ಸಾಂದರ್ಭಿಕ ಚಿತ್ರ
ಬಹುತೇಕರ ನೆಚ್ಚಿನ ಖಾದ್ಯಗಳಲ್ಲಿ ಬಿರಿಯಾನಿ ಕೂಡ ಒಂದು. ಭಾರತದಲ್ಲಿ ವಿವಿಧ ಬಗೆಯ ಬಿರಿಯಾನಿಗಳು ಲಭ್ಯವಿದ್ದು ಕೋಲ್ಕತ್ತ ಬಿರಿಯಾನಿ ಸಿಕ್ಕಾಪಟ್ಟೆ ಫೇಮಸ್. ರುಚಿಕರವಾದ ಘಮ್ ಎನ್ನುವ ಕೋಲ್ಕತ್ತ ಬಿರಿಯಾನಿಯನ್ನು ಒಮ್ಮೆ ಸವಿದರೆ ಬೇಡ ಎನ್ನಲು ಮನಸ್ಸೇ ಆಗುವುದಿಲ್ಲ. ಇದರಲ್ಲಿ ಹೇರಳವಾಗಿ ಬೇಯಿಸಿದ ಆಲೂಗಡ್ಡೆಯನ್ನು ಬಳಸಲಾಗುತ್ತದೆ. ಈ ರೆಸ್ಟೋರೆಂಟ್ ನಲ್ಲಿ ಮಾಡುವ ರೀತಿಯಲ್ಲಿಯೇ ಮನೆಯಲ್ಲೇ ಸುಲಭವಾಗಿ ಕೊಲ್ಕತ್ತಾ ಬಿರಿಯಾನಿಯನ್ನು ಮಾಡಿ ಸವಿಯಬಹುದು.
ಕೋಲ್ಕತ್ತ ಚಿಕನ್ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು
ಕೋಳಿ ಮಾಂಸ, ಮೆಣಸಿನ ಪುಡಿ, ಈರುಳ್ಳಿ, ಆಲೂಗಡ್ಡೆ, ಅರಿಶಿನ, ಚಕ್ಕೆ, ಲವಂಗ, ಏಲಕ್ಕಿ, ಸಾಸಿವೆ ಎಣ್ಣೆ, ಅಡುಗೆ ಎಣ್ಣೆ, ಶುಂಠಿ ಪೇಸ್ಟ್, ಮೊಸರು, ಬಿರಿಯಾನಿ ಮಸಾಲ, ಬಿರಿಯಾನಿ ಎಲೆ, ಕೇವ್ರಾ ವಾಟರ್, ಬಾಸ್ಮತಿ ಅಕ್ಕಿ, ಹಸಿಮೆಣಸಿನ ಕಾಯಿ, ಹಾಲಿನ ಪುಡಿ, ತುಪ್ಪ, ಕೇಸರಿ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು..
ಕೋಲ್ಕತ್ತ ಚಿಕನ್ ಬಿರಿಯಾನಿ ಮಾಡುವ ವಿಧಾನ
- ಮೊದಲಿಗೆ ಕತ್ತರಿಸಿಟ್ಟ ಕೋಳಿ ಮಾಂಸಕ್ಕೆ ಒಂದು ಚಮಚದಷ್ಟು ಸಾಸಿವೆ ಎಣ್ಣೆ, ಉಪ್ಪು, ಶುಂಠಿ ಪೇಸ್ಟ್, ಬಿರಿಯಾನಿ ಮಸಾಲ, ಮೆಣಸಿನ ಪುಡಿ, ನಾಲ್ಕು ಚಮಚ ದಷ್ಟು ದಪ್ಪ ಮೊಸರು, ಚಿಟಿಕೆಯಷ್ಟು ಅರಿಶಿನವನ್ನು ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ.
- ಆ ಬಳಿಕ ಒಂದು ಬಾಣಲೆಯನ್ನು ಸ್ಟವ್ ಮೇಲಿಟ್ಟು ಎರಡು ಚಮಚ ಅಡುಗೆ ಎಣ್ಣೆಯನ್ನು ಹಾಕಿ, ಬಿಸಿಯಾಗುತ್ತಿದ್ದಂತೆ ಕತ್ತರಿಸಿಟ್ಟ ಈರುಳ್ಳಿಯನ್ನು ಸೇರಿಸಿ ಕಂದು ಬಣ್ಣ ಬರುವಂತೆ ಹುರಿದುಕೊಳ್ಳಿ. ಆ ಬಳಿಕ ಇದನ್ನು ಬೇರೆ ಪಾತ್ರೆಗೆ ವರ್ಗಾಯಿಸಿಡಿ.
- ಬಾಣಲೆಯಲ್ಲಿ ಎಣ್ಣೆ ಉಳಿದಿದ್ದರೆ ಕತ್ತರಿಸಿದ ಆಲೂಗಡ್ಡೆ ಚೂರುಗಳನ್ನು ಹಾಕಿ, ಇದಕ್ಕೆ ಚಿಟಿಕೆಯಷ್ಟು ಉಪ್ಪು, ಅರಿಶಿನ ಹಾಗೂ ಖಾರದ ಪುಡಿ ಬೆರೆಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದನ್ನು ಬೇರೆ ಪಾತ್ರೆಗೆ ಹಾಕಿ ತೆಗೆದಿಟ್ಟುಕೊಳ್ಳಿ.
- ಇನ್ನೊಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿಕೊಂಡು, ಲವಂಗ, ಚಕ್ಕೆ, ಏಲಕ್ಕಿ, ಮತ್ತು ಬಿರಿಯಾನಿ ಎಲೆಗಳನ್ನು ಹಾಕಿ. ಇದಕ್ಕೆ ಚಿಟಿಕೆಯಷ್ಟು ಜೀರಿಗೆ ಹಾಗೂ ಸ್ವಲ್ಪ ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಆ ಬಳಿಕ ನೀರಿನಲ್ಲಿರುವ ಪದಾರ್ಥಗಳನ್ನು ತೆಗೆದು, ಬಾಸ್ಮತಿ ಅಕ್ಕಿಯನ್ನು ಹಾಕಿ ಒಂದೆರಡು ನಿಮಿಷಗಳ ಕಾಲ ಬೇಯಿಸಿಕೊಂಡು ರೆಡಿ ಮಾಡಿಟ್ಟುಕೊಳ್ಳಿ.
- ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಚಕ್ಕೆ, ಲವಂಗ, ಏಲಕ್ಕಿ ಹಾಗೂ ಮತ್ತಷ್ಟು ಕತ್ತರಿಸಿದ ಈರುಳ್ಳಿ ಚೂರುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಕಲಸಿಟ್ಟ ಚಿಕನ್ ಮಾಂಸವನ್ನು ಸೇರಿಸಿ ಅಗತ್ಯವಿದ್ದಷ್ಟು ನೀರು ಸೇರಿಸಿಕೊಳ್ಳಿ.
- ಈಗಾಗಲೇ ಫ್ರೈ ಮಾಡಿದ ಆಲೂಗಡ್ಡೆಯನ್ನು ಹಾಕಿ ಒಂದು ಚಮಚ ಕೇವ್ರಾ ವಾಟರ್, ಬಿರಿಯಾನಿ ಮಸಾಲ ಬೆರೆಸಿ ಮಧ್ಯಮ ಹುರಿಯಲ್ಲಿ ಬೇಯಲು ಬಿಡಿ.
- ಗ್ಯಾಸ್ ಮೇಲೆ ಇಟ್ಟ ಚಿಕನ್ ಬೇಯುತ್ತಿದ್ದಂತೆ ಈಗಾಗಲೇ ಫ್ರೈ ಮಾಡಿಟ್ಟ ಈರುಳ್ಳಿಯನ್ನು ಸೇರಿಸಿಕೊಳ್ಳಿ, ಇದಕ್ಕೆ ಹಸಿಮೆಣಸು, ಹಾಲಿನ ಪುಡಿ ಹಾಗೂ ಅರ್ಧ ಬೆಂದಿರುವ ಬಾಸ್ಮತಿ ಅನ್ನ ಸೇರಿಸಿಕೊಳ್ಳಿ.
- ಕೊನೆಗೆ ಇದರ ಮೇಲೆ ಮೂರು ನಾಲ್ಕು ಚಮಚ ತುಪ್ಪ, ಕರಿದಿಟ್ಟ ಈರುಳ್ಳಿಯನ್ನು ಸೇರಿಸಿ ಮೂವತ್ತು ನಿಮಿಷಗಳ ಕಾಲ ಸಣ್ಣ ಹುರಿಯಲ್ಲಿ ಬೇಯಲು ಬಿಡಿ. ಮುಚ್ಚಳ ತೆಗೆದರೆ ಘಮ್ ಎನ್ನುವ ಕೋಲ್ಕತ ಚಿಕನ್ ಬಿರಿಯಾನಿ ಸವಿಯಲು ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ