ಆಹಾ! ರುಚಿಯಲ್ಲಿ ಅದ್ಭುತ ಉತ್ತರ ಕರ್ನಾಟಕದ ಸ್ಪೆಷಲ್ ಜೋಳದ ರೊಟ್ಟಿ ಮುಟಿಗಿ, ಇಲ್ಲಿದೆ ರೆಸಿಪಿ
ಉತ್ತರ ಕರ್ನಾಟಕದ ಎಂದೊಡನೆ ಮೊದಲು ನೆನಪಾಗುವುದೇ ಖಡಕ್ ಜೋಳದ ರೊಟ್ಟಿ. ಜೋಳದ ರೊಟ್ಟಿಗೆ, ಪುಡಿ ಚಟ್ನಿ, ಮೊಸರೋ, ಅಡುಗೆ ಎಣ್ಣೆ ಜೊತೆಗೆ ನೆಚ್ಚಿಕೊಂಡು ತಿಂದ್ರೆ ಹೊಟ್ಟೆಗೆ ಸಂತೃಪ್ತಿ. ಆದರೆ ಈ ಬಿಸಿ ಬಿಸಿ ರೊಟ್ಟಿಯಿಂದ ಮಾಡುವ ಮುಟಿಗಿಯಂತೂ ಈ ಭಾಗದಲ್ಲಿ ತುಂಬಾನೇ ಪ್ರಸಿದ್ಧ. ಮಸಾಲೆಯನ್ನು ಸೇರಿಸಿ ಮುಟಿಗಿ ಮಾಡಲು ಕೆಲವೇ ಕೆಲವು ಐಟಂಗಳಿದ್ದರೆ ಸಾಕು, ಈ ರೆಸಿಪಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನಾವೆಲ್ಲಾ ಬೆಳಗ್ಗೆ ತಿಂಡಿಗೆ ಇಡ್ಲಿ, ದೋಸೆ, ಕಡುಬು ತಿಂದು ಅಭ್ಯಾಸ. ಆದರೆ ಉತ್ತರ ಕರ್ನಾಟಕದ ಮಂದಿಗೆ ಜೋಳದ ರೊಟ್ಟಿಯೇ ಗಟ್ಟಿ ಆಹಾರ. ಬೆಳಗ್ಗೆ ಒಂದೆರಡು ಖಡಕ್ ರೊಟ್ಟಿ ಜೊತೆಗೆ ಚಟ್ನಿಯೋ ಒಣಖಾರನೋ ಹಾಕಿ ತಿಂದರೆ ಹೊಟ್ಟೆ ಗಟ್ಟಿಯಾಗುತ್ತದೆ. ಹೀಗಾಗಿ ಉತ್ತರ ಕರ್ನಾಟಕದ ರೈತರು ರೊಟ್ಟಿ ತಿಂದೇ ಹೊಲದ ಕಡೆಗೆ ತೆರಳುತ್ತಾರೆ. ಹೀಗಾಗಿ ಆ ಭಾಗದಲ್ಲಿ ಬೆಳಗ್ಗೆ ಹಾಗೂ ಸಂಜೆಯ ವೇಳೆ ರೊಟ್ಟಿ ತಟ್ಟುವ ಶಬ್ದ ಕೇಳುವುದೇ ಕಿವಿಗೆ ಆನಂದ. ಆದರೆ ಈ ರೊಟ್ಟಿಯಿಂದ ಮುಟಿಗಿ ಎನ್ನುವ ವಿಶೇಷ ಖಾದ್ಯವನ್ನು ಮಾಡಬಹುದು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಮಸಾಲೆಯನ್ನು ಸೇರಿಸಿ ತಯಾರಿಸಿದ ಇದನ್ನು ಸಂಜೆಯ ವೇಳೆ ಸವಿಯಬಹುದು. ಈ ಭಾಗದ ಫೇಮಸ್ ಖಾದ್ಯವಾಗಿರುವ ಜೋಳದ ರೊಟ್ಟಿ ಮುಟಿಗಿಯನ್ನು ಮಾಡುವುದು ಸುಲಭ ರುಚಿಯು ಕೂಡ ಅಷ್ಟೇ ಅದ್ಭುತವಾಗಿರುತ್ತದೆ.
ಜೋಳದ ರೊಟ್ಟಿ ಮುಟಿಗಿ ಬೇಕಾಗುವ ಸಾಮಾಗ್ರಿಗಳು
* ಜೋಳದ ರೊಟ್ಟಿ
* ಮೂರು ನಾಲ್ಕು ತುಪ್ಪ
* ಐದರಿಂದ ಆರು ಬೆಳ್ಳುಳ್ಳಿ ಎಸಳು
* ಜೀರಿಗೆ
* ಒಂದೆರಡು ಚಮಚ ಒಣಖಾರದ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
ಇದನ್ನೂ ಓದಿ: ಫಟಾಪಟ್ ಎಂದು ಮನೆಯಲ್ಲೇ ಸುಲಭವಾಗಿ ಮಾಡಿ ಮಲೆನಾಡಿನ ಗೊಜ್ಜವಲಕ್ಕಿ, ಇಲ್ಲಿದೆ ರೆಸಿಪಿ
ಜೋಳದ ರೊಟ್ಟಿ ಮುಟಿಗಿ ಮಾಡುವ ವಿಧಾನ
* ಬಿಸಿ ಬಿಸಿ ಜೋಳದ ರೊಟ್ಟಿಯನ್ನು ಸಣ್ಣ ಸಣ್ಣ ಚೂರು ಮಾಡಿಕೊಳ್ಳಿ.
* ಆ ಬಳಿಕ ಒರಳು ಕಲ್ಲಿನಲ್ಲಿ ಉಪ್ಪು, ಒಣ ಖಾರದ ಪುಡಿ, ಬೆಳ್ಳುಳ್ಳಿ ಎಸಳು , ಜೀರಿಗೆ ಹಾಗೂ ಚೂರು ಮಾಡಿದ ಜೋಳದ ರೊಟ್ಟಿ ಸೇರಿಸಿ ಚೆನ್ನಾಗಿ ಕುಟ್ಟಿಕೊಳ್ಳಿ.
* ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಕುಟ್ಟಿ ಕೈಯಿಂದ ಉಂಡೆ ಕಟ್ಟಿದರೆ ರುಚಿಕರವಾದ ಜೋಳದ ಮುಟಿಗಿ ಸವಿಯಲು ಸಿದ್ಧ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ