Ganesha Chaaturthi 2023: ಮಣ್ಣಿನ ಗಣೇಶ ಮೂರ್ತಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸುವುದು ಹೇಗೇ? ಮಾಹಿತಿ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 13, 2023 | 7:04 PM

Eco Friendly Ganesha: ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಯನಿಕಯುಕ್ತ ಗಣೇಶ ವಿಗ್ರಹವನ್ನು ಖರೀದಿಸುವ ಬದಲು ಈ ಬಾರಿ ಪರಿಸರಸ್ನೇಹಿ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕೆಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಕೆಲವು ಸರಳ ವಿಧಾನದ ಮೂಲಕ ಜೋಡಿಮಣ್ಣಿನ ಸಹಾಯದಿಂದ ಮನೆಯಲ್ಲಿಯೇ ಗಣೇಶನ ಮೂರ್ತಿಯನ್ನು ತಯಾರಿಸಬಹುದು.

Ganesha Chaaturthi 2023: ಮಣ್ಣಿನ  ಗಣೇಶ ಮೂರ್ತಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸುವುದು ಹೇಗೇ? ಮಾಹಿತಿ ಇಲ್ಲಿದೆ
ಮಣ್ಣಿನ ಗಣೇಶ ಮೂರ್ತಿ
Image Credit source: Pinterest
Follow us on

ಗಣೇಶ ಚತುರ್ಥಿ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನದಂದು ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಈ ವರ್ಷ ಗಣೇಶ ಚತುರ್ಥಿ ಹಬ್ಬವನ್ನು ಸೆಪ್ಟೆಂಬರ್ 19 ರಂದು ಆಚರಿಸಲಾಗುತ್ತದೆ. ವರ್ಷಂಪ್ರತಿ ಈ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಪ್ರತಿಯೊಂದು ಊರಿನಲ್ಲೂ ಹಾಗೂ ಹೆಚ್ಚಿನವರ ಮನೆಗಳಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಸಂಪ್ರದಾಯಬದ್ಧವಾಗಿ ಗಣೇಶನನ್ನು ಪೂಜಿಸಲಾಗುತ್ತದೆ. ವಿಧಿವಿಧಾನಗಳ ಪ್ರಕಾರ ಗಣೇಶನನ್ನು ಪೂಜಿಸಿದರೆ ಮನೆಯಲ್ಲಿನ ಎಲ್ಲಾ ವಿಘ್ನಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಅದರಲ್ಲೂ ಚೌತಿಯ ದಿನ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಬೇಕು ಏಕೆಂದರೆ ಮಣ್ಣಿನಲ್ಲಿ ನೈಸರ್ಗಿಕ ಶುದ್ಧತೆ ಇರುತ್ತದೆ. ಮತ್ತು ಇದು ಪರಿಸರ ಸ್ನೇಹಿ ಕೂಡಾ ಹೌದು. ಹೀಗಿರುವಾಗ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಗಣಪನ ಮೂರ್ತಿಯನ್ನು ತರುವ ಬದಲು ನೀವು ಮನೆಯಲ್ಲಿಯೇ ಶುದ್ಧ ಮಣ್ಣಿನಿಂದ ಗಣೇಶನ ಮೂರ್ತಿಯನ್ನು ತಯಾರಿಸಹುದು.

ಈ ರೀತಿಯಾಗಿ ಮಣ್ಣಿನಿಂದ ಗಣೇಶನ ಮೂರ್ತಿಯನ್ನು ಮಾಡಿ:

ಗಣೇಶ ಮೂರ್ತಿಯನ್ನು ಮಾಡಲು ನಿಮಗೆ ಮುಖ್ಯವಾಗಿ ಜೇಡಿ ಮಣ್ಣು ಬೇಕಾಗುತ್ತದೆ. ಈ ಮಣ್ಣು ನಿಮಗೆ ಮಾರುಕಟ್ಟೆಯಲ್ಲೂ ಲಭ್ಯವಿದೆ. ಹೀಗೆ ಶುದ್ಧ ಜೇಡಿ ಮಣ್ಣನ್ನು ತಂದು ಆ ಮಣ್ಣಿನಲ್ಲಿ ಅಂಟಿಕೊಂಡಿರುವ ಕಲ್ಲು, ಹುಲ್ಲು ಮತ್ತು ಇತರೆ ಕಸಗಳನ್ನು ತೆಗೆದು ಸ್ವಚ್ಛಗೊಳಿಸಿ. ಹಾಗೂ ಮೂರ್ತಿ ತಯಾರಿಸಲು ಮೃದುವಾದ ಮಣ್ಣನ್ನು ಮಾತ್ರ ಬಳಸಿ. ನಂತರ ಈ ಮಣ್ಣಿಗೆ ಅರಶಿನ, ತುಪ್ಪ, ಜೇನುತುಪ್ಪ, ಹಸುವಿನ ಸಗಣಿ ಮತ್ತು ನೀರನ್ನು ಬೆರೆಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಸಮಯದಲ್ಲಿ ನೀವು “ಓಂ ಗಂ ಗಣಪತಯೇ ನಮಃ” ಎಂಬ ಮಂತ್ರವನ್ನು ಪಠಿಸುತ್ತಾ ಗಣೇಶನ ಸುಂದರವಾದ ಮೂರ್ತಿಯನ್ನು ತಯಾರಿಸಬಹುದು.

ಇದನ್ನೂ ಓದಿ: ಗಣಪನ ನೈವೇದ್ಯಕ್ಕೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಮೋತಿಚೂರ್ ಲಡ್ಡು

ಮಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಅದನ್ನು 5 ವಿಭಾಗಗಳಾಗಿ ವಿಂಗಡಿಸಿಕೊಳ್ಳಿ. ಅದರಲ್ಲಿ ಮೊದಲನೆಯ ಭಾಗದಲ್ಲಿ ಗಣೇಶನಿಗೆ ಕೂರುವ ಆಸನವನನು ತಯಾರಿಸಿಕೊಳ್ಳಿ. ಇನ್ನೊಂದು ಮಣ್ಣಿನ ಉಂಡೆಯನ್ನು ತೆಗೆದುಕೊಂಡು ಅದರಲ್ಲಿ ಗಣೇಶನ ಹೊಟ್ಟೆಯನ್ನು ಮಾಡಿ, ಮೊದಲೇ ತಯಾರಿಸಿಟ್ಟ ಆಸನದ ಮೇಲೆ ಇರಿಸಿ. ಈಗ ಇನ್ನೊಂದು ಮಣ್ಣಿನ ಉಂಡೆಯನ್ನು ತೆಗೆದುಕೊಂಡು ಅದನ್ನು ಎರಡು ಸಮಾನ ಭಾಗಗಳನ್ನಾಗಿ ಮಾಡಿ, ಒಂದು ಭಾಗದಿಂದ ಎರಡು ಕಾಲುಗಳನ್ನು ಮತ್ತು ಇನ್ನೊಂದು ಭಾಗದಿಂದ ಎರಡು ಕೈಗಳನ್ನು ರಚಿಸಿ, ಜೋಡಿಸಿಕೊಳ್ಳಿ.

ಮಣ್ಣಿನ ಇನ್ನೊಂದು ಮುದ್ದೆಯಿಂದ ಗಣೇಶನ ತಲೆ, ಮುಖ ಮತ್ತು ಸೊಂಡಿಲನ್ನು ರಚಿಸಿ, ಅದನ್ನು ಹೊಟ್ಟೆಯ ಮೇಲೆ ಇರಿಸಿ. ಕೊನೆಯದಾಗಿ ಐದನೇ ಭಾಗದಲ್ಲಿ ಗಣೇಶನ ಕಿವಿ, ದಂತ ಮತ್ತು ಕಿರೀಟವನ್ನು ತಯಾರಿಸಿಕೊಳ್ಳಿ. ಮೂರ್ತಿಯನ್ನು ಸಂಪೂರ್ಣವಾಗಿ ತಯಾರಿಸಿದ ಬಳಿಕ ಮನೆಯಲ್ಲಿ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಗಣೇಶನ್ನು ಇಟ್ಟು ಮೂರ್ತಿಯನ್ನು ಒಣಗಲು ಬಿಡಿ. ಮೂರ್ತಿ ಒಣಗಿದ ಬಳಿಕ ನೀವು ಅದಕ್ಕೆ ಬಣ್ಣವನ್ನು ಸಹ ಹಚ್ಚಬಹುದು. ಹೀಗೆ ಮನೆಯಲ್ಲಿಯೇ ಸರಳವಾಗಿ ಪರಿಸರಸ್ನೇಹಿ ಗಣೇಶನ ಮೂರ್ತಿಯನ್ನು ತಯಾರಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:55 pm, Tue, 12 September 23