗಳಲ್ಲಿ ಪ್ರವಾಸಿಗರ ಆಗಮನವನ್ನು ಐದು ದಶಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ” ಎಂದು ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯವು ಕಳೆದ ತಿಂಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದರು.
ಶ್ರೀಲಂಕಾವು ಪ್ರಾಚೀನ ಕಡಲತೀರಗಳಿಂದ ಪರ್ವತಗಳು ಮತ್ತು ಕಣಿವೆಗಳವರೆಗೆ ಹಲವಾರು ರಮಣೀಯ ಸ್ಥಳಗಳನ್ನು ಹೊಂದಿದೆ. ದೇಶವು ಸಾಹಸ ಉತ್ಸಾಹಿಗಳಿಗೆ ಸ್ವರ್ಗವಾಗಿದೆ. ಇಂತಹ ಸ್ಥಳಗಳನ್ನು ಸಂದರ್ಶಿಸಲು ಭಾರತದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನರು ಭೇಟಿ ನೀಡುತ್ತಾರೆ. ಹಾಗಾಗಿ ಈ ರೀತಿಯ ಕೊಡುಗೆ ಪ್ರವಾಸಿಗರಿಗೆ ನಿಜಕ್ಕೂ ಸಿಹಿ ಸುದ್ದಿಯಾಗಿದೆ ಎಂದರೆ ತಪ್ಪಾಗಲಾರದು.
ವಿಯೆಟ್ನಾಂ
ಕಳೆದ ವಾರ, ವಿಯೆಟ್ನಾಂ ಪ್ರವಾಸೋದ್ಯಮವನ್ನು ಹೆಚ್ಚಿಸಲು ಭಾರತೀಯರು ಮತ್ತು ಚೀನೀಯರಿಗೆ ವೀಸಾ ಮುಕ್ತ ಪ್ರವೇಶದ ಬಗ್ಗೆ ಯೋಚಿಸುತ್ತಿದೆ ಎಂದು ಘೋಷಿಸಿತು. ಆಸ್ಟ್ರೇಲಿಯಾ, ಕೆನಡಾ, ಯುಎಸ್ ಮತ್ತು ಉಳಿದ 20 ಇಯು ಸದಸ್ಯ ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ವಿನಾಯಿತಿ ನೀಡಲು ಪ್ರಧಾನಿ ಫಾಮ್ ಮಿನ್ಹ್ ಚಿನ್ಹ್ ಪ್ರಸ್ತಾಪಿಸಿದರು. ಪ್ರಸ್ತುತ, ಕೆಲವು ಯುರೋಪಿಯನ್ ದೇಶಗಳ ನಾಗರಿಕರು ವೀಸಾ ಮುಕ್ತ ಪ್ರವೇಶವನ್ನು ಆನಂದಿಸುತ್ತಿದ್ದರೆ, ಇತರರು 90 ದಿನಗಳ ಮಾನ್ಯತೆ ಮತ್ತು ಬಹು ಪ್ರವೇಶ ಆಯ್ಕೆಗಳೊಂದಿಗೆ ಇ- ವೀಸಾಗಳನ್ನು ಪಡೆಯಬಹುದು. ಆದರೆ ಈ ಬಗ್ಗೆ ವಿಯೆಟ್ನಾಂ ಇನ್ನೂ ಔಪಚಾರಿಕ ಘೋಷಣೆ ಮಾಡಿಲ್ಲ.
ಇದನ್ನೂ ಓದಿ:ಚಳಿಗಾಲದಲ್ಲಿ ಪ್ರವಾಸ ಹೋಗಲು ಯೋಜಿಸಿದ್ದೀರಾ? ಈ ಸ್ಥಳಗಳಿಗೆ ಭೇಟಿ ನೀಡಿ
ಥೈಲ್ಯಾಂಡ್
ಥೈಲ್ಯಾಂಡ್ ನವೆಂಬರ್ 1 ರಿಂದ ಭಾರತ ಮತ್ತು ತೈವಾನ್ ಪ್ರವಾಸಿಗರಿಗೆ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ನೀಡಲು ಪ್ರಾರಂಭಿಸಿದೆ. ಈ ಉಪಕ್ರಮವು ಮೇ 10, 2024 ರವರೆಗೆ ಅನ್ವಯಿಸಲಾಗಿದೆ. “ನಾವು ಭಾರತ ಮತ್ತು ತೈವಾನ್ಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತಿದ್ದೇವೆ ಏಕೆಂದರೆ ಅಲ್ಲಿಯ ಬಹಳಷ್ಟು ಜನರು ಥೈಲ್ಯಾಂಡ್ಗೆ ಪ್ರಯಾಣಿಸಲು ಇಷ್ಟಪಡುತ್ತಾರೆ” ಎಂದು ಥಾಯ್ ಪ್ರಧಾನಿ ಶ್ರೆಟ್ಟಾ ಥಾವಿಷನ್ ಸುದ್ದಿ ಸಂಸ್ಥೆ ಎಎಫ್ಪಿಗೆ ತಿಳಿಸಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ