ಆರೋಗ್ಯವು ಚೆನ್ನಾಗಿದ್ದರೆ ಆ ದಿನ ಲವಲವಿಕೆಯಿಂದ ಕೂಡಿರುತ್ತದೆ. ಒಂದು ವೇಳೆ ಸ್ವಲ್ಪ ನಮ್ಮ ದೇಹದಲ್ಲಿ ವ್ಯತ್ಯಾಸವಾದರೂ ಕೂಡ ಊಟ ತಿಂಡಿ ಏನು ಬೇಡ ಎಂದೇನಿಸುತ್ತದೆ. ಕೆಲವೊಮ್ಮೆ ಹವಾಮಾನ ಬದಲಾವಣೆ, ವೈರಲ್ ಫೀವರ್ ಸೇರಿದಂತೆ ನಾನಾ ಕಾರಣದಿಂದ ಕಾಡುವ ಜ್ವರದಿಂದ ಸುಧಾರಿಸಿಕೊಳ್ಳಲು ಒಂದು ವಾರವೇ ಬೇಕು. ಈ ಸಮಯದಲ್ಲಿ ಊಟ ತಿಂಡಿ ಸೇರುವುದೇ ಇಲ್ಲ, ಮಲಗಿದರೂ ನಿದ್ದೆ ಬರುವುದೇ ಇಲ್ಲ. ಹಾಗೆ ಕಡಿಮೆಯಾಗುತ್ತದೆ ಎಂದು ಚಿಕಿತ್ಸೆಯನ್ನು ಪಡೆಯದೇ ಹೋದರೆ ಆರೋಗ್ಯವು ಮತ್ತಷ್ಟು ಹದಗೆಡಬಹುದು. ಹೀಗಾಗಿ ಆರಂಭದಲ್ಲಿಯೇ ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡು ಜ್ವರದಿಂದ ಪಾರಾಗುವುದು ಸುಲಭ ಉಪಾಯವಾಗಿದೆ.
- ಒಂದು ಲೋಟ ಕುದಿಯುವ ನೀರಿಗೆ ಒಂದು ಚಮಚದಷ್ಟು ಸಾಸಿವೆ ಸೇರಿಸಿ ಐದತ್ತು ನಿಮಿಷಗಳ ಬಳಿಕ ಸೋಸಿ, ಈ ನೀರನ್ನು ಕುಡಿಯುವುದರಿಂದ ಜ್ವರವು ನಿವಾರಣೆಯಾಗುತ್ತದೆ.
- ಜ್ವರಯಿದ್ದರೆ ದಂಟಿನ ಸೊಪ್ಪಿನ ಸಾರನ್ನು ಸೇವಿಸಿದರೆ ಗುಣಮುಖವಾಗುತ್ತದೆ.
- ತುಳಸಿರಸದಲ್ಲಿ ಕಾಳುಮೆಣಸನ್ನು ಅರೆದು, ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
- ತುಳಸಿರಸಕ್ಕೆ ಕರಿಮೆಣಸಿನ ಪುಡಿ ಹಾಗೂ ಜೇನುತುಪ್ಪ ಬೆರೆಸಿ, ದಿನವೂ ಮೂರು ಬಾರಿ ಸೇವಿಸುವುದು ಪರಿಣಾಮಕಾರಿಯಾದ ಮನೆ ಮದ್ದಾಗಿದೆ.
- ಅಳಲೆಕಾಯಿಯನ್ನು ಶುಂಠಿ ರಸದಲ್ಲಿ ತೇಯ್ದು ತಯಾರಿಸಿದ ಗಂಧವನ್ನು ಜೇನುತುಪ್ಪದಲ್ಲಿ ಬೆರೆಸಿ, ನಾಲಿಗೆ ಮೇಲೆ ಲೇಪಿಸುತ್ತಿದ್ದರೆ ಜ್ವರ ತಾಪಮಾನವು ಕಡಿಮೆಯಾಗುತ್ತದೆ.
- ಮೆಣಸಿನ ಕಾಯಿಯ ಕಷಾಯ ಮಾಡಿ, ಅದಕ್ಕೆ ಜೇನುತುಪ್ಪ ಬೆರೆಸಿ ನಿಯಮಿತವಾಗಿ ಸೇವಿಸುವುದರಿಂದ ಜ್ವರ ನಿಲ್ಲುತ್ತದೆ.
- ಬೇವಿನ ಮರದ ಒಣ ತೊಗಟೆಯನ್ನು ನೀರಿನಲ್ಲಿ ಕುದಿಸಿ, ಪ್ರತಿದಿನವೂ ಈ ನೀರನ್ನು ಸೇವಿಸುತ್ತಿದ್ದರೆ ಜ್ವರಕ್ಕೆ ಉತ್ತಮ ಔಷಧಿಯಾಗಿದೆ.
- ತುಳಸಿ ಎಲೆಗಳು ಹಾಗೂ ತುರಿದ ಶುಂಠಿಯನ್ನು ಒಂದು ಕಪ್ ನೀರಿನಲ್ಲಿ ಕುದಿಸಿ, ಅದಕ್ಕೆ ಜೇನು ಬೆರೆಸಿ ಇದನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸುವುದರಿಂದ ಜ್ವರವು ಶಮನವಾಗುತ್ತದೆ.
- ಸ್ವಲ್ಪ ಪ್ರಮಾಣದಲ್ಲಿ ಒಣದ್ರಾಕ್ಷಿಗಳನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿಟ್ಟು, ಆ ದ್ರಾಕ್ಷಿಗಳನ್ನು ಹಿಂಡಿ ರಸ ತೆಗೆದು ಅದಕ್ಕೆ ಜೇನು ತುಪ್ಪ ಬೆರೆಸಿ ದಿನಕ್ಕೆರಡು ಬಾರಿ ಸೇವಿಸುವುದು ಉತ್ತಮ.
- ಒಂದು ಎಸಳು ಬೆಳ್ಳುಳ್ಳಿಯ ಸಿಪ್ಪೆ ಸುಲಿದು ಜಜ್ಜಿ, ಬಿಸಿ ನೀರಿನಲ್ಲಿ ಬೆರೆಸಿ ಸ್ವಲ್ಪ ಸಮಯದ ಬಳಿಕ ಈ ನೀರನ್ನು ಸೋಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಜ್ವರವು ಕಡಿಮೆಯಾಗುತ್ತದೆ.
- ಒಂದು ಕಪ್ ಬಿಸಿ ನೀರಿಗೆ ಹಸಿಶುಂಠಿಯನ್ನು ಜಜ್ಜಿ ಬೆರೆಸಿ, ಸ್ವಲ್ಪ ಸಮಯ ಬಿಟ್ಟು ಆ ಶುಂಠಿ ನೀರಿಗೆ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಜ್ವರವು ಗುಣಮುಖವಾಗುತ್ತದೆ.
ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ