ಸಂಸಾರಿಕ ಜೀವನದಲ್ಲಿ ಪ್ರೀತಿಯೊಂದಿದ್ದರೆ ಮಾತ್ರ ಸಾಲುವುದಿಲ್ಲ. ಮದುವೆ ಎಂಬ ಬಂಧನವು ಪ್ರೀತಿ, ಪ್ರೇಮ, ಸ್ನೇಹ, ಜಗಳ, ಕೋಪ, ಭಿನ್ನಾಭಿಪ್ರಾಯಗಳ ಸಮ್ಮಿಲನವಾಗಿದ್ದು, ಈ ಎಲ್ಲವೂ ಸೇರಿದ್ದರೇನೇ ಚಂದ. ಪ್ರತಿಯೊಬ್ಬರ ಜೀವನದಲ್ಲಿಯೂ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ನಾನು ನನ್ನದು ಎನ್ನುವ ಬದಲು ನಾವು ನಮ್ಮದು ಎನ್ನುವುದಾಗುತ್ತದೆ. ಈ ವೇಳೆಯಲ್ಲಿ ತಮ್ಮ ಸುಂದರ ಬದುಕಿಗಾಗಿ ಸತಿ ಪತಿಯರಿಬ್ಬರೂ ಕೆಲವೊಂದು ತ್ಯಾಗ ಮಾಡಲೇ ಬೇಕು. ಆದರೆ ಪ್ರಾರಂಭದಲ್ಲಿ ಎಲ್ಲವು ಚೆನ್ನಾಗಿರುವಂತೆ ಕಂಡರೂ, ವರ್ಷಗಳು ಉರುಳಿದಂತೆ ದಾಂಪತ್ಯ ಜೀವನವು ಬೋರ್ ಅನಿಸಬಹುದು. ಪತಿ ಅಥವಾ ಪತ್ನಿಯೂ ಮಾಡುವ ಯಾವುದೇ ಕೆಲಸವು ಇಷ್ಟವಾಗದಿರಬಹುದು. ಮನಸ್ತಾಪಗಳು ಹೆಚ್ಚಾಗಿ ಯಾವುದರಲ್ಲಿ ಆಸಕ್ತಿಯಿಲ್ಲದ್ದಂತಾಗಬಹುದು. ಹೀಗಾದಾಗ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವುದು ಜಾಣ್ಮೆಯೂ ಇಬ್ಬರಿಗೂ ಇರಬೇಕು.
* ಯಾವುದೇ ಕೆಲಸದಲ್ಲಿಯು ಆಸಕ್ತಿಯಿಲ್ಲದೇ ಇರುವುದು: ದಾಂಪತ್ಯ ಜೀವನದಲ್ಲಿ ಖುಷಿಯಾಗಿದ್ದರೆ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ. ಆದರೆ ಸಾಂಸಾರಿಕ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡಾಗ ಯಾವ ಕೆಲಸವನ್ನು ಮನಸ್ಸು ಪೂರ್ವಕವಾಗಿ ಮಾಡಲಾಗುವುದಿಲ್ಲ. ಅರೆ ಮನಸ್ಸಿನಿಂದಲೇ ಕೆಲಸವನ್ನು ಮುಗಿಸಿಬಿಡುವುದು. ಇಲ್ಲವಾದರೆ ಮಾಡಿದ ಕೆಲಸದಲ್ಲಿ ಅಚ್ಚುಕಟ್ಟುತನವಿರುವುದಿಲ್ಲ.
* ಸಂಗಾತಿಯ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು : ಸಂಗಾತಿಯು ಏನೇ ಹೇಳಿದರೂ ಅದರಲ್ಲಿ ಒಂದಲ್ಲ ಒಂದು ತಪ್ಪನ್ನು ಹುಡುಕುವುದು. ಅವರ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡು, ಮನಸ್ತಾಪವನ್ನು ಮಾಡಿಕೊಳ್ಳುವುದು.
* ದಾಂಪತ್ಯದಲ್ಲಿ ಸಂವಹನದ ಕೊರತೆ : ದಂಪತಿಗಳ ನಡುವೆ ಮಾತನಾಡಲು ಯಾವುದೇ ಹೊಸ ವಿಷಯಗಳಿರುವುದಿಲ್ಲ. ಒಬ್ಬರಿಗೊಬ್ಬರು ಮಾತನಾಡುವುದೇ ಇಲ್ಲ. ಹೀಗಾಗಿ ಇಬ್ಬರಲ್ಲಿಯು ಸಂವಹನ ಕೊರತೆಯು ಉಂಟಾಗುತ್ತದೆ. ಇದು ದಾಂಪತ್ಯ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದೀರಿ ಎನ್ನುವುದು ಸೂಚಿಸುತ್ತದೆ.
ಇದನ್ನೂ ಓದಿ: ತುಳಸಿ ಎಲೆಯ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ, ಇಲ್ಲಿದೆ ನೋಡಿ
* ಆತ್ಮೀಯತೆ ಕಡಿಮೆಯಾಗುವುದು : ದೈಹಿಕ ಹಾಗೂ ಭಾವನಾತ್ಮಕ ಆತ್ಮೀಯತೆಯು ಕಡಿಮೆಯಾಗುವುದು ಕೂಡ ಸಂಬಂಧದಲ್ಲಿ ಆಸಕ್ತಿಯಿಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಸಂಗಾತಿಗೆ ಭಾವನಾತ್ಮಕವಾಗಿ ಯಾವುದೇ ಸ್ಪಂದನೆಯನ್ನು ನೀಡದೆ ಇದ್ದರೆ ಸಂಸಾರವು ಸ್ವಾದವನ್ನು ಕಳೆದುಕೊಳ್ಳುತ್ತದೆ.
* ತನ್ನ ಆಯ್ಕೆಯು ಸರಿ ಇದೆಯೇ ಎನ್ನುವ ಪ್ರಶ್ನೆ : ನಿಮ್ಮ ಎದುರು ನಿಮ್ಮ ಸ್ನೇಹಿತರು ಅವರ ಸಂಗಾತಿಯನ್ನು ಹೊಗಳಿದಾಗ ಸಹಜವಾಗಿ ಹೊಟ್ಟೆ ಕಿಚ್ಚಾಗುವುದು. ತಾನು ಮಾಡಿರುವ ಸಂಗಾತಿಯ ಆಯ್ಕೆಯು ಸರಿಯಾಗಿದೆಯೇ ಎನ್ನುವ ಪ್ರಶ್ನೆಗಳು ಮೂಡುವುದು ದಾಂಪತ್ಯ ಜೀವನದಲ್ಲಿ ಸುಖವಾಗಿಲ್ಲ ಎನ್ನುವುದನ್ನು ತೋರಿಸುವ ಚಿಹ್ನೆಗಳಾಗಿವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ