ಬಹುತೇಕ ಮಂದಿ ಬೆಳಗ್ಗೆ ಚಹಾ ಕುಡಿಯುವ ಮೂಲಕ ದಿನ ಆರಂಭಿಸುತ್ತಾರೆ. ಬೆಳಗಾದರೆ ಚಹಾ ಕುಡಿಯದೆ ದಿನ ದೂಡಲು ಆಗುವುದಿಲ್ಲ. ಟೀ ಬೇಕೇ ಬೇಕು ಎಂದು ಚಹಾವನ್ನು ಬಿಟ್ಟು ಇರುವುದಿಲ್ಲ. ಚಹಾ ಕೂಟ, ಟೀ ಪಾರ್ಟಿ, ಟೀ ಟೈಂ ಎಂದು ಚಹಾ ಎಂಬ ಪಾನೀಯ ಒಬ್ಬರನ್ನು ಒಬ್ಬರು ಬೆಸೆಯಲು ಕೂಡ ಸಹಕಾರಿ ಆಗಿದೆ. ಚಹಾ ಕುಡಿಯುವುದರಿಂದ ರಿಫ್ರೆಶ್ ಆದ ಅನುಭವ ಸಿಗುತ್ತದೆ. ಆಯಾಸ ಪರಿಹಾರ ಆಯ್ತು ಎಂದು ಜನ ಖುಷಿ ಪಡುತ್ತಾರೆ. ನಮ್ಮ ಚೈತನ್ಯ ಹೆಚ್ಚುತ್ತದೆ ಹೀಗೆ ಚಹಾ ಕುಡಿಯುವುದಕ್ಕೆ ಹಲವು ಕಾರಣಗಳನ್ನು ಜನ ನೀಡುತ್ತಾರೆ. ಕೆಲಸದ ಸುಸ್ತು ಪರಿಹರಿಸಲು ಚಹಾ ಉತ್ತಮ ಜೊತೆಗಾರ. ಆದರೆ ಕೆಲವರಿಗೆ ಅಗತ್ಯಕ್ಕಿಂತ ಹೆಚ್ಚು ಚಹಾ ಕುಡಿಯುವ ಅಭ್ಯಾಸವೂ ಇರುವುದು ಅಪಾಯಕಾರಿ.
ಹಲವು ಬಾರಿ ಇನ್ನೊಂದು ತಪ್ಪು ನಾವು ಮಾಡುತ್ತೇವೆ. ಅಂದರೆ, ಮತ್ತೆ ಮತ್ತೆ ಬೇಕಾದಾಗ ಚಹಾ ಮಾಡಲು ಉದಾಸೀನ ತೋರುತ್ತೇವೆ. ಬದಲಾಗಿ ಒಂದೇ ಬಾರಿ ತುಂಬಾ ಚಹಾ ಮಾಡಿ ಇಟ್ಟುಕೊಂಡು ಅದನ್ನೇ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುತ್ತೇವೆ. ಆದರೆ ಇದರಿಂದ ಆರೋಗ್ಯ ಸಮಸ್ಯೆಗಳು ಇದೆ ಎಂಬುದು ಗೊತ್ತೇ? ಒಮ್ಮೆ ಮಾಡಿಟ್ಟ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಯಾಕೆ ಎಂದು ಇಲ್ಲಿ ವಿವರಿಸಲಾಗಿದೆ.
ರುಚಿ ಮತ್ತು ವಾಸನೆ ಬದಲಾಗುತ್ತದೆ
ಒಮ್ಮೆ ಮಾಡಿದ ಟೀ ಮತ್ತೆ ಬಿಸಿ ಮಾಡುವುದರಿಂದ ಅದರ ವಾಸನೆ ಮತ್ತು ರುಚಿ ಕೆಡುತ್ತದೆ. ಚಹಾ ಕುಡಿಯುವ ಅನುಭವ ಉತ್ತಮವಾಗುವುದೇ ಅದರ ವಾಸನೆ ಮತ್ತು ರುಚಿಯಿಂದ. ಅದೇ ಇಲ್ಲವಾದರೆ ಚಹಾದ ಸ್ವಾದ ಸಿಗಲಾರದು. ಅಷ್ಟೇ ಅಲ್ಲದೆ, ಚಹಾ ಮತ್ತೆ ಬಿಸಿ ಮಾಡುವುದರಿಂದ ಅದರ ಸತ್ವವೂ ನಾಶವಾಗುತ್ತದೆ.
ಬ್ಯಾಕ್ಟೀರಿಯ ಅಧಿಕವಾಗುತ್ತದೆ
ಮೊದಲು ಮಾಡಿಟ್ಟ ಚಹಾ ಸೇವಿಸುವುದು ಅಥವಾ ಅದನ್ನು ಮತ್ತೆ ಬಿಸಿ ಮಾಡಿ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ. ಅಂದರೆ, ಅಂತಹ ಚಹಾದಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ಸಣ್ಣ ಬ್ಯಾಕ್ಟೀರಿಯಾಗಳು ಆರೋಗ್ಯಕ್ಕೆ ಹಾನಿಕಾರಕ. ನಮ್ಮಲ್ಲಿ ಬಹುತೇಕ ಮನೆಗಳಲ್ಲಿ ಮಾಡುವ ಚಹಾದಲ್ಲಿ ಹಾಲಿನ ಅಂಶ ಹೆಚ್ಚಾಗಿ ಇರುತ್ತದೆ. ಇದರಿಂದಾಗಿ ಸಣ್ಣ ಬ್ಯಾಕ್ಟೀರಿಯಾಗಳ ಬೆಳವಣಿಗೆ ಪ್ರಮಾಣ ಅಧಿಕ ಆಗಿರುತ್ತದೆ.
ಹೊಟ್ಟೆ ನೋವಿನಂತಹ ಸಮಸ್ಯೆ ಕಾಣಬಹುದು
ತಣಿದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತಾ ಇರುವುದರಿಂದ ಹಾಗೂ ಇದೇ ಅಭ್ಯಾಸವನ್ನು ದೀರ್ಘಕಾಲದ ವರೆಗೆ ಉಳಿಸಿಕೊಂಡರೆ ಅದರಿಂದ ಆರೋಗ್ಯ ಸಮಸ್ಯೆ ಕಾಣಬಹುದು. ಹೊಟ್ಟೆ ಕೆಡುವುದು, ಹೊಟ್ಟೆ ನೋವು ಕಾಣುವುದು ಆಗಬಹುದು. ಆದ್ದರಿಂದ ಈ ಅಭ್ಯಾಸ ಬಿಡುವುದು ಒಳ್ಳೆಯದು.
ಈ ವಿಚಾರಗಳನ್ನು ಗಮನಿಸಿ
ಈಗ ಮಾಡಿದ ಚಹಾವನ್ನು ಮತ್ತೆ ಐದು ಅಥವಾ ಹದಿನೈದು ನಿಮಿಷಗಳ ಅಂತರದಲ್ಲೇ ಮತ್ತೆ ಬಿಸಿ ಮಾಡಿಕೊಂಡು ಕುಡಿದರೆ ಅದರಿಂದ ಸಮಸ್ಯೆಗಳೇನು ಉಂಟಾಗದು. ಆದರೆ ಉದಾಹರಣೆಗೆ, ಬೆಳಗ್ಗೆ 7 ಗಂಟೆಗೇ ಚಹಾ ಮಾಡಿಟ್ಟು ಹತ್ತು ಗಂಟೆಗೆ ಮತ್ತೆ ಅದನ್ನೇ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ. ಹಾಗಾಗಿ ಸಾಧ್ಯವಾದಷ್ಟು ಮಿತಿಯಲ್ಲಿ ಚಹಾ ಮಾಡಿಕೊಳ್ಳಿ. ಬೇಕಾದಷ್ಟು ಚಹಾ ಮಾಡಿ ಕುಡಿದು ಮುಗಿಸಿ. ಉಳಿಸಬೇಡಿ.
ಇದನ್ನೂ ಓದಿ: Women Health: ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಾಗಲು ಕಾರಣ ಏನು? ಇದರ ಲಕ್ಷಣಗಳನ್ನು ಗುರುತಿಸುವುದು ಹೇಗೆ?
ಇದನ್ನೂ ಓದಿ: Child health: ನಿಮ್ಮ ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಪಾಲಿಸಲೇಬೇಕಾದ ಕೆಲವು ಸಲಹೆಗಳು ಇಲ್ಲಿವೆ