ಬಾಯಿಯ ರುಚಿಗೆ ತಕ್ಕಂತೆ ಅಡುಗೆ ಮಾಡಿ ತಿನ್ನುವುದು ಸಹಜ. ಆದರೆ ಬಾಯಿಗೂ ರುಚಿ ನೀಡುವ ಆರೋಗ್ಯವನ್ನೂ ಹೆಚ್ಚಿಸುವ ಅಡುಗೆಯನ್ನು ಮಾಡಿ ಸೇವಿಸುವುದು ಅಗತ್ಯವಾಗಿದೆ. ಅದಕ್ಕಾಗಿ ನೀವು ಖಿಚಡಿಯನ್ನು ಮಾಡಿ ಸೇವಿಸಬಹುದು. ಸುಲಭವಾಗಿ ಮಾಡುವ ಖಿಚಡಿ ದೇಹದ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೆಸರು ಬೇಳೆ ಮತ್ತು ಗೋದಿಯಿಂದ ಮಾಡುವ ಖಿಚಡಿ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಅದೇ ರೀತಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕವಾಗಿದೆ. ಹಾಗಾದರೆ ಈ ಖಿಚಡಿ ಮಾಡುವುದು ಹೇಗೆ ಎನ್ನುವ ವಿಧಾನ ಇಲ್ಲಿದೆ ನೋಡಿ,
ಬೇಕಾಗುವ ಸಾಮಗ್ರಿ
1/8 ಕಪ್ ಗೋದಿ
1 ಚಮಚ ಹೆಸರು ಬೇಳೆ
1/8 ಚಮಚ ತುಪ್ಪ
1/8 ಚಮಚ ಎಣ್ಣೆ
1/2 ಚಮಚ ಜೀರಿಗೆ
ಚಿಟಿಕೆ ಇಂಗು
1/8 ಅರಿಶಿನ
ಕತ್ತರಿಸಿದ ಹಸಿಮೆಣಸು 2
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಗೋದಿಯನ್ನು ಚೆನ್ನಾಗಿ ತೊಳೆದು 8 ಗಂಟೆಗಳ ಕಾಲ ನೆನಸಿಡಿ. ಹೆಸರು ಬೇಳೆಯನ್ನು ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿಡಿ. ನೆನೆಸಿಟ್ಟ ಗೋದಿಯನ್ನು ಒರಟಾಗಿ ರುಬ್ಬುಕೊಳ್ಳಿ. ನಂತರ ಒಂದು ಕುಕರ್ಗೆ ಎಣ್ಣೆ, ತುಪ್ಪ, ಜೀರಿಗೆ, ಮೆಣಸಿನಕಾಯಿ, ಇಂಗು ಹಾಕಿ ಅದಕ್ಕೆ ರುಬ್ಬಿಕೊಂಡ ಗೋದಿ, ನೆನೆಸಿಟ್ಟ ಹೆಸರು ಬೇಳೆ, ಅರಿಶಿನ, ಉಪ್ಪು ಸೇರಿಸಿ 5ರಿಂದ 6 ಸೀಟಿಯಾಗುವವರೆಗೆ ಕೂಗಿಸಿ. ನಂತರ ಅದನ್ನು ಪಾತ್ರೆಗೆ ಹಾಕಿ ಮೇಲಿನಿಂದ ಅರ್ಧ ಚಮಚ ತುಪ್ಪವನ್ನು ಸೇರಿಸಿ. ಮೇಲಿನಿಂದ ಅಗತ್ಯವಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆರೋಗ್ಯಕ್ಕೆ ಹಿತವಾದ ಹೆಸರುವೇಳೆ ಖಿಚಡಿ ಸವಿಯಲು ಸಿದ್ಧ.
ಹೆಸರು ಬೇಳೆ ಖಿಚಡಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹಿಗಳಿಗೂ ಉಪಯುಕ್ತ ಆಹಾರವಾಗಿದೆ. ಹೊಟ್ಟೆಯನ್ನೂ ತುಂಬಿಸುವ ಈ ಖಿಚಡಿ ಆರೋಗ್ಯಕ್ಕೆ ಉತ್ತಮವಾಗಿದೆ.
ಇದನ್ನೂ ಓದಿ:
ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಮಸಾಲಾ ಮಜ್ಜಿಗೆಯ ಸಿಂಪಲ್ ರೆಸಿಪಿ ಇಲ್ಲಿದೆ
Published On - 1:21 pm, Wed, 23 February 22