ಪ್ರತಿಯೊಬ್ಬ ತಂದೆ ತಾಯಿಯು ತನ್ನ ಮಕ್ಕಳು ತಾವು ಹೇಳಿದ ಹಾಗೆ ಕೇಳಬೇಕು ಎನ್ನುವುದಿರುತ್ತದೆ. ಹೀಗಾಗಿ ಪೋಷಕರು ಮಕ್ಕಳನ್ನು ಎಷ್ಟು ಮುದ್ದಿಸುತ್ತಾರೋ ಅಷ್ಟೇ ದಂಡಿಸುತ್ತಾರೆ. ಆದರೆ ಎದೆ ಎತ್ತರಕ್ಕೆ ಬೆಳೆದ ಮಕ್ಕಳನ್ನು ಫೋಷಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹೆತ್ತವರು ಎಷ್ಟು ಹತ್ತಿರವಾಗಲು ಪ್ರಯತ್ನಿಸಿದರೂ ಈ ವಯಸ್ಸಿನ ಮಕ್ಕಳಿಗೆ ಹಿಂಸೆ ಎನಿಸಬಹುದು. ಹೀಗಾಗಿ ವಯಸ್ಸಿಗೆ ಬಂದ ಮಕ್ಕಳ ಮೇಲೆ ಅತಿಯಾಗಿ ನಿಯಂತ್ರಣ ಸಾಧಿಸುವುದು ಕೂಡ ಸರಿಯಲ್ಲ. ಹದಿಹರೆಯದವರು ತಮ್ಮ ದೈಹಿಕ, ಭಾವನಾತ್ಮಕ ಬೆಳವಣಿಗೆ ವೇಳೆ ತುಂಬಾನೇ ಬದಲಾವಣೆಗಳನ್ನು ಅನುಭವಿಸುತ್ತಾರೆ. ಈ ಅವಧಿಯಲ್ಲಿ ಹೆತ್ತವರು ಈ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮಕ್ಕಳ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಬಹುದು.
* ಮಕ್ಕಳೊಂದಿಗೆ ಪ್ರೀತಿಯಿಂದ ವರ್ತಿಸಿ : ಪೋಷಕರು ಹಾಗೂ ಮಕ್ಕಳ ನಡುವೆ ಸಂಬಂಧ ಗಟ್ಟಿಗೊಳಿಸುವುದೇ ಈ ಪ್ರೀತಿ..ವಯಸ್ಸಿಗೆ ಬಂದ ಮಕ್ಕಳ ಜೊತೆಗೆ ಪ್ರೀತಿ ಯಿಂದ ವರ್ತಿಸಿ. ಕೆಲವೊಮ್ಮೆ ತಮ್ಮ ಪ್ರೀತಿಯ ಮೂಲಕ ಎಲ್ಲವನ್ನು ಹೇಳಿಕೊಡುವುದು ಮುಖ್ಯವಾಗುತ್ತದೆ. ನಿಮ್ಮ ಅತಿಯಾದ ಪ್ರೀತಿಯು ಮಕ್ಕಳನ್ನು ಕಟ್ಟಿಹಾಕದೇ ಇರಲಿ.
* ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ : ತಮ್ಮ ಮಕ್ಕಳು ಎದೆ ಎತ್ತರಕ್ಕೆ ಬೆಳೆದು ನಿಂತಿದ್ದಾರೆ ಎಂದರೇನೇ ಹೆತ್ತವರಿಗೆ ಭಯ ಆತಂಕವಿರುತ್ತದೆ. ಹೀಗಾಗಿ ಮಗ ಅಥವಾ ಮಗಳು ಸಣ್ಣ ಪುಟ್ಟ ಸಮಸ್ಯೆಗಳಲ್ಲಿ ಸಿಲುಕಿದ್ದಾರೆಂದರೆ ಭಯ ಪಟ್ಟುಕೊಳ್ಳುತ್ತಾರೆ. ಆದರೆ ಸಮಸ್ಯೆಯೇನು ಗಂಭೀರವಾಗಿಲ್ಲ ಎಂದರೆ ಮೂಗು ತೂರಿಸುವುದು ಒಳ್ಳೆಯದಲ್ಲ. ಮಗುವಿಗೆ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯವಿದ್ದರೆ ಭಾವನಾತ್ಮಕ ಬೆಂಬಲ ನೀಡಿ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಬಹುದು.
* ಸಲಹೆಗಳನ್ನು ನೀಡುವುದನ್ನು ಆದಷ್ಟು ತಪ್ಪಿಸಿ : ಮಕ್ಕಳು ಪ್ರಾಯಕ್ಕೆ ಬಂದಿದ್ದಾರೆ ಎಂದರೆ ಬೇಕಾಬಿಟ್ಟಿ ಸಲಹೆಗಳನ್ನು ನೀಡುವ ತಂದೆ ತಾಯಿಯರಿದ್ದಾರೆ. ನಿಮ್ಮ ಅತಿಯಾದ ಸಲಹೆಗಳು ಮಕ್ಕಳಿಗೆ ಕಿರಿಕಿರಿ ಎನಿಸಬಹುದು. ಅನಾವಶ್ಯಕ ಸಲಹೆ ನೀಡುವುದನ್ನು ಕಡಿಮೆ ಮಾಡಿದರೆ ಸಂಬಂಧವನ್ನು ಉತ್ತಮವಾಗಿರುವಂತೆ ಕಾಯ್ದುಕೊಳ್ಳಬಹುದು.
* ಮಕ್ಕಳ ಭಾವನೆಗಳಿಗೆ ಬೆಲೆ ಕೊಡದೆ ಇರಬೇಡಿ : ಪ್ರಾಯಕ್ಕೆ ಬಂದ ಮಕ್ಕಳು ಸಣ್ಣ ಪುಟ್ಟ ವಿಷಯಕ್ಕೂ ಕೋಪ ಹಾಗೂ ಸಿಟ್ಟು ಮಾಡಿಕೊಳ್ಳಬಹುದು. ದೇಹದಲ್ಲಾಗುವ ಬದಲಾವಣೆಗಳಿಂದ ಒತ್ತಡ, ಆತಂಕವನ್ನು ಎದುರಿಸಬಹುದು. ಆದರೆ ಇದನ್ನು ಹೆತ್ತವರು ಅರ್ಥ ಮಾಡಿಕೊಳ್ಳುವುದು ಮುಖ್ಯ. ಒಂದು ವೇಳೆ ಮಕ್ಕಳು ಹೆತ್ತವರ ಅತಿರೇಕವಾಗಿ ವರ್ತಿಸಿದರೆ ಬೈಯುವ ಬದಲು ಸಮಾಧಾನವಾಗಿ ಬುದ್ಧಿ ಹೇಳುವುದು ಮುಖ್ಯ. ಮಕ್ಕಳ ಭಾವನೆಗಳಿಗೂ ಬೆಲೆ ಕೊಟ್ಟರೆ ಹೆತ್ತವರ ಮೇಲೆ ಪ್ರೀತಿ ಹೆಚ್ಚಾಗುತ್ತದೆ.
ಇದನ್ನೂ ಓದಿ; ಜೊತೆಗಾತಿಗೆ ನಿಮ್ಮ ಮೇಲೆ ಆಸಕ್ತಿ ಕಡಿಮೆ ಆಗ್ತಿದೆಯೇ, ಈ ಕಾರಣಗಳೇ ಇರಬಹುದು
* ಮಕ್ಕಳನ್ನು ಸದಾ ದೂಷಿಸಬೇಡಿ : ಹದಿಹರೆಯ ಮಕ್ಕಳ ಜೊತೆಗೆ ಹೆತ್ತವರು ಸ್ವಲ್ಪ ಒರಟಾಗಿಯೇ ನಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳಾದರೆ ನಿನ್ನಿಂದಲೇ ಆಗಿದ್ದು ಎಂದು ಅದನ್ನೇ ಹೇಳುತ್ತಾ ಕೂರುತ್ತಾರೆ. ಆದರೆ ತಿದ್ದಿ ಹೇಳುವ ಮೂಲಕ ಇನ್ನು ಹಾಗೆ ಆಗದೇ ಇರುವ ಹಾಗೆ ನೋಡಿಕೊಳ್ಳು ಎಂದು ಹೇಳಲು ಪ್ರಯತ್ನಿಸುವುದು ಉತ್ತಮ.
* ನಡವಳಿಕೆಗಳ ಮೇಲೆ ನಿಯಂತ್ರಣ ಬೇಡ : ವಯಸ್ಕ ಮಕ್ಕಳು ದಾರಿ ತಪ್ಪುತ್ತಾರೆ ಎನ್ನುವ ಭಯ ಸಹಜವಾಗಿ ಹೆತ್ತವರಿಗೆ ಇರುತ್ತದೆ. ಹೀಗಾಗಿ ಹೀಗೆ ವರ್ತಿಸಬೇಕು, ಹಾಗೇ ಇರಬೇಕು ನಡವಳಿಕೆ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಇದು ಮಕ್ಕಳ ಮನಸ್ಸಿಗೆ ನೋವನ್ನು ಉಂಟು ಮಾಡುತ್ತದೆ. ಹೀಗಾಗಿ ನಡವಳಿಕೆಗಳ ನಿಯಂತ್ರಣ ಹೇರುವುದು ಪೋಷಕರ ಮೇಲೆ ಮಕ್ಕಳಿರುವ ಅಭಿಪ್ರಾಯವು ಬದಲಾಗುತ್ತದೆ. ಹೀಗಾಗಿ ಮಕ್ಕಳನ್ನು ನಿಯಂತ್ರಿಸದೇ ಇದ್ದಲ್ಲಿ ಮಕ್ಕಳು ಹಾಗೂ ಹೆತ್ತವರ ನಡುವಿನ ಸಂಬಂಧವು ಗಟ್ಟಿಯಾಗಲು ಸಾಧ್ಯ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ